ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿವನರಿದು ಮರಹ ಮರೆದು, ಸಂಕಲ್ಪ ಸಂಶಯವಳಿದ ನಿಲವನು, ಅರಿದ ಪರಿ ಎಂತು ಹೇಳಾ ? ಅರಿದೆನೆಂದಡೆ ಜ್ಞಾನಕ್ಕೆ ದೂರ, ಮರೆದೆನೆಂದಡೆ ಮನಕ್ಕೆ ದೂರ. ನಿರ್ಭಾವದ ಹೊಲಿಗೆಯಲ್ಲಿ ಭಾವಸಂಕಲ್ಪ ಬಿಡದು. ನಮ್ಮ ಗುಹೇಶ್ವರಲಿಂಗದಲ್ಲಿ ಮನಮಗ್ನಯೋಗ, ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯಾ ?
--------------
ಅಲ್ಲಮಪ್ರಭುದೇವರು
ಅರಿದರಿದು ಅರಿವು ಬಂಜೆಯಾಯಿತ್ತು. ಮರೆ ಮರೆದು ಮರಹು ಬಂಜೆಯಾಯಿತ್ತು. ಗುಹೇಶ್ವರನೆಂಬ ಶಬ್ದ ಸಿನೆ ಬಂಜೆಯಾಯಿತ್ತು.
--------------
ಅಲ್ಲಮಪ್ರಭುದೇವರು
ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ? ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ? ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ, ಎನ್ನ ಕರಣಾದಿ ಗುಣಂಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ, ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ, ಸಮಸ್ತ ಫಲಾದಿಗಳಲ್ಲಿ, ಸಮಸ್ತಪುಷ್ಪಪತ್ರಾದಿಗಳಲ್ಲಿ ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ ಸಮಸ್ತಪರಮಚಿದ್ರಸವಡಗಿರ್ಪಂತೆ, ಷೋಡಶಮದಗಜದಂತರಂಗದ ಮಧ್ಯದಲ್ಲಿ ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ, ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ, ಶಿಶುಗಳು `ಕಂಡ ಕನಸು' ತಂದೆ ತಾಯಿಗಳಿಗೆ ಕಾಣಿಸಿದಂತೆ, ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ, ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ, ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ, ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ ಭ್ರಮರನಾದ, ವೀಣಾನಾದ, ಘಂಟಾನಾದ, ಭೇರಿನಾದ, ಮೇಘನಾದ, ಪ್ರಣಮನಾದ, ದಿವ್ಯನಾದ, ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ, ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು, ಜಗದ ಜಡಜೀವರಿಗೆ ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು, ಚೆನ್ನಬಸವಣ್ಣ
--------------
ಅಲ್ಲಮಪ್ರಭುದೇವರು
ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ. ಅಂದಂದಿನ ಸಂದೇಹ ಹರಿಯಿತ್ತು. ನೀ ಭಕ್ತನಾಗಿ ನಾ ಜಂಗಮವಾಗಿ, ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು.
--------------
ಅಲ್ಲಮಪ್ರಭುದೇವರು
ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು, ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು, ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ. ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ? ಅಂಗದೊಳಗಣ ಲಿಂಗವನು ಹಿಂಗಿದವರಿಗೆ ಭವಮಾಲೆಯುಂಟು, ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ ಗಂಡಗಂಡರನರಸಿ ತೊಳಲುತ್ತೈದಾರೆ. ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ: ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು. ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು. ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು.
--------------
ಅಲ್ಲಮಪ್ರಭುದೇವರು
ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ ಶಿವಜ್ಞಾನಿಗಳು ಮೆಚ್ಚುವರೆ ? ಶಿವ ಶಕ್ತಿಗಳೆರಡೂ ನೀನೇ ಎಂದಡೆ ಮಹಾನುಭಾವಿಗಳು ಪರಿಣಾಮಿಸುವರೆ ? ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ, ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
--------------
ಅಲ್ಲಮಪ್ರಭುದೇವರು
ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ? ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ? ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ? ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ? ಕರಸ್ಥಲದೊಳಗೆ ಲಿಂಗವಿರ್ದ ಬಳಿಕ, ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು. ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ, ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅನಾದಿಯಲೊಬ್ಬ ಶರಣ; ಆಹ್ವಾನ ವಿಸರ್ಜನವಿಲ್ಲದ ಪರತತ್ವವ ಸ್ಥಾಪಿಸಿ ಪ್ರತಿಷ್ಠೆಯ ಮಾಡುವಲ್ಲಿ ಷಡುವರ್ಣಾತ್ಮಕ ಮೃಗಿ ಹುಟ್ಟಿದಳು ನೋಡಾ ! ಆ ಮೃಗಿಯೊಳು ಪಂಚಾಂಗ ಪಂಚತಂಡದವರೆಲ್ಲ ಹುಟ್ಟಿ ವರ್ತಿಸಿ ಲಯವಾಗಿ, ಮತ್ತೆ ಪಲ್ಲವಿಸುತಿರ್ದರು ನೋಡಾ ! ಆ ಪರತತ್ವದ ಲೀಲೆಯನು ಆ ಶರಣನೆ ಬಲ್ಲ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಯ್ಯ ಸದಾಚಾರಸದ್ಭಕ್ತಿಯಿಲ್ಲದ ಗುರುವು ನರಜೀವಿ. ಆತನಿಂದ ಹುಟ್ಟಿದ ಲಿಂಗಾಂಗವೆರಡು ಜಡಜೀವಿ. ಅವರಿಬ್ಬರಲ್ಲಿ ಹೊಕ್ಕು ಕೊಟ್ಟು ಕೊಂಬುವ ಜಂಗಮ ಭೂತಪ್ರಾಣಿ. ಈ ನರಜೀವಿ, ಜಡಜೀವಿ, ಭೂತಪ್ರಾಣಿಗಳಿಗೆ ಕೊಟ್ಟುಕೊಂಬ ಭಕ್ತಂಗೆ ಏಳನೆಯ ಪಾತಕ ಬಿಡದು ಕಾಣಾ. ಗುಹೇಶ್ವರಲಿಂಗದ ಸದಾಚಾರಸದ್ಭಕ್ತಿಯಿಂದಲ್ಲದೆ ಮುಕ್ತಿಯಿಲ್ಲ ನೋಡಾ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಯ್ಯ ! ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯು ಪ್ರಾಣಗುಣಂಗಳ ನಷ್ಟವ ಮಾಡಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾನ್ಯ, ಧಾರಣ, ಸಮಾಧಿಯೆಂಬ ಹಠಯೋಗ ಜಡಶೈವಮಾರ್ಗವನುಳಿದು, ನಿಭ್ರ್ರಾಂತ, ನಿಶ್ಚಿಂತ, ನಿರ್ಗುಣಾನಂದಲೀಲೆಯನರಿದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ_ಪ್ರಸಾದಿಸ್ಥಲವ ಅಂಗವ ಮಾಡಿಕೊಂಡು ಸರ್ವಾಂಗಲೋಚನಮೂರ್ತಿಯಾಗಿ ಪ್ರಭಾವಿಸುವ ನಿಜಪ್ರಾಣಲಿಂಗಿಯಂತರಂಗದಲ್ಲಿ ಚಿನ್ಮಯ ಸ್ವರೂಪಲೀಲೆಯಿಂ ಸಮಸ್ತ ತತ್ತ್ವಾನುಭಾವವನೊಳಗು ಮಾಡಿಕೊಂಡು ಹದಿನಾಲ್ಕು ಸ್ಥಲಂಗಳ ಗರ್ಭೀಕರಿಸಿಕೊಂಡು ಐದು ಸಾವಿರದ ನೂರ ಎಂಬತ್ತುನಾಲ್ಕು ಮಂತ್ರಮಾಲೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಬಂಗಾರ ಲೋಹವನೊಳಕೊಂಡಂತೆ, ತನ್ನ ಸೋಂಕಿದವರೆಲ್ಲ ತನ್ನಂತೆಯೆಂಬ ಗುರುವಚನೋಕ್ತಿಪ್ರಮಾಣದಿಂದೆ ಶಬ್ದದೊಳಗೆ ನಿಃಶಬ್ದವಡಗಿರ್ಪ ಹಾಂಗೆ ಏಕಸ್ವರೂಪಿನಿಂದೆ ಯಜನಸ್ವರೂಪಮೂರ್ತಿ ಜಂಗಮಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಡಜ ಒಡೆಯದರಿಂದ ಮುನ್ನ, ದ್ವೀಪಾದ್ವೀಪವಿಲ್ಲದ ಮುನ್ನ, ಅನಲಪವನರಿಲ್ಲದ ಮುನ್ನ, ರವಿಚಂದ್ರರಿಲ್ಲದ ಮುನ್ನ, ಗುಹೇಶ್ವರಲಿಂಗವಲ್ಲಿಂದ ಮುನ್ನ.
--------------
ಅಲ್ಲಮಪ್ರಭುದೇವರು
ಅಟ್ಟಿ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ, ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ? ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ ! ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ ! ಭಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ ! ತನ್ನಿಂದ ತಾನಾದಳು ! ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ ಮಹಾದೇವಿಯಕ್ಕಗಳ ನಿಲವಿಂಗೆ ನಮೋ ನಮೋ ಎನುತಿರ್ದೆನು ಕಾಣಾ ಚನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಗದ ಕಳೆಯಲೊಂದು ಲಿಂಗವ ಕಂಡೆ. ಲಿಂಗದ ಕಳೆಯಲೊಂದು ಅಂಗವ ಕಂಡೆ. ಅಂಗ ಲಿಂಗ[ದ]ಸಂದಣಿಯನರಸಿ ಕಂಡೆ, ನೋಡಿರೆ. ಇಲ್ಲಿಯೆ ಇದಾನೆ ಶಿವನು ! ಬಲ್ಲಡೆ ಇರಿಸಿಕೊಳ್ಳಿರೆ; ಕಾಯವಳಿಯದ ಮುನ್ನ ನೋಡಬಲ್ಲಡೆ. ಗುಹೇಶ್ವರಲಿಂಗಕ್ಕೆ ಬೇರೆಠಾವುಂಟೆ ಹೇಳಿರೆ ?
--------------
ಅಲ್ಲಮಪ್ರಭುದೇವರು
ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ, ಮಧ್ಯಮಜ್ಞಾನಿ ವೇಷಧಾರಿ, ಅತೀತಜ್ಞಾನಿ ಆರೂಢ. ಆರೂಢನಾದರೂ ಅರಿಯಬಾರದಯ್ಯಾ. ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ. ಈ ಚತುರ್ವಿಧದೊಳಗೆ ಆವಂಗವೂ ಇಲ್ಲ, ಗುಹೇಶ್ವರಾ_ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಅಂಬುಧಿಯೊಳಗಾದ ನದಿಗಳು ಮರಳುವುವೆ ? ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ ? ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ ? ಲಿಂಗವನರಿದು ಲಿಂಗೈಕ್ಯವಾದ ಶರಣ ಮರಳಿ ಹುಟ್ಟುವನೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಪ್ಪುವಿನ ಬಾವಿಗೆ ತುಪ್ಪದ ಘಟ; ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ, ಪರುಷ ಮುಟ್ಟದ ಹೊನ್ನು! ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ! ಅರುವಿನ ಆಪ್ಯಾಯನ ಮರಹಿನ ಸುಖವೊ! ಇದು ಕಾರಣ ಮೂರು ಲೋಕವಳಿಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯ ತನುತ್ರಯಂಗಳು, ಜೀವತ್ರಯಂಗಳು, ಆತ್ಮತ್ರಯಂಗಳು, ಅವಸ್ಥಾತ್ರಯಂಗಳು, ಗುಣತ್ರಯಂಗಳು, ಮನತ್ರಯಂಗಳು, ತಾಪತ್ರಯಂಗಳು, ಕಾಲತ್ರಯಂಗಳು, ಕರ್ಮತ್ರಯಂಗಳು, ಭಾವತ್ರಯಂಗಳು, ಮಲತ್ರಯಂಗಳು, ಕರಣತ್ರಯಂಗಳು ಮೊದಲಾದ ಪ್ರವೃತ್ತಿಮಾರ್ಗವನುಳಿದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ್ವರಸ್ಥಲದಲ್ಲಿ ನಿಂದು_ ಅಷ್ಟಾವಧಾನ ಅವಿರಳಾನಂದಮೂರ್ತಿಯಾಗಿ ಪ್ರಕಾಶಿಸುವ ನಿಜಪ್ರಸಾದಿಯಂತರಂಗದಲ್ಲಿ ಚಿತ್ಘನ ಸ್ವರೂಪವಲೀಲೆಯಿಂ ಅಂತರಂಗದಲ್ಲಿ ಅಂಗತತ್ತ್ವ, ಲಿಂಗತತ್ತ್ವ, ಶಿವತತ್ತ್ವ, ಪರತತ್ತ್ವ ಮೊದಲಾದ ಸಮಸ್ತ ತತ್ತ್ವಂಗಳನೊಳಕೊಂಡು, ಹದಿನಾರು ಸ್ಥಲಂಗಳ ಗರ್ಭೀಕರಿಸಿಕೊಂಡು, ನಾಲ್ಕು ಸಾವಿರದ ಮುನ್ನೂರಿಪ್ಪತ್ತು ಮಂತ್ರಮಾಲಿಕೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಪಾದೋದಕ ಪ್ರಸಾದವ ಕೊಂಡ ಅಂಗ_ಮನ_ಪ್ರಾಣ_ಭಾವ_ಇಂದ್ರಿಯಂಗಳೆಲ್ಲ ಪಾದೋದಕ ಪ್ರಸಾದಮಯವೆಂಬ ಹರಗುರುವಾಕ್ಯದಿಂ ಚಿನ್ನಬಣ್ಣ ಪ್ರಕಾಶದ ಹಾಂಗೆ ಭಿನ್ನ ಭಾವವಿಲ್ಲದೆ ಏಕರೂಪಿನಿಂದ ನಿರೀಕ್ಷಣಾಮೂರ್ತಿ ಶಿವಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಯ್ಯ ಸತ್ಕ್ರಿಯಾಸಮ್ಯಜ್ಞಾನವುಂಟಾದಡೆ ಸದಾಚಾರಸದ್ಭಕ್ತಿ ಉಂಟೆಂಬೆ. ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ [ಸತ್ಯ] ನಡೆನುಡಿ ಒಂದಾದಡೆ ಆದಿ_ಅನಾದಿಯಿಂದತ್ತತ್ತ ಮೀರಿ ತೋರುವ, ಪರಿಪೂರ್ಣ ಪರಮಾನಂದ ಪರಬ್ರಹ್ಮ ಗುರುಲಿಂಗಜಂಗಮವೆಂಬೆ ನೋಡಾ. ಇಂತು_ಸದಾಚಾರ, ಸದ್ಭಕ್ತಿ, ಸತ್ಕ್ರಿಯಾ, ಸಮ್ಯಜ್ಞಾನ, ಸತ್ಯನಡೆ ನುಡಿಯಿಲ್ಲವಾದಡೆ ಗುಹೇಶ್ವರಲಿಂಗಕ್ಕೆ ದೂರ ಕಾಣಾ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅತ್ತಲಿಂದ ಒಂದು ಪಶುವು ಬಂದು, ಇತ್ತಲಿಂದ ಒಂದು ಪಶುವು ಬಂದು, ಒಂದರ ಮೋರೆಯನೊಂದು ಮೂಸಿ ನೋಡಿದಂತೆ, ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ, ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ. ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ, ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ? ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ? ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ? ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ. ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ. ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅತಿರಥ ಸಮರಥರೆನಿಪ ಹಿರಿಯರು, ಮತಿಗೆಟ್ಟು ಮರುಳಾದರಲ್ಲಾ ! ದೇವಸತ್ತ ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ. ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು. ಇದ ಕಂಡು ಬೆರಗಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು

ಇನ್ನಷ್ಟು ...