ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು. ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ? ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ. ಗುಹೇಶ್ವರಲಿಂಗ ಸಾಕ್ಷಿಯಾಗಿ, ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ.
--------------
ಅಲ್ಲಮಪ್ರಭುದೇವರು
ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ, ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು. ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ ಮತ್ತೊಂದಾದನು(ನ?)ವ. ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು, ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು. ಗಣಿತ ಗುಣಿತವನಳಿದುಳಿದು, ಅಗಣಿತನಚಳಿತನಾದ ಅಪ್ಪಣ್ಣನು. ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ, ಅಮಳೋಕ್ಯವಾದ ನಿಜದ ನಿಲವ ; ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು.
--------------
ಅಲ್ಲಮಪ್ರಭುದೇವರು
ಅಂಗಸಂಸಾರ ಲಿಂಗದಲ್ಲಿತ್ತು ಅರತು ಕಾಯವೆಂಬ ಸಂಬಂಧ ಸಂಶಯವಳಿದು ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು. ಪ್ರಾಣ ಭಾವವೆಂಬ ಶಂಕೆ ತಲೆದೋರದೆ ನಿಶ್ಶಂಕನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು. ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು. ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು. ಆ ಬಸವಣ್ಣನೊಳಗೆ ನಾನು ಅಳಿದುಳಿದೆನು. ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು. ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರು(ರೆ?) ಮಾಡಬಾರದು ನೋಡಾ. ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು'ವೆಂಬ ಎರಡು ಭಾವಭ್ರಾಂತಿಯಳಿದು, ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ
--------------
ಅಲ್ಲಮಪ್ರಭುದೇವರು
ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ ? ಪಿಂಡ ರೂಪಿಸುವಲ್ಲಿ ಆ ಜೀವ ಬಂದು ಪರಿಯೆಂತುಟೊ ? ಇದನರಿದಡೆ ಗುರುವೆಂಬೆ, ಲಿಂಗವೆಂಬೆ, ಜಂಗಮವೆಂಬೆ, ಅಲ್ಲದಿದ್ದಡೆ ನರನೆಂಬೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು, ಅಯ್ಯಾ ಇದು ಸೋಜಿಗ !_ ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು ಒಯ್ಯನೆ ಕರೆದಡೆ ಮುಂದೆ ನಿಂತಿತ್ತು ಮುಯ್ಯಾಂತಡೆ ಬಯಲಾಯಿತ್ತು_ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು. ಲಿಂಗದ ಹವಣನಿವರೆತ್ತ ಬಲ್ಲರು ? ಕಾಯಜೀವಿಗಳು ಕಳವಳಧಾರಿಗಳು, ದೇವರ ಸುದ್ದಿಯನಿವರೆತ್ತ ಬಲ್ಲರು ? ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು. ಗುಹೇಶ್ವರನ ನಿಲವನಿವರೆತ್ತ ಬಲ್ಲರು.
--------------
ಅಲ್ಲಮಪ್ರಭುದೇವರು
ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ? ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವ ಪರಿತಾಪವೇನು ಹೇಳಾ ? ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ ಅರಿವಿನೊಳಗಣ ಮರಹಿದೇನು ಹೇಳಾ ? ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ. ನೀನಾರೆಂದು ಹೇಳಾ ಎಲೆ ಅವ್ವಾ ?
--------------
ಅಲ್ಲಮಪ್ರಭುದೇವರು
ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ ಭಂಗಿತರ ಮುಖವ ನೋಡಲಾಗದು. ಅದೆಂತೆಂದಡೆ; ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ ಹಾದರಗಿತ್ತಿಯಂತೆ ಅವಂದಿರ ಭಕ್ತಿ. ಅಂತಪ್ಪ ಪಂಚಮಹಾಪಾತಕರ ಮುಖದತ್ತ ತೋರದಿರಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಂಗ ಉಳ್ಳನ್ನಬರ ಲಿಂಗಪೂಜೆಯ ಬೇಕು. ಲಿಂಗವೆಂಬ ಮೂರ್ತಿ ಉಳ್ಳನ್ನಬರ ಸಂದಿಲ್ಲದೆ ಅರ್ಪಿಸಬೇಕು. ಅಂಗವಳಿದ ಮತ್ತೆ ಲಿಂಗವೆಂಬ ಭಾವ ಹಿಂಗದಿರಬೇಕು. ಅದು ಗುಹೇಶ್ವರಲಿಂಗದ ಇರವು ಚಂದಯ್ಯಾ.
--------------
ಅಲ್ಲಮಪ್ರಭುದೇವರು
ಅಂಗ ಅಂಗನೆಯ ರೂಪಲ್ಲದೆ, ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು. ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ ! ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ
--------------
ಅಲ್ಲಮಪ್ರಭುದೇವರು
ಅಂಡಜವಳಯವಿಲ್ಲದ ಮುನ್ನ, ದ್ವೀಪಂಗಳೇಳೂ ಇಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ತ್ರಿದೇವತೆಗಳಿಲ್ಲದ ಮುನ್ನ, ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !
--------------
ಅಲ್ಲಮಪ್ರಭುದೇವರು
ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ, ಪ್ರಾಣದ ಮೇಲೆ ಜ್ಞಾನ ನಿರ್ಧಾರವಾಯಿತ್ತು ನೋಡಾ. ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು, ಗುಹೇಶ್ವರಾ ನಿಮ್ಮ ನೆನೆದೆನಾಗಿ.
--------------
ಅಲ್ಲಮಪ್ರಭುದೇವರು
ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ ಪೂಜ್ಯವಲ್ಲ. ಬಹಿರಂಗದಲ್ಲಿ ಅಡಗಿತ್ತೆಂದಡೆ ಕ್ರಿಯಾಬದ್ಧವಲ್ಲ. ಅರಿವಿನೊಳಗೆ ಅಡಗಿತ್ತೆಂದಡೆ ಮತಿಗೆ ಹವಣಲ್ಲ. ಭಾವ ನಿರ್ಭಾವ ನಿಶ್ಶೂನ್ಯವನು ಕಾಂಬ ಪರಿ ಎಂತು ಹೇಳಾ ? ಕಂಡು ತನ್ನೊಳಗಿಂಬಿಟ್ಟುಕೊಂಬ ಪರಿ ಎಂತು ಹೇಳಾ ? ಗುಹೇಶ್ವರನೆಂಬ ಲಿಂಗವನರಿದು ಕೂಡಿ ಸುಖಿಯಹ ಪರಿ ಎಂತು ಹೇಳಾ ಸಂಗನಬಸವಣ್ಣ ?
--------------
ಅಲ್ಲಮಪ್ರಭುದೇವರು
ಅಂದಂದಿಗೆ ಬಂದ ಧನವನಂದಂದಿಂಗೆ ವೆಚ್ಚವ ಮಾಡಿ ಹಿಂದು ಮುಂದ ಸಮವ ಮಾಡಿ, ಮಧ್ಯ ನಿರಾಳ ಊಧ್ರ್ವ ತಾನಾಗಿದ್ದು ಇಲ್ಲದಂತಿಪ್ಪಡೆ ಇದೇ ತೆರನು ಕಂಡಯ್ಯಾ. ಆರ ವಶವಲ್ಲದ ಪುರುಷನೊಬ್ಬನ ಸಾಧಿಸಿಕೊಳಬಲ್ಲಡೆ ಆ ಹಿರಿಯರಿಬ್ಬರೂ ತನ್ನ ವಶರಪ್ಪರು. ಆ ಹಿರಿಯರಿಬ್ಬರೂ ತನ್ನವರಾದಡೆ ಸರ್ವವೂ ಸಾಧ್ಯವಪ್ಪುದು. ಸರ್ವವೂ ಸಾಧ್ಯವಾದಡೆ ತಾನಿಲ್ಲ. ಬಯಲಹುದಕ್ಕೆ ಇದೇ ಚಿಹ್ನ ನೋಡಾ_ ಹೀಗೆಂದು ನಂಬುವುದು ನಂಬದಿದ್ದಡೆ ಚೆನ್ನಬಸವಣ್ಣನ ಹೊಣೆಯ ಕೊಡುವೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ ಧರೆಯ ತಾಗಿದ ಪಾದವ ಧಿಗಿಲನೆ ಎತ್ತಲು ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ? ಕನಲಿ ಎದ್ದು ಅಂಕೆಗೆ (ಆಚೆಗೆ ?) ನಿಂದು ನೋಡಲು ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ ಅಡಗವೆ ಬಸವಣ್ಣಾ ? ಅದನೆಂತು ಕೊಡಬಹುದು, ಅದನೆಂತು ಕೊಳಬಹುದು ? ನಮ್ಮ ಗುಹೇಶ್ವರಲಿಂಗಕ್ಕೆ ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಗದೊಳಗಣ ಸವಿ, ಸಂಗದೊಳಗಣ ರುಚಿ, ಅಂಗನೆಯ ನಖದೊಳಗೆ ಬಂದು ಮೂರ್ತಿಯಾಯಿತ್ತು ! ಚಂದ್ರಕಾಂತದ ಗಿರಿಗೆ ಬಿಂದುತೃಪ್ತಿಯ ಸಂಚ ! ಅದರಂದದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತು. ಚಂದ್ರಮನ ಷೋಡಶಕಳೆಯ ಇಂದ್ರನ ವಾಹನ ನುಂಗಿ, ಗುಹೇಶ್ವರನೆಂಬ ನಿಲವ ನಖದ ಮುಖ ನುಂಗಿತ್ತು
--------------
ಅಲ್ಲಮಪ್ರಭುದೇವರು
ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ. ಪ್ರಾಣದ ಕೊನೆಯ ಮೊನೆಯ ಮೇಲೆ, ಭಾವಸೂತಕದ ಹೊದಕೆಯ ಕಳೆದು, ನಿರ್ಭಾವ ನಿಸ್ಸೂತಕಿಯಾಗಿಪ್ಪ ನಿಜಲಿಂಗ ಸಮಾಧಿಯ ಘನವನು ಆರಿಗೆಯೂ ಕಾಣಬಾರದು ನೋಡಾ. ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ನಿಲವ ಕಂಡು ನಾನು ಬದುಕಿದೆನು ಕಾಣಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅಂಗವಿಕಾರಿ ಲಿಂಗವಿಕಾರಿಯನರಿಯ. ಲಿಂಗವಿಕಾರಿ ಅಂಗವಿಕಾರಿಯನರಿಯ. ಅಂಗವೇ ದಿಂಡುನಾಳ ಲಿಂಗವೇ..... ನವ ಸುರಾಳ ಕಳಚಿದಡೆ ತೋರಲಿಲ್ಲ, ತೋರಿದಡೆ ಬೆಚ್ಚಲಿಲ್ಲ. ಸುರುಳಿನೊಳಗೆ ಸುತ್ತಿ ಹೊರಗಿರಿಸಿದೆನು ಕಾಣಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗದ ಧರೆಯ ಮೇಲೆ ಮೂರು ಬಾವಿಯುಂಟು: ಮೊದಲ ಬಾವಿಯ ಮುಟ್ಟಿದಾತ ಅಂಗಸಂಗಿಯಾದನು. ನಡುವಡ ಬಾವಿಯ ಮುಟ್ಟಿದಾತ ಉತ್ಪತ್ಯ_ಸ್ಥಿತಿ_ಲಯಕ್ಕೊಳಗಾದನು. ಮೇಲಣ ಬಾವಿಯ ಮುಟ್ಟಿದಾತ ಜೀವನ್ಮುಕ್ತನಾದನು._ ಇವ ತಟ್ಟದೆ ಮುಟ್ಟದೆ ಹೋದರು ನೋಡಾ, ಪರಬ್ರಹ್ಮವ ದಾಂಟಿ, ಗುಹೇಶ್ವರಲಿಂಗದಲ್ಲಿ ಹಂಗು ಹರಿದ ಶರಣರು
--------------
ಅಲ್ಲಮಪ್ರಭುದೇವರು
ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು ಭಾವತುಂಬಿ ಪರಿಣಾಮವರತು, ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗವಿಲ್ಲದ ಅನುಭಾವಕ್ಕೆ ನೇಮವಿಲ್ಲದ ನೆನಹು ತಾಗು ತಡೆಯಿಲ್ಲದ ಸುಮ್ಮಾನದ ಸುಖ. ಗುಹೇಶ್ವರ ನಿರಾಳ ಕಂಡಾ !
--------------
ಅಲ್ಲಮಪ್ರಭುದೇವರು
ಅಂಗದೊಳಗೆ ಲಿಂಗ ಲಿಂಗದೊಳಗೆ ಅಂಗ ! ಅಂಗವಿಲ್ಲದೆ ಬೇರೆ ಸಂಗವಿಲ್ಲ ಕಾಣಿರೆ. ಅದೆಂತೆಂದಡೆ; ``ಲಿಂಗಸ್ಥಲಂ ಶಿವಃ ಸಾಕ್ಷಾತ್ ಜೀವಾತ್ಮಾಂಗಸ್ಥಲಂ ಭವೇತ್ ಲಿಂಗಾಂಗಸ್ಥಲಯೋರೈಕ್ಯಂ ಶಿವಜೀವೈಕ್ಯಮೇವಹಿ '' ಎಂದುದಾಗಿ. ಲಿಂಗವಿದ್ದೆಡೆಯ ನೀವು ತಿಳಿದು ನೋಡಿ ಕೂಡಿಕೊಳ್ಳಿ. ಕಾಯವಳಿಯದ ಮುನ್ನವೆ ಕೂಡಿಕೊಳ್ಳಬಲ್ಲಡೆ, ಗುಹೇಶ್ವರನು ಬೇರಿಲ್ಲ ಕಾಣಿರೆ.
--------------
ಅಲ್ಲಮಪ್ರಭುದೇವರು
ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ, ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ? ಹೊರಗೆ ಕುರುಹಾಗಿ ತೋರುತ್ತಿದೆ. ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗಳ[z] ಬಾಗಿಲ ನೆಲೆಯಲ್ಲಿ ನಿಂದಿದ್ದ ಲಿಂಗವನರಿದುದಿಲ್ಲವೆ ? ಸುಸಂಗಿ ನಿರಂಗಿ ನಿಷ್ಕಲಬ್ರಹ್ಮ ಮರುಳಶಂಕರಲಿಂಗ ! ಪ್ರಸಾದದ ಕುಳಿಯಲ್ಲಿ ನಿಜನಿವಾಸದ ಅಂಗವ ನೋಡು, ಗುಹೇಶ್ವರಲಿಂಗದಲ್ಲಿ ಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅಂಗದ ಮೇಲೆ ಲಿಂಗ, ಲಿಂಗದ ಮೇಲೆ ಅಂಗವಿದೇನೊ ? ಮನದ ಮೇಲೆ ಅರಿವು, ಅರಿವಿನ ಮೇಲೆ ಕುರುಹು ಇದೇನೊ ? ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು. `ನೀ' `ನಾ' ಎಂಬುದೆ?_ತೆರಹಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...