ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಲ್ಲ ಎಲ್ಲವನರಿಯಬಹುದು; ಸಾವನರಿಯಬಾರದು. ಸರ್ವವಿದ್ಯೆ ಸಕಲವ್ಯಾಪ್ತಿಯನರಿಯಬಹುದು; ಸಾವನರಿಯಬಾರದು. ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿ ದೇವ ದಾನವ ಮಾನವರಿಗೆಲ್ಲಗೆಯೂ ಸಾವು ! ಮಹಾಪುರುಷರಿಗೆಯೂ ಸಾವು ! ಶಿವ ಶಿವಾ, ಈ ಸಾವನರಿಯದೀ ಲೋಕ ! ಪ್ರಪಂಚವ ಮರೆದು ಲಿಂಗದಲ್ಲಿ ನೆನಹು ನೆಲೆಗೊಂಡಡೆ ಆ ಮಹಿಮಂಗೆ ಸಾವಿಲ್ಲ. ಈ ಸಾವನರಿಯದ ಅರೆಮರುಳಗಳ ಅರಿವು ಮಾನ (ಮಹಾ?) ಹಾನಿ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎನ್ನ ಕರಸ್ಥಲದ ಲಿಂಗದೊಳಗೆ ಒಂದು ಮಹಾಬೆಳಗ ಕಂಡೆನಯ್ಯಾ ! ಮಹಾ ಮಂಗಳನಿಳಯವಾಗಿ ತೋರುತ್ತಿದೆ ! ಗುಹೇಶ್ವರನೆಂಬ ಲಿಂಗದ ಕಂಗಳ ಕಾಂತಿಗಳು ಸಂಗನಬಸವಣ್ಣನ ನಿವಾಳಿಸುತ್ತಿದ್ದವಯ್ಯಾ !
--------------
ಅಲ್ಲಮಪ್ರಭುದೇವರು
ಎರಡು ಬೆಟ್ಟದ ನಡುವೆ ಕರಡಿಯ ಮಿಳಿಯ ಮಾಡಿ, ಹುಲಿಯನೂ ಎತ್ತನೂ ಹೂಡಿ ಹೊಡೆದವರಾರೊ ? ಎರಡರ ಎಂಟೆರಡರ, ಆರರ (ಆರೆಡರ?), ನಾಲ್ಕೆರಡರ ಶರಧಿ ಶರಧಿಯ ಕೂಡಿ ಮೊರೆವುದಿದೇನೊ ? ಕುರುಡ ಹೆಳವನ ಕೈವಿಡಿದು ನಡೆವಂತೆ, ಗುಹೇಶ್ವರನೆಂಬ ಲಿಂಗನಿರಾಳದ ನಿಲುವು.
--------------
ಅಲ್ಲಮಪ್ರಭುದೇವರು
ಎಡೆಬಿಡಾರಕ್ಕೆ ಕರ್ತರೆಂಬರಯ್ಯಾ, ಎಡೆ ಬಿಡಾರದ ಘನವನೆತ್ತಬಲ್ಲರೊ ? ಆದಿ ಅನಾದಿಯಿಲ್ಲದಂದು ಶೂನ್ಯ ನಿಶ್ಶೂನ್ಯವಿಲ್ಲದಂದು ನಾದ ಬಿಂದು ಕಳೆ ಹುಟ್ಟದಂದು ಬ್ರಹ್ಮವಿಷ್ಣ್ವಾದಿಗಳಿಲ್ಲದಂದು ಅಷ್ಟದಿಕ್ಕು ನವಖಂಡಗಳಿಲ್ಲದಂದು ನಿರಾಳ ನಿಶ್ಶೂನ್ಯ ನಿರ್ಭೇದ್ಯವಾದ ಪರಮಚಿತ್ಕಲೆಯೆಂಬ ಕೋಣದಲ್ಲಿಪ್ಪ ಪರಮಾಮೃತವನು ಸುಯಿಧಾನವೆಂಬ ಹಸ್ತದಿಂದ ಸುಜ್ಞಾನವೆಂಬ ಗಿಣಿಲಿನಲ್ಲಿ ಗಡಣಿಸಿಕೊಂಡು ನಿರ್ಮಳ ಸದ್ಭಾವ ಹಸ್ತದಿಂದ ಚಿನ್ಮಯ ಮಹಾಲಿಂಗಕ್ಕರ್ಪಿಸಿ ಚಿದ್ಘನಪ್ರಸಾದವ ಸವಿದು ಅಸಂಖ್ಯಾತ ಬ್ರಹ್ಮಾಂಡ ಪಿಂಡಾಂಡದೊಳಗೆ ಪರಿಪೂರ್ಣವಾಗಿ ತನ್ನ ನಿಲವ ತಾನರಿಯ ಬಲ್ಲಡೆ ಎಡೆಬಿಡಾರಕ್ಕೆ ಕರ್ತನೆಂಬೆನಯ್ಯಾ. ಹಾಂಗಲ್ಲದೆ; ಹೊನ್ನಿಂಗೆ ಮಣ್ಣಿಂಗೆ ಹೆಣ್ಣಿಂಗೆ ಕೂಳಿಂಗೆ ಮಣ್ಣಮನೆ, ದೇಗುಲಕೆ ಹೊಡೆದಾಡಿ ಭವಾಂಬುಧಿಯಲ್ಲಿ ತೇಂಕಾಡುವಂಥ ಕುನ್ನಿಮಾನವರು ಎಡೆಬಿಡಾರಕ್ಕೆ ಸಲ್ಲರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎನ್ನ ತನುವೆ ಚನ್ನಬಸವಣ್ಣನಯ್ಯಾ, ಎನ್ನ ಮನವೆ ಮಡಿವಾಳನಯ್ಯಾ, ಎನ್ನ ಪ್ರಾಣವೆ ಸಂಗನಬಸವಣ್ಣನಯ್ಯಾ, ಗುಹೇಶ್ವರಾ_ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮಸುಖಿಯಾಗಿರ್ದೆನು.
--------------
ಅಲ್ಲಮಪ್ರಭುದೇವರು
ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ, ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ ! ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ ! ಸತ್ಯವೇನವದಿರ, ಮಿಥ್ಯವೇನವದಿರ ಹಿಡಿದ ಕೈ ತಾನೆ ಎಂದರಿಯರಾಗಿ. ಗುಹೇಶ್ವರಲಿಂಗವು ಬೆರಗಾದನು !
--------------
ಅಲ್ಲಮಪ್ರಭುದೇವರು
ಎಲ್ಲಿಯೂ ಇಲ್ಲೆಂಬುದ ಹುಸಿ ಮಾಡಿ, ಶಿಲಾಲಿಖಿತವು ಗುರುವಿನ ವಶವಾಗಿ, ಅಲ್ಲಲ್ಲಿಗೆ ಉಂಟೆಂಬುದನು ನಿಲ್ಲದೆ ತೋರಿ, ಮಾಡಿದನು ಶಿಷ್ಯ_ತಾನು ಬಲ್ಲಿದ ! ಷಡುವಿಧದ ಜವನಿಕೆಯ ಮರೆಯಲ್ಲಿಯೆ ಗುಹೇಶ್ವರಲಿಂಗದ ಅರಿವು !
--------------
ಅಲ್ಲಮಪ್ರಭುದೇವರು
ಎಂಬತ್ತುನಾಲ್ಕು ಲಕ್ಷ ಒಟ್ಟೆ ಮೂರು ತತ್ತಿಯನಿಕ್ಕಿತ್ತ ಕಂಡೆ. ಆನೆ ಆಡ ಹೋದಡೆ ಒಂದು ಚಿಕ್ಕಾಡು ನುಂಗಿತ್ತ ಕಂಡೆ, ನಾರಿಯಾಡ ಹೋದಡೆ ಒಂದು ಚಂದ್ರಮತಿಯ ಕಂಡೆನು. ಪೃಥ್ವೀಮಂಡಲವನೊಂದು ನೊಣ ನುಂಗಿತ್ತ ಕಂಡೆನು. ಗುಹೇಶ್ವರನೆಂಬ ಲಿಂಗವ ಕಂಡವರುಳ್ಳಡೆ ನೀವು ಹೇಳಿರೆ
--------------
ಅಲ್ಲಮಪ್ರಭುದೇವರು
ಎಣ್ಣೆ ಬತ್ತಿ ಪ್ರಣತೆ ಕೂಡಿ ಜ್ಯೋತಿಯ ಬೆಳಗಯ್ಯಾ. ಅಸ್ಥಿ ಮಾಂಸ ದೇಹ ಪ್ರಾಣ ನಿಃಪ್ರಾಣವಾಯಿತ್ತು. ದೃಷ್ಟಿ ಪರಿದು ಮನಮುಟ್ಟಿದ ಪರಿಯೆಂತೊ ? ಮುಟ್ಟಿ ಲಿಂಗವ ಕೊಂಡಡೆ, ಕೆಟ್ಟತ್ತು ಜ್ಯೋತಿಯ ಬೆಳಗು ! ಇದು ಕಷ್ಟವೆಂದರಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎಂಬತ್ತುನಾಲ್ಕು ಲಕ್ಷ ಜೀವರಾಶಿಗೂ ನೆಲನೊಂದೆ, ಜಲವೊಂದೆ, ಲೋಕಸಂಬಂಧಿಗೂ ಲಿಂಗಸಂಬಂಧಿಗೂ ನೆಲನೊಂದೆ ಜಲವೊಂದೆ, ವಿರಕ್ತರ ಹಸ್ತಮುಟ್ಟಿ ಬಂದ ಕಾರಣ ಅಗ್ಗವಣಿಯೆನಸಿತ್ತು, ಸಿತಾಳವೆನಸಿತ್ತು. ಇಂತಪ್ಪ ಸುಪವಿತ್ರದ ಅಗ್ಗವಣಿಯನೊಲ್ಲದೆ, ಅ[ನೇಕ] ಒರತೆಯ ನೀರಿಂಗೆರಗಿ ಬರುದೊರೆ ಹೋಹರಿಗೆ ಮರಳಿ ಭಕ್ತರ ಪಿÀಠವೇಕೆ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಎಲೆಯಿಲ್ಲದ ವೃಕ್ಷ ಉಲಿಯಬಲ್ಲುದೆ ? ಜಲವಿಲ್ಲದ ತಟಾಕ ತೆರೆಗೊಡಲುಂಟೆ ? ಶಬ್ದಮುಗ್ಧವಾದವಂಗೆ, ನುಡಿಗೆಡೆಯುಂಟೆ ? ಸಮಯವ ಸಾಧಿಸುವನ್ನಬರ ಎಂತು ನಿಜನಿಃಪತಿಯಪ್ಪುದು ? ಭ್ರಾಂತುಮರ್ಕಟನ ವೃಶ್ಚಿಕ ಹೊಯಿದಂತೆ ನಮ್ಮ ಗುಹೇಶ್ವರಲಿಂಗದಲ್ಲಿ ಮರೆದಾಡಬೇಡವೆಲೆ ಭ್ರಾಂತುಯೋಗಿ ಘಟ್ಟಿವಾಳಯ್ಯ.
--------------
ಅಲ್ಲಮಪ್ರಭುದೇವರು
ಎಲೆ ಮನವೆ; ನೀ ನಿನ್ನ ನಿಜವ ತಿಳಿವಡೆ ಆ ನಿನ್ನ ನಿಜವ ಹೇಳುವೆ ಕೇಳು: ಅದು ಕೇವಲ ಜ್ಯೋತಿ ಅದು ವರ್ಣಾತೀತ. ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು, ಅದೀಗ ನಿನ್ನ ಪರಿಪೂರ್ಣತ್ವದ ನೆಲೆ. ಆ ನಿನ್ನ ನಿಜವ ನಿಶ್ಚಯಿಸಿ ನೀ ನಿರ್ಗಮನಿಯಾದಲ್ಲಿ ಅದೇ ನಿನ್ನ ಸಮ್ಯಕ್‍ಜ್ಞಾನದ ತೋರಿಕೆ ! ಆ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ ನೀ ನಮ್ಮ ಗುಹೇಶ್ವರಲಿಂಗದ ಶ್ರೀಚರಣವನರಸಿಕೊಂಡು ನಿಶ್ಚಿಂತನಾಗೆಲೆ ಮನವೆ.
--------------
ಅಲ್ಲಮಪ್ರಭುದೇವರು
ಎನ್ನ ಮನದ ಕೊನೆಯ ಮೊನೆಯ ಮೇಲೆ ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವಾ. ಆತನ ಕಂಡು ಬೆರಗಾದೆನವ್ವಾ. ಎನ್ನಂತರಂಗದ ಆತುಮನೊಳಗೆ ಅನು(ನಿ?)ಮಿಷ ನಿಜೈಕ್ಯ ಗುಹೇಶ್ವರನ ಕಂಡು !
--------------
ಅಲ್ಲಮಪ್ರಭುದೇವರು
ಎನ್ನ ಮನದ ಮರವೆ ಭಿನ್ನವಾಗದು. ಮರೆದು ಅರಿದೆನೆಂದಡೆ ಅರುಹಿನ ಮರವೆಯ ಮಧ್ಯದಲ್ಲಿ ಎಡೆದೆರಪಿಲ್ಲ. ಕೋಲಿನಲ್ಲಿ ನೀರ ಹೊಯ್ದರೆ ಸೀಳಿ ಹೋಳಾದುದುಂಟೆ ? ಅರಿವುದೊಂದು ಘಟ, ಮರೆವುದೊಂದು ಘಟ, ಒಡಗೂಡುವಠಾವಿನ್ನೆಂತೋ. ಹುತ್ತದ ಬಾಯಿ ಹಲವಾದಡೆ ಸರ್ಪನೈದುವಲ್ಲಿ ಒಡಲೊಂದೆ ತಪ್ಪದು. ತನ್ನ ಚಿತ್ತದ ಭೇದವಲ್ಲದೆ ವಸ್ತುವಿಂಗೆ ಭೇದವುಂಟೆ [ಗುಹೇಶ್ವರ]
--------------
ಅಲ್ಲಮಪ್ರಭುದೇವರು
ಎಳ್ಳಿಂಗೆ ಪರಿಮಳವ ಕಟ್ಟಿದಲ್ಲದೆ, ಎಣ್ಣೆಗೆ ಪರಿಮಳ ವೇಧಿಸದು (ಘಟಿಸದು?) ದೇಹದಲ್ಲಿ ಇಷ್ಟಲಿಂಗ ಸ್ಥಾಪಿಸಿದಲ್ಲದೆ ಪ್ರಾಣಲಿಂಗ ಸಂಬಂಧವಾಗದು. ಇದು ಕಾರಣ ನಮ್ಮ ಗುಹೇಶ್ವರಲಿಂಗದಲ್ಲಿ ಇಷ್ಟಲಿಂಗ ಸಂಬಂಧಿಯಾದಲ್ಲದೆ, ಪ್ರಾಣಲಿಂಗ ಸಂಬಂಧಿಯಾಗಬಾರದು,_ ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಎಡದ ಕಾಲಲೊದ್ದಡೆ ಬಲದ ಕಾಲ ಹಿಡಿವುದು ಬಲದ ಕಾಲಲೊದ್ದಡೆ ಎಡದ ಕಾಲ ಹಿಡಿವುದು. `ತ್ರಾಹಿ ತ್ರಾಹಿ ತಪ್ಪೆನ್ನದು' ಎಂದು ಗುಹೇಶ್ವರನ ಶರಣರನೊಡಗೊಂಡು ಬಾರಯ್ಯಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಎತ್ತೆತ್ತ ನೋಡಿದಡೆ ಬಸವಣ್ಣನೆಂಬ ಬಳ್ಳಿ, ಆ ಬಳ್ಳಿಯ ಹಿಡಿದೆತ್ತಿದಡೆ ಲಿಂಗವೆಂಬ ಗೊಂಚಲು. ಆ ಲಿಂಗದ ಗೊಂಚಲ ಹಿಡಿದೆತ್ತಿದಡೆ, ಭಕ್ತಿರಸಮಯವಾಯಿತ್ತಯ್ಯಾ. ಇದಾರಯ್ಯಾ ಅಮಳೋಕ್ಯವ ಮಾಡಬಲ್ಲವರು ? ಇದಾರಯ್ಯಾ ಹೊರಗೆ ಪ್ರಜ್ವಲಿಸಿ ತೋರಬಲ್ಲವರು ? ಬಸವಗುರು[ವೆ] ಎನ್ನ ಕರಸ್ಥಲದ ಲಿಂಗದ ಆದಿಯನರುಹಿ ತೋರಿದ ಕಾರಣ, ಗುಹೇಶ್ವರಲಿಂಗದ ನಿಲವ ನಿನ್ನಿಂದಲರಿದೆ, ಈ ಲೋಕಾದಿಲೋಕಂಗಳೆಲ್ಲವು ಎನ್ನ ಮುಖದಲ್ಲಿ ಕಿಂಚಿತ್ತು.
--------------
ಅಲ್ಲಮಪ್ರಭುದೇವರು
ಎಲ್ಲರಂತೆ ನುಡಿದು ಎಲ್ಲರಂತೆ ನಡೆದು ಎಲ್ಲರಂತೆ ಸಂಸಾರವ ಬಳಸುತ್ತಿಪ್ಪರೆಂದು ಎಲ್ಲರಂತೆ ಕಾಣಬಹುದೆ ನಿಜ ದೊರೆಕೊಂಡ ನಿರ್ಮಲಜ್ಞಾನಿಗಳ ? ಅವರ ಮನೋಮಧ್ಯದಲ್ಲಿ ತೊಳಗಿ ಬೆಳಗುವ ಶಿವಜ್ಞಾನಬೀಜವು ಹೊಳ್ಳಪ್ಪುದೆ ? ಉರಿಯದಿದ್ದಡೂ ಕಿಚ್ಚನೊರಲೆ ಕೊಂಬುದೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು