ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹರಹರಾ ನೀವಿಪ್ಪಠಾವನರಿಯದೆ, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವರ ದಿಟ್ಟತನವ ನೋಡಾ ! ಶಿವಶಿವಾ ನಿಮ್ಮ ಶ್ರೀಮುಖವನರಿಯದೆ ಸಕಲ ಪದಾರ್ಥವ ನಿಮಗರ್ಪಿಸಿ ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ ! ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ ಆರು ಮೆಚ್ಚುವರು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹೊರಗನೆ ಕೊಯ್ದು ಹೊರಗನೆ ಪೂಜಿಸಿ ಹೊರಗಾಗಿ ಹೋಯಿತ್ತು ತ್ರೈಜಗವೆಲ್ಲ. ಆನದನರಿಯದಂತೆ ಲಿಂಗವ ಪೂಜಿಸ ಹೋದಡೆ, ಕೈ ಲಿಂಗದಲ್ಲಿ ಸಿಲುಕಿತ್ತಲ್ಲಾ ! ಮನ ದೃಢದಿಂದ ನಿಮ್ಮ ನೆನೆದಿಹೆನೆಂದಡೆ ತನು ಸಂದಣಿಸಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೊರಗಾಡಿ ಬಂದೆನೆಂದು ನುಡಿಸಲೊಲ್ಲದೆ ಸುಮ್ಮನಿದ್ದೆನು ಎನ್ನ ಮನ ನೊಂದು ತಾಗಿದಡೆ ನಿಮ್ಮತ್ತ ಮುಂದಾದೆನು. ಬಿಕ್ಕುತ್ತ ಬೆದರುತ್ತ ಕಾಲಮೇಲೆ ಬಿದ್ದಡೆ, ಕಂಗಳ ಉದಕ ಮಜ್ಜನಕ್ಕೆರೆದಂತಾಯಿತ್ತು ! ಅಂತಿರ್ದಡೆ ಕಂಡು ನೆಗಹಿದನು ನಮ್ಮ ಗುಹೇಶ್ವರಲಿಂಗವು.
--------------
ಅಲ್ಲಮಪ್ರಭುದೇವರು
ಹೊನ್ನೆಂಬ ಕಾರ್ಮಿಕವ ಜರಿದು ಹರಿದು, ಮಣ್ಣೆಂಬ ಭವದ ಭವದ ಹರಿದು, ಹೆಣ್ಣೆಂಬ ರಾಕ್ಷಸಿಯ ಅಣಲೊಳಗೆ ಸಿಕ್ಕಿ ಅಗಿದಗಿದು ತಿನಿಸಿಕೊಂಬ ಜಡಜೀವಿಗಳ ಸಂಗದಿಂದಾದ ಸಕಲ ಸುಖಭೋಗಂಗಳ ಬಿಟ್ಟು; ಲಿಂಗರತಿ ಪರಮಸುಖದ ಚಿದಮೃತದ ನಿತ್ಯ ತೃಪ್ತಿ ಸಂತೋಷ ಇಂಬುಗೊಂಡು, ವೇಷದ ಭ್ರಾಂತಿನ ಭ್ರಾಮಕದ ಸಮಯ ಕುಲಪಾಷಂಡಿಗಳ ತತ್ಸಂಗವ ಬಿಟ್ಟು ನಿರಾಶಾ ಪಥದ ಸುಜ್ಞಾನವೆ ಅನುಕೂಲವಾಗಿ ಘೃತ ಫಳ ಮಧುರರಸ ಮೃಷ್ಟಾನ್ನಂಗಳಲ್ಲಿ ಮನಮಗ್ನವಾದ ಪರಮ ಪ್ರಸಾದದಲ್ಲಿ ಪರಿಣಾಮಿಯಾದ ಪರಮಲಿಂಗೈಕ್ಯ ವಿರಕ್ತಂಗೆ ಲಿಂಗಾರ್ಪಿತವಲ್ಲದೆ_ ಇಂತೀ ಕ್ರಮವನರಿದು ಸಕಲಭ್ರಾಂತನಳಿಯದೆ ಮನ್ಮಥವೇಷಧಾರಿಗಳು ಪಂಚಲೋಹ ಕಾರ್ಮಿಕವ ಧರಿಸಿಕೊಂಡು ಲಿಂಗಾರ್ಪಿತ ಭಿಕ್ಷೆಯೆಂದು ಭುಂಜಿಸುವ ಭುಂಜನೆಯೆಲ್ಲವು ವರಾಹ ಕುಕ್ಕುಟದ ಮೇಧ್ಯವು, ಅವರಿಗೆ ಪ್ರಸಾದವೆಂಬುದು ಸ್ವಪ್ನದಲ್ಲಿಯೂ .... .......ಕೊಂಬುದೆಲ್ಲವು ಕತ್ತೆಯ ಮಾಂಸ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಸಿವು ತೃಷೆ ವಿಷಯ ವ್ಯಸನ ಈ ನಾಲ್ಕು ಉಳ್ಳವರು ಗುಹೇಶ್ವರಲಿಂಗದಲ್ಲಿ ಐಕ್ಯರೆಂತಪ್ಪರೊ ? ಅರಿದರಿದು ಆಚರಿಸಲರಿಯದ ಕಾರಣ ಲಿಂಗೈಕ್ಯರಲ್ಲ. ಅರಿದನಾದಡೆ ಹಸಿವ ವಿೂರಿ ಉಂಬ, ತೃಷೆಯ ವಿೂರಿ ಕೊಂಬ, ವಿಷಯವನಾಳಿಗೊಂಬ, ವ್ಯಸನವ ದಾಂಟಿ ಭೋಗಿಸುವ. ಇದನರಿಯದಲೆ ಚರಿಸುವ ಕೀಟಕ ಮಾನವರ ಕಂಡು ಎನ್ನ ಮನ ನಾಚಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಾಳೂರೊಳಗೊಂದು ಮನೆಯ ಮಾಡಿ ಬದುಕ ಹೋದಡೆ, ಕಾಳೋರಗ ಬಂದು ಕಡಿಯಿತ್ತು ನೋಡಾ ! ಕೇರಿ ಕೇರಿಯೊಳಗೆಲ್ಲಾ ಹರಿದಾಡುತ್ತಿದ್ದವು, ಮಾರಿಯ ತೋರದ ಮದಗಜಂಗಳು. ಚಿತ್ರಗುಪ್ತನ ಕೈಯ ಚಿತ್ರವ ತಿಳಿದು ನೋಡಿದಡೆ, ಹಾಳೂರು ಹಾಳಾಯಿತ್ತು ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಹೂ ಮಿಡಿಯ ಹರಿದು ಒತ್ತಿ ಹಣ್ಣ ಮಾಡಿಹೆನೆಂದಡೆ ಹಣ್ಣಾಗಬಲ್ಲುದೆ ? ಪರಿಮಳವಿಲ್ಲದ ನನೆಯನರಳಿಸಿ ಮುಡಿದಹೆನೆಂದಡೆ ಸೌರಭ ಉಂಟೆ ? ಶಿವಶರಣರ ನಿಲವು ಕಾಂಬ ಕಾಲಕ್ಕೆ ಕಾಣಬಹುದಲ್ಲದೆ ಎಲ್ಲಾ ಹೊತ್ತು ಕಾಣಬಹುದೆ ? ಅಹ ಕಾಲಕ್ಕೆ ತಾನೆ ಅಪ್ಪುದು. ಗುಹೇಶ್ವರನ ಶರಣರ ನಿಲವ ಕಂಡ ಬಳಿಕ ಮರಹು, ಬೆಳಗ ಕಂಡ ಕತ್ತಲೆಯಂತೆ ನೋಡ ನೋಡ ಹರೆವುದು ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಹಸಿಯ ಬಿಸಿಲನೆ ಕೊಯ್ದು ಪದಾರ್ಥವ ಮಾಡಿ, ಉಸಿರ ಎಸರಲ್ಲಿ ಬಾಗುತ್ತಿಪ್ಪರಯ್ಯಾ! ಇಕ್ಕಲಿಲ್ಲಾರಿಗೆಯು, ಎರೆಯಲಿಲ್ಲಾರಿಗೆಯು ಭಿಕ್ಷಾವೃತ್ತಿಗಳು ಬಂದು ಬೇಡುತ್ತಿಪ್ಪರಯ್ಯಾ. ನಿಮ್ಮ ಒಕ್ಕುದ ಮಿಕ್ಕುದ ಉಡಿಯಲ್ಲಿ ಕಟ್ಟಿಕೊಂಡಿಪ್ಪರಯ್ಯಾ. ಗುಹೇಶ್ವರಾ ನಿಮ್ಮ ಶರಣರು.
--------------
ಅಲ್ಲಮಪ್ರಭುದೇವರು
ಹಿಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಮುಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಇನ್ನೂ ಕೊಯ್ದಾನೆ ಪುಷ್ಪಂಗಳನು. ಉನ್ನತನೆಂಬ ಗಣೇಶ್ವರನ ಕರಡಗೆ ತುಂಬದು ನೋಡಾ ! ಇನ್ನೂ ಕೊಯ್ದಾನೆ ಪುಷ್ಪಂಗಳನು_ಆ ಕುಲಗಿರಿಗೆ ಮೇರುಗಿರಿ ಘನವೆಂದರಿಯರು. ಗುಹೇಶ್ವರಾ, ನಿಮ್ಮ ಮಹಿಮೆಯ ಹರಿಬ್ರಹ್ಮಾದಿಗಳೂ ಅರಿಯರು.
--------------
ಅಲ್ಲಮಪ್ರಭುದೇವರು
ಹೊನ್ನ ತೂಗಿದ ತ್ರಾಸುಕಟ್ಟಳೆ ಹೊನ್ನಿಂಗೆ ಸರಿಯುಪ್ಪುದೆ? ಸನ್ನಹಿತರಾದೆವೆಂಬ ನುಡಿಗೆ ನಾಚರು ನೋಡಾ, ಕನ್ನದಲಿ ಸವೆದ ಕಬ್ಬುನದಂತೆ, ಮುನ್ನ ಹೋದ ಹಿರಿಯರು ಲಿಂಗದ ಸುದ್ದಿಯನರಿಯರು. ಇನ್ನಾರು ಬಲ್ಲರು ಹೇಳಾ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಹತ್ತು ಬಣ್ಣದ ಗಿಡುವಿಂಗೆ, ಹತ್ತೆಲೆ, ಹತ್ತು ಹೂ, ಹತ್ತು ಕಾಯಾಯಿತ್ತು. ಹತ್ತು ಹತ್ತು ಘನದಲ್ಲಿ ಅಳವಟ್ಟು, ಹತ್ತು ಹತ್ತು ಆಚಾರಕ್ರಮದಲ್ಲಿ ವಿಚಾರವ ಕಾಣಬಲ್ಲಡೆ ಆ ಕಾಯ ಲಿಂಗ ಉದಯ (ಲಿಂಗಮಯ?)ವಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೆಣ್ಣ ನಂಬಿ ತನು ಮನ ಧನವನಿತ್ತೆಯಲ್ಲಾ ಎಲೆ ಮನವೆ ? ಇದ್ದುದನೆಲ್ಲವ ಕೊಂಡು ಬತ್ತಲೆ ಮಾಡಿ ತಲೆಯ ಬೋಳಿಸಿ ಕೈಯಲ್ಲಿ ಹಂಚ ಕೊಟ್ಟು ಮತ್ತೊಬ್ಬಗಾಸೆ ಮಾಡುತ್ತಿದ್ದಾಳೆ ಕಂಡಾ ! (ನಿನ್ನ?) ಮುಂದೆ ಮನಕೆ ಬಂದ ಪುರುಷನ ನೋಡುವಳು ಕಾಣಾ. ಮತ್ತವಳ ನಂಬಿ ನಚ್ಚು ನಾಚಿಕೆಯಿಲ್ಲದ ಭಂಡ ಮನವೆ ! ಹೆಣ್ಣಿನ ಪಾಟಿಯ ತೊರೆದು ಕುಡು ಭಕ್ತ್ಯಂಗನೆಗೆ ತನು ಮನವ ಮುಕ್ತ್ಯಂಗನೆ ನಿನಗೊಲಿವಳು. ಬೇಗ ವಿರಕ್ತನಾಗಿ, ಹೆಣ್ಣ ಜಾಡಿಸಿ, ತಲೆಯ ಬೋಳಿಸಿಕೊಂಡು, ಜಾಡಿಗಂಬಳಿಯ ಮುಸುಕಿಟ್ಟು ಕರ್ಪರ ಒಂದರೊಳು ದೇಶಾಂತರಿಯಾಗು, ಜಡನ ತೆಗಳಿಸಿ (ಜಡವತಿಗಳಿಸಿ?) ಮುಂದೆ ಲಿಂಗವಹೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹರಿ ಹೊಲಬನರಿಯ, ಬ್ರಹ್ಮ ಮುಂದನರಿಯ, ರುದ್ರ ಲೆಕ್ಕವ ಮರೆದು ಜಪವನೆಣಸುತ್ತೆ ೈದಾನೆ. ಈಶ್ವರ ಪವನಯೋಗದಲ್ಲಿ ಮಗ್ನನಾದ. ಸದಾಶಿವ ಭಾವದಲ್ಲಿ ಭ್ರಮಿತನಾದ. ಒಂದಂಡಜದೊಳಗಣ ಬಾಲಕರೈವರು, ನಿಮ್ಮನೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಿಂದಣ ಅನಂತವನೂ, ಮುಂದಣ ಅನಂತವನೂ ಒಂದು ದಿನ ಒಳಕೊಂಡಿತ್ತು ನೋಡಾ ! ಒಂದು ದಿನವನೊಳಕೊಂಡು ಮಾತಾಡುವ ಮಹಂತನ ಕಂಡು ಬಲ್ಲವರಾರಯ್ಯ ? ಆದ್ಯರು ವೇದ್ಯರು ಅನಂತ ಹಿರಿಯರು, ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು? ಹಸಿವು ಹೋಹುದೆ? ಅಂಗದ ಮೇಲೆ ಲಿಂಗಸ್ವಾಯತವಾದಡೇನು? ಭಕ್ತನಾಗಬಲ್ಲನೆ? ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ, ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ? ಇಂತಪ್ಪವರ ಕಂಡಡೆ ನಾಚುವೆನಯ್ಯಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೃದಯದಲ್ಲಿರ್ಪ ಮಹಾಲಿಂಗದ ಬೆಳಗಿನಿಂದ ನಾಸಿಕೆಯಲ್ಲಿ ಆಚಾರಲಿಂಗವ ಕಂಡೆನಯ್ಯಾ. ಜಿಹ್ವೆಯಲ್ಲಿ ಗುರುಲಿಂಗವ ಕಂಡೆನಯ್ಯಾ. ನೇತ್ರದಲ್ಲಿ ಶಿವಲಿಂಗವ ಕಂಡೆನಯ್ಯಾ. ತ್ವಕ್ಕಿನಲ್ಲಿ ಜಂಗಮಲಿಂಗವ ಕಂಡೆನಯ್ಯಾ. ಭಾವದಲ್ಲಿ ಮಹಾಲಿಂಗವ ಕಂಡೆನಯ್ಯಾ. ಇಂತೀ ಷಡ್ವಿಧಲಿಂಗವನು ಎನ್ನ ಸರ್ವಾಂಗದಲ್ಲಿ ಕಂಡು [ಮಹಾಲಿಂ]ಗವಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹರಿಯ ಬಾಯ ಹಾಲು, ಉರಿಯ ಕೈಯ ಬೆಣ್ಣೆ ಗಿರಿಯ ಮೇಲಣ ಶಿಶು ಹರಿದಾಡುತ್ತಿದೆ, ಕರೆಯಿಂ ಭೋ ಹಾಲುಗುಡಿ[ಯೆ]. ಸುರಪತಿಯ ಗಜವೇರಿ ಮರಳಿ ಹೋಹನ ಕಂಡು ಕರೆಯಿಂ ಭೋ. ಹರನ ಮಂತಣಿಯ ಶೂಲದಲ್ಲಿ, ಶಿರದಲುಂಗುಟ ಊರಿ, ನೆರೆವುತ್ತಿರ್ದುದ ನಾನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೂವ ಕೊಯ್ಯ ಹೋದಡೆ, ಹೂವಿನ ಮೇಲೊಂದು ಗಿಡ ಹುಟ್ಟಿತ್ತು. ಹೂವಿನ ಸೊಂಪುವನಾರೂ ಕಂಡವರಿಲ್ಲ. ಹೂವಿನ ಗುಂಪವನಾರೂ ಬಲ್ಲವರಿಲ್ಲ. ಹೂವ ಕೊಯ್ಯದೆ ಗಿಡವ ಕಡಿಯದೆ ನೇಮ ಸಂದುದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹುಟ್ಟುವರೆಲ್ಲರ ಹುಟ್ಟಬೇಡೆಂದೆನೆ ? ಹೊಂದುವರೆಲ್ಲರ ಹೊಂದಬೇಡೆಂದೆನೆ ? ಪ್ರಳಯದಲ್ಲಿ ಅಳಿವರ ಅಳಿಯಬೇಡೆಂದೆನೆ ? ಗುಹೇಶ್ವರಾ ನಿಮ್ಮನರಿದು ನೆರೆದ ಬಳಿಕ, ಧರೆಯ ಮೇಲುಳ್ಳವರನಿರಬೇಡವೆಂದೆನೆ ?
--------------
ಅಲ್ಲಮಪ್ರಭುದೇವರು
ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು ಮುಂದಣ ಕವಿಗಳೆನ್ನ ಕರುಣದ ಕಂದಗಳು. ಆಕಾಶದ ಕವಿಗಳೆನ್ನ ತೊಟ್ಟಿಲ ಕೂಸು. ಹರಿಬ್ರಹ್ಮರೆನ್ನ ಕಕ್ಷಕುಳ. ನೀ ಮಾವ ನಾನಳಿಯ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು. ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು. ದೇವರಿಲ್ಲ ಭಕ್ತರಿಲ್ಲ; ನಾನೂ ಇಲ್ಲ ನೀನೂ ಇಲ್ಲ; ಗುಹೇಶ್ವರಾ, ಪೂಜಿಸುವರೂ ಇಲ್ಲ, ಪೂಜೆಗೊಂಬವರೂ ಇಲ್ಲ.
--------------
ಅಲ್ಲಮಪ್ರಭುದೇವರು
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ, ಮೇದು ಬಂದೆನೆಂದಡೆ, ಇದ ಕಂಡು ಬೆರಗಾದೆ. ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ, ಇದ ಕಂಡು ಬೆರಗಾದೆ. ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ, ಇದ ಕಂಡು ಬೆರಗಾದೆ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ ನಾನಲ್ಲಯ್ಯಾ. ಅದೇನೆಂಬೆನಯ್ಯಾ ಎಂತೆಂಬೆನಯ್ಯಾ? ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಸಿವಾಯಿತ್ತೆಂದು ಹುಸಿದು ಮಜ್ಜನಕ್ಕೆರೆವರಯ್ಯಾ. ತೃಷೆಯಾಯಿತ್ತೆಂದು ಅರ್ಪಿತವ ಮಾಡುವರಯ್ಯಾ. ಇದೆಂತೊ ಭಕ್ತಸಂಬಂಧ ಇದೆಂತೊ ಶರಣಸಂಬಂಧ? ಇದೆಂತೊ ಲಿಂಗಸಂಬಂಧ? ಕಾರಣವಿಲ್ಲದ ಭಕ್ತಿಯ ಕಂಡಡೆ, ಹೋಗ ನೂಕುವನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹುಲಿಯ ತಲೆಯ ಹುಲ್ಲೆ, ಹುಲ್ಲೆಯ ತಲೆಯ ಹುಲಿ_ ಈ ಎರಡರ ನಡು ಒಂದಾಯಿತ್ತು !_ ಹುಲಿಯಲ್ಲ ಹುಲ್ಲೆಯಲ್ಲ. ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ. ತಲೆಯಿಲ್ಲದ ಮುಂಡ ತರಗೆಲೆಯ ಮೆದ್ದಡೆ, ಎಲೆ ಮರೆಯಾಯಿತ್ತು ಕಾಣಾ, ಗುಹೇಶ್ವರಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...