ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಂಗಳ ಮುಂದೆ ಕತ್ತಲೆ ಇದೇನೊ? ಮನದ ಮುಂದಣ ಮರಣ (ಮರವೆ ?) ಇದೇನೊ? ಒಳಗಣ ರಣರಂಗ ಹೊರಗಣ ಶೃಂಗಾರ ! ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕೆಳಗೇಳು ಲೋಕಂಗಳಿಲ್ಲದ ಮುನ್ನ, ಮೇಲೇಳು ಲೋಕಂಗಳಿಲ್ಲದ ಮುನ್ನ ಸಹಸ್ರ (ಸಮಸ್ತ ?) ಬ್ರಹ್ಮಾಂಡಗಳಿಲ್ಲದ ಮುನ್ನ, ಅಲ್ಲಿಂದತ್ತತ್ತ; ಬಸವಣ್ಣಾ ನೀನು ಲಿಂಗಭಕ್ತ, ಜಂಗಮಪ್ರಾಣಿ ! ಶಶಿಧರನ ಶರಣಂಗೆ ವೃಷಧರ ಸ್ವಾಯತವಾಗಿ, ನಮ್ಮ ಗುಹೇಶ್ವರಲಿಂಗಕ್ಕೆ ಸಂಗನಬಸವಣ್ಣನೆ ಭಕ್ತನೆಂದರಿದು ನಾನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಕರಗಿಸಿ ನೋಡಿರೆ ಅಣ್ಣಾ ಕರಿಯ ಘಟ್ಟಿಯನು. ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು. ಆ ರತ್ನದ ಪರೀಕ್ಷೆಯ ಬಲ್ಲೆವೆಂಬವರೆಲ್ಲರ ಕಣ್ಣುಗೆಡಿಸಿತ್ತು ನೋಡಾ ! ಅರುಹಿರಿಯರೆಲ್ಲರೂ ಮರುಳಾಗಿ ಹೋದರು. ಕರಿಯ ಘಟ್ಟಿಯ ಬಿಳಿದು ಮಾಡಿ ಮುಖದ ಮುದ್ರೆಯನೊಡೆಯಬಲ್ಲವರಿಗಲ್ಲದೆ ಗುಹೇಶ್ವರನ ನಿಲವನರಿಯಬಾರದು ನೋಡಿರಣ್ಣಾ.
--------------
ಅಲ್ಲಮಪ್ರಭುದೇವರು
ಕಿರಿಯರಾದಡೇನು ? ಹಿರಿಯರಾದಡೇನು ? ಅರಿವಿಂಗೆ ಹಿರಿದು ಕಿರಿದುಂಟೆ ? ಆದಿ ಅನಾದಿ ಇಲ್ಲದಂದು, ಅಜಾಂಡ ಬ್ರಹ್ಮಾಂಡ ಕೋಟಿಗಳುದಯವಾಗದಂದು ಗುಹೇಶ್ವರಲಿಂಗದಲ್ಲಿ ನೀನೊಬ್ಬನೆ ಮಹಾಜ್ಞಾನಿ ಎಂಬುದು ಕಾಣಬಂದಿತ್ತು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕಾಯವೆಂಬ ಕದಳಿಯ ಹೊಕ್ಕು; ಪ್ರಾಣವೆಂಬ ಗಂಹರದಲ್ಲಿ; ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು ! ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕುರುಹುಳ್ಳನ್ನಕ್ಕ ಸಮಯದ ಹಂಗು, ಅರಿದಹೆನೆಂಬನ್ನಕ್ಕ ಆತ್ಮದ ಹಂಗು, `ಅಲ್ಲ' `ಅಹುದು' ಎಂಬನ್ನಕ್ಕ ಎಲ್ಲರ ಹಂಗು, ಗುಹೇಶ್ವರನೆಂಬನ್ನಕ್ಕ ಲಿಂಗದ ಹಂಗು ಬೇಕು ಘಟ್ಟಿವಾಳಣ್ಣಾ.
--------------
ಅಲ್ಲಮಪ್ರಭುದೇವರು
ಕಾಯದೊಳಗೆ ಕರುಳುಳ್ಳನ್ನಕ್ಕರ ಹಸಿವು ಮಾಣದು. ಕಾಯದೊಳಗಣ ಕರುಳ ತೆಗೆದು ಕಂಗಳ ಮೇಲಿರಿಸಿ ಇದನಡಿಗೆಯ ಮಾಡಿ ಗಡಣಿಸುತ್ತಿದ್ದೆ, ಏನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ, ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ, ಮುಕ್ತಿಯಲಾದ ಮೂರ್ತಿಯಲ್ಲ, ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ, ಇದೆಂತಹ ಮೂರ್ತಿಯೆಂದುಪಮಿಸುವೆ ? ಕಾಣಬಾರದ ಕಾಯ ನೋಡಬಾರದ ತೇಜ, ಉಪಮಿಸಬಾರದ ನಿಲವು. ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು ಏನೆಂದು ಹೇಳುವೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು. ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು. ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !
--------------
ಅಲ್ಲಮಪ್ರಭುದೇವರು
ಕಾಮಿಸದೆ ನೆನೆದಡೆ, ಕಲ್ಪಿತವಿಲ್ಲದ ಪುರುಷ ಬಂದನೆನಗೆ ನೋಡಾ ! ಕಲ್ಪಿತವಿಲ್ಲದೆ ನೆನೆದಡೆ, ಭಾವಿಸಲಿಲ್ಲದ ಸುಖವು ದೊರಕಿತ್ತು ನೋಡಾ ! ಗುಹೇಶ್ವರನೆಂಬ ಲಿಂಗವನರಿದ ಬಳಿಕ, `ನಾ' ಎಂಬುದಿಲ್ಲ ನೋಡಾ !
--------------
ಅಲ್ಲಮಪ್ರಭುದೇವರು
ಕರಸ್ಥಲದ ಲಿಂಗವೆ ಕಾಯಕ್ಕೆ ವೇಧಿಸಿದಲ್ಲಿ, ಕಾಯ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇಧಿಸಿದಲ್ಲಿ ಪ್ರಾಣ ಲಿಂಗವಾಯಿತ್ತು, ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇಧಿಸಿದಲ್ಲಿ ಭಾವ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇಧಿಸಿದಲ್ಲಿ ಜ್ಞಾನ ಲಿಂಗವಾಯಿತ್ತು. ಅಂತಾದ ಕಾರಣ_ನಮ್ಮ ಗುಹೇಶ್ವರನ ಶರಣಂಗೆ, ಅರಿವರತು ಕುರುಹು ನಿಷ್ಪತಿಯಾಗಿ, ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು
--------------
ಅಲ್ಲಮಪ್ರಭುದೇವರು
ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು. ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು. ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು. ಕುರಂಗನು ಶಬ್ದೇಂದ್ರಿಯದಿಂದ ಬಂಧನವಡೆದಳಿಯಿತ್ತು. ಮತ್ಸ್ಯವು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು._ ಇಂತೀ; ಒಂದೊಂದು ಇಂದ್ರಿಯೋದ್ರೇಕದಿಂದ ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು. ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ, ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ ಮಾಯೆಯ ಬಾಯ ತುತ್ತಹುದು ಚೋದ್ಯವೇನು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕೆಂಡದ ಗಿರಿಯ ಅರಗಿನ ಬಾಣದಲೆಚ್ಚಡೆ ಮರಳಿ ಆ ಬಾಣವನರಸಲುಂಟೆ ? ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ ? ಗುಹೇಶ್ವರನೆಂಬ ಲಿಂಗವನರಿದ ಬಳಿಕ ಮತ್ತೆ ಮರಳಿ ನೆನೆಯಲುಂಟೆ ?
--------------
ಅಲ್ಲಮಪ್ರಭುದೇವರು
ಕದನದೊಳಗಣ ಕಣ್ಣ ಕೆಂಪು, ಕದನದೊಳಗಣ ಮನದ ಕೆಂಪು ಇದಾವನಾವನ ಕಾಡದಯ್ಯಾ ? ಪದುಮದೊಳಗೆ ಬಿಂದು ಸಿಲುಕಿ ಅಲ್ಲಿಯೆ ಅದೆ ನೋಡಿರೆ ! ಗುಹೇಶ್ವರನೆಂಬ ಅನುಗ್ರಹ ತನ್ನ ನುಂಗಿ ಲಿಂಗವಿಲ್ಲೆನುತ್ತಿರ್ದೆನು(ದ್ದಿತು?)
--------------
ಅಲ್ಲಮಪ್ರಭುದೇವರು
ಕಾಯವೆ ಕಡವಸವಾಗಿ, ಮನವೆ ಯೋಗವಟ್ಟಿಗೆಯಾಗಿ; ಇಂದ್ರಿಯವಿಸಂಚದಿಂದಾದ ಉಪಮೆಯಯ್ಯಾ ! ಏನೆಂದೆನಬಹುದು ? ಎಂತೆಂದೆನಬಹುದು ? ಸುಖದ ಸೋಂಕಿನಲಾದ ಸಮಾಧಿಯಯ್ಯಾ ! ಅಂತರಂಗದ ಕಂಥೆ ಚಿಂತೆಗೆಟ್ಟುದು ಬ್ರಹ್ಮ, ಗುಹೇಶ್ವರಲಿಂಗದಲ್ಲಿ ಸಂಗವಯ್ಯಾ.
--------------
ಅಲ್ಲಮಪ್ರಭುದೇವರು
ಕಾಯದ ಕಳವಳವ ಗೆಲಿದಡೇನೊ, ಮಾಯದ ತಲೆಯನರಿಯದನ್ನಕ್ಕರ ? ಮಾಯೆಯ ತಲೆಯನರಿದಡೇನೊ, ಜ್ಞಾನದ ನೆಲೆಯನರಿಯದನ್ನಕ್ಕರ ? ಜ್ಞಾನದ ನೆಲೆಯನರಿದಡೇನೊ, ತಾನು ತಾನಾಗದನ್ನಕ್ಕರ ? ತಾನು ತಾನಾದ ಶರಣರ ನಿಲವಿಂಗೆ ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ. ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ. ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
--------------
ಅಲ್ಲಮಪ್ರಭುದೇವರು
ಕಾರ ಮೇಘವೆದ್ದು ಧಾರಾವರ್ತ ಸುರಿವಾಗ, ಧಾರುಣಿಯೆಲ್ಲವೂ ಮುಳುಗಿತ್ತು ನೋಡಾ ! ಕಾರಿರುಳ ಕಣ್ಣೊಳಗೆ ಸೂರ್ಯರನೇಕರು ಮೂಡಿ ದಾರಿಯ ಹೊಲಬೆಂಬುದು ಕೆಟ್ಟಿತ್ತು ನೋಡಾ ! ಪೂರಾಯ ಗಾಯದಲ್ಲಿ ಸಾಯೆ ಕೊಂದಲ್ಲದೆ ಸೂರಿಯ (ಸೂರ್ಯ?)ರನೇಕರು ಮಡಿಯರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ, ಕುಲ ಕೆಡದಿಪ್ಪ ಈ ಪರಿಯ ನೋಡಾ ! ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ ಕುಲವುಳ್ಳವರೆಲ್ಲರೂ ಕೈವಿಡಿದರು. ಕುಲಗೆಟ್ಟವನೆಂದು ತಿಳಿದು ವಿಚಾರಿಸಲು, ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕರ್ಮದ ಕಟ್ಟನೆ ಕೊಯ್ದು ಬ್ರಹ್ಮದ್ವಾರವ ಕಂಡೆ, ಮೇಲೊಂದು ಕಂಬವ ಕಂಡೆನಲ್ಲಾ ! ಕಂಬವ ಖಂಡಣೆಯ ಮಾಡಿ ಮಹಾಬೆಳಗನೆ ಕಂಡೆ ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದನು.
--------------
ಅಲ್ಲಮಪ್ರಭುದೇವರು
ಕಂಗಳ ಮುಂದಣ ಗೊತ್ತನರಿದು, ಕಾಮ್ಯದ ಮುಂದಣ ಚಿತ್ತವ ಹರಿದು, ಮಾಡಿಹೆನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ. ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು_ ಆಯ್ದಕ್ಕಿಯ ಮಾರಯ್ಯಾ.
--------------
ಅಲ್ಲಮಪ್ರಭುದೇವರು
ಕಾಯ ಭಿನ್ನವಾಯಿತ್ತೆಂದು ಮುಟ್ಟಿಸುವರು ಲಿಂಗವನು. ಮುಟ್ಟಲಾಗದು ಲಿಂಗವನು; ಮುಟ್ಟಿದಾತ ಮುಂದೆ ಹೋದ. ಮುನ್ನ ಮುಟ್ಟಿದವರೆಲ್ಲ ಉಪಜೀವಿಗಳಾದರು. ಇನ್ನು ಮುಟ್ಟಿದವರಿಗೆ ಗತಿಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು. ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು. ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು. ಜಗತ್‍ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು, ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು.
--------------
ಅಲ್ಲಮಪ್ರಭುದೇವರು
ಕಾಯದೊಳಗೆ ಕಾಯವಾಗಿ, ಪ್ರಾಣದೊಳಗೆ ಪ್ರಾಣವಾಗಿ, ಮನದೊಳಗೆ ಮನವಾಗಿ ಭಾವದೊಳಗೆ ಭಾವವಾಗಿ ಅರಿವಿನೊಳಗೆ ಅರಿವಿನ ತಿರುಳಾಗಿ,_ಮರಹು ಮಾರಡೆಯಿಲ್ಲದೆ. ನಿಜಪದವು ಸಾಧ್ಯವಾದ ಬಳಿಕ ಆವುದು ವರ್ಮ, ಆವುದು ಕರ್ಮ ? ಆವುದು ಬೋಧೆ, ಆವುದು ಸಂಬಂಧ ? ನಾ ಹೇಳಲಿಲ್ಲ ನೀ ಕೇಳಲಿಲ್ಲ ! ಅದೇನು ಕಾರಣವೆಂದಡೆ ಬೆಸಗೊಂಬಡೆ ತೆರಹಿಲ್ಲವಾಗಿ ! ಗುಹೇಶ್ವರಲಿಂಗದಲ್ಲಿ ತೆರೆಮರೆ ಆವುದು ಹೇಳಯ್ಯಾ ಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಕೋಣನನೂ ಕುದುರೆಯನೂ; ಹಾವನೂ ಹದ್ದನೂ; ಮೊಲನನೂ ನಾಯನೂ, ಇಲಿಯನೂ ಬೆಕ್ಕನೂ, ಹುಲಿಯನೂ ಹುಲ್ಲೆಯನೂ_ಮೇಳೈಸುವಂತೆ ಮೇಳವಿಲ್ಲದವನ ಒಕ್ಕತನ, ಅಳಿಯ ಬಾಳುವೆ, ಕಾಡಬೆಕ್ಕಿಂಗೆ ತುಯ್ಯಲನಿಕ್ಕುವಂತೆ !_ಕೇಳು ಗುಹೇಶ್ವರಾ ನಿರಾಳ ಬೋಳಿಂಗೆ ತೊಂಡಿಲ ಮುಡಿಸುವಂತೆ
--------------
ಅಲ್ಲಮಪ್ರಭುದೇವರು

ಇನ್ನಷ್ಟು ...