ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ವತಂತ್ರ ಪರತಂತ್ರಕ್ಕೆ ಆವುದು ಚಿಹ್ನ ನೋಡಾ. ತಾನೆಂಬುದ ಅಳಿದು ಇದಿರೆಂಬುದ ಮರೆದು, ಭಾವದಗ್ಧವಾಗಿರಬಲ್ಲಡೆ ಅದು ಸ್ವತಂತ್ರ. ನೀನೆಂಬುದ ಧಿಕ್ಕರಿಸಿ ತಾನೆಂಬುದ ನೀಕರಿಸಿ ಉಭಯ ಭಾವದಲ್ಲಿ ಸನ್ನಹಿತವಾಗಿರಬಲ್ಲಡೆ ಪರತಂತ್ರ. ಸ್ವತಂತ್ರ ಪರತಂತ್ರವೆಂಬೆರಡನೂ ವಿವರಿಸದೆ, ತನ್ನ ಮರೆದಿಪ್ಪಾತನೆ ಉಪಮಾತೀತನು. ಗುಹೇಶ್ವರನ ಶರಣರು ದೇಹವಿಲ್ಲದ ನಿರ್ದೇಹಿಗಳೆಂಬುದು ಇಂದೆನಗೆ ಕಾಣಬಂದಿತ್ತು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಸರ್ಪ ಸಂಸಾರಿಯೊಡನಾಡಿ ಕಟ್ಟುವಡೆಯಿತ್ತು, ಮನವ ತಮಂಧ ಬಿಡದು ಮನದ ಕಪಟ ಬಿಡದು. ಸಟೆಯೊಡನೆ ದಿಟವಾಡೆ ಬಯಲು ಬಡಿವಡೆಯಿತ್ತು ! ಕಾಯದ ಸಂಗದ ಜೀವವುಳ್ಳನ್ನಕ್ಕರ, ಎಂದೂ ಭವ ಹಿಂಗದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಹಭಾಜನ ಸಹಭೋಜನವೆಂದೆಂಬರು. ಭಾಜನವಾವುದು ಭೋಜನವಾವುದು ಎಂದರಿಯರು. ಭಾಜನವೆ ಅಂಗ, ಭೋಜನವೆ ಲಿಂಗ ! ಭಾಜನಸಹಿತ ಭೋಜನಮಾಡುವ ಹಿರಿಯರು, ಭಾಜನವನಿರಿಸಿ ಹೋದಡೆ ಅದೆ ಭಂಗ_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಸುಖವನರಿಯದ ಹೆಣ್ಣು ಸೂಳೆಯಾದಳು, ಲಿಂಗವನರಿಯದ ಭಕ್ತ ಶೀಲವಂತ ಪ್ರಪಂಚಿಯಾದ. ಈ ಸೂಳೆಗೆ ಸುಖವುಂಟೆ ? ಈ ಶೀಲಕ್ಕೆ ಗತಿಯುಂಟೆ ? ಈ ಉಭಯರುಗಳು ಕೆಟ್ಟ ಕೇಡ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಾಗರದೊಳಗಿಪ್ಪ ಪ್ರಾಣಿಗಳು, ಬೇರೆ ಮತ್ತೊಂದೆಡೆಯಲ್ಲಿ ಇರಬಲ್ಲವೆ ? ಭವಸಾಗರದೊಳಗಿಪ್ಪ ಜೀವಿಗಳಿಗೆ ಅದೇ ಗತಿಯಲ್ಲದೆ ಬೇರೆ ಮತ್ತೊಂದೆಡೆಯುಂಟೆ ? ಗುಹೇಶ್ವರನ ಲೀಲೆ ಜಗನ್ಮಯವಾದಡೆ ನಾನು ಬೆರಗಾದೆನು !
--------------
ಅಲ್ಲಮಪ್ರಭುದೇವರು
ಸತ್ಯವನೊಳಕೊಂಡ ಮಿಥ್ಯಕ್ಕೆ ಭಂಗ, ಮಿಥ್ಯವನೊಳಕೊಂಡ ಸತ್ಯಕ್ಕೆ ಭಂಗ. ಸತ್ಯ ಮಿಥ್ಯವನೊಳಕೊಂಡ ಮನಕ್ಕೆ ಭಂಗ ! ಮನವನೊಳಕೊಂಡ ಜ್ಞಾನಕ್ಕೆ ಭಂಗ; ಜ್ಞಾನವನೊಳಕೊಂಡ ನಿಜಕ್ಕೆ ಭಂಗವುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಸುರಿವ ಜಲಕ್ಕೆ ನೆಲೆ(ನೆಲ?), ಹೊಲೆಯೆಂದು ಪ್ರಮಾಣಿಸಬಹುದೆ ? ಉರಿವ ಅನಲಂಗೆ ಶತಡೊಂಕು ಸಸಿನವೆಂಬುದುಂಟೆ ? ಗುಹೇಶ್ವರಲಿಂಗಕ್ಕೆ ಲೇಸು ಕಷ್ಟವೆಂಬುದಿಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಸಿದ್ಧರಾಮಯ್ಯನನುವ ನಿರ್ಬುದ್ಧಿ ಮನುಜರು ಎತ್ತಬಲ್ಲರೊ, ಸದ್ಯೋಜಾತವದನನೆ ಬಲ್ಲ. ಪಂಚಭೂತವ ಮಾಡಿದ ಘನಕ್ಕೆ ಘನವ ತೋರಿದ ಫಣಿಯ ಮಣಿಯ ತೊಡಗಿದ ಚತುರ್ದಶಭುವನದ ಹವಣನಾರು ಬಲ್ಲರೊ ? ಒಳಗು ಹೊರಗುವ ತೋರಲಿಲ್ಲ ! ಮನದ ಕೊನೆಯಲ್ಲಿ ಬೆಳಗುತಿಪ್ಪ ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯದೇವರು ತಾನೆ !
--------------
ಅಲ್ಲಮಪ್ರಭುದೇವರು
ಸಮುದ್ರದೊಳಗೆ ನೊರೆ ತೆರೆಗಳು ನೆಗಳ್ದವೆಂದಡೆ ತಾ ಸಮುದ್ರದಿಂದ ಅನ್ಯವಪ್ಪವೆ ? ನಿರ್ವಿಕಾರ ನಿತ್ಯ ನಿರಂಜನ ನಿರ್ಗುಣ ಪರಿಪೂರ್ಣ ನಿರ್ವಿಕಲ್ಪ ಪರಬ್ರಹ್ಮಶಿವನಿಂದ ಜಗತ್ತು ಉದಯಿಸಿತ್ತು ಎಂದಡೆ ಶಿವನಿಂದ ಅನ್ಯವೆನಬಹುದೆ ? ಇಂತಪ್ಪ ಅರಿವು, ನೀವು ಕೊಟ್ಟ ಸಮ್ಯಕ್ ಜ್ಞಾನಕ್ಕೆ ಅರಿದಪ್ಪುದಯ್ಯಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಸತ್ತು ಮುಂದೆ ದೇವರ ಕೂಡುವುದುಳ್ಳಡೆ, ಸಾಯಲೆ ಬೇಕು. ಹಿಂದೆ ನೋಯಲೇಕಯ್ಯಾ ? ತಮ್ಮಿಂದ ತಾವು ಸತ್ತು, ನಿಮ್ಮ ಮೇಲೆ ಇಡುವರು. ಲೋಕದ ದುರ್ಜನವ ಹೊತ್ತೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ, ಸೂರ್ಯ ಚಂದ್ರರೆಂಬ ಅಂಕಣಿ, ಬ್ರಹ್ಮನೆ ಹಲ್ಲಣ, ಸುರಾಳವೆಂದಲ್ಲಿ ನಿರಾಳವಾಯಿತ್ತು_ಗುಹೇಶ್ವರನೆಂಬ ರಾವುತಂಗೆ.
--------------
ಅಲ್ಲಮಪ್ರಭುದೇವರು
ಸ್ವಾನುಭಾವದ ಬೆಳಗಿನಲ್ಲಿ ಒಂದು ಬೆಕ್ಕು ಹುಟ್ಟಿತ್ತು. ಆ ಬೆಕ್ಕಿನ ತಲೆಯ ಮೇಲೊಂದು ಗಿರಿ ಹುಟ್ಟಿತ್ತು. ಗಿರಿಯ ಮೇಲೆರಡು ರತ್ನ ಹುಟ್ಟಿದವು. ಆ ರತ್ನಂಗಳನರಸಿಕೊಂಡು ಬರಲು, ಅವು ತನ್ನನವಗ್ರಹಿಸಿದವು. ಒಂದು ರತ್ನ ಅಂಗವನವಗ್ರಹಿಸಿತ್ತು, ಮತ್ತೊಂದು ರತ್ನ ಪ್ರಾಣವನವಗ್ರಹಿಸಿತ್ತು. ಆ ರತ್ನಂಗಳ ಪ್ರಭೆ ತಾನಾದ ನಮ್ಮ ಗುಹೇಶ್ವರನ ಶರಣ ಸಿದ್ಧರಾಮಯ್ಯದೇವರ ನಿಲವಿಂಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಸತ್ತು ಮುಂದೆ ದೇವರ ಕೂಡಿಹೆವೆಂಬಿರಿ, ಸಾಯದ ಮುನ್ನ ಸತ್ತಿಪ್ಪಿರಿ. ಎಂತಯ್ಯಾ ನಿಮ್ಮ ಲಿಂಗೈಕ್ಯದ ಪರಿ ? ಎಂತಯ್ಯಾ ನಿಮ್ಮ ಪ್ರಮಥರ ಪರಿ ? ಅಂಗದ ಅವಸ್ಥೆಯಲ್ಲದೆ ಲಿಂಗದ ಅವಸ್ಥೆ ಆರಿಗೂ ಇಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸ್ಥೂಲವ ಬ್ರಹ್ಮನಳವಡಿಸಿಕೊಂಡ. ಸೂಕ್ಷ್ಮವ ವಿಷ್ಣುವಳವಡಿಸಿಕೊಂಡ. ಕಾರಣವ ರುದ್ರನಳವಡಿಸಿಕೊಂಡ. ನಿಃಕಾಯವ ಈಶ್ವರನಳವಡಿಸಿಕೊಂಡ. ನಿರಂಜನವ ಸದಾಶಿವನಳವಡಿಸಿಕೊಂಡ. ನಿರವಯವ ವ್ಯೋಮಾತೀತನಳವಡಿಸಿಕೊಂಡ. ಈ ಷಡುಸ್ಥಲದವರೆಲ್ಲ ಬಯಲನಳವಡಿಸಿಕೊಂಡು ಬಯಲಾಗಿತ್ತು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಂಗ್ರಾಮ ಒಡ್ಡಿದಲ್ಲಿ ಹಂದೆ ಗೆಲಬಲ್ಲನೆ ಹೇಳಾ ? ನಿಂದ ನಿಲವಿನ ಘನಮಡುವ, ಕಂದ ಈಸಾಡಬಲ್ಲನೆ ಹೇಳಾ ? ಗುಹೇಶ್ವರನೆಂಬ ನಿರಾಳದ ಘನವ, ಪಂಚೇಂದ್ರಿಯಕ ಬಲ್ಲನೆ ಹೇಳಾ ?
--------------
ಅಲ್ಲಮಪ್ರಭುದೇವರು
ಸುಳಿವ ಸುತ್ತುವ ಮನದ ವ್ಯವಹರಣೆಯುಳ್ಳನ್ನಕ್ಕರ, ಅರಿಯೆನರಿಯೆ ನೆರೆ ಶಿವಪಥವ ಗುಹೇಶ್ವರಲಿಂಗದ ನಿಜವನರಿದ ಬಳಿಕ ಅರಿಯೆನರಿಯೆ ಲೋಕದ ಬಳಕೆಯ.
--------------
ಅಲ್ಲಮಪ್ರಭುದೇವರು
ಸರೋವರದ ಕಮಲದಲ್ಲಿ ತಾನಿಪ್ಪನು, ಕೆಂದಾವರೆಯ ಪುಷ್ಪದ ನೇಮವೆಂತೊ? ಹೂವ ಮುಟ್ಟದೆ ಕೊಯ್ವ ನೇಮವೆಂತೊ? ಮುಟ್ಟದೆ ಕೊಯ್ವ ಮುಟ್ಟಿದ ಪರಿಮಳ ಗುಹೇಶ್ವರಾ ನಿಮ್ಮ ಶರಣನು.
--------------
ಅಲ್ಲಮಪ್ರಭುದೇವರು
ಸಂಗಿಯಲ್ಲದ ನಿಸ್ಸಂಗಿಯಲ್ಲದ, ರೂಪಿಲ್ಲದ ನಿರೂಪಿಲ್ಲದ ಸುಳುಹು ನೋಡಾ ! ದ್ವೈತವಿಲ್ಲದ ಅದ್ವೈತವಿಲ್ಲದ, ಸೀಮೆಯಿಲ್ಲದ ನಿಸ್ಸೀಮೆಯಿಲ್ಲದ ಸುಳುಹು ನೋಡಾ ! ನಡೆಯಿಲ್ಲದ ನುಡಿಯಿಲ್ಲದ ಒಡಲಿಲ್ಲದ ಸುಳುಹು ನೋಡಾ ! ಕಡೆ ಮೊದಲೆಡೆದೆರಹಿಲ್ಲದಖಂಡ ಗುಹೇಶ್ವರಲಿಂಗ ನಿರಾಳ ನಿಜೈಕ್ಯ ನೋಡಾ.
--------------
ಅಲ್ಲಮಪ್ರಭುದೇವರು
ಸೀಮೆಯಿಲ್ಲದ ನಿಸ್ಸೀಮೆಯಲ್ಲಿ ಅಡಿಯಿಡುವ ಪರಿ ಎಂತಯ್ಯಾ ? ಕ್ರೀ ಇಲ್ಲದ ನಿಃಕ್ರೀಯಲ್ಲಿ ನಿಜವ ಒಡಗೂಡು ಪರಿ ಇನ್ನೆಂತೊ ? ಮೊದಲಿಲ್ಲದೆ ಲಾಭ ಉಂಟೆ ? ಇದುಕಾರಣ_ ತನ್ನ ಹರಿವ ಮನವ ನಿಲ್ಲೆಂದು ನಿಲಿಸಿ, ಜಿಹ್ವೆ ಗುಹ್ಯಾಲಂಪಟವ ಕೆಡಿಸಿ, ಕ್ರಿಯಾ ಜ್ಞಾನ ಸಂಬಂಧವಾದಲ್ಲದೆ ಶರಣರು ಮೆಚ್ಚರು. ಇಂತಿವನರಿಯದೆ; ಆಸೆ ಎಂಬ ಹೇಸಿಕೆಯ ಮೇಲೆ ವೇಷವೆಂಬ ಹೆಣನ ಹೊತ್ತು ಹೇಸದೆ ಸತ್ತರಲ್ಲಾ ಹಿರಿಯರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಂಸಾರವೆಂಬ ಶರಿಧಿ ಅಡ್ಡಗಟ್ಟಲು, ಅನುವನರಿದವಂಗೆ ಅಂಗವೆ ಹಡಗು, ಮನವೆ ಕೂಕಂಬಿಕಾರ. ಜ್ಞಾನ_ಸುಜ್ಞಾನವೆಂಬ ಗಾಳಿ ತೀಡಲು, ಸುಲಕ್ಷಣದಿಂದ ಸಂಚರಿಸುತ್ತಿರಲು ಬರ್ಪವು ಮೀನು, ಮೊಸಳೆ, ಅಷ್ಟಗಿರಿ,_ಜತನ. ಮೊತ್ತದ ಸಂಚಾರದ ಹಡಗು ತಾಗುತ್ತಿದೆ, ಎಚ್ಚತ್ತಿರು, ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಮೈಮರೆಯದೆ. ಕತ್ತಲೆ ದೆಸೆ ಅತ್ತಲೆ ಪೋಗು; ಉತ್ತರನಕ್ಷತ್ರದ ಪ್ರಭೆಯಿದೆ ! ಸೆಟ್ಟಿ ಜತನ ! ಪಟ್ಟಣವಿದೆ,_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಾವ ಜೀವಕ್ಕೆ ಗುರು ಬೇಡ, ಸಾಯದ ಜೀವಕ್ಕೆ ಗುರು ಬೇಡ. ಗುರುವಿಲ್ಲದೆ ಕೂಡಲು ಬಾರದು. ಇನ್ನಾವಠಾವಿಂಗೆ ಗುರು ಬೇಕು ? ಸಾವು ಜೀವ ಸಂಬಂಧದಠಾವ ತೋರಬಲ್ಲಡೆ ಆತನೆ ಗುರು_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಸರ್ವಾತ್ಮ ಚೈತನ್ಯವಪ್ಪ ಜಂಗಮದ ಪರಿಯ ನೋಡಾ: ಅಖಂಡಬ್ರಹ್ಮದ ಬಯಲೆಲ್ಲಾ ತಾನಾಗಿ, ಸುಳಿಯಲೆಡೆಯಿಲ್ಲದೆ ನಿರ್ಗಮನಿಯಾದಲ್ಲಿ ಒಂದಾಸೆಯೊಳಗಿಲ್ಲದ ಅವಿರಳ ಜ್ಞಾನಿ ! ಕುರಿತೊಂದಕ್ಕೆ ಸುಳಿವವನಲ್ಲ, ಭಕ್ತಿಗಮ್ಯನು,
--------------
ಅಲ್ಲಮಪ್ರಭುದೇವರು
ಸುತ್ತಲಿಲ್ಲದ ವ್ಯಾಧ ಸುಳಿಯಲಿಲ್ಲದ ಮೃಗವು. ಒತ್ತಿದನು ಆ ಮೃಗವ ಇರುಬಿನಲ್ಲಿಗೆ ಅಯ್ಯಾ. `ಸೋವೋವ' `ಸೋವೋವ' ಎಂದೆನುತ್ತ ಒತ್ತಿದ ಮೃಗವು ಇರುಬುಗೊಂಡಿತ್ತು. ಇರುಬಿನ ಕುಳಿಯೊಳಗೆ ಕೊಲ್ಲದೆ ಕೊಂದನಲ್ಲಾ ಮೃಗವನು. ಅಳಿಯದೆ ಅಳಿದುದಲ್ಲಾ ! ಮಾಡಲಿಲ್ಲದ ಸಯದಾನ, ನೀಡಲಿಲ್ಲದ ಬೋನ ಅರ್ಪಿತವಿಲ್ಲದ ತೃಪ್ತಿ; ಗುಹೇಶ್ವರಲಿಂಗಕ್ಕೆ.
--------------
ಅಲ್ಲಮಪ್ರಭುದೇವರು
ಸ್ಥಿರಾಸನದಲ್ಲಿರ್ದು ಸ್ವರವು ನಾಲ್ಕರ ನೆಲೆಯರಿದು ಉರವಣಿಸುವ ಪವನಂಗಳ ತರಹರಿಸಿ ಇಂದ್ರಿಯಗಳನೊಂದು ಮುಖವಂ ಮಾಡಿ ಬಂಧಿಸಿ ಹಾರುವ ಹಂಸೆಯ ಬೋಧಿಸಿ ನಿಲಿಸಿ ಪರಮಾಮೃತದ ಕುಟುಕನಿಕ್ಕಿ ಸಲಹುತ್ತಿರ್ದೆನಯ್ಯ ಅನುದಿನದಲ್ಲಿ. ದಾಸೋಹವಳಿದು ಸೋಹವಾಗಲು, ಹಂಸೆಯ ಗತಿಗೆಟ್ಟು ಪರಮಹಂಸವಾಗಿ ಸೋಹಂ ಸೋಹಂ ಸೋಹಂ ಎಂದುದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಟೆ ದಿಟವಾದಲ್ಲಿ ಮುಟ್ಟಿಯೂ ಮುಟ್ಟದೆ ಇರಬೇಕು. ಅತಿರತಿ ಗತಿಮತಿಗೆ ಮಂದವಾಯಿತ್ತು. ಎಂಟು ಹಿಟ್ಟು ಪಂಚಮಠವುಂಟು ಧರೆಯ ಮೇಲೆ. ನರಸುರಾದಿಗಳೆಲ್ಲ ಸಭಾರವ ಹೊತ್ತು ಬಂದೈದಾರೆ. ಹಿಟ್ಟು ನಷ್ಟ, ಮಠ ಹಾಳು, ಊರಿಗುಪಟಳ, ಮಠವ ಸುಟ್ಟು ಗುಹೇಶ್ವರ ಬೀದಿಗರುವಾದ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...