ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಲಿವ ಉಯ್ಯಲೆಯ ಹರಿದು ಬಂದೇರಲು, ತಾಗದೆ ತೂಗುವುದು, ಭವಸಾಗರ ಮರಳಿ ಬಾರದಂತೆ ! ಹಂಸೆಯ ಮೇಲೆ ತುಂಬಿ ಕುಳ್ಳಿರ್ದು ಸ್ವರ ಗೆಯ್ಯುವ ಘೋಷವಿದೇನೊ ? ಆತನಿರ್ದ ಸರ ಹರಿಯದೆ ಇದ್ದಿತ್ತು. ದೇಹಿಗಳೆಲ್ಲ ಅರಿವರೆ, ಗುಹೇಶ್ವರನ ಆಹಾರಮುಖವ ?
--------------
ಅಲ್ಲಮಪ್ರಭುದೇವರು
ಉರಿಗೆ ಉರಿಯನೆ ತೋರುವೆನು, ಅಮೃತದ ಕಳೆಯಲ್ಲಿ ನಿಲಿಸುವೆನು. ನಾನು ಬ್ರಹ್ಮಸ್ಥಾನದಲ್ಲಿ ಗುಹೇಶ್ವರಾ_ನಿರಂತರವಾಗಿರ್ದೆನಯ್ಯಾ.
--------------
ಅಲ್ಲಮಪ್ರಭುದೇವರು
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು. ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ, ಪರಾಪರವೆಂದು ನುಡಿಯುತ್ತಿದ್ದಿತ್ತು. ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ? ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಗಳೆಲ್ಲ ಸಂಹಾರವಾಗಿ ಹೋದರು. ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಉದಕ ಮಜ್ಜನವಲ್ಲ ಪತ್ರೆ ಪೂಜೆಯಲ್ಲ. ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ ! ಅದೆಂತೆಂದಡೆ: ಸಜ್ಜನವೆ ಮಜ್ಜನ, ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ, ನಯನವೆ ಸ್ವಯಂ ಜ್ಯೋತಿ, ಪರಿಣಾಮವೆ ಅರ್ಪಿತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉದಕದ ಕೊಡನ ಹೊತ್ತಾಡುವ ಗೊರವಿತಿಯ ಕೈಯಲ್ಲಿ ಕಂಕಣ, ಉಲಿವ ಗೆಜ್ಜೆ ಚರಣದಲ್ಲಿ. ಉರಿಯ ಗೊರವನ ನೆರೆವ ಭರವಸದಿಂದ ಬಂದಿರಲು ಬಹಳ ಮುಳ್ಳಡ್ಡಲಾದವಲ್ಲಾ ! ಕಂಕಣದುಲುಹು ನಂದಿ, ಕಣ್ಣುದೆರೆದಾ ಮುಳ್ಳಳಿಯಲು ಕಾಡುಗಿಚ್ಚೆದ್ದು ಕರಡವ ಸುಟ್ಟಂತೆ ಪ್ರಾಣಗುಣ ಪ್ರಧ್ವಂಸಕಂಗೆ ಅನ್ಯೋನ್ಯ ಭಾವತ್ರಯವುಂಟೆ ? ಶರಣಲಿಂಗಕ್ಕೆ ಸಂದಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಂಡೆನುಟ್ಟೆನೆಂಬ ಸಂದೇಹ ನಿನಗೇಕಯ್ಯಾ? ಉಂಬುದೆ ಅಗ್ನಿ? ಉಡುವುದೆ ಪೃಥ್ವಿ? ನೀನೆಂದು ಉಂಡೆ? ನಾನೆಂದು ಕಂಡೆ? ಉಣ್ಣದೆ ಉಡದೆ ಹೊಗೆಯ ಕೈಯಲ್ಲಿ ಸತ್ತೆನೆಂಬ ಅಂಜಿಕೆ ನಿನಗೆ ಬೇಡ, ಅಂಜದಿರು,_ ಗುಹೇಶ್ವರಾ ನಿನಗಾವ ನಾಚಿಕೆಯೂ ಇಲ್ಲ.
--------------
ಅಲ್ಲಮಪ್ರಭುದೇವರು
ಉಪಾಧಿಯಿಲ್ಲದೆ ಬೇಡಬಲ್ಲಡೆ, ಗಮನವಿಲ್ಲದೆ ಸುಳಿಯಬಲ್ಲಡೆ, ನಿರ್ಗಮನಿಯಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅವರ ನಡೆ ಪಾವನ, ಅವರ ನುಡಿ ಸತ್ಯ, ಅವರ ಜಗದಾರಾಧ್ಯರೆಂಬೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉದಯಬಿಂದು ರೂಪಾಯಿತ್ತು. ಅಂತರಬಿಂದು ನಿರೂಪಾಯಿತ್ತು. ಊಧ್ರ್ವಬಿಂದು ನಿಶ್ಶೂನ್ಯವಾಯಿತ್ತು. ತ್ರಿವಿಧಲಿಂಗವ ಕೂಡಿ ಬಯಲಾಯಿತ್ತು. ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಉದಕದೊಳಗಣ ಕಿಚ್ಚು ನನೆಯಿತ್ತು, ಕಿಚ್ಚಿನೊಳಗಣ ತೇಜ ಬೆಂದಿತ್ತು;_ತಿಳಿದು ನೋಡಾ ಅದೇನೊ ಅದೆಂತೊ ? ಸಂಬಂಧಿಗಳು ತಿಳಿಯರು ನೋಡಾ. ಬೆಳಗಿನೊಳಗಣ ಕತ್ತಲೆಯಡಗಿತ್ತು; ಗುಹೇಶ್ವರನೆಂಬುದು ಅಲ್ಲಿಯೆ ಲಿಂಗೈಕ್ಯವು.
--------------
ಅಲ್ಲಮಪ್ರಭುದೇವರು
ಉಳ್ಳವರು ಹಗೆಹ ತೆಗೆವನ್ನಕ್ಕರ, ಇಲ್ಲದವರ ಹರಣ ಹೋಯಿತ್ತೆಂಬ ಗಾದೆ ಎನಗಾಯಿತ್ತು. ಮಾತು ಬಣ್ಣಿಸಲು ಹೊತ್ತು ಹೋಯಿತ್ತಯ್ಯಾ. ನಿನಗೆ ಅದೆ, ಹರಿನುಡಿಗೆ ಕಡೆಯಿಲ್ಲ. ಒಬ್ಬರ ನೋಡುವಾಗ, ಅರುವತ್ತು ಮನುಷ್ಯರ ನೋಡುವ ಹಾಂಗೆ ಆಗುತ್ತಿದೆ. ಶೂನ್ಯಸಿಂಹಾಸನ ಬವರಿಗೊಡುತ್ತಿದೆ. ಪ್ರಾಣ ಹೆಡತಲೆಯಲ್ಲಿ ಹೋಗುತ್ತಿದೆ. ಗುಹೇಶ್ವರ ಹಸಿದನು, ಪದಾರ್ಥವ ನೀಡಯ್ಯಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಉಭಯದೃಷ್ಟಿ ಏಕದೃಷ್ಟಿಯಲ್ಲಿ ಕಾಬಂತೆ ದಂಪತಿ ಏಕಭಾವವಾಗಿ ನಿಂದಲ್ಲಿ, ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು,_ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಉದಕ ಮೂರುತಿಯಾಗಿ ಉದಯವಾಯಿತ್ತು ಪಿಂಡಿಗೆಯಲ್ಲಿ. ಅಲ್ಲಿಯೆ ಮೂಲಸ್ಥಾನ ಸ್ಥಾಪ್ಯವಾಯಿತ್ತು ಸ್ವದೇಹ ಶಿವಪುರದಲ್ಲಿ. ವಾಯು ಪೂಜಾರಿಯಾಗಿ, ಪರಿಮಳದಿಂಡೆಯ ಕಟ್ಟಿ, ಪೂಜಿಸುತಿರ್ದುದು_ಓ ನವದ್ವಾರಶಿವಾಲಯದ ಆದಿ ಮಧ್ಯಸ್ಥಾನದಲ್ಲಿ! ಗುಹೇಶ್ವರನೆಂಬುದಲ್ಲಿಯೇ ನಿಂದಿತ್ತು.
--------------
ಅಲ್ಲಮಪ್ರಭುದೇವರು
ಉಚ್ಚೆಯ ಜವುಗಿನ ಬಚ್ಚಲ ತಂಪಿನಲ್ಲಿ: ನಿಚ್ಚಕ್ಕೆ ಹೊರಳುವ ಹೀಹಂದಿಯಂತೆ, ಶಿವನ ಇಚ್ಛೆಯನರಿಯದೆ ಮಾತನಾಡುವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
--------------
ಅಲ್ಲಮಪ್ರಭುದೇವರು
ಉಗುಳ ನುಂಗಿ, ಹಸಿವ ಕಳೆದು, ತೆವರ ಮಲಗಿ ನಿದ್ರೆಗೆಯ್ದು ನೋಡಿ ನೋಡಿ ಸುಖಂಬಡೆದೆನಯ್ಯಾ. ಗುಹೇಶ್ವರಾ ನಿಮ್ಮ ವಿರಹದಲ್ಲಿ ಕಂಗಳೇ ಕರುವಾಗಿರ್ದೆನಯ್ಯಾ.
--------------
ಅಲ್ಲಮಪ್ರಭುದೇವರು
ಉದಕದೊಳಗೊಂದು ಸೆಜ್ಜೆಯಾಯಿತ್ತು. ಸೆಜ್ಜೆಯೊಳಗೊಂದು ಕಿಚ್ಚು ಹುಟ್ಟಿತ್ತು. ಇದೇನೊ ಇದೆಂತೊ ? ನೀನರಸಿಹೆನೆಂಬ ಸಂಬಂಧವಿಲ್ಲ. ಇದೇನೊ ಇದೆಂತೊ ? ನೀನರಿದಿಹೆನೆಂಬ ಸಂಬಂಧವಿಲ್ಲ. ಇದೇನೊ ಇದೆಂತೊ ? ನೀನೊಲಿಸಿಹೆನೆಂಬ ಸಂಬಂಧವಿಲ್ಲ. ಉದಯಮುಖದಲ್ಲಿ ಕತ್ತಲೆಯಡಗಿತ್ತು. ಗುಹೇಶ್ವರನೆಂಬ ನಾಮವಲ್ಲಿಯೆ ನಿಂದಿತ್ತು.
--------------
ಅಲ್ಲಮಪ್ರಭುದೇವರು
ಉರವಣಿಸುವ ಮನ ಮುಟ್ಟುವನ್ನಬರ ಕಾಡುವುದು ಘನ ಘನದಲ್ಲಿ ಮನ ನಂಬುವನ್ನಬರ ಕಾಡುವುದು. ಮಹಂತ ಗುಹೇಶ್ವರನೆಂಬ ಶಬ್ದವುಳ್ಳನ್ನಬರ ಕಾಡುವುದು.
--------------
ಅಲ್ಲಮಪ್ರಭುದೇವರು
ಉರಿವ ಕಿಚ್ಚಿನೊಳಗೆ ಹಾಯ್ಕಿದಡೆ, ಬೆಂದಿತ್ತೆಂದರಿಯಬಾರದು ಬೇಯದೆಂದರಿಯಬಾರದು. ಹಿಡಿದು ಸುಟ್ಟು ಬೂದಿಯ ಹೂಸಿಕೊಂಡಡೆ ಮರಳಿ ಹುಟ್ಟಲಿಲ್ಲ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕೆ ಅಳಿದರಲ್ಲಾ ! ಅಂದಂದಿನ ಘಟಜೀವಿಗಳು ಬಂದ ಬಟ್ಟೆಯಲ್ಲಿ ಹೋದರಲ್ಲಾ ! ಗುಹೇಶ್ವರನೆಂಬ ಲಿಂಗವು ಆರಿಗೆಯೂ ಇಲ್ಲವಯ್ಯಾ.
--------------
ಅಲ್ಲಮಪ್ರಭುದೇವರು
ಉದಕದಲುತ್ಪತ್ಯವಾದ ಶತಪತ್ರದಂತೆ ಸಂಸಾರಸಂಗವ ತಾ ಹೊಗ(ದ್ದ?)ದಿರಬೇಕು. ಕಾಯವೇ ಪೀಠ, ಮನವೇ ಲಿಂಗವಾದಡೆ, ಕೊರಳಲ್ಲಿ ನಾಗವತ್ತಿಗೆ ಏಕೊ ಶರಣಂಗೆ ?_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ. ಲಿಂಗಕ್ಕೆ ನೇಮವಿಲ್ಲ. ಇರುಳಿಗೊಂದು ನೇಮ, ಹಗಲಿಗೊಂದು ನೇಮ ? ಲಿಂಗಕ್ಕೆ ನೇಮವಿಲ್ಲ. ಕಾಯ ಒಂದು ದೆಸೆ, ಜೀವ ಒಂದು ದೆಸೆ, ಗುಹೇಶ್ವರನೆಂಬ ಲಿಂಗ ತಾನೊಂದು ದೆಸೆ.
--------------
ಅಲ್ಲಮಪ್ರಭುದೇವರು
ಉಂಬುವುದ ಉಣಲೆ ಬೇಕು, ಮುಟ್ಟುವುದ ಮುಟ್ಟಲೆ ಬೇಕು, ಮಾಡುವುದ ಮಾಡಲೆ ಬೇಕು, ನೋಡುವುದ ನೋಡಲೆ ಬೇಕು, ಕೂಡುವುದ ಕೂಡಲೆ ಬೇಕು. ಉಂಡು ಉಟ್ಟು ಕಂಡು ಕೇಳಿ ಹೇಳಿ ಬಿಟ್ಟು-ಬಿಡದಾತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉತ್ತರಾಪಥದ ಮೇಲೆ ಮೇಘವರ್ಷ ಕರೆಯಲು, ಆ ದೇಶದಲ್ಲಿ ಬರನಾಯಿತ್ತು ! ಆ ದೇಶದ ಪ್ರಾಣಿಗಳೆಲ್ಲರೂ ಮೃತವಾದರು! ಅವರ ಸುಟ್ಟ ರುದ್ರಭೂಮಿಯಲ್ಲಿ, ನಾ ನಿಮ್ಮನರಸುವೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಲಿವ ಮರದ ಪಕ್ಷಿಯಂತೆ, ದೆಸೆದೆಸೆಯನಾಲಿಸುತ್ತಿರ್ದೆ. ಅರಿವರಿಲ್ಲ ಅರಿವರಿಲ್ಲ ಅರಿದು ಮರೆಯಿತ್ತಯ್ಯಾ. ಮಡುವಿನೊಳಗೆ ಬಿದ್ದ ಆಲಿಕಲ್ಲಿನಂತೆ ತನ್ನ ತಾನಿರ್ದನು ಗುಹೇಶ್ವರಯ್ಯನು.
--------------
ಅಲ್ಲಮಪ್ರಭುದೇವರು
ಉದಯ ಮುಖದಲ್ಲಿ ಪೂಜಿಸ ಹೋದರೆ, ಹೃದಯ ಮುಖದಲ್ಲಿ ಕತ್ತಲೆಯಾಯಿತ್ತು, ಹಾರಿ ಹೋಯಿತ್ತು ಪ್ರಾಣಲಿಂಗ, ಹರಿದು ಬಿದ್ದಿತ್ತು ಸೆಜ್ಜೆ. ಕಟ್ಟುವ ಬಿಡುವ ಸಂಬಂಧಿಗಳ ಕಷ್ಟವ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಂಡೆಹೆನೆಂದೆಡೆ ಹಸಿವಿಲ್ಲ, ಕಂಡೆಹೆನೆಂದಡೆ ಪ್ರತಿಯಿಲ್ಲ. ನೋಡಿಹೆನೆಂದಡೆ_ಉದಕದೊಳಗಣ ಜ್ಯೋತಿಯಂತಾದವು (ಜ್ಯೋತಿಯಂತೆ ?) ಗುಹೇಶ್ವರಾ, ನಿಮ್ಮ ನಾಮವ ಹಿಡಿದು ಬಿಟ್ಟಡೆ ಭಂಗವಯ್ಯಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...