ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಲ್ಲವೆಂದು ಸಂದೇಹಿಸಿದವಂಗೆ ಉಂಟೆಂದು ತೋರಿದನಲ್ಲದೆ, ಶ್ರೀಗುರು ಖೇಚರತ್ವವ ಬಿಟ್ಟು ಭೂಚರನಾಗಬಹುದೆ ? ಮಹಾಘನಲಿಂಗವನು ಅರಿದು ನಂಬಿದ ಬಳಿಕ ಮುಚ್ಚುಮರೆಯುಂಟೆ ಗುಹೇಶ್ವರ ?
--------------
ಅಲ್ಲಮಪ್ರಭುದೇವರು
ಇಹವ ತೋರಿದನು ಶ್ರೀಗುರು; ಪರವ ತೋರಿದನು ಶ್ರೀಗುರು. ಎನ್ನ ತೋರಿದನು ಶ್ರೀಗುರು; ತನ್ನ ತೋರಿದನು ಶ್ರೀಗುರು. ಗುರು ತೋರಿದಡೆ ಕಂಡೆನು ಸಕಲ ನಿಷ್ಕಲವೆಲ್ಲವ. ಗುರು ತೋರಿದಡೆ ಕಂಡೆನು ಗುರುಲಿಂಗಜಂಗಮ ಒಂದೆ ಎಂದು. ತೋರಿ ಕರಸ್ಥಲದಲ್ಲಿದ್ದನು ಗುಹೇಶ್ವರಲಿಂಗನು.
--------------
ಅಲ್ಲಮಪ್ರಭುದೇವರು
ಇದರ ಒಲೆಯಡಿಯನರುಹಿದಡೆ, ಹೊಗೆ ಗೋಳಕನಾಥನ ಕೊರಳ ಸುತ್ತಿತ್ತು, ಮಹೀತಳನ ಜಡೆ ಹತ್ತಿತ್ತು, ಮರೀಚನ ಶಿರ ಬೆಂದಿತ್ತು, ರುದ್ರನ ಹಾವುಗೆ ಉರಿಯಿತ್ತು, ದೇವಗಣಂಗಳೆಲ್ಲ ವಿತಾಪವಾದರು. ಮಡದಿಯರು ಮುಡಿಯ ಹಿಡಿದುಕೊಂಡು ಹೋದರು. ಭಸ್ಮಧಾರಿಯಾದೆ ಕಾಣಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಇದ್ದಿತ್ತೆಂದರಿಯೆ, ಇಲ್ಲವೆಂದರಿಯೆ, ಏನೆಂದರಿಯೆ. ಪಂಚಭೂತಪ್ರಾಣಿಯ ಏಕಭೂತಪ್ರಾಣಿ ಬಂದು ಸೋಂಕಿದಡೆ ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ_ಇದೇನೆಂದರಿಯೆ. ಗುಹೇಶ್ವರಲಿಂಗವು ತನ್ನಂತೆ ಮಾಡಿದನಾಗಿ_ಇದೇನೆಂದರಿಯೆ
--------------
ಅಲ್ಲಮಪ್ರಭುದೇವರು
ಇಷ್ಟತನುವಿನ ಘಟ್ಟಿಯ ಕರಗಿಸಿ, ಕಟ್ಟುಗ್ರದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳೆಂಬವ ಸುಟ್ಟುರುಹಿ, ತನುವಿನ ಅವಗುಣವ ಕೆಡಿಸಿ, ಮನದ ಸಂಚಲವ ನಿಲಿಸಿ ಸಕಲ ಕರಣಂಗಳ ಅರಿವಿಂಗೆ ಆಹುತಿಯನಿಕ್ಕಿ ಸುಜ್ಞಾನಪ್ರಭೆಯನುಟ್ಟು ಸುಜ್ಞಾನಪ್ರಭೆಯ ಹೊದೆದು, ಸುಜ್ಞಾನಪ್ರಭೆಯ ಸುತ್ತಿ ಸುಜ್ಞಾನಪ್ರಭೆಯ ಹಾಸಿ, ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ ಮಡಿವಾಳನ ಮಡಿಯ ಪ್ರಸಾದವ ನಾನು ಹೊದ್ದ ಕಾರಣ ನಿರ್ಮಳನಾದೆನು, ನಿಜೈಕ್ಯನಾದೆನು, ನಿಶ್ಚಿಂತನಾದೆನು. ಇದು ಕಾರಣ_ ಗುಹೇಶ್ವರಲಿಂಗದಲ್ಲಿ ತೆರಹಿಲ್ಲದಿಪ್ಪ ಮಡಿವಾಳನ ಪ್ರಸಾದದಿಂದ ನಿಮ್ಮ ಘನವನರಿದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇಬ್ಬರ ಮಧ್ಯದಲೊಂದು ಮಗುವು ಹುಟ್ಟಿತ್ತು. ಆ ಮಗುವಿನ ಹುಟ್ಟ ತಾಯಿಯೂ ಅರಿಯಳು, ತಂದೆಯೂ ಅರಿಯನು ! ಹೆಸರಿಟ್ಟು ಕರೆದು ಜೋಗುಳವಾಡುತ್ತೈದಾರೆ. ಕೈ ಬಾಯಿಗೆ ಬಂದ ಶಿಶು ಮೈದೋರದಿದ್ದಡೆ, ಕಂಡು ನಾನು ನಾಚಿದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ, ಚಕೋರನ ಧ್ಯಾನವೆಂತಿಪ್ಪದು,_ಅಂತಾಗಿದ್ದೆ ನಾನು. ಮಾತೆ ವಿಯೋಗವಾದ ಶಿಶುವಿನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬಂಧನದಲ್ಲಿ ಸಿಕ್ಕಿದ ಫಣಿಯ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ರಾತ್ರಿಯೊಳು ಮುಗಿದ ಪದ್ಮದ ಭ್ರಮರನ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಸ್ವಪ್ನದಲ್ಲಿ ದುಷ್ಟ ಕೇಸರಿಯ ಧ್ಯಾನದ ಮದಹಸ್ತಿ ಎಂತಿಪ್ಪುದು_ಅಂತಾಗಿದ್ದೆ ನಾನು. ನೋಟವಗಲಿದ ನೇಹದ ಧ್ಯಾನವೆಂತಿಪ್ಪುದು_ಅಂತಾಗಿದ್ದೆ ನಾನು. ಬ್ರಹ್ಮಪಾಶ ವಿಷ್ಣುಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು. ಗುಹೇಶ್ವರಲಿಂಗವೆ ಸಂಗನಬಸವಣ್ಣನೊಳಗೆ ಲೀಯವಹ ಭರದಲ್ಲಿ ಏನೆಂದರಿಯದಿದ್ದೆ ನಾನು.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗಕ್ಕೆ ಅಂಗದಲ್ಲಿಯೆ ಮಜ್ಜನ, ಲಲಾಟದಲ್ಲಿಯೆ ಗಂಧಾಕ್ಷತೆ. ತುರುಬಿದ ಪುಷ್ಪಚಯವೆ ಲಿಂಗಕ್ಕೆ ಪೂಜೆ. ಜಿಹ್ವೆ ಸೋಂಕಿದ ಷಡುರಸಾನ್ನವೆ ಲಿಂಗಕ್ಕೆ ನೈವೇದ್ಯ. ತಾಂಬೂಲ ಸವಿಹವೆ ಲಿಂಗಕ್ಕೆ ವೀಳೆಯ. ಅಂಗಚ್ಛಾದನವಸ್ತ್ರವೆ ಲಿಂಗಕ್ಕೆ ವಸ್ತ್ರ, ಕಂಡು ಕೇಳಿದ ಗೀತ ವಾದ್ಯ ನೃತ್ಯಾದಿಗಳೆ ಲಿಂಗದ ಕೇಳಿಕೆ ಇಂತೀ ಅಂಗದಲ್ಲಿ ಇಷ್ಟಲಿಂಗಪೂಜೆಯ ಮಾಡುವ ಲಿಂಗಸಂಪನ್ನರ ತೋರಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇಹಲೋಕ ಪರಲೋಕ ತಾನಿರ್ದಲ್ಲಿ, ಗಗನ ಮೇರುಮಂದಿರ ತಾನಿರ್ದಲ್ಲಿ, ಸಕಲಭುವನ ತಾನಿರ್ದಲ್ಲಿ, ಸತ್ಯ ನಿತ್ಯ ನಿರಂಜನ ಶಿವತತ್ವ ತಾನಿರ್ದಲ್ಲಿ, ಅಂತರ ಮಹದಂತರ ತಾನಿರ್ದಲ್ಲಿ, ಸ್ವತಂತ್ರ ಗುಹೇಶ್ವರಲಿಂಗ ತಾನಿರ್ದಲ್ಲಿ.
--------------
ಅಲ್ಲಮಪ್ರಭುದೇವರು
ಇಬ್ಬರ ಮಧ್ಯದಲ್ಲಿ ಒಂದು ವಸ್ತುವುಂಟು, ಕಂಡಿರೆ ಗಣಂಗಳಿರಾ ? ಕಂಡಿರೆ ಅಣ್ಣಗಳಿರಾ ? ಗುರುವಿನ ಗುರು ಇದ ಬೇಗಲ(ನ?)ರಿಯೆ ಗುಹೇಶ್ವರಲಿಂಗದಲ್ಲಿ_ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇರುಳಿನ ಮುಖದೊಳಗೊಂದು ನವರತ್ನದಖಂಡಿತ ಹಾರವಡಗಿತ್ತು. ಹಗಲಿನ ಮುಖದೊಳಗೊಂದು ನವಚಿತ್ರಪತ್ರದ ವೃಕ್ಷವಡಗಿತ್ತು. ರತ್ನದ ಹಾರವ ವೃಕ್ಷಕ್ಕಾಹಾರವನಿಕ್ಕಿದಡೆ, ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗಕ್ಕೆ ಸುಖವಾಯಿತ್ತು.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗವೆ ಅಂಗಲಿಂಗ ಪ್ರಾಣಲಿಂಗವೆ ಮನಲಿಂಗವಾಯಿತ್ತು ನೋಡಾ. ಅಂಗಲಿಂಗವಾಗಿ ನಡೆನುಡಿಗತಿಯನರಿಯದು, ಪ್ರಾಣಲಿಂಗವಾಗಿ ನವನಾಳದ ಸುಳುಹನರಿಯದು. ಮನ ಲಿಂಗವಾಗಿ ನೆನಹುಗೆಟ್ಟಿತ್ತು, ಅನುಭಾವ ಲಿಂಗವಾಗಿ ವಿಚಾರವರತಿತ್ತು. ಭಾವಲಿಂಗವಾಗಿ ನಿರ್ಭಾವವಳವಟ್ಟಿತ್ತು. ಸರ್ವಕ್ರೀಗಳೆಲ್ಲ ಲಿಂಗವಾಗಿ ಮಾರ್ಗಕ್ರೀಯ ಹೊಲಬನರಿದು ಅರಿವು ಲಿಂಗವಾಗಿ ಮರಹುಗೆಟ್ಟಿತ್ತು. ಅಂತರಂಗ ಲಿಂಗವಾಗಿ ಬಹಿರಂಗವೆಂದರಿಯದು ಬಹಿರಂಗ ಲಿಂಗವಾಗಿ ಅಂತರಂಗದ ಶುದ್ಧಿಯನರಿಯದು. ಇಂತು ಸರ್ವಾಂಗಲಿಂಗವಾಗಿ ಸರ್ವೇಂದ್ರಿಯ ಗಮನ ಕೆಟ್ಟಿತ್ತು. ಮಹಾಘನವಿಂಬುಗೊಂಡಿತ್ತಾಗಿ ನಿಷ್ಪತಿ ಕರಿಗೊಂಡಿತ್ತು. ಗುಹೇಶ್ವರಲಿಂಗದಲ್ಲಿ ಪ್ರಾಣಲಿಂಗ ಸಂಬಂಧ ಸ್ವಯವಾಯಿತ್ತು ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಇಷ್ಟಲಿಂಗವನು ಪ್ರಾಣಲಿಂಗವೆಂಬ ಕಷ್ಟವೆಲ್ಲಿಯದೊ? ಇಷ್ಟಲಿಂಗ ಹೋದಡೆ ಪ್ರಾಣಲಿಂಗ ಹೋಗದು ನೋಡಾ. ಇಷ್ಟಲಿಂಗ ಪ್ರಾಣಲಿಂಗದ ಭೇದವನು ಗುಹೇಶ್ವರಾ, ನಿಮ್ಮ ಶರಣ ಬಲ್ಲ.
--------------
ಅಲ್ಲಮಪ್ರಭುದೇವರು
ಇಬ್ಬರ ಹಿಡಿವಡೆ ಒಬ್ಬನ ಕೊಲಬೇಕು, ಒಬ್ಬನ ಕೊಂದರೆ ಎಲ್ಲರೂ ಸಾವರು. ಎಲ್ಲರೂ ಸತ್ತು ಹಿಡಿದವರಿಬ್ಬರು ಉಳಿದಡೆ, ಆ ಇಬ್ಬರ ನಂಬಿ ಬಯಲಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇರುಳಿನ ಸಂಗವ ಹಗಲೆಂದರಿಯರು ಹಗಲಿನ ಸಂಗವನಿರುಳೆಂದರಿಯರು. ವಾಯಕ್ಕೆ ನಡೆವರು, ವಾಯಕ್ಕೆ ನುಡಿವರು, ವಾಯುಪ್ರಾಣಿಗಳು. ಗುಹೇಶ್ವರನೆಂಬ ಅರುಹಿನ ಕುರುಹು ಇನ್ನಾರಿಗೆಯೂ ಅಳವಡದು.
--------------
ಅಲ್ಲಮಪ್ರಭುದೇವರು