ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮದ್ದ ನಂಬಿಕೊಂಡಡೆ ರೋಗ ಮಾಣದಿಪ್ಪುದೆ ? ಸಜ್ಜನಿಕೆಯುಳ್ಳಡೆ ಪ್ರಸಾದಕಾಯ ಕೆಡುವುದೆ ? ಪ್ರಾಣ, ಲಿಂಗವಾದಡೆ ಪ್ರಾಣ ಬೇರಪ್ಪುದೆ ? ಪ್ರಾಣಲಿಂಗ ಪ್ರಸಾದವನು ತಿಳಿದು ನೀವು ನೋಡಿರೆ, ನಾದ ಬಿಂದು ಸೂಸದ ಮುನ್ನ, ಆದಿಯ ಪ್ರಸಾದವ ಭೇದಿಸಿಕೊಂಡರು_ ಗುಹೇಶ್ವರಾ ನಿಮ್ಮ ಶರಣರು.
--------------
ಅಲ್ಲಮಪ್ರಭುದೇವರು
ಮನ ಉಂಟೆ ಮರುಳೆ ಶಿವಯೋಗಿಗೆ ? ಮತ್ತೊಂದು ಮನಮಗ್ನ ಉಂಟೆ ಶಿವಯೋಗಿಗೆ ? ಇಲ್ಲದ ಮನವ ಉಂಟೆಂದು ನುಡಿದು, ಅಡಗಿಸಿದೆನೆಂಬ ಮಾತು ಮನವ ನೆಲೆಮಾಡಿ ತೋರುತ್ತದೆ. ಗುಹೇಶ್ವರನ ಅರಿದ ಶರಣಂಗೆ ತೋರಲಿಲ್ಲ ಅಡಗಲಿಲ್ಲ ಕೇಳಾ.
--------------
ಅಲ್ಲಮಪ್ರಭುದೇವರು
ಮಠವೇಕೋ ಪರ್ವತವೇಕೋ ಜನವೇಕೋ ನಿರ್ಜನವೇಕೋ ಚಿತ್ತ ಸಮಾಧಾನವುಳ್ಳ ಶರಣಂಗೆ ? ಮತ್ತೆ_ಹೊರಗಣ ಚಿಂತೆ ಧಾನ್ಯ ಮೌನ ಜಪತಪವೇಕೊ; ತನ್ನ ತಾನರಿದ ಶರಣಂಗೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ. ತನುವಿನಲ್ಲಿ ಸುಖವ ಧರಿಸಿಕೊಂಡಡೆ, ಆ ತನುವಿಂಗೆ ಕೊರತೆ ನೋಡಾ. ಅರಿವನರಿದು ಸುಖವಾಯಿತ್ತೆಂದಡೆ, [ಆ] ಅರಿವಿಂಗೆ ಭಂಗ ನೋಡಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮೃಗದ ಸಂಚದ ತಲೆಯಲ್ಲಿ ಜಗದ ಬಯಲ ನಾಲಗೆ! ಅಘಹರನ ದೃಷ್ಟಿಯಲ್ಲಿ ಬೊಬ್ಬೆಯಬ್ಬರವಿದೇನೊ? ಗಗನದ ವಾಯುವ ಬೆಂಬಳಿವಿಡಿದು, ಅಗ್ನಿಯಪ್ಪಿನ ಕಳೆಯಲ್ಲಿ ಮೇದಿನಿ ಅಡಗಿತ್ತು ನೋಡಾ! ಮನದ ಬಗೆಯನವಗ್ರಹಿಸಿ, ಜಗದ ಬಣ್ಣವ ನುಂಗಿ, ಗುಹೇಶ್ವರನೆಂಬ ಲಿಂಗದಲ್ಲಿ ನಿರಾಳವಾಯಿತ್ತು.
--------------
ಅಲ್ಲಮಪ್ರಭುದೇವರು
ಮನ ಮನ ಬೆರಸಿ ಸಮರತಿಯ ಸಂಗದಲ್ಲಿ ಸುಖಿಗಳಾಗಿಪ್ಪ ಶರಣರ ಸಂಗಸುಖವನು ಆ ಶರಣರೆ ಬಲ್ಲರಲ್ಲದೆ ಕೆಲದಲ್ಲಿದ್ದವರಿಗೆ ಅರಿಯಬಹುದೆ ? ನಿಜಗುಣಭರಿತ ಶಿವಶರಣರ ನಿಲವ ಕಂಡಿಹೆನೆಂದಡೆ ಕಾಣಬಹುದೆ ?
--------------
ಅಲ್ಲಮಪ್ರಭುದೇವರು
ಮಾಡಿ ಮಾಟವ ಮರೆದು, ಕೂಡಿ ಕೂಟವ ಮರೆದು, ಬಯಲ ಸಮರಸದೊಳಗೆ ಬಯಲ ಬಯಲಾಗಿಪ್ಪವರಾರು ಹೇಳಾ ಬಸವಣ್ಣನಲ್ಲದೆ ? ತನ್ನ [ಅ?] ಭಿನ್ನವ ಮಾಡಿ ಅನ್ಯವೇನೂ ಇಲ್ಲದೆ ತನ್ನ ತಾ ಮರೆದಿಪ್ಪವರಾರು ಹೇಳಾ ಬಸವಣ್ಣನಲ್ಲದೆ ? ಗುಹೇಶ್ವರಾ ನಿಮ್ಮ ಶರಣ ಸಂಗಬಸವಣ್ಣನ ನಿಲವಿಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು? ಮುದ್ರಾಧಾರಿಗಳಪ್ಪರಯ್ಯಾ. ಲಿಂಗದಲ್ಲಿ ನಿಷೆ*ಯಿಲ್ಲ, ಜಂಗಮದಲ್ಲಿ ಪ್ರೇಮವಿಲ್ಲ ವೇಷಧಾರಿಗಳಪ್ಪರಯ್ಯಾ. ಲಾಂಛನ ನೋಡಿ ಮಾಡುವ ಭಕ್ತಿ, ಸಜ್ಜನಸಾರಾಯವಲ್ಲ, ಗುಹೇಶ್ವರ ಮೆಚ್ಚನಯ್ಯಾ.
--------------
ಅಲ್ಲಮಪ್ರಭುದೇವರು
ಮನ ಮುಕ್ತಿ ವಿವೇಕವೆಂಬ ಅಕ್ಕಿಯನು ಗುಪಿತವೆಂಬ ಒರಳೊಳಗಿಕ್ಕಿ ಅಭಿನ್ನಮಥನವೆಂಬ ಒನಕೆಯಲ್ಲಿ ಥಳಿಸಿ ಕಲ್ಮಷವೆಂಬ võ್ಞಡ ಹಾರಿಸಿ, ಸಮತೆಯೆಂಬ ಸಲಿಲದಲ್ಲಿ ಜಾಳಿಸಿ, ಅಳುಪು ಎಂಬ ಹರಳ ಕಳೆದು ದಯಾಮೃತವೆಂಬ ಹಾಲಿನಲ್ಲಿ ಬೋನವ ಮಾಡಿ ಸಮರಸ ರುಚಿಕರದಿಂದ ಶಾಕಪಾಕಂಗಳಂ ಮಾಡಿ ನೆನಹಿನ ಲವಲವಕಿಯೆ ಅಭಿಗಾರವಾಗಿ ನಿರ್ಮಲವೆಂಬ ಶಿವದಾನವ ಗಡಣಿಸಿ ಕಾಯ್ದಿದ್ದರಯ್ಯಾ. ಪಂಚೇಂದ್ರಿಯವೆಂಬ ಸೊಣಗ ಮುಟ್ಟದಂತೆ ಕಾಯ್ದಿದ್ದರಯ್ಯಾ. ಷಡುವರ್ಗವೆಂಬ ತೊತ್ತಿರು ಮುಟ್ಟದಂತೆ ಕಾಯ್ದಿದ್ದರಯ್ಯಾ. ಅಷ್ಟಮದವೆಂಬ ಮಕ್ಕಳು ಮುಟ್ಟದಂತೆ ಕಾಯ್ದಿದ್ದರಯ್ಯಾ. ಇನಿತು ಮುಖ್ಯವಾದ ಹೀನಂಗಳಾವೂ ಮುಟ್ಟದಂತೆ ಕಾಯ್ದಿದ್ದರಾಗಿ, ಈ ಬೋನ ಗುಹೇಶ್ವರಲಿಂಗಕ್ಕೆ ಅರ್ಪಿತವಾಯಿತ್ತು, ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಮನ ಮನ ಬೆರಸಿದವರೆಂತಿಪ್ಪರಂತಿಪ್ಪರು. ಅವರ ಪರಿಯನರಿಯಬಾರದು ಕೇಳಾ. ಇದಿರಿಚ್ಛೆಯರಿಯದಿಪ್ಪರು. ಒಳಗೆ ನೋಡಿದರೆ ಬಟ್ಟಬಯಲಲ್ಲಿಪ್ಪರು. ಗುಹೇಶ್ವರನ ಶರಣರು ತಾವಿಲ್ಲದ ಮಹಿಮರೆಂಬುದ ನಿನ್ನಿಂದಲರಿದೆ ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಮೂರರಲ್ಲಿ ಮುಟ್ಟಲಿಲ್ಲ, ಆರರಲ್ಲಿ ತೋರಲಿಲ್ಲ. ಎಂಟರಲ್ಲಿ ಕಂಡುದಿಲ್ಲ ಒಂದರಲ್ಲಿ ನಿಂದುದಿಲ್ಲ. ಏನೆಂದೆಂಬೆ ? ಎಂತೆಂದೆಂಬೆ ? ಕಾಯದಲ್ಲಿ ಅಳಿದುದಿಲ್ಲ ಜೀವದಲ್ಲಿ ಉಳಿದುದಿಲ್ಲ, ಗುಹೇಶ್ವರನೆಂಬ ಲಿಂಗವು ಶಬ್ದಕ್ಕೆ ಬಂದುದಿಲ್ಲ
--------------
ಅಲ್ಲಮಪ್ರಭುದೇವರು
ಮರಹು ಬಂದಹುದೆಂದು ಶ್ರೀಗುರು ಕರಸ್ಥಲಕ್ಕೆ ಕುರುಹ ಕೊಟ್ಟಡೆ; ಆ ಕುರುಹು ನೋಟದಲ್ಲಿ ಅಳಿದು, ಆ ನೋಟ ಮನದಲ್ಲಿ ಅಳಿದು, ಆ ಮನ ಭಾವದಲ್ಲಿ ಅಳಿದು, ಆ ಭಾವ ಜ್ಞಾನದಲ್ಲಿ ಅಳಿದು, ಆ ಜ್ಞಾನ ಸಮರಸದಲ್ಲಿ ಅಳಿದ ಬಳಿಕ_ ಇನ್ನು ಅರಿವ ಕುರುಹಾವುದು ಹೇಳಾ ? ನೀನರಸುವ ಕುರುಹು ಎನ್ನ ಕರಸ್ಥಲದ ಲಿಂಗ, ಎನ್ನ ಕರಸ್ಥಲ ಸಹಿತ ನಾನು ನಿನ್ನೊಳಗೆ ನಿರ್ವಯಲಾದೆ. ಎನ್ನ ನಿರ್ವಯಲಲಿಂಗ ನಿನಗೆ ಸಾಧ್ಯವಾಯಿತ್ತಾಗಿ; ನೀನೇ ಪರಿಪೂರ್ಣನಯ್ಯಾ. ನಿನ್ನಲ್ಲಿ ಮಹಾಲಿಂಗವು ಸಾಧ್ಯವಾಗಿ ಅದೆ. ಗುಹೇಶ್ವರ ಸಾಕ್ಷಿಯಾಗಿ, ನೀ ಬಯಸುವ ಬಯಕೆ ಸಂದಿತ್ತು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಮುನ್ನ ಎಂತಾಯಿತ್ತು ? ಆಗದಡೆಂತಾಯಿತ್ತು ? ತನ್ನ ತಾನು ಅರಸುತ್ತಿದ್ದಿತ್ತು. ತನ್ನ ಬಚ್ಚಿಟ್ಟ ಬಯಕೆಯ ನಿಧಾನವ ಕಂಡು ತಾನೆ ಮಹವೆಂದು ತಿಳಿದು ನೋಡಾ. ಗುಹೇಶ್ವರಲಿಂಗ ತನ್ನುವ ತನ್ನಂತೆ ಮಾಡಿತ್ತು.
--------------
ಅಲ್ಲಮಪ್ರಭುದೇವರು
ಮನದ ಕಾಲತ್ತಲು ತನುವಿನ ಕಾಲಿತ್ತಲು. ಅನುಭಾವದ ಅನುವನು ನೆನೆವುತ್ತ ನೆನೆವುತ್ತ ಗಮನ ಕೆಟ್ಟಿತ್ತು. ಲಿಂಗ ಮುಖದಲಾದ ಸೂಚನೆಯ ಸುಖವ ಕಂಡು ಗಮನ ಕೆಟ್ಟಿತ್ತು. ಅನುವಾಯಿತ್ತು ಅನುವಾಯಿತ್ತು, ಅಲ್ಲಿಯೆ ತಲ್ಲೀನವಾಯಿತ್ತು_ ಗುಹೇಶ್ವರನೆಂಬ ಲಿಂಗೈಕ್ಯಂಗೆ
--------------
ಅಲ್ಲಮಪ್ರಭುದೇವರು
ಮುಂದಳೂರಿಗೆ ಬಟ್ಟೆ ಇದೇ ಹೋಗೆಂದಡೆ ಅಂಧಕನೇನು ಬಲ್ಲನು ಹೇಳಾ ? ಸಂಗ್ರಾಮದಲ್ಲಿ ಓಡಿದ ಹೆಂದೆ ಗೆಲಬಲ್ಲನೆ ಹೇಳಾ ? ನಿಂದ ನಿಲವಿನ (ನೀರಿನ ?) ಮಡುವ ಕಂದನೀಸಾಡ ಬಲ್ಲನೆ ಹೇಳಾ ? ಗುಹೇಶ್ವರನೆಂಬ ನಿರಾಳದ ಘನವ ಪಂಚೇಂದ್ರಿ[ಯ]ಕÀನೆತ್ತ ಬಲ್ಲನು ಹೇಳಾ?
--------------
ಅಲ್ಲಮಪ್ರಭುದೇವರು
ಮಣ್ಣಿಲ್ಲದ ಹಾಳ ಮೇಲೆ, ಕಣ್ಣಿಲ್ಲದಾತ ಮಣಿಯ ಕಂಡ, ಕೈಯಿಲ್ಲದಾತ ಪವಣಿಸಿದ, ಕೊರಳಿಲ್ಲದಾತ ಕಟ್ಟಿಕೊಂಡ ! ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಮೇರುಮಂದಿರದಲ್ಲಿ ಈರೈದರತಲೆ, ಧಾರುಣಿಯ ಜನರೆಲ್ಲ ಬಣ್ಣಿಸುತ್ತಿಪ್ಪರು. ಜ್ಞಾನಾಮೃತರಸದಲ್ಲಿ ಓಗರವ ಮಾಡಿ ಆರೋಗಣೆಯ ಮಾಡಿದೆನು. ವಿಷಮಾಕ್ಷ ಹರ ಭಸ್ಮವಿಭೂಷಣ ಶಶಿಧರ ಶರಣು ಶರಣೆನುತಿದ್ದೆನು. ಇಂದ್ರಾಗ್ನಿಯ ಪುರಪಟ್ಟಣದಲ್ಲಿ ಚಂದ್ರಾಹಾರವ (ಚಂದ್ರಹಾರ?) ಬೇಡಿದಡೆ ಖಂಡಕಪಾಲದಲ್ಲಿ ಉಂಡ ತೃಪ್ತಿ, ಅಖಂಡ ನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಮಹಾಘನವೆ ತಾನಾದ ಬಳಿಕ ಪುಣ್ಯವಿಲ್ಲ, ಪಾಪವಿಲ್ಲ; ಸುಖವಿಲ್ಲ, ದುಃಖವಿಲ್ಲ; ಕಾಲವಿಲ್ಲ, ಕರ್ಮವಿಲ್ಲ; ಜನನವಿಲ್ಲ, ಮರಣವಿಲ್ಲ; ಗುಹೇಶ್ವರಾ ನಿಮ್ಮ ಶರಣಂಗೆ ! ಆತ ಮಹಾಮಹಿಮ ನೋಡಯ್ಯಾ.
--------------
ಅಲ್ಲಮಪ್ರಭುದೇವರು
ಮಾಡಿಹೆ ಮಾಡಿಹೆನೆಂಬನ್ನಬರ ತನ್ನ ಅವಧಿಗೆ ಬಂದುದನು ಅರಿವ ಪರಿ ಇನ್ನೆಂತೊ ? ಅಗಸ ನೀರಡಿಸಿ ನಿಂದಂತೆ ಆಗಬೇಡ ಮಾರಯ್ಯಾ, ಗುಹೇಶ್ವರಲಿಂಗವ ಅರಿವುದಕ್ಕೆ.
--------------
ಅಲ್ಲಮಪ್ರಭುದೇವರು
ಮನವ ತೊಳೆದು ನಿರ್ಮಲವ ಮಾಡಿಹೆನೆಂಬ ಯೋಗವೆಂತುಟೊ ? ಮನವ ಹಿಡಿದು ತಡೆದಿಹೆನೆಂಬವರ ಮರುಳುಮಾಡಿ ಕಾಡಿತ್ತು ನೋಡಾ ಮನವು ! ಮನ ವಿಕಲ್ಪಜ್ಞಾನದಿಂದರಿದು, ಅದ ಶುದ್ಧವ ಮಾಡಿಹೆನೆಂಬುದು ತಾನೆ ಮನ ನೋಡಾ. ನಮ್ಮ ಗುಹೇಶ್ವರಲಿಂಗದ ಅನುವನರಿದಿಹೆನೆಂಬವರು, ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಮಾಯದ ಬಲೆಯಲ್ಲಿ ಸಿಲುಕಿದ ಮರುಳ ನಾನೆಂದರಿದ ಪರಿಯ ನೋಡಾ ! ಲಿಂಗವೆಂದರಿದ ಪರಿಯ ನೋಡಾ ! ತನ್ನ ವಿನೋದಕ್ಕೆ ಬಂದು (ದ?) ನಿಶ್ಚಿಂತ ನಿರಾಳ ಗುಹೇಶ್ವರನೆಂದರಿದ ಪರಿಯ ನೋಡಾ.
--------------
ಅಲ್ಲಮಪ್ರಭುದೇವರು
ಮನ ಮನವ (ಘನವ?) ಬೆರಸಿದನುಭಾವ ಘನಕ್ಕೆ ಘನ ಒಂದಾಯಿತ್ತು ನೋಡಾ ! ಅದು ತನ್ನಲ್ಲಿ ತಾನು ತೃಪ್ತಿಯಾದ ನಿಜವು (ನಿಲವು?) ನಿರ್ಣಯದ ಮೇಲೆ ನಿರ್ಧರವಾಯಿತ್ತು ನೋಡಾ. ಗುಹೇಶ್ವರಲಿಂಗದಲ್ಲಿ, ಚನ್ನಬಸವಣ್ಣನಿಂದ ಸುಖಿಯಾದೆನು.
--------------
ಅಲ್ಲಮಪ್ರಭುದೇವರು
ಮತಿಯೊಳಗೊಂದು ದುರ್ಮತಿ ಹುಟ್ಟಿದ ಬಳಿಕ; ಮತಿಯ ಮರವೆಯೊಳಕೊಂಡು, ಭವಕ್ಕೆ ಗುರಿಮಾಡಿ ಕೆಡಹಿತ್ತು ನೋಡಾ. ಅಖಂಡಿತವ ತಂದು ಮತಿಯೊಳಗೆ ವೇದಿಸಲು, ಗತಿಗೆಟ್ಟು ನಿಂದಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮೃಡನೆ ನಿಮ್ಮ ಪುರಾತನರ ಕಾಣುತ್ತ, ತಡೆಯದೆ ಇದಿರೆದ್ದು ಹೊಡೆವಡೆನಾಗಿ ಬಿಡದು ನಾಚಿಕೆ. ಸುಡಲಿಕೆನ್ನ ನುಡಿಹ, ಸಡಿಲದೆನ್ನ ಅಹಂಕಾರ ನೋಡಯ್ಯಾ. ಬಡಮನದವನ ಜಡಿದು ನಡೆಸಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮುಟ್ಟದ ಮುನ್ನ ನರರು, ಸುರರು, ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿ ಅಡಗಿದರಾಗಿ ನಾನವರ ರೂಪಿಸಬಲ್ಲೆ. ದೇವಗಣ ಪ್ರಮಥಗಣ, ರುದ್ರಗಣಂಗಳೆಂಬವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರ ಭಾವಿಸಬಲ್ಲೆ. ಸತ್ಯರು, ನಿತ್ಯರು, ಮುಕ್ತರೆಂಬ ಮಹಾಮಹಿಮರೆಲ್ಲರೂ ಚಿದ್ಭಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ, ನಾನವರನರಿದು ಬಲ್ಲೆ. ಇಂತೀ ತ್ರಿಭಾಂಡವನೊಳಕೊಂಡ ಆ ಅಖಂಡಿತದಿರವೆ ತಾನೆಂದರಿದ ಲಿಂಗೈಕ್ಯನ ರೂಹಿಸಲಿಲ್ಲಾಗಿ, ಭಾವಿಸಲಿಲ್ಲಾಗಿ, ಅರಿಯಲಿಲ್ಲ. ಅರಿವೆ ತಾನೆಂದರಿದ ಬಳಿಕ, ಗುಹೇಶ್ವರನೆಂಬುದು ಬಯಲು ನೋಡಾ !
--------------
ಅಲ್ಲಮಪ್ರಭುದೇವರು

ಇನ್ನಷ್ಟು ...