ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬರಿಯ ನಚ್ಚಿನ ಮಚ್ಚಿನ ಭಕ್ತರು, ಲಿಂಗವ ಮುಟ್ಟಿಯೂ ಮುಟ್ಟದ ಒಳಲೊಟ್ಟಿಗಳು, ನೆರೆದು ಗಳಹುತ್ತಿಪ್ಪರು, ತಮ ತಮಗೆ ಅನುಭಾವವ ನುಡಿವರು. ಅನುಭಾವದ ಆಯತವನರಿಯದಿರ್ದರೆ ಹಿಂದಣ ಅನುಭಾವಿಗಳು? ಗುಹೇಶ್ವರಲಿಂಗದ ಸುಖವನು ಮುಟ್ಟಿದರೆ, ಮರಳಿ ಭವಕಲ್ಪಿತವೆಲ್ಲಿಯದೊ?
--------------
ಅಲ್ಲಮಪ್ರಭುದೇವರು
ಬಸವಣ್ಣಾ ನಿನಗೇಳು ಜನ್ಮ, ನನಗೆ ನಾಲ್ಕು ಜನ್ಮ, ಚನ್ನಬಸವಣ್ಣಗೊಂದೆ ಜನ್ಮ. ನೀನು ಗುರುವೆನಿಸಿಕೊಳಬೇಡ, ನಾನು ಜಂಗಮವೆನಿಸಿಕೊಳಬೇಡ, ನಾವಿಬ್ಬರು ಚೆನ್ನಬಸವಣ್ಣನ ಒಕ್ಕುಮಿಕ್ಕ ಪ್ರಸಾದವ ಕೊಳ್ಳದಡೆ ನಮ್ಮ ಗುಹೇಶ್ವರ ಸಾಕ್ಷಿಯಾಗಿ ಭವಂ ನಾಸ್ತಿಯಾಗದು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಬ್ರಹ್ಮವಿಷ್ಣುಗಳ ಮಾಯೆ ತೊತ್ತಳದುಳಿವಂದು, ರುದ್ರಗಣ ಪ್ರಮಥಗಣಂಗಳೆಂಬವರ ಮಾಯೆ ಮರುಳ್ಮಾಡಿ ಕಾಡುವಂದು, ನೊಸಲ ಕಣ್ಣು ಪಂಚಮುಖ ದಶಭುಜದವರಿಗೆ ಮಾಯೆ ಅರ್ಧಾಂಗಿಯಾದಂದು, ದೇವದಾನವರ ಮಾಯೆ ಅಗಿದಗಿದು ತಿಂಬಂದು, ಅಷ್ಟಾಶೀತಿಸಹಸ್ರ ಋಷಿಗಳ ಮಾಯೆ, ತಪೋಮದದಲ್ಲಿ ಕೆಡಹುವಂದು ನಾನು ಮಾಯಾಕೊಲಾಹಲ (ನಿರ್ಮಾಯನೆಂಬ ಗಣೇಶ್ವರ?)ನಾಗಿರ್ದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬೆಟ್ಟಕ್ಕೆ ಚಳಿಯಾದೊಡೆ ಏನ ಹೊದಿಸುವರಯ್ಯಾ? ಬಯಲು ಬತ್ತಲೆ ಇದ್ದಡೆ ಏನ ನುಡಿಸುವರಯ್ಯಾ? ಭಕ್ತನು ಭವಿಯಾದಡೆ ಅದೇನನುಪಮಿಸುವೆನಯ್ಯಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಬೆಳಗು ಕತ್ತಲೆಯ ನುಂಗಿ, ಒಳಗೆ ತಾನೊಬ್ಬನೆಯಾಗಿ ಕಾಬ ಕತ್ತಲೆಯ ಕಳೆದುಳಿದು ನಿಮಗೆ ಆನು ಗುರಿಯಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬೇರಿಲ್ಲದ ಗಿಡುವಿಂಗೆ ಪರಿಮಳವಿಲ್ಲದ ಪುಷ್ಪ ಹುಟ್ಟಿ, ರೂಹಿಲ್ಲದ ಅನಲನು ಅವಗ್ರಹಿಸಿತ್ತು ನೋಡಾ ! ವೃಕ್ಷವಿಲ್ಲದ ದಳದಲ್ಲಿ ಒಂದು ಪಕ್ಷಿ ಹುಟ್ಟಿತ್ತು ನೋಡಾ ! ಅತ್ತಲಿತ್ತಲು ಕಾಣದೆ ನೆತ್ತಿಯ ನಯನದಲ್ಲಿ ನೋಡಿತ್ತಲ್ಲಾ ! ನಿತ್ಯಾನಂದಪರಿಪೂರ್ಣದ ನಿಲವಿನ, ಅಮೃತಬಿಂದುವಿನ ರಸವ ದಣಿಯುಂಡು, ಪಶ್ಚಿಮದಲ್ಲಿ ಗುಹೇಶ್ವರಲಿಂಗವ ಸ್ವೀಕರಿಸಿತ್ತಲ್ಲಾ.
--------------
ಅಲ್ಲಮಪ್ರಭುದೇವರು
ಬೋನದೊಳಗೊಂದು ಆನೆ ಇದ್ದಿತ್ತು. ಬೋನ ಬೆಂದಿತ್ತು ಆನೆ ಬದುಕಿತ್ತು_ಇದೇನು ಸೋಜಿಗವಯ್ಯಾ ? ದೇವ ಸತ್ತ, ದೇವಿ ಕೆಟ್ಟಳು ! ಆನು ಬದುಕಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಯಲ ಮೂರ್ತಿಗೊಳಿಸಿದನೊಬ್ಬ ಶರಣ. ಆ ಮೂರ್ತಿಯಲ್ಲಿ ಭಕ್ತಿಸ್ವಾಯತವ ಮಾಡಿದನೊಬ್ಬ ಶರಣ. ಆ ಭಕ್ತಿಯನೆ ಸುಜ್ಞಾನ ಮುಖವ ಮಾಡಿದನೊಬ್ಬ ಶರಣ. ಆ ಸುಜ್ಞಾನವನು ಲಿಂಗಮುಖವಾಗಿ ಧರಿಸಿದನೊಬ್ಬ ಶರಣ. ಆ ಲಿಂಗವನೆ ಸರ್ವಾಂಗದಲ್ಲಿ ವೇಧಿಸಿಕೊಂಡನೊಬ್ಬ ಶರಣ. ಆ ಸರ್ವಾಂಗವನೆ ನಿರ್ವಾಣಸಮಾಧಿಯಲ್ಲಿ ನಿಲಿಸಿದನೊಬ್ಬ ಶರಣ. ನಾನು ನಿರ್ವಾಣದಲ್ಲಿ ನಿಂದು ಅಗಮ್ಯನಾದೆನೆಂದಡೆ, ಭಕ್ತಿಕಂಪಿತನೆನಿಸಿ ಎನ್ನ ತನ್ನಲ್ಲಿಗೆ ಬರಿಸಿಕೊಂಡನೊಬ್ಬ ಶರಣ. ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಶ್ರೀಪಾದವ ಕಂಡು ಶರಣೆಂದು ಬದುಕಿದೆನು
--------------
ಅಲ್ಲಮಪ್ರಭುದೇವರು
ಬಯಸುವ ಬಯಕೆ ನೀನಾದ ಪರಿಯೆಂತು ಹೇಳಾ ? ಅರಸುವ ಅರ(ರಿ?)ಕೆ ನೀನಾದ ಪರಿಯೆಂತು ಹೇಳಾ ? ಕಾಯವೆ ಲಿಂಗ ಪ್ರಾಣವೆ ಜಂಗಮವಾದ ಶರಣಂಗೆ ಬೇರೆ ದೇವಾಲಯ ಮಾಡಿಸಲೇಕೆ ಹೇಳಾ ? ಗುಹೇಶ್ವರಲಿಂಗವು ಸಾಧ್ಯವಾಯಿತ್ತೆಂಬುದ ಮಾತಿನಲ್ಲಿ ಕಂಡೆನಲ್ಲದೆ, ಕಾರ್ಯದಲ್ಲಿ ಕಾಣೆ ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ಬಯಲ ಜೀವನ ಬಯಲ ಭಾವನೆ, ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಯಲ ಪೀಠದಲ್ಲಿ ನಿರ್ವಯಲ ಕಂಡಿಹೆನೆಂದಡೆ,_ `ಅತ್ಯತಿಷ*ದ್ದಶಾಂಗುಲ' ಎಂಬ ಶ್ರುತಿಯ ನೋಡಲು, ಮತ್ತೆ `ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ' ಎಂಬುದ ವಿಚಾರಿಸಿ ನೋಡೆ ಸ್ಥಾನಮಾನಕ್ಕೆ ಬಂದಿತೆಂಬ ಶ್ರುತಿಯುಂಟೆ ? ಕಾಯದ ಜೀವದ ಹೊಲಿಗೆಯ ಬಿಚ್ಚಿ, ನಾದ ಬಿಂದುವಂ ತಿಳಿದು ಪರಿಪೂರ್ಣ ಜ್ಞಾನಿಯಾಗಿ, ಪರಿಪೂರ್ಣಶಿವನನೊಳಕೊಳ್ಳಬಲ್ಲ ಶರಣನೆ, ಗುಹೇಶ್ವರಲಿಂಗದಲ್ಲಿ ಸಹಜ ಶಿವಯೋಗಿ ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಬೆಳಗಿನೊಳಗಣ ರೂಪ ತಿಳಿದು, ನೋಡಿಯೆ ಕಳೆದು, ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ_ಆತ ಲಿಂಗಪ್ರಸಾದಿ ! ಜಾತಿ ಸೂತಕವಳಿದು ಶಂಕೆ ತಲೆದೋರದೆ, ನಿಶ್ಶಂಕನಾಗಿ,_ ಆತ ಸಮಯಪ್ರಸಾದಿ! ಸಕಲ ಭ್ರಮೆಯನೆ ಜರೆದು, ಗುಹೇಶ್ವರಲಿಂಗದಲ್ಲಿ_ ಬಸವಣ್ಣನೊಬ್ಬನೆ [ಅಚ್ಚ]ಪ್ರಸಾದಿ !
--------------
ಅಲ್ಲಮಪ್ರಭುದೇವರು
ಬಿತ್ತದೆ ಬೆಳೆಯದೆ ತುಂಬಿದ ರಾಶಿಯ ಕಂಡಲ್ಲಿ ಸುಖಿಯಾಗಿ ನಿಂದವರಾರೊ ? ಇದ, ಹೇಳಲೂ ಬಾರದು ಕೇಳಲೂ ಬಾರದು. ಗುಹೇಶ್ವರಾ ನಿಮ್ಮ ಶರಣನು, ಲಚ್ಚಣವಳಿಯದೆ ರಾಶಿಯನಳೆದನು
--------------
ಅಲ್ಲಮಪ್ರಭುದೇವರು
ಬಂದ ಬಟ್ಟೆಯ ನಿಂದು ನೋಡದೆ, ಬಂದ ಬಟ್ಟೆಯ ಕಂಡು ಸುಖಿಯಾದೆ. ನಿಂದ ನಿಲುವ ಮುಂದುಗೆಡಿಸಿ, ನಿಂದನಿಲವ ಮುಂದುಗೊಂಡಿತ್ತು. ತಂದೆ ಮಕ್ಕಳ ಗುಣ ಒಂದು ಭಾವದೊಳಡಗಿ, ಸಂದಿಲ್ಲದ ಕಾಲೊಳಗೆ ಕೈ ಮೂಡಿತ್ತು. ಒಂದೊಂದನೆ (ಒಂದನೆ ?) ಹಿಡಿದು ಒಂದೊಂದನೆ (ಒಂದನೆ ?) ಬಿಟ್ಟಡೆ_ ಇದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಬಲ್ಲನಿತ ಬಲ್ಲರಲ್ಲದೆ, ಅರಿಯದುದನೆಂತು ಬಲ್ಲರಯ್ಯಾ ? ಅರಿವು ಸಾಮಾನ್ಯವೆ ? ಅರಿಯದುದನಾರಿಗೂ ಅರಿಯಬಾರದು ಗುಹೇಶ್ವರನೆಂಬ ಲಿಂಗವನರಿಯದಡೆರಡು, ಅರಿದೊಡೊಂದೇ
--------------
ಅಲ್ಲಮಪ್ರಭುದೇವರು
ಬೀದಿಯಲ್ಲಿ ಬಿದ್ದ ಮಾಣಿಕ್ಯವು, ಹೂಳಿದ್ದ ನಿಧಾನವು, ಆರಿಗೂ ಕಾಣಬಾರದು ನೋಡಾ ! ಮರಣ ಉಳ್ಳವರಿಗೆ ಮರುಜವಣಿ ಸಿಕ್ಕುವುದೆ ? ಪಾಪಿಯ ಕಣ್ಣಿಂಗೆ ಪರುಷ ಕಲ್ಲಾಗಿಪ್ಪಂತೆ ಇಪ್ಪರಯ್ಯಾ ಶಿವಶರಣರು. ನಮ್ಮ ಗುಹೇಶ್ವರನ ಶರಣ ಮರುಳಶಂಕರದೇವರ ನಿಲವ ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತಿ ಬೇಡುವನೆ(ದೆ?) ಲಿಂಗಜಂಗಮವು? ಬೇಡುವರಿಗೆಯೂ ಬೇಡಿಸಿಕೊಂಬವರಿಗೆಯೂ ಪ್ರಸಾದವಿಲ್ಲ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಂದುದನತಿಗಳೆದು ಬಾರದುದ ಬಯಸೆನೆಂಬುದು ಒಡಲ ಗುಣಧರ್ಮರಹಿತಂಗಲ್ಲದೆ, ಒಡಲ ಗುಣಧರ್ಮ ಉಳ್ಳವಂಗೆ ಆಗದು ನೋಡಾ. ಅದೆಂತೆಂದಡೆ: ರಾಜಭಯ ಚೋರಭಯ ಮೃಗಭಯ ದೆಸೆಭಯ ಸ್ತ್ರೀಭಯ ಬಂದು ಸೋಂಕಿದಲ್ಲಿ ಹೆಚ್ಚು ಕುಂದಿಲ್ಲದೆ ಒಂದೆ ಸಮವಾಗಿ ಕಾಣಬೇಕು. ಕ್ಷೀರ ಘೃತ ನವರತ್ನ ಆಭರಣ ಮನೆ ಮಂಚ ಹಸು ಧನ ವನಿತೆಯರ ಭೋಗಂಗಳು, ಲಿಂಗದಾಣತಿಯಿಂದ ಬಂದವೆಂದು, ಬಿಡದೆ ಭೋಗಿಸುವ ಅಣ್ಣಗಳು ನೀವು ಕೇಳಿರೊ, ಮದಸೊಕ್ಕಿದಾನೆ ಪೆರ್ಬುಲಿ ಕಾಳೋರಗ ಮಹಾಜ್ವಾಲೆ ಅಪ್ರಯತ್ನದಿಂದ ಬಂದು ಸಂಧಿಸೆ, ಸಂದು ಸಂಶಯವಿಲ್ಲದೆ `ಲಿಂಗದಾಣತಿ' ಎನ್ನದಿದ್ದಡೆ ಸ್ವಯವಚನ ವಿರುದ್ಧ ನೋಡಾ. ಇದು ಜೀವಜಾಲಂಗಳ ಉಪಾಧಿಕೆಯಲ್ಲದೆ ನಿರುಪಾಧಿಕೆಯಲ್ಲ. ಪೇಯಾಪೇಯವನರಿದು ಭೋಗಿಸಬೇಕು. ಭಯ ಲಜ್ಜೆ ಮೋಹ ಉಳ್ಳನ್ನಕ್ಕರ ಎಂತಪ್ಪುದೊ ? ಇದು ಕಾರಣ_ಅಂಗಕ್ಕಾಚಾರ, ಭಾವಕ್ಕೆ ಕೇವಲ ಜ್ಞಾನ. ಬಂದಿತ್ತು ಬಾರದು ಎಂಬ ತಥ್ಯಮಿಥ್ಯ ರಾಗದ್ವೇಷವನಳಿದು ತನ್ನ ನಿಜದಲ್ಲಿ ತಾನೆ ಪರಿಣಾಮಿಯಾಗಿಪ್ಪ[ನು] ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಬಯಸಿ ಬಂದುದು ಅಂಗಭೋಗ ಬಯಸದೇ ಬಂದುದು ಲಿಂಗಭೋಗವೆಂದು ವಚನವನೋದಿ, ಕಾರ್ಯಕ್ಕಾಗಿ ಬಂದ ವೇಷಧಾರಿಗಳ ಕಂಡು ಹಿಗ್ಗಿ ಹಾರೈಸಿ ಅನ್ನದಾಶೆಯಿಂದ ಒಪ್ಪುಗೊಳಿಸಿ ಬಯಸಿ ಬಾಯಾರಿ ಬಳಲಬಾರದೆಂದು, ಗೋಳಿಟ್ಟು, ಬಗುಳಾಡಿ, ಅನ್ನ ಅಶನೋಪಜೀವಿ ಶೇಷ ಭೋಗಂಗಳಿಗೆ ಕಕ್ಕುಳ ಕುದಿದು ಬಿಕ್ಕನೆ ಬಿರಿದು ಮತ್ತೆ ಲಿಂಗಾಣತಿಯೆಂಬ ವೇಷಧಾರಿಗಳಿಗೆ ಅಘೋರನರಕ ತಪ್ಪದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ, ಆ ಬೆವಸಾಯದ ಘೋರವೇತಕ್ಕಯ್ಯಾ ? ಕ್ರಯವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ ? ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ ಆ ಓಲಗದ ಘೋರವೇತಕ್ಕಯ್ಯಾ ? ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ; ಆ ಉಪದೇಶವ ಕೊಟ್ಟ ಗುರು, ಕೊಂಡ ಶಿಷ್ಯ,_ ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ, ಗುಹೇಶ್ವರನೆಂಬವನತ್ತಲೆ ಹೋಗಲಿ.
--------------
ಅಲ್ಲಮಪ್ರಭುದೇವರು
ಬೇಡುವೆನೆ ದೇವೇಂದ್ರನ ಪದವಿಯನಿನ್ನು ? ಮೂಡುವ ಸೂರ್ಯನ ಪ್ರಭೆಯಂತೆ ಓಡದಿರು. ಓಡದಿರು ಎನ್ನ ಮುಂದೆ ಮಾಣಿಕ್ಯದ ಬೆಳಗಿನಂತೆ. ನೋಡು, ಮಾತಾಡು. ಕೃತಕದ ಪರಿಯ (ಪದವಿಯ?) ಬೇಡುವ, ಲಿಂಗವೆನ್ನಲಿದ್ದುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರರೆಂಬ ಸಂದಣಿ ತಲೆದೋರದ ಮುನ್ನ_ಅಲ್ಲಿಂದತ್ತ ಬಯಲೆ ಸ್ವರೂಪವಾಯಿತ್ತು. ಆ ಸ್ವರೂಪಿನ ಘನತೆಯ ಉಪಮಿಸಬಾರದು. ನೋಡಬಾರದ ಬೆಳಗು, ಕೂಡಬಾರದ ಮೂರ್ತಿ, ಅಖಂಡ ಅಪ್ರತಿಮ ನಮ್ಮ ಗುಹೇಶ್ವರಲಿಂಗದ ಬೆಳ(ಬೆಡ?)ಗಿನ ಮೂಲವ ಲಿಂಗಸಂಗಿಗಳಲ್ಲದೆ ಮಿಕ್ಕಿನ ಅಂಗವಿಕಾರಿಗಳೇನ ಬಲ್ಲರೊ ?
--------------
ಅಲ್ಲಮಪ್ರಭುದೇವರು
ಬೆಳಗಿನೊಳಗಣ ಬೆಳಗ ಕಡೆದಡೆ ಮರಳಿ ಕೂಡಿತ್ತಲ್ಲಾ ! ಮೇರುವನೆ ಬೋನವ ಮಾಡಿ ಸವಿದ ಭಕ್ತರ ನೋಡಾ ! ಅಡಗನಾರೋಗಣೆಯ ಮಾಡಿದ ಲಿಂಗವ ಕೊಡಗೂಸು ನುಂಗಿತ್ತ ಕಂಡೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಟ್ಟಬಯಲ ಮಹಾಮನೆಯೊಳಗೊಂದು ಹುಟ್ಟದ ಹೊಂದದ ಶಿಶುವ ಕಂಡೆ. ಮುಟ್ಟಿ ಪೂಜಿಸಹೋದಡೆ ನೆಟ್ಟನೆ ಆ ಶಿಶು ತನ್ನುವ ನುಂಗಿತ್ತು ಮುಟ್ಟಲಿಲ್ಲ ನೋಡಲಿಲ್ಲ, ಪೂಜೆಗೆ ಕಟ್ಟಳೆ ಮುನ್ನಿಲ್ಲ. ಗುಹೇಶ್ವರ ಬಯಲು !
--------------
ಅಲ್ಲಮಪ್ರಭುದೇವರು
ಬಯಲಿಂಗೆ ಕಡೆಯಿಲ್ಲ ಮರುತಂಗೆ ತಡೆಯಿಲ್ಲ. ರುಚಿಗೆ ಖಂಡಿತವಿಲ್ಲ ಸುಖಕ್ಕೊಗಡಿಕೆಯಿಲ್ಲ. ಸುಖವೆ ಪರಬ್ರಹ್ಮಾನಂದವಾಗಿ ಶೂನ್ಯತೃಪ್ತಿಗೆ ಸೂತಕವಿಲ್ಲ ! ಸಾಕಾರಕ್ಕೆ ಸತ್‍ಕ್ರಿಯೆಯಿಂದರ್ಪಿಸಬೇಕು. ಅದೆಂತೆಂದಡೆ: ಲೋಹದ ಸಂಗದಿಂದ ಅಗ್ನಿ ಬಡಿವಡೆದಂತೆ ರೂಪುಗೂಡಿದ ರುಚಿಯ ಸತ್ಕ್ರಿಯೆಯಿಂದರ್ಪಿಸಬೇಕು ನಮ್ಮ ಗುಹೇಶ್ವರಲಿಂಗದಲ್ಲಿ ಸಂದು ಸಂಶಯವಿಲ್ಲದೆ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...