ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನದೀಜಲ, ಕೂಪಜಲ, ತಟಾಕಜಲವೆಂದಂಬು ಹಿರಿದು ಕಿರಿದಾದುದನರಿಯರು. ಬೇರೆ ಮತ್ತೊಂದು ಭಾಷೆ ವ್ರತ ನೇಮಂಗಳ ಹಿಡಿವ ಶೀಲಸಂಬಂಧಿಗಳು ಜಾತ್ಯಂಧರು, ನಿಮ್ಮನೆತ್ತಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ನರರು ಸುರರು ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ, ನಾನವರ ರೂಹಿಸಿ ಬಲ್ಲೆನೆ ಅಯ್ಯಾ ? ದೇವಗಣ ರುದ್ರಗಣ ಪ್ರಮಥಗಣ ಮೊದಲಾದವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಭಾವಿಸಿ ಬಲ್ಲೆನೆ ಅಯ್ಯಾ ? ಸತ್ಯರು ನಿತ್ಯರು ಮುಕ್ತರು ಮಹಾಮಹಿಮರೆಲ್ಲರು ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿಯೆ ಅಡಗಿಹರಾಗಿ ನಾನವರ ಅರಿದು ಬಲ್ಲೆನೆ ಅಯ್ಯಾ ? ಇಂತೀ ತ್ರಿಭಾಂಡವನೊಳಕೊಂಡ ಅಖಂಡಿತ ಪರಿಪೂರ್ಣವಪ್ಪ ಭಾಂಡವೆ, ತನ್ನ ಇರವೆಂದರಿದ ನಿಜಲಿಂಗೈಕ್ಯನ_ಉಪಮಿಸಲಿಲ್ಲ, ಉಪಮಿಸಲಿಲ್ಲಾಗಿ ರೂಹಿಸಲಿಲ್ಲ, ರೂಹಿಸಲಿಲ್ಲಾಗಿ ಭಾವಿಸಲಿಲ್ಲ, ಭಾವಿಸಲಿಲ್ಲಾಗಿ ಅರಿಯಲಿಲ್ಲ ! ಅರಿಯಲಿಲ್ಲದ ಅರಿವೆ ತಾನಾಗಿ, ಗುಹೇಶ್ವರನೆಂಬುದು ಬೇರಿಲ್ಲ.
--------------
ಅಲ್ಲಮಪ್ರಭುದೇವರು
ನೀರಲೊಗೆದ ಮರಕ್ಕೆ ಕಾಣಬಾರದ ನೆಳಲು ! ಬೀಜವಿಲ್ಲದ ಮರನ ಹೆಸರೇನೆಲವೊ ? ಇದನೇನ ಬಲ್ಲಿರಿ ? ಇದನೇನ ಬಲ್ಲಿರಿ ? ಅರಿವಿನ ಮರೆಯ ಘನಕ್ಕೆ ಘನವಾದುದ ! ಕಾಸಲಿಲ್ಲದ ತುಪ್ಪ, ವಾಸನೆಯಿಲ್ಲದ ಪರಿಮಳ ! ಗುಹೇಶ್ವರನಿಪ್ಪ ನಿರಾಳವ ನೋಡಯ್ಯಾ.
--------------
ಅಲ್ಲಮಪ್ರಭುದೇವರು
ನುಡಿಯಿಂದ ನಡೆಗೆಟ್ಟಿತ್ತು ನಡೆಯಿಂದ ನುಡಿಗೆಟ್ಟಿತ್ತು. ಭಾವದ ಗುಸುಟು ಅದು ತಾನೆ ನಾಚಿ ನಿಂದಿತ್ತು. ಗುಹೇಶ್ವರನೆಂಬ ಅರಿವು ಸಿನೆ ಬಂಜೆಯಾಯಿತ್ತು.
--------------
ಅಲ್ಲಮಪ್ರಭುದೇವರು
ನಾನು ಭಕ್ತನಾದಡೆ, ನೀನು ದೇವನಾದಡೆ, ನೋಡುವೆವೆ ಇಬ್ಬರ ಸಮರಸವನೊಂದು ಮಾಡಿ? ಭೂಮಿಯಾಕಾಶವನೊಂದು ಮಾಡಿ, ಚಂದ್ರ_ಸೂರ್ಯರಿಬ್ಬರ ತಾಳವ ಮಾಡಿ ಆಡುವೆವೆ? ಜಡೆಯ ಮೇಲಣ ಗಂಗೆ ನೀನು ಕೇಳಾ, ತೊಡೆಯ ಮೇಲಣ Uõ್ಞರಿ ನೀನು ಕೇಳಾ, ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ, ರಂಡೆಗೂಳನುಂಬುದು ನಿಮಗೆ ಲೇಸೆ?
--------------
ಅಲ್ಲಮಪ್ರಭುದೇವರು
ನಾದದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು, ಎಲೆ ಮರುಳೆ ! ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮುಗಿಲಗಲದ ಅಂಬರ ವಾಯು ಅಗ್ನಿಜಲ ಧರೆಯ ಹೊತ್ತುಕೊಂಡು ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಗುಹೇಶ್ವರಲಿಂಗದ ಬಾರಿಗೊಳಗಾಗಿ, ಇವೆಲ್ಲವನುಂಟುಮಾಡಲರಿಯೆನಾಗಿ_ಎನಗಿಲ್ಲವೆನುತಿರ್ದೆನಯ್ಯಾ.
--------------
ಅಲ್ಲಮಪ್ರಭುದೇವರು
ನಾದಬಿಂದುಗಳಿಲ್ಲದಂದು ನಿರ್ಭಯನೆಂಬ ಗಣೇಶ್ವರನು, ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು, ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು, ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು, ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.
--------------
ಅಲ್ಲಮಪ್ರಭುದೇವರು
ನಾನೀನೆಂಬ ಭಾವವಾರಿಂದಾಯಿತ್ತು ಹೇಳಾ ? ನೀನೆಂಬುದೆ ಅಜ್ಞಾನ, ನಾನೆಂಬುದೆ ಮಾಯಾಧೀನ. ನೀನೆನ್ನದೆ ನಾನೆನ್ನದೆ ಇಪ್ಪ ಸುಖವ, ಭಿನ್ನವಿಲ್ಲದೆ ಅರಿಯಬಲ್ಲಡೆ ಆ ಸುಖ ನಿಮಗರ್ಪಿತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಿತ್ಯನಿರಂಜನ ನಿರವಯಖಂಡ ಪರವಸ್ತುವಿನತ್ತಣಿಂದುದಯಿಸಿ, ನಿಂದ ನಿಲವನರಿದು ಭಕ್ತ, ಗುರುಪ್ರಸನ್ನವಿಡಿದು ಮಾಹೇಶ್ವರ, ಲಿಂಗಪೂಜೆಯವಿಡಿದು ಪ್ರಸಾದಿ, ಸ್ವಾನುಭಾವ ವಿವೇಕವಿಡಿದು ಪ್ರಾಣಲಿಂಗಿ, ಸ್ವಯಾನಂದವಿಡಿದು ಶರಣ,_ ಸೋಹಂ ಬ್ರಹ್ಮಾಸ್ಮಿನ್ನೆಂದು ಲಿಂಗೈಕ್ಯ. ಇಂತೀ ಷಟ್ಸ್ಥಲ ಸಂಪನ್ನನಾಗಿ, ನಿಂದ ನಿಲವ ನೀ ಬಲ್ಲೆಯಲ್ಲದೆ ಲೋಕದ ಸಂದೇಹಿಮಾನವರೆತ್ತ ಬಲ್ಲರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ ಅಕ್ಕಿಯ ತುಂಬಿ, ಪರಮಾನಂದವೆಂಬ ಜಲವನೆರೆದು, ಸ್ವಯಂ ಪ್ರಕಾಶವೆಂಬ ಅಗ್ನಿಯಿಂದ ಪಾಕವಾದ ಲಿಂಗದೋಗರವು ಮಹಾಘನದಲ್ಲಿ ನಿಂದು ಘನತೃಪ್ತಿಯನೀವುತ್ತಿದ್ದಿತ್ತು ಕಾಣಿರೆ ! ಅದ ಕಣ್ಣಿಲ್ಲದೆ ಕಂಡು ಕೈಯಿಲ್ಲದ ಕೊಂಡು ಬಾಯಿಲ್ಲದೆ ಉಂಡ ತೃಪ್ತಿಯ, ಅರಿವಿಲ್ಲದ ಅರಿವಿನಿಂದ ಅರಿದು, ಸುಖಿಯಾದೆ ನಾನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೇಮಸ್ತನರಿವು ಪ್ರಪಂಚಿನಲ್ಲಿ ಹೋಯಿತ್ತು. ಭಕ್ತನ ಅರಿವು ಸಮಾಧಾನದಲ್ಲಿ ಹೋಯಿತ್ತು. ಜಂಗಮದ ಅರಿವು ಬೇಡಿದಲ್ಲಿ ಹೋಯಿತ್ತು. ಇಂತು_ಕ್ರಿಯಾಗಮದೊಳಗೆ ಅವಂಗವೂ ಇಲ್ಲ. ಗುಹೇಶ್ವರಾ ನಿಮ್ಮ ಶರಣರಪೂರ್ವ.
--------------
ಅಲ್ಲಮಪ್ರಭುದೇವರು
ನಿರವಯ ನಿರ್ಗುಣ ನಿಃಶೂನ್ಯಲಿಂಗಕ್ಕೆ ಶರಣರು ತಮ್ಮ ತಮ್ಮ ತನುಗುಣಾದಿಗಳ ಅರ್ಪಿಸಿಹೆನೆಂಬುದೆ ಮಹಾಪಾಪ! ಅವು ತಮ್ಮ ತನುವಿನಲ್ಲಿಪ್ಪುದೆ ಭಂಗ, ಅದೇ ಕರ್ಮ. ಈ ಉಭಯ ನಾಸ್ತಿಯಾಗದ ಸುಳುಹು ಮುಂದೆ ಕಾಡಿಹುದಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಾ ದೇವನಲ್ಲದೆ ನೀ ದೇವನೆ ? ನೀ ದೇವನಾದಡೆ ಎನ್ನನೇಕೆ ಸಲಹೆ ? ಆರೈದು, ಒಂದು ಕುಡಿತೆ ಉದಕವನೆರೆವೆ, ಹಸಿದಾಗ ಒಂದು ತುತ್ತು ಓಗರವನಿಕ್ಕುವೆ._ ನಾ ದೇವ ಕಾಣಾ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ. ಸ್ವಯವೆಂಬುದು ಪ್ರಮಾಣ, ಪರವೆಂಬುದು ಪ್ರಮಾಣ. ಪ್ರಮಾಣವೆಂಬುದು ಪ್ರಮಾಣ, ಗುಹೇಶ್ವರನೆಂಬುದು ಅಪ್ರಮಾಣ !
--------------
ಅಲ್ಲಮಪ್ರಭುದೇವರು
ನಿಮ್ಮ ನೋಡುವ ಸುಖ ಉಳ್ಳನ್ನಕ್ಕರ, ಬೆರಸಲೆಲ್ಲಿಯದಯ್ಯಾ ? ನಿಮ್ಮ ಬೆರಸುವ ತವಕ ಉಳ್ಳನ್ನಕ್ಕ ನೋಟ ಹಿಂಗದು ! ನೋಡಿ ಕೂಡಿ ಸೈವೆರಗಾದ ಸುಖವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ನರಲೋಕದ ನರರುಗಳೆಲ್ಲರು ನರಸಂಸಾರಕ್ಕೊಳಗಾದರು. ಸುರಲೋಕದ ಸುರರುಗಳೆಲ್ಲರು ಸುರಸಂಸಾರಕ್ಕೊಳಗಾದರು. ಮುನಿಲೋಕದ ಮುನಿಗಳೆಲ್ಲರು ತಪಃಸಂಸಾರಕ್ಕೊಳಗಾದರು. ರುದ್ರಲೋಕದ ರುದ್ರಗಣಂಗಳೆಲ್ಲರು ರುದ್ರಪದವೆಂಬ ಸಂಸಾರಕ್ಕೊಳಗಾದರು. ಲಿಂಗವ ಧರಿಸಿದವರೆಲ್ಲರು ಲಿಂಗಸಂಸಾರಕ್ಕೊಳಗಾದರು. ಜಂಗಮವ ಪೂಜಿಸಿದವರೆಲ್ಲರು ಸಾಯುಜ್ಯ ಸಂಸಾರಕ್ಕೊಳಗಾದರು. ಪ್ರಸಾದ ಪಾದೋದಕ ಸಂಬಂಧಿಗಳೆಲ್ಲರು ಪ್ರಸಾದ ಸಂಸಾರಕ್ಕೊಳಗಾದರು. ಗುಹೇಶ್ವರಲಿಂಗದಲ್ಲಿ ಸರ್ವ ಸಂಸಾರವಿರಹಿತ ಚನ್ನಬಸವಣ್ಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ನೀರು ಕ್ಷೀರದಂತೆ ಕೂಡಿದ ಭೇದವ, ಆರಿಗೂ ಹೇಳಲಿಲ್ಲ, ಕೇಳಲಿಲ್ಲ. ಬೆಳುಗಾರ ಬೆರಸಿ ಬೆಚ್ಚ ಬಂಗಾರಕ್ಕೆ ಸಂದುಂಟೆ ಹೇಳಾ ? ಉರಿಯುಂಡ ಕರ್ಪುರದ ಪರಿಯಂತಿರ್ದುದನು, ಇದಿರಿಂಗೆ ಕೊಂಡಾಡಿ ಹೇಳಲುಂಟೆ ? ಅದಂತಿರಲಿ,_ ನಮ್ಮ ಗುಹೇಶ್ವರಲಿಂಗದ ಕಣ್ಣಮುಂದೆ, ನಿಮ್ಮ ಧರ್ಮದಿಂದಲೊಂದು ಆಶ್ಚರ್ಯವ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ನೀ ದೇವರೊಳಗೊ ? ದೇವರು ನಿನ್ನೊಳಗೊ ? ಎಂಬಠಾವನರಿಯೆ. ಸಿಪ್ಪೆ ಒಪ್ಪೆಗೆಟ್ಟಾಗ ಹಣ್ಣಿನ ರಸ ಕೊಳಕಾಯಿತ್ತು, ಅದು ಗುಹೇಶ್ವರನೊಪ್ಪದ ಮಾತು.
--------------
ಅಲ್ಲಮಪ್ರಭುದೇವರು
ನಿರ್ವಿಕಲ್ಪಿತವೆಂಬ ನಜದೊಳಗಯ್ಯಾ, ನಿರಹಂಭಾವದಲ್ಲಿ ನಾನಿದ್ದೆನಯ್ಯಾ (ನೀ ನಿದ್ದೆಯಯ್ಯಾ ?) ನೋಡಿಹೆನೆಂದಡೆ ನೋಡಲಿಲ್ಲ, ಕೇಳಿಹೆನೆಂದಡೆ ಕೇಳಲಿಲ್ಲ. ಘನನಿರಂಜನದ ಬೆಳಗಿಂಬಾದುದನೇನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ನಿಮ್ಮಲ್ಲಿ ಭಕ್ತಿಯುಂಟು, ತಮ್ಮಲ್ಲಿ ಭಕ್ತಿಯುಂಟು ಎಮ್ಮಲ್ಲಿ ಭಕ್ತಿಯುಂಟು ಎಂದಡೆ ಶಿವಶರಣರು ಮೆಚ್ಚುವರೆ ? ಹೂಸಿ ಹುಂಡನೆ ಮಾಡಿ ಬಾಯ ಸವಿಯ ನುಡಿವರೆಲ್ಲಾ ಭಕ್ತರಪ್ಪರೆ ? ಮಾತಿನ ಅದ್ವೈತವ ಕಲಿತು ಮಾರುಗೋಲ ಬಿಡುವರೆಲ್ಲ ಭಕ್ತರಪ್ಪರೆ ? ಬೆಳ್ಳಿಗೆಯ ಮಕ್ಕಳೆಂದಡೆ ಬಳ್ಳವಾಲ ಕರೆವವೆ ಮರುಳೆ ? ಸಂಗನಬಸವಣ್ಣನೆಂದರೆ ಮಾತಿನ ಮಾತಿಂಗೆಲ್ಲ ಭಕ್ತಿಯುಂಟೆ ? ಬಂದ ಜಂಗಮದ ಇಂಗಿತಾಕಾರವನರಿದು, ಇದಿರೆದ್ದು ವಂದಿಸಿ, ಕೈಮುಗಿದು ನಡುನಡುಗಿ ಕಿಂಕಿಲನಾಗಿ, ಭಯಭೀತಿ ಭೃತ್ಯಾಚಾರವಾಗಿ ಇರಬಲ್ಲಡೆ ಅದು ಭಕ್ತಿ, ಅದು ವರ್ಮ ! ಬಂದವರಾರೆಂದರಿಯದೆ, ನಿಂದ ನಿಲವರಿಯದೆ ಕೆಮ್ಮನೆ ಅಹಂಕಾರವ ಹೊತ್ತುಕೊಂಡಿಪ್ಪವರ ನಮ್ಮ ಗುಹೇಶ್ವರಲಿಂಗನೊಲ್ಲ ನೋಡಾ !
--------------
ಅಲ್ಲಮಪ್ರಭುದೇವರು
ನಿನ್ನ ನೊಸಲಲ್ಲಿ ಕಣ್ಣು, ಮನದಲ್ಲಿ ವಿರಸ, ನುಡಿವುದೆಲ್ಲವೂ ಭಕ್ತಿರಸ ! ಜ್ಞಾನವೆಂತು ಹೇಳಾ ? ನಿರಹಂಕಾರವೆಂತು ಹೇಳಾ ? ಅರುಹಿನ ಕುರುಹಿನ ಮರವೆ ಮಾತಿನೊಳಗದೆ ನಿನ್ನಿಂದ ನಿಜಪದವೆಂತು ಸಾಧ್ಯವಪ್ಪುದು ಹೇಳಾ ? ಕುರುಹಳಿದು ಕುರುಹನರಿಯ ಬಲ್ಲಡೆ ಗುಹೇಶ್ವರ ಲಿಂಗದಲ್ಲಿ ಉಭಯಗೆಟ್ಟಲ್ಲದೆ ಪ್ರಸಾದವಿಲ್ಲ, ಕಾಣಾ ಮಡಿವಾಳ ಮಾಚಯ್ಯಾ.
--------------
ಅಲ್ಲಮಪ್ರಭುದೇವರು
ನಾಚಿ ಮಾದುದು ಮಾದುದಲ್ಲ, ನಾಚದೆ ಮಾದುದು ಮಾದುದಲ್ಲ. ಹೇಸಿ ಮಾದುದು ಮಾದುದಲ್ಲ, ಹೇಸದೆ ಮಾದುದು ಮಾದುದಲ್ಲ. ಆಲಸಿ ಮಾದುದು ಮಾದುದಲ್ಲ, ಆಲಸದೆ ಮಾದುದು ಮಾದುದಲ್ಲ. ನಾಚದೆ ಹೇಸದೆ ಆಲಸದೆ ಮಾದಡೆ ಮಾದುದು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಿಂದೆ, ಎಂಬುದು ಬಂದ ಭವದಲ್ಲಿಯೆ ಹೋಯಿತ್ತು. ಮುಂದೆ ಗುರುಕಾರುಣ್ಯವಾದಲ್ಲಿಯೇ `ಹಿಂದು' ಹರಿಯಿತ್ತು. ಮರ್ತ್ಯಲೋಕದ ಮಹಾಗಣಂಗಳು ಮೆಚ್ಚೆ, ದಾಸೋಹವ ಮಾಡಿದಲ್ಲಿಯೆ ಪ್ರಮಥಗಣಂಗಳು ತಮ್ಮೊಳಗೆ ನಿಮ್ಮನು ಇಂಬಿಟ್ಟುಕೊಂಡು. ಅಂಗದ ಮೇಲೆ ಲಿಂಗವುಳ್ಳುದೆಲ್ಲವೂ ಸಂಗಮನಾಥನೆಂದರಿದು, ನಿನ್ನ ಸರ್ವಾಂಗದಲ್ಲಿ ಲಿಂಗಸನ್ನಹಿತವಾದಲ್ಲಿಯೆ ಪ್ರಾಣಲಿಂಗಸಂಬಂಧವಳವಟ್ಟಿತ್ತು. ಲಕ್ಷದ ಮೇಲೆ ತೊಂಬತ್ತಾರುಸಾವಿರ ಪ್ರಮಥರಿಗೆ ಮಾಡಿದ ಸಯದಾನವ ನಿಮ್ಮ ಲಿಂಗಕ್ಕೆ ಆರೋಗಿಸಲಿತ್ತು ತೃಪ್ತಿಪಡಿಸಿದಲ್ಲಿಯೆ ನಿನ್ನ ತನು ಮನ ಪ್ರಾಣಗಳು ಅರ್ಪಿತವಾದಲ್ಲಿ ಮಹಾಪ್ರಸಾದ ಸಾಧ್ಯವಾಯಿತ್ತು. ಆದಿಯ ಲಿಂಗವಿಡಿದು ನಾನು ನಿಮ್ಮಲ್ಲಿ ಅಡಗಿದ ಬಳಿಕ ಹಿಂದಣ ಸಂಕಲ್ಪವಳಿಯಿತ್ತು. ಸರ್ವಾಚಾರಸಂಪತ್ತು ನಿನ್ನಲ್ಲಿ ಸಯವಾದಲ್ಲಿ ಸರ್ವಸೂತಕ ತೊಡೆಯಿತ್ತು. ಗುಹೇಶ್ವರಲಿಂಗವು ನಿನ್ನ ಹೃದಯಕಮಲದಲ್ಲಿ ನೆಲೆಗೊಂಡು ನಿನ್ನ ಕರಸ್ಥಲದೊಳಗೆ ತೊಳಗೆ ಬೆಳಗುತ್ತೈದಾನೆ. ಇನ್ನೊಮ್ಮೆ ತಿಳಿದು ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ನಡೆವಲ್ಲಿ, ನುಡಿವಲ್ಲಿ ಪ್ರಾಣಲಿಂಗವೆಂದೆಂಬರು, ಕೆಡೆಯಲೊಡನೆ ಹೆಣನದು ಎಂಬರು, ಬೇಗ ಬಾರೆಂಬರು ! ಹಿರಿಯ ಭೂಮಿಯಲ್ಲಿ ನಿಮ್ಮ ಹೆಸರಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೋಟವೆ ಕೂಟ, ಕೂಟವೆ ಪ್ರಾಣ, ಪ್ರಾಣವೆ ಏಕ, ಏಕವೆ ಸಮರಸ, ಸಮರಸವೆ ಲಿಂಗ, ಲಿಂಗವೆ ಪರಿಪೂರ್ಣ, ಪರಿಪೂರ್ಣವೆ ಪರಬ್ರಹ್ಮ, ಪರಬ್ರಹ್ಮವೆ ತಾನು !_ ಇಂತೀ ನಿಜವ ಗುಹೇಶ್ವರ ಬಲ್ಲನಲ್ಲದೆ ಕಣ್ಣುಗೆಟ್ಟಣ್ಣಗಳು ಎತ್ತ ಬಲ್ಲರು ನೋಡಯ್ಯಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...