ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದೆಂಬೆನೆ ? ಎರಡಾಗಿದೆ; ಎರಡೆಂಬೆನೆ ? ಒಂದಾಗಿದೆ. ಒಂದೆರಡೆಂಬ ಸಂದೇಹವಿದೇನೊ ? ಅಗಲಲಿಲ್ಲದ ಕೂಟಕ್ಕೆ ಬಿಚ್ಚಿ ಬೇರಾಗದ ಉಪದೇಶ ! ಗುರು ಶಿಷ್ಯರೆಂಬ ಭಾವಕ್ಕೆ ಭೇದವುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಒಡಲೊಳಗಿದ್ದು ಒಡಲಿಂಗಾಧಾರವಾಗಿ ಒಡಲ ಸೋಂಕದೆ, ಒಡಲ ಬೆಳಗುವ ಪರಿಯ ನೋಡಾ ! ಬೆಳಗಿಂಗೆ ಬೆಳಗಾಗಿ ಬೆಳಗುವ ಪರಿಯ ನೋಡಾ ! ಪರಮಚೈತನ್ಯ ನಿರಾಳ ಗುಹೇಶ್ವರಲಿಂಗವ ನೋಡಾ !
--------------
ಅಲ್ಲಮಪ್ರಭುದೇವರು
ಒಂದು ದಿಕ್ಕಿನಲ್ಲಿ ಕತ್ತಲೆಯನಿರಿಸಿ, ಒಂದು ದಿಕ್ಕಿನಲ್ಲಿ ತನುವನಿರಿಸಿ, ಒಂದು ದಿಕ್ಕಿನಲ್ಲಿ ವಚನವನಿರಿಸಿ, ಒಂದು ದಿಕ್ಕಿನಲ್ಲಿ ರುಚಿಯನಿರಿಸಿ, ನಾಲ್ಕು ದಿಕ್ಕಿನ ನಡುವೆ ನೀನಿರಬಲ್ಲಡೆ, ಎನ್ನ ಬೆಸಗೊಳ್ಳಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಂದೆರಡರ ಮೂರು ನಾಲ್ಕರ ಪರಿವಿಡಿಯ ಭಾವವನರಿಯದೆ ಕೆಟ್ಟಿತ್ತು ನೋಡಾ ಲೋಕ, ಕೆಟ್ಟಿತ್ತು ನೋಡಾ ಜಗವು ಕೆಟ್ಟಿತ್ತು ನೋಡಾ ಈರೇಳು ಭುವನವೆಲ್ಲವು ಇತ್ತ ವಿಸ್ತಾರವಾಯಿತ್ತು, ಸ್ಥಿತಿ ಆಯತವಾಯಿತ್ತು ಮಾರಾರಿ ಕಟ್ಟಳೆ ವಿಪರೀತವು ನೋಡಾ ನಾದ ಚಕ್ರಂಗಳ, ಬಿಂದು ಚಕ್ರಂಗಳ, ಕಲಾ ಚಕ್ರಂಗಳ ನಿಲ್ಲೆಂದು ನಿಲಿಸಿದ ನಿರ್ವಯ ಚೆನ್ನಬಸವಣ್ಣನು ಕಾಲಕರ್ಮ ಸ್ಥಿತಿಗುಣವನತಿಗಳೆದು ನಿರ್ಭಾವದಲ್ಲಿ ನಿರ್ವಯ ಚೆನ್ನಬಸವಣ್ಣನು ತನ್ನಲ್ಲಿ ತಾನು ಬೆಳಗಾದ ಚೆನ್ನಬಸವಣ್ಣನು ಬೆಳಗಪ್ಪ ಬೆಳಗು ಲೀಯವಾಯಿತು ಗುಹೇಶ್ವರಾ ಚೆನ್ನಬಸವಣ್ಣನು
--------------
ಅಲ್ಲಮಪ್ರಭುದೇವರು
ಒಂಬತ್ತು ಒಟ್ಟೆ ನೆರೆದು ಮೂರು ತತ್ತಿಯನಿಕ್ಕತ್ತ ಕಂಡೆ ಆನೆ ಆಡಹೋದರೊಂದು ಚಿಕ್ಕಾಡು ನುಂಗಿತ್ತ ಕಂಡೆ ನಾರಿಯಾಡಹೋದಲ್ಲಿ ಒಂದು ಚಂದ್ರಮತಿಯ ಕಂಡೆನು ಪೃಥ್ವೀ ಮಂಡಲವನೊಂದು ನೊಣ ನುಂಗಿತ್ತು ನೋಡಾ ಗುಹೇಶ್ವರನೆಂಬ ಲಿಂಗವ ಕಂಡವರುಳ್ಳರೆ ಹೇಳಿರೆ
--------------
ಅಲ್ಲಮಪ್ರಭುದೇವರು
ಒಂದೆರಡೆಂಬ ಸಂದೇಹಕ್ಕೊಳಗಾದವರೆಲ್ಲರೂ ಬಂದರು ನೋಡಾ ನಾನಾ ಭವದಲ್ಲಿ. ಕುಂದು ಹೆಚ್ಚಿನ ಹೋರಾಟದಿಂದ ಬಂಧನಕ್ಕೆ ಸಿಕ್ಕಿದರಲ್ಲ ! ಒಂದೆರಡನೊಳಕೊಂಡು ನಿಂದ ನಿಲವ, ಸಂದಿಲ್ಲದೆ ಹೊಂದಿಪ್ಪ ಗುಹೇಶ್ವರ ತನ್ನಲ್ಲಿ.
--------------
ಅಲ್ಲಮಪ್ರಭುದೇವರು
ಒಂದೆರಡಾದುದನಾರೂ ಅರಿಯರು: ಆ `ಒಂದು' ಒಂದೆ ಆಯಿತ್ತು, ತ್ರಿತತ್ವವಾಯಿತ್ತು, ವೇದಾತೀತವಾಯಿತ್ತು, ಭರಿತವಾಯಿತ್ತು, ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು. ಅದಕ್ಕೆ ಆಧಾರ ದೇಹವಾಯಿತ್ತು. ಅದು ಅಷ್ಟವಿಗ್ರಹ ಸ್ವರೂಪವಾಗಿರುತ್ತಿಪ್ಪುದು. ಮತ್ತಿರುತಿರ್ದ ಒಂದು ಮಾಯಾಶಕ್ತಿಯಂ ಕೂಡಿ, ಗುಣತ್ರಯಂಗಳಂ ಕೂಡಿ, ನಾನಾತ್ಮನೆನಿಸಿಕೊಂಡು_ ವಿಷಯಾತ್ಮ ಇಂದ್ರಿಯಾತ್ಮ ಭೂತಾತ್ಮ ಜೀವಾತ್ಮ ಪರಮಾತ್ಮನೆನಿಸಿಕೊಂಡು, ಪ್ರಾಣಾದಿವಾಯುಗಳಂ ಕೂಡಿಕೊಂಡು ಜಡಪ್ರಕೃತಿಗಳಂ ಹೊತ್ತುಕೊಂಡು ಸಂಕಲ್ಪ_ವಿಕಲ್ಪವೆಂಬ ಉಭಯ ಕರ್ಮಂಗಳಂ ಕಲ್ಪಿಸಿ ನಾನಾಯೋನಿ ಪ್ರಾಪ್ತವಾಗುತ್ತಿರ್ದು, ಲೋಕಾದಿಲೋಕಂಗಳೊಳು ತೊಳಲಿ ಬಳಲಿ ತನ್ನ ಮೊದಲ ಕೂಡುವ ಪ್ರಕಾರಮಂ ಬಯಸಿ ನಾನಾ ವಿಧದಿಂದ ಅರಸಿ ಹರಿವುತ್ತಿಪ್ಪರು ಅಖಿಳ ಜೀವಿಗಳೆಲ್ಲರು. ಇದ ಬೆರಸದೆ; ಬೆರಸಿದ ಸಂಗನಬಸವಣ್ಣನ ನೆನೆನೆನೆದು ಶರಣೆಂದು ಶುದ್ಧನಾದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಂದ ಮಾಡ ಹೋದಡೆ ಮತ್ತೊಂದಾಯಿತ್ತೆಂಬ ಮಾತು ದಿಟವಾಯಿತ್ತು ನೋಡಾ. ನಿಮ್ಮ ಒಡತಣ ಅನುಭಾವದಿಂದ ಗುರುಮುಖ ಸಾಧ್ಯವಾದುದಯ್ಯಾ, ಗುಹೇಶ್ವರಲಿಂಗದಲ್ಲಿ ನಿನಗೂ ನನಗೂ ಉಪದೇಶವ ಒಂದಾದ ಭೇದವ ಹೇಳಾ ಚನ್ನಬಸವಣ್ಣಾ
--------------
ಅಲ್ಲಮಪ್ರಭುದೇವರು