ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ ಹದಿನಾಲ್ಕು ಭುವನದೊಳಗೆಲ್ಲಾ, `ನಾವು ಬಲ್ಲೆವು, ನಾವು ಹಿರಿಯರು, ನಾವು ಘನಮಹಿಮರು' ಎಂಬರೆಲ್ಲಾ ಮತ್ತೆ ಸಾವರೆ, ಇದೇನೊ ಇದೆಂತೊ ? ಗುಹೇಶ್ವರನೊಬ್ಬ ತಪ್ಪಿಸಿ ಮಿಕ್ಕಾದವರೆಲ್ಲ ಪ್ರಳಯಕ್ಕೆ ಒಳಗು !
--------------
ಅಲ್ಲಮಪ್ರಭುದೇವರು
ಉಲಿವ ತರುವಲಿಗಳೆಲ್ಲ ಗಿಳಿವಿಂಡುಗೆಡೆದಿಹರು ಅರಿಯದ ಮೌನಿಯ ಮುಕ್ತಿಯಿದೇನೊ ? ಅರಿದಡೇನು ಅರಿಯದಿದ್ದಡೇನು, ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ ? ಅಂಗದಲ್ಲಿ ಒದಗಿದ ಲಿಂಗವನರಿಯದೆ ಭಂಗಬಟ್ಟರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉದಕದ ಕೈಕಾಲ ಮುರಿದು, ಅಗ್ನಿಯ ಕಿವಿಮೂಗನರಿದು, ವಾಯುವ ತಲೆಯ ಕೊಯ್ದು, ಆಕಾಶವ ಶೂಲದಲಿಕ್ಕಿದ ಬಲ್ಲಿದ ತಳವಾರನೀತನು ! ಅರಸು ಪ್ರಧಾನ ಮಂತ್ರಿ ಮೂವರ ಮುಂದುಗೆಡಿಸಿದ ಬಲ್ಲಿದ ತಳವಾರನೀತನು ! ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು ಬಿಯ್ಯಗವ ಹೂಡಿ ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಉದಕಕ್ಕೆ ನೆಲೆಯುಂಟೆ ? ವಾಯುವಿಂಗೆ ಶಿರ ಉಂಟೆ ? ಶಬ್ದಕ್ಕೆ ಕಡೆಯುಂಟೆ ? ಗುರುವಿನ ಗುರು ಜಂಗಮಕ್ಕೆ ಬೇರೆ ಗುರು ಉಂಟೆ ? ಈ ಶಬ್ದವ ಕೇಳಿ ನಾನು ಬೆರಗಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉದಮದದ ಯೌವನವನೊಳಕೊಂಡ ಸತಿ, ನೀನು ಇತ್ತಲೇಕೆ ಬಂದೆಯವ್ವಾ ಸತಿ ಎಂದಡೆ ಮುನಿವರು ನಮ್ಮ ಶರಣರು. ನಿನ್ನ ಪತಿಯ ಕುರುಹ ಹೇಳಿದಡೆ ಬಂದು ಕುಳ್ಳಿರು, ಅಲ್ಲದಡೆ ತೊಲಗು ತಾಯೆ. ನಮ್ಮ ಗುಹೇಶ್ವರನ ಶರಣರಲ್ಲಿ ಸಂಗಸುಖಸನ್ನಹಿತವ ಬಯಸುವಡೆ ನಿನ್ನ ಪತಿ ಯಾರೆಂಬುದ ಹೇಳಾ ಎಲೆ ಅವ್ವಾ ?
--------------
ಅಲ್ಲಮಪ್ರಭುದೇವರು
ಉಪಪಾತಕ ಮಹಾಪಾತಕಂಗಳ ಮಾಡಿದ ಕರ್ಮಂಗಳು ಕೋಟ್ಯನುಕೋಟಿ, ಒಬ್ಬ ಶಿವಶರಣನ ಅಂಗಳವ ಕಂಡಲ್ಲಿ ಅಳಿದು ಹೋಹುದು ನೋಡಯ್ಯಾ. ಅದೇನು ಕಾರಣವೆಂದಡೆ: ಆ ಶಿವಶರಣನ ಅಂತರಂಗದಲ್ಲಿ ಶಿವನಿಪ್ಪನು. ಶಿವನಿದ್ದಲ್ಲಿ ಕೈಲಾಸವಿಪ್ಪುದು ಕೈಲಾಸವಿದ್ದಲ್ಲಿ ಸಮಸ್ತ ರುದ್ರಗಣಂಗಳಿಪ್ಪರು. ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳಿಪ್ಪವು. ಇಂತಪ್ಪ ಶರಣಬಸವಣ್ಣನ ಅಂಗಳವ ಕಂಡೆನಾಗಿ ಗುಹೇಶ್ವರಲಿಂಗದ ಕಂಗಳಿಗೆ ತೃಪ್ತಿಯಾಯಿತ್ತು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಉಪಮೆಗುಪಮಾನ ಮನುದೇವತಾದಿಗಳೆಲ್ಲಾ ಜಪತಪ ಮಹಾ ದಿವ್ಯ ಧ್ಯಾನ ಮಂತ್ರಗಳಿಂದ ಪರಿಮಿತ ಸೇವನಿರತರಾಗಿ ನಿಮ್ಮ ಪದನುತಿಯಿಂ ಕೃತಾರ್ಥರಾಗಿ ತೃಪ್ತಿಪಟ್ಟಿಪ್ಪರಲ್ಲದೆ, ನಿಚ್ಚಯದ ಮಹಿಮೆಯ, ಪರಾಪರಂ ಪರಮಗಮ್ಯಭಾವಾತೀತ ವಿಪುಳ ಜ್ಯೋತಿರ್ಲಿಂಗ ವಿಶ್ವತೋಮುಖ ಮುಸಿಗಿರ್ದ ಘನವಾವುದು ? ತಿಳಿಯದೆ ಹೋದರಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಲುಹಿನ ವೃಕ್ಷದ ನೆಳಲಡಿಯಲಿರ್ದು, ಗಲಭೆಯನೊಲ್ಲೆನೆಂಬುದೆಂತಯ್ಯಾ? ಪಟ್ಟದರಾಣಿಯ ಮುಖವ ಮುದ್ರಿಸಿ, ಮೆಟ್ಟಿ ನಡೆವ ಸತಿಯ ಶಿರವ, ಮೆಟ್ಟಿ ನಿಲುವ ಪರಿಯೆಂತಯ್ಯಾ? ಆದಿಯ ಹೆಂಡತಿಯನುಲ್ಲಂಘಿಸಿದ ಕಾರಣ, ಮೇದಿನಿಯ ಮೇಲೆ ನಿಲಬಾರದು. ಸಾಧಕರೆಲ್ಲರು ಮರುಳಾದುದ ಕಂಡು ನಾಚಿ ನಗುತ್ತಿರ್ದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಂಡಡೇನೊ ? ಉಣದೆ ಇರ್ದಡೇನೊ? ಸೋಂಕಿತವೇನೊ ? ಅಸೋಂಕಿತವೇನೊ? ಹುಟ್ಟೂದಿಲ್ಲಾಗಿ ಹೊಂದೂದಿಲ್ಲ ಸತ್ತು ಬದುಕಿ ನಿಶ್ಚಿಂತವಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉದಕದೊಳಗೆ ಕಿಚ್ಚು ಹುಟ್ಟಿ ಸುಡುತಿರ್ದುದ ಕಂಡೆ, ಗಗನದ ಮೇಲೆ ಮಾಮರನ ಕಂಡೆ, ಪಕ್ಕವಿಲ್ಲದ ಹಕ್ಕಿ ಬಯಲ ನುಂಗಿತ್ತ [ಕಂಡೆ] ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯನು, ಉಪಚಾರದ ಲಿಂಗ ಉಪಚಾರದ ಜಂಗಮವು, ಉಪಚಾರದ ಪ್ರಸಾದವ ಕೊಂಡು, ಗುರುವಿಂಗೆ ಭವದ ಲೆಂಕನಾಗೆ, ಅಂಧನ ಕೈಯ ಅಂಧಕ ಹಿಡಿದಂತೆ_ ಇಬ್ಬರೂ ಹೊಲಬುಗೆಟ್ಟರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉಪಾಧಿಕ ಮನವು ! ಉಪಾಧಿಕರಹಿತನ ಮನ ನಿಂದಲ್ಲಿ ನಿವಾತವಾಗಿತ್ತು. ಆನಂದದ ಭಾವವು ! ಬಿಂದು ತಾನುಳಿದು ನಿಂದಲ್ಲಿ ನಿವಾತವಾಯಿತ್ತು. ಲಿಂಗೋದಯ ಪ್ರಜ್ವಲಿಸುತ್ತಿದೆ, ಗುಹೇಶ್ವರಲಿಂಗವು ತಾನೆಯಾಗಿ !
--------------
ಅಲ್ಲಮಪ್ರಭುದೇವರು