ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಣತೆಯೂ ಇದೆ ಬತ್ತಿಯೂ ಇದೆ; ಜ್ಯೋತಿಯ ಬೆಳಗುವಡೆ, ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ? ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ ಭಕ್ತಿ ಎಲ್ಲಿಯದೊ? `ಸ್ಯೋಹಂ' ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗಳೆವೆ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪರಿಣಾಮಪರಿಮಿತ ದೊರೆಕೊಂಡಾತಂಗೆ ಬಳಿಕೇಕೊ ಬರು ಮಾತಿನವರೊಡನೆ ಗೋಷಿ*? ಬಳಿಕೇಕೊ ಬರಿಯ ಸಂಭ್ರಮಿಗಳೊಡತಣ ಅನುಭಾವ? ಐವತ್ತೆರಡಕ್ಷರ ತಮ್ಮಲ್ಲಿ ತಾವು ಉಲಿಯದಂತೆ ಉಲಿದವು, ಗುಹೇಶ್ವರನೆಂಬ ಲಿಂಗವನರಿದಾತಂಗೆ ಬಳಿಕೇಕೊ?
--------------
ಅಲ್ಲಮಪ್ರಭುದೇವರು
ಪೂಜಿಸಿ ಕೆಳಯಿಂಕಿಳುಹಲದೇನೊ ? ಅನಾಹತ ಪೂಜೆಯ ಮಾಡಲದೇನೊ ? ದೇಹವೆ ಪೀಠಿಕೆ, ಜೀವವೆ ಲಿಂಗ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪಂಚಬ್ರಹ್ಮಮೂರ್ತಿ ಪ್ರಣವ ಮಂತ್ರರೂಪ ಪಂಚಮುಖ ದಶಭುಜ ಫಣಿಯ ಮಣಿಯ ಮೇಲೆ ನೋಡುತ್ತೈದಾನೆ ! ಸಮತೆ ಸಮಾಧಿಯೆಂಬ ಸಮರಸದೊಳಗೆ; ಚಂದ್ರಕಾಂತಕೊಡದಲ್ಲಿ ಅಮೃತವ ತುಂಬಿ, ಕೊಡನೊಡೆಯದೆ ಬೆಳಗುತ್ತಿದೆ, ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪೃಥ್ವಿಯ ಮೇಲೊಂದು ಪರಮಶಾಂತಿ ಎಂಬ ಪರ್ವತವ ಕಂಡೆ. ಆ ಪರ್ವತದ ಮೇಲೆ ಪರಮಗುರು ಪರಿಯಾಯವಾಯಿತ್ತ ಕಂಡೆ. ಆ ಪರಿಯಾಯ ಗುರು ಒಂದು ಕಥನದಿಂದ ದೃಷ್ಟಿ ತೆರೆಯಿತ್ತ ಕಂಡೆ. ಆ ದೃಷ್ಟಿಯ ಬೆಳಗಿನಿಂದ ನೆತ್ತಿಯ ಕಲಶ ಪುಟದೋರುತ್ತ ನಡೆದು ಸಸಿಯಾಯಿತ್ತ ಕಂಡೆ. ಆ ಸಸಿಯ ಕೆಳಗಣ ಮೃತ್ತಿಕೆ, ಭಕ್ತರಿಗೆ ಮೂರಾಯಿತ್ತ ಕಂಡೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ ಅಪ್ಪುವಿನ ಪೂರ್ವಾಶ್ರಯವ ಕಳೆಯದನ್ನಕ್ಕ ತೇಜದ ಪೂರ್ವಾಶ್ರಯವ ಕಳೆಯದನ್ನಕ್ಕ ವಾಯುವಿನ ಪೂರ್ವಾಶ್ರಯವ ಕಳೆಯದನ್ನಕ್ಕ ಆಕಾಶದ ಪೂರ್ವಾಶ್ರಯವ ಕಳೆಯದನ್ನಕ್ಕ ಚಂದ್ರ ಸೂರ್ಯರ ಪೂರ್ವಾಶ್ರಯವ ಕಳೆಯದನ್ನಕ್ಕ ಆತ್ಮನ ಪೂರ್ವಾಶ್ರಯವ ಕಳೆಯದನ್ನಕ್ಕ ಭಕ್ತರೆಂದು ಲಿಂಗವ ಪೂಜಿಸುವವರ ಕಂಡು ಬೆರಗಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪರುಷದ ಪುತ್ಥಳಿಗೆ ಲೋಹದ ಶೃಂಗಾರವೇತಕೊ ? ``ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ'' ಎಂಬ ಭ್ರಾಂತೇಕೋ ? ಲಿಂಗಮಧ್ಯೆ ಜಗತ್ಸರ್ವವಾದರೆ, ಈ ಆತ್ಮಂಗೆ ಹಿಂದಣುತ್ಪತ್ಯ ಸ್ಥಿತಿಲಯಂಗಳೆಂತಾದವು ? ಲಿಂಗ ಲಿಂಗದಂತೆ ಜಗ ಜಗದಂತೆ ಲಿಂಗವನೊಳಗುಮಾಡಿ, ಜಗವ ಹೊರಗು ಮಾಡಬಲ್ಲನೆಮ್ಮ ಶರಣ, ಗುಹೇಶ್ವರ ನೀನೇ ತಾನು.
--------------
ಅಲ್ಲಮಪ್ರಭುದೇವರು
ಪ್ರಣವಮಂತ್ರವ ಕರ್ಣದಲ್ಲಿ ಹೇಳಿ, ಶ್ರೀಗುರು ಶಿಷ್ಯನ ಅಂಗದ ಮೇಲೆ ಲಿಂಗಪ್ರತಿಷೆ*ಯ ಮಾಡಿದ ಬಳಿಕ, ಪ್ರಾಣದಲ್ಲಿ ಲಿಂಗವಿಪ್ಪುದೆಂಬ ವ್ರತಗೇಡಿಗಳ ಮಾತ ಕೇಳಲಾಗದು. ಒಳಗಿಪ್ಪನೆ ಲಿಂಗದೇವನು ಮಲ ಮೂತ್ರ ಮಾಂಸದ ಹೇಸಿಗೆಯೊಳಗೆ ? ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೆ ? ಆ ಪ್ರಾಣವ ತಂದು ತನ್ನ ಇಷ್ಟಲಿಂಗದಲ್ಲಿ ಇರಿಸಿ ನೆರೆಯ ಬಲ್ಲಡೆ, ಆತನೆ ಪ್ರಾಣಲಿಂಗಸಂಬಂಧಿ. ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು
--------------
ಅಲ್ಲಮಪ್ರಭುದೇವರು
ಪ್ರಕೃತಿಗುಣವುಳ್ಳನ್ನಕ್ಕರ ಭಕ್ತನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಉಳ್ಳನ್ನಕ್ಕರ ಶರಣನಲ್ಲ. ಹಸಿವು ತೃಷೆ ನಿದ್ರೆ ವಿಷಯ ಉಳ್ಳನ್ನಕ್ಕರ ಪ್ರಸಾದಿಯಲ್ಲ. ಆಚಾರದಲ್ಲಿ ಅನುಭಾವಿ ಪ್ರಸಾದದಲ್ಲಿ ಪರಿಣಾಮಿ, ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣನೆಂಬ ಪ್ರಸಾದಿಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಪೃಥ್ವಿಯೊಳಗಿಲ್ಲ, ಆಕಾಶದೊಳಗಿಲ್ಲ, ಚತುರ್ದಶ ಭುವನಾದಿ ಭುವನಂಗಳೊಳಗೆಯೂ ಇಲ್ಲ. ಹೊರಗೆಯೂ ಇಲ್ಲ_ಏನಾಯಿತ್ತೆಂದರಿಯೆನಯ್ಯಾ. ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ ಎಂದೂ ಇಲ್ಲ.
--------------
ಅಲ್ಲಮಪ್ರಭುದೇವರು
ಪದ್ಮಾಸನದಲ್ಲಿ ಕುಳ್ಳಿರ್ದು, ಕುಂಡಲಿಯ ಸ್ಥಾನವನರಿದು, ಅಂಡಲೆವ ಅಧೋವಾಯುವ ಊಧ್ರ್ವಮುಖವ ಮಾಡಿ ಷಡಂಗುಲವನೊತ್ತಿ ಊಧ್ರ್ವವಾಯುವನಧೋಮುಖಕ್ಕೆ ತಂದು ಉತ್ತರಪೂರ್ವದಕ್ಷಿಣವನತಿಗಳೆದು ಪಶ್ಚಿಮದ ಸುಷುಮ್ನೆಯಲ್ಲಿ ಮನಶ್ಶಕ್ತಿಸಂಧಾನಸಂಯೋಗದಿಂದ ಸಹಸ್ರದಳಕಮಲದಲ್ಲಿ ನಾದಬ್ರಹ್ಮವನೆಯ್ದಿ, ಮಹಾವಾಸನಾಮೃತವ ದಣಿಯುಂಡು ತ್ರಿಸಂಧಾನ ಒಂದಾದ ಬಳಿಕ_ಆತ್ಮ ಪರಮಾತ್ಮ ಇಂತಾಗಿ, ಅಂತರಾತ್ಮ ವಿಚಾರಕ್ಕೆ ಇಳಿದಲ್ಲಿ ಅಭ್ಯಾಸಕ್ಕೆ ಬರಲಾಗದು. ಅದೆಂತೆಂದಡೆ:ದೇವಲೋಕಕ್ಕೆ ಸಂದು ಮರಳಿ ಮಾನವನಪ್ಪಡೆ ಅದೇ ಪಾತಕ ಹಸಿದವನಮೃತವನುಂಡು, ಮರಳಿ ಹಸಿದು, ಉಂಡಿಹೆನೆಂದಡೆ ಅದೇ ಪ್ರಕೃತಿ ಗುಣ. ಇದು ಕಾರಣ_ಪರಮಾತ್ಮ ತಾನಾದಾತನು, ಪರಮಾತ್ಮ ತಾನಾದನಾಗಿ ತನ್ನಲ್ಲಿ ತಾನೆ ಏಕೀ ಭವಿಸಿರಬೇಕು, ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಾಣಲಿಂಗ ಪರಾಪರವೆಂದರಿದು, ಅಣು ರೇಣು ತೃಣ ಕಾಷ*ದಲ್ಲಿ ಕೂಡಿ ಪರಿಪೂರ್ಣಶಿವನೆಂದರಿದು, ಇಂತು_ಕ್ಷಣವೇದಿ ಅಂತರಂಗವ ವೇಧಿಸಲ್ಕೆ ಅಗಣಿತ ಅಕ್ಷೇಶ್ವರ ತಾನೆಂದರಿದು ಪ್ರಣವಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ, ಗುಹೇಶ್ವರಾ ನಿಮ್ಮ ಶರಣನುಪಮಾತೀತನು.
--------------
ಅಲ್ಲಮಪ್ರಭುದೇವರು
ಪದ್ಯದಾಸೆಯ ಹಿರಿಯರು ಕೆಲಬರು. ಬುದ್ಧಿಯಾಸೆಯ ಹಿರಿಯರು ಕೆಲಬರು. ಸಮತೆಯಾಸೆಯ ಹಿರಿಯರು ಕೆಲಬರು. ಇವರೆಲ್ಲರು ತಮ್ಮ ನಿಜವ ತಾವರಿಯದೆ ತಪವನಾಚರಿಸಿದರು. ವೇಷ ನಿರ್ವಯಲಾಗಿ ಆಸೆ ರೋಷವ ಬಿಟ್ಟು ದಾಸೋಹಿಯಾಗಿದ್ದಡೆ ತಾನೆ ಗುಹೇಶ್ವರಲಿಂಗ.
--------------
ಅಲ್ಲಮಪ್ರಭುದೇವರು
ಪ್ರಸಾದಿಗಳು ಪ್ರಸಾದಿಗಳು ಎಂದೆಂಬಿರಿ ಅಂದು ಇಂದು ಎಂದೂ, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಆದಿ ಅನಾದಿ ಇಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ವೇದಶಾಸ್ತ್ರಂಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಅಜಾಂಡ ಬ್ರಹ್ಮಾಂಡಕೋಟಿಗಳುದಯವಾಗದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ತ್ರೈಮೂರ್ತಿಗಳಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಉಮೆಯ ಕಲ್ಯಾಣವಿಲ್ಲದಂದು, ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಗಂಗೆವಾಳುಕರಿಲ್ಲದಂದು, ಚೆನ್ನಬಸವಣ್ಣನೊಬ್ಬನೇ ಪ್ರಸಾದಿ. ಲಿಂಗವೆಂಬ ನಾಮ ಜಂಗಮವೆಂಬ ಹೆಸರಿಲ್ಲದಂದು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಗುಹೇಶ್ವರಾ ನೀನೆ ಲಿಂಗ, ಬಸವಣ್ಣನೆ ಗುರು ಚೆನ್ನಬಸವಣ್ಣನೊಬ್ಬನೆ ಪ್ರಸಾದಿ. ಮತ್ತಾರನು ಕಾಣೆನಯ್ಯಾ.
--------------
ಅಲ್ಲಮಪ್ರಭುದೇವರು
ಪರಿಮಳವಿದ್ದು ಗಮನಾಗಮನವಿಲ್ಲವಿದೇನೊ! ಬಯಲ ಸಿಡಿಲು ಹೊಯ್ದಡೆ ಹಿಂದಕ್ಕೆ (ಹಿಂದೆ?) ಹೆಣನ ಸುಡುವರಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಾರಬ್ಧವಂತೆ_ ನೊಸಲಬರಹವೆಂತು ಹೋಯಿತ್ತೆನಬಹುದು ? ನೊಸಲಬರಹವಂತೆ_ ಹಸ್ತಮಸ್ತಕ ಸಂಯೋಗವೆಂತಾಯಿತ್ತು ? ಪ್ರಳಯವಂತೆ_ ಪ್ರಾಣಲಿಂಗವೆಂತುಟು ಹೇಳಾ, ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪೃಥ್ವಿಯನತಿಗಳೆದ ಸ್ಥಾವರಂಗಳಿಲ್ಲ; ಅಪ್ಪುವನತಿಗಳೆದ ತೀರ್ಥಯಾತ್ರೆಗಳಿಲ್ಲ. ಅಗ್ನಿಯನತಿಗಳೆದ ಹೋಮ ಸಮಾಧಿಗಳಿಲ್ಲ. ವಾಯುವನತಿಗಳೆದ ನೇಮನಿತ್ಯಂಗಳಿಲ್ಲ. ಆಕಾಶವನತಿಗಳೆದ ಧ್ಯಾನ ಮೌನಂಗಳಿಲ್ಲ. ಗುಹೇಶ್ವರನೆಂದರಿದವಂಗೆ ಇನ್ನಾವಂಗವೂ ಇಲ್ಲ.
--------------
ಅಲ್ಲಮಪ್ರಭುದೇವರು
ಪಂಚಭೂತಸಂಗದಿಂದ ಜ್ಯೋತಿಯಾಯಿತ್ತು. ಪಂಚಭೂತಸಂಗದಿಂದ ಕರ್ಪುರವಾಯಿತ್ತು. ಈ ಎರಡರ ಸಂಗವೇನಾಯಿತ್ತು ಹೇಳಾ ವಾಙ್ಮನಾತೀತ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕ, ಮನೋಬುದ್ಧಿ ಚಿತ್ತ ಅಹಂಕಾರ ಚತುಷ್ಟಯ ಕರಣಂಗಳು, ಸತ್ವ ರಜ ತಮದಲ್ಲಿ_ಆತ್ಮನ ಎತ್ತಲೆಂದರಿಯರು! ಇದನರಿದಡೆ; ಸಮತೆ ಸದಾಚಾರ ಆಶ್ರಮಸ್ಥಾನಕ ಸಹಸ್ರದಳಕಮಲದಲ್ಲಿ ಗುಹೇಶ್ವರಲಿಂಗವು.
--------------
ಅಲ್ಲಮಪ್ರಭುದೇವರು
ಪ್ರಣಮವನುಚ್ಚರಿಸುವ ಪ್ರಮಾಣಿಕರೆಲ್ಲರು, ಪ್ರಣವಮಂತ್ರದರ್ಥವ ತಿಳಿದು ನೋಡಿರೆ. ಪ್ರಣವ `ನಾಹಂ' ಎಂದುದೆ ? ಪ್ರಣವ `ಕ್ಯೋಹಂ' ಎಂದುದೆ ? ಪ್ರಣವ `ಸ್ಯೋಹಂ' ಎಂದುದೆ ? ಪ್ರಣವ `ಚಿದಹಂ' ಎಂದುದೆ ?_ಎನ್ನದಾಗಿ, ಪ್ರಣವ `ಭರ್ಗೋದೇವಸ್ಯ ಧೀಮಹಿ' ಎಂದುದು. ``ಸವಿತುಃ ಪದಮಂಗಃ ಸ್ಯಾತ್ ಭರ್ಗಸ್ತು ಲಿಂಗಮೇವ ಚ ಧೀಮಹಿ ಪದಮಿತ್ಯೇಷಾಂ ಗಾಯತ್ರ್ಯಾಂ ಲಿಂಗಸಂಬಂಧಃ '' _ಎಂದುದಾಗಿ ಪ್ರಣವದರ್ಥ ತಾನೆ ನಿಮ್ಮ ಮಯವು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪೃಥ್ವಿಕುಲಮಂಟಪದ ಮೇಲೆ ಪಾದ(ಪದ?)ಶಿಲೆ ಬಿಗಿದು, ತಳಕಂಭ ಕಳಸದ ಮೇಲೆ ಕೆಸರುಗಲ್ಲು_ ಒಂದು ವÀಠಕ್ಕೆ ಒಂಬತ್ತು ತುಂಬಿಯ ಆಳಾಪ. ಬಗೆಯ ಬಣ್ಣದ ಮೇಲೆ ಹಿರಿದಪ್ಪ ಸಂಯೋಗ ! ಅಂಗಜನ ಪಡೆ ಕೋಟಿ, ಮುಂಡವೆದ್ದು ಕುಣಿವಲ್ಲಿ, ರಣವುಂಡ ಭೂಮಿಯನು ಮೀರಿದನು ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಪರಮ(ಪರ?)ತತ್ವದಲ್ಲಿ ತದ್ಗತವಾದ ಬಳಿಕ ಬೇರೆ ಮತ್ತೆ ಅರಿದೆಹೆನೆಂಬ ಭ್ರಾಂತೇಕೆ ? ಅರಿವು ಸಯವಾಗಿ ಮರಹು ನಷ್ಟವಾದ ಬಳಿಕ ತಾನಾರೆಂಬ ವಿಚಾರವೇಕೆ ? ಗುಹೇಶ್ವರನ ಬೆರಸಿ ಭೇದಗೆಟ್ಟ ಬಳಿಕ ಮತ್ತೆ ಸಂಗವ ಮಾಡಿಹೆನೆಂಬ ತವಕವೇಕಯ್ಯಾ ?
--------------
ಅಲ್ಲಮಪ್ರಭುದೇವರು
ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಪ್ಪುದು, ಪುಣ್ಯವುಳ್ಳ ಕಾಲಕ್ಕೆ ಪಾಷಾಣ ಪರುಷವಪ್ಪುದು ನೋಡಾ. ಮುನ್ನ ಮುನ್ನವೆ, ಅಚ್ಚೊತ್ತಿದ ಭಾಗ್ಯ ಎನ್ನ ಕಣ್ಣ ಮುಂದೆ ಕಾಣಬಂದಿತ್ತು ನೋಡಾ ! ಮಣ್ಣ ಮರೆಯ ದೇಗುಲದೊಳಗೊಂದು ಮಾಣಿಕ್ಯವ ಕಂಡಬಳಿಕ, ಇನ್ನು ಮುನ್ನಿನಂತಪ್ಪುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಪೃಥ್ವಿಯ ಕಠಿಣವ ಕೆಡಿಸಿ, ಅಪ್ಪುವಿನ ಕೈಕಾಲು ಮುರಿದು, ಅಗ್ನಿಯ ಕಿವಿ ಮೂಗಂ ಕೊಯ್ದು, ವಾಯುವಿನ ಶಿರವರಿದು, ಆಕಾಶವ ಶೂಲದಲ್ಲಿಕ್ಕಿದ ಬಲ್ಲಿದ ತಳವಾರನೀತ ನೋಡಯ್ಯಾ. ಒಂಬತ್ತು ಬಾಗಿಲ ಬೀಗಮಂ ಬಲಿದು ಒಡನೆ ನವಸಹಸ್ರ ಮಂದಿಯ ಕೊಂದುಳಿದ ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಪೃಥ್ವಿ ಅಪ್ಪು ತೇಜ ವಾಯು ಆಕಾಶದಲ್ಲಿ ಬೆಳೆಯುತ್ತಿದ್ದಡೇನು ನೋಡಾ. ಘನ ಘನವನರಿದೆನೆಂಬ ಮರುಳು ಮಾನವರ ನೋಡಾ. ನಿರ್ಣಯವಿಲ್ಲದ ನಿರ್ವಿಕಾರ ಗುಹೇಶ್ವರನೆಂಬ ಮಹಾಘನವ ತಿಳಿಯರು ನೋಡಾ !
--------------
ಅಲ್ಲಮಪ್ರಭುದೇವರು

ಇನ್ನಷ್ಟು ...