ಅಥವಾ
(247) (109) (40) (3) (37) (5) (0) (0) (43) (7) (8) (33) (6) (0) ಅಂ (63) ಅಃ (63) (196) (4) (38) (10) (0) (8) (0) (42) (0) (0) (0) (0) (1) (0) (0) (87) (0) (16) (13) (104) (70) (0) (63) (53) (93) (9) (14) (0) (29) (30) (30) (2) (78) (81) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು, ಇಹ ಪರವು ತಾನೆಂದರಿದ ಕಾರಣ, ಸೋಹಂ ಭಾವ ಸ್ಥಿರವಾಯಿತ್ತು. ಸಹಜದುದಯದ ನಿಲವಿಂಗೆ, ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ ಗುಹೇಶ್ವರಾ ನಿಮ್ಮ ಶರಣನು ಉಪಮಾತೀತನು.
--------------
ಅಲ್ಲಮಪ್ರಭುದೇವರು
ಅಷ್ಟದಳಕಮಲದ ಮೇಲಿಪ್ಪ ನಿಶ್ಶೂನ್ಯನ ಮರ್ಮವನರಿಯದೆ, ಪ್ರಾಣಲಿಂಗವೆಂದೆಂಬರು, ಸಂತೆಯ ಸುದ್ದಿಯ ವಂಚಕರು. ಅಂಗದ ಆಪ್ಯಾಯನಕ್ಕೆ ಲಿಂಗವನರಸುವ, ಭಂಗಿತರನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ, ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ. ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ, ಶಬ್ದಸಂದಣಿಗೆ ಹಂಗಿಲ್ಲ ನೋಡಾ. ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ ! ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
--------------
ಅಲ್ಲಮಪ್ರಭುದೇವರು
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀನೆತ್ತ ಬಲ್ಲೆ? ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು, ಮದ ಮತ್ಸರ ಬೇಡ. ಹೊದಕುಳಿಗೊಳಬೇಡ. ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
--------------
ಅಲ್ಲಮಪ್ರಭುದೇವರು
ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು, ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು, ಈ ಎರಡರ ಸಂಗವೆ ತಾನೆಂದರಿದನು ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
--------------
ಅಲ್ಲಮಪ್ರಭುದೇವರು
ಅಯ್ಯ, ಆಚಾರವಿಲ್ಲದ ಜಂಗಮದಲ್ಲಿ ಪಾದೋದಕಪ್ರಸಾದವ ಕೊಳಲಾಗದು. ಆಚಾರವಿಲ್ಲದ ಜಂಗಮ[ವ] ದೇವರೆಂದು ಭಾವಿಸಲಾಗದು. `ಆಚಾರಶೂನ್ಯಂ ಚ ಭೂತಪ್ರಾಣೀ' ಎಂದುದಾಗಿ ಆಚಾರವಿಲ್ಲದ ಅನಾಮಿಕರ ಕೈಯಲ್ಲಿ ಪಾದೋದಕ ಪ್ರಸಾದ ಉಪದೇಶವ ಕೊಂಡವಂಗೆ ಅಘನಾಸ್ತಿಯಾಗದು, ಮುಂದೆ ಅಘೋರನರಕ ತಪ್ಪದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗ ಮೂವತ್ತಾರರ ಮೇಲೆ ಲಿಂಗ. ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ, ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ ಸುಸಂಗ ಪ್ರಸಾದವ ಕೊಳಬಲ್ಲವಂಗೆ ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !
--------------
ಅಲ್ಲಮಪ್ರಭುದೇವರು
ಅಂಡವ ಮೇಲು ಮಾಡಿ ಪಿಂಡಿಯಾಗಿ, ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು ! ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು, ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ. ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ, ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರಿದಡೆ ಸುಖವಿಲ್ಲ; ಮರದಡೆ ದುಃಖವಿಲ್ಲ ! ಸತ್ತಡೆ ಚೇಗೆಯಿಲ್ಲ; ಬದುಕಿದಡೆ ಆಗಿಲ್ಲವೆಂಬ ! ನಿರ್ಣಯದಲ್ಲಿ ನಿಶ್ಚಯಿಸಿ ನಿಲ್ಲದೆ ! ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ ! ಬರಿಯ ಮರವೆಯ ಪ್ರೌಡಿsಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ ಬೆಳಕೂ ಅದೆ, ಕತ್ತಲೆಯೂ ಅದೆ ! ಇದೇನು ಚೋದ್ಯವೊ? ಒಂದಕ್ಕೊಂದಂಜದು ! ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು ಬೆರಗಾದೆನು ಕಾಣಾ _ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಕ್ಷರದಲಭ್ಯಾಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ? ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ, ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಅರಿದು ಮರೆದು ಬೆರಗು ಹತ್ತಿತ್ತು. ಏನಂದರಿಯದೆ ಅದೆಂತೆಂದರಿಯದೆ ಗುಹೇಶ್ವರಾ ಗುಹೇಶ್ವರಾ ಎನುತ ಅಲ್ಲಿಯೆ ನಿಂದಿತ್ತು
--------------
ಅಲ್ಲಮಪ್ರಭುದೇವರು
ಅಹುದಹುದು, ಭಕ್ತಿಭಾವದ ಭಜನೆ ಎಂತಿರ್ದುದಂತೆ ಅಂತರಂಗದಲ್ಲಿ ಅರಿವು. ಆ ಅಂತರಂಗದ ಅರಿವಿಂಗೆ ಆಚಾರವೆ ಕಾಯ. ಆಚಾರವೆಂಬ ಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯನ ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ. ನಿನ್ನ ಅರಿವಿಂಗೆ ಆಚಾರವಾಗಿ, ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು ನಿನ್ನ ಸುಖಸಮಾಧಿಯ ತೋರು, ಬಾರಾ ಸಿದ್ಧರಾಮಯ್ಯ
--------------
ಅಲ್ಲಮಪ್ರಭುದೇವರು
ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ ಶರಣನ ಪರಿಯನರಸಲುಂಟೆ ? ಗತಿಯ ಹೇಳಲುಂಟೆ ? ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು !
--------------
ಅಲ್ಲಮಪ್ರಭುದೇವರು
ಅಂಬರದೊಳಗೊಂದು ಅಡವಿ ಹುಟ್ಟಿತ್ತು. ಆ ಅಡವಿಯೊಳಗೊಬ್ಬ ವ್ಯಾಧನೈದಾನೆ. ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು. ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು ! ಅರಿವು ಬರಿದುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅರಿವಿನ ಹೃದಯ ಕಂದೆರೆಯಬೇಕೆಂದು ಗುರುವೆಂದು ಕಲ್ಪಿಸಿಕೊಂಬರಲ್ಲದೆ, ಗುರುವೆಂದೆನಲುಂಟೆ ಶಿಷ್ಯಂಗೆ ? ಶಿಷ್ಯನೆಂದೆನಲುಂಟೆ ಗುರುವಿಂಗೆ ? ಗಮನಾಗಮನ ನಾಸ್ತಿಯಾದ ಲಿಂಗಕ್ಕೆ ಅಂಗವೆಲ್ಲಿಯದು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ ! ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತು. ರವಿಯ ರಥದಚ್ಚು ಮುರಿಯಿತ್ತು ! ಶಶಿ ಅಂಶದ ನಿಲವನು ರಾಯ (ರಾಹು ?) ಗೆದ್ದುದ ಕಂಡು ಹಿರಿಯರು ಹೊಲಬುಗೆಟ್ಟರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು, ಬರುಮಾತಿನ ಉಯ್ಯಲೆಯನೇರಿ, ಒದೆದು ಒರಲಿ ಕೆಡೆವ ದರಿದ್ರರು ! ಅರಿವು ತೋರದೆ ಇರಬೇಕು_ಕಾಯನಿರ್ಣಯ ನಿಃಪತಿಯೆಂಬಾತನು. ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು, ಅರಿವು ತೋರದೆ ಎರಡೆಂಬ ಭಿನ್ನವೇಷವ ತೊಟ್ಟು ಡಂಬಕವ ನುಡಿದೆಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ.
--------------
ಅಲ್ಲಮಪ್ರಭುದೇವರು
ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ. ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ. ಏಕಾಂತ ಸ್ಥಾನವಾಗಿ, ಅಂತರಂಗದ ಭಾವ ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ. ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ, ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು, ಮಹಾದುಃಖಕ್ಕೊಳಗಾದರು, ನರರು. ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ. ಅಜ 21 ಭವವೆತ್ತಿ ಶಿರ ಕಳಕೊಂಡ. ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ. ದಿವಸೇಂದ್ರ ಕಿರಣ ನಷ್ಟವಾದ. ಮುನೀಂದ್ರರ್ನಷ್ಟವಾಗಿ ಮಡಿದರು. ಮನು ಮಾಂಧಾತರು ಮಂದಮತಿಗಳಾದರು. ದೇವ ದಾನವ ಮಾನವರು ಮಡಿದರು. ಇದ ನೋಡಿ ನಮ್ಮ ಶರಣರು, ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು, ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ ಹಿಡಿಯಿತ್ತೊಂದು. ಅಟ್ಟಾಟಿಕೆಯಲಿ ಅರಿದಾವುದು ! ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು. ಮೂರ್ತಿಯಾದುದೆ ಅಮೂರ್ತಿಯಾದತ್ತು, ಅಮೂರ್ತಿಯಾದುದೆ ಮೂರ್ತಿಯಾದತ್ತು. ಇದನೆಂತು ತೆಗೆಯಬಹುದು ? ಇದನೆಂತು ಕೊಳಬಹುದು ! ಅಗಮ್ಯ, ಅಗೋಚರ. ಕಾಯವು ಲಿಂಗದೊಳಡಗಿ, ಪ್ರಾಣವು ಲಿಂಗದೊಳಗಿದ್ದು, ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು, ಕಾರುಣ್ಯವ ಮಾಡು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಜಬೇಡ ಅಳುಕಬೇಡ; ಹೋದವರಾರು ಇದ್ದವರಾರು ? ಎಲೆ ಮರುಳೆ ! ಒಂದು ಮುಖದಲ್ಲಿಪ್ಪ ದೇವನೊಬ್ಬನೆ. ಹಲವು ಮುಖದಲ್ಲಿಪ್ಪ ದೇವನೊಬ್ಬನೆ. ನಾಮ ಹಲವಲ್ಲದೆ ಕಾರ್ಯ ಒಂದೇ ನೋಡಾ ! ಮನದೊಳಗಣ ಘನವು ತನುವನಗಲುವುದೆ ? ಗುಹೇಶ್ವರಲಿಂಗದಲ್ಲಿ ವಿಯೋಗಕ್ಕೆ ತೆರಹಿಲ್ಲ ಕೇಳಾ, ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಯ್ಯ ! ನಿರವಯಶೂನ್ಯಲಿಂಗದೇಹಿ ನಿಜಕರುಣಪ್ರಸಾದಾತ್ಮನು ಆ ನಿರವಯ ಶೂನ್ಯಲಿಂಗದಾಚಾರದಲ್ಲಿಯೆ ನಡೆವನಯ್ಯ ! ಲೋಕವರ್ತಕ ಲೋಕಚಾತುರ್ಯಕ್ಕೆ, ಲೋಕವ್ಯವಹರಣೆಯನನುಕರಿಸಿ ನಡೆವನಲ್ಲ ! ನಿಜಶಿವಜ್ಞಾನ_ನಿಜಶಿವಕ್ರಿಯಾಪ್ರಕಾಶವ ಸಂಬಂಧಿಸಿಕೊಂಡು ಸರ್ವಾಂಗವು ನಿರವಯಶೂನ್ಯಲಿಂಗರೂಪವಾಗಿ ಲಿಂಗಕ್ಕೆ ಲಿಂಗವೆ ಭಾಜನ ಪದಾರ್ಥ-ಪ್ರಸಾದ_ಪರಿಣಾಮವಾಗಿರಬಲ್ಲಡೆ ಅದು ಲಿಂಗೈಕ್ಯ ನೋಡ ! ನೆಲನಿಲ್ಲದ ನಿರ್ಮಲ ಚಿದ್ಭೂಮಿಯಲ್ಲಿ ಸ್ವಯಜ್ಞಾನಶಿಶು ಉದಯವಾಯಿತ್ತು ನೋಡ ! ಆ ಸ್ವಯಜ್ಞಾನ ಶಿಶು ಊಧ್ರ್ವಲೋಕಕ್ಕೆ ಹೋಗಿ ವ್ಯೋಮಾಮೃತಪ್ರಸಾದವನುಂಡು ನಾಮರೂಪು_ಕ್ರಿಯೆಗಳನಳಿದು, ನಿರವಯಶೂನ್ಯಲೀಲೆಯ ಧರಿಸಿ ಸೋಮನಾಳದಲ್ಲಿ ಶುಭ್ರ ಕಳೆ; ಪಿಂಗಳನಾಳದಲ್ಲಿ ಸುವರ್ಣಕಳೆ; ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಪ್ರಕಾಶದಂತೆ ಏಳುನೂರ ಎಪ್ಪತ್ತುನಾಳದಲ್ಲಿ ಹೊಳೆವುತ್ತಿರ್ಪ ಪರಮಗುರು ಸಂಗನಬಸವಣ್ಣನ ಬೆಳಗಿನ ನಿಜಪ್ರಸಾದದೊಳಗೆ ಗುಹೇಶ್ವರ ಪ್ರಭುವೆಂಬ ರೂಪತಾಳಿ, ಪಕ್ವವಾದ ಮೇಲೆ ಮತ್ತಲ್ಲಿಯೆ ನಿರವಯಶೂನ್ಯವಪ್ಪುದು ತಪ್ಪದು ನೋಡ ! ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಯ್ಯ ! ಪೂರ್ವವನಳಿದು ಪುನರ್ಜಾತನಾದ ಸತ್ಯಸದ್ಧರ್ಮಸ್ವರೂಪ ತಚ್ಛಿಷ್ಯನು ಶ್ರೀಗುರುಲಿಂಗಜಂಗಮದ ವೇಧಾ_ಮಂತ್ರ_ಕ್ರಿಯಾದೀಕ್ಷೆಯ ಪಡೆದು, ಅಷ್ಟಾವರಣದ ನೆಲೆಕಲೆಗಳ ತಿಳಿದು, ಪಂಚಾಚಾರ ಮೊದಲಾಗಿ ಸರ್ವಾಚಾರ ಸಂಪತ್ತಿನ ವಿವರ ತಿಳಿದು, ನೂರೊಂದು ಸ್ಥಲದ ಆಚರಣೆ_ಇನ್ನೂರಹದಿನಾರು ಸ್ಥಲದ ಸಂಬಂಧವನರಿದು, ಷಟ್ಸ್ಥಲ ಮಾರ್ಗವಿಡಿದು, ಶ್ರೀಗುರುಲಿಂಗ ಜಂಗಮಕ್ಕೆ ತನು_ಮನ_ಧನವಂಚನೆಯಿಲ್ಲದೆ ನಿರ್ವಂಚಕನಾಗಿ, ಭಕ್ತಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಕಾಯಕ[ವ ಮಾಡಿ] ಮಹೇಶ್ವರಸ್ಥಲದಲ್ಲಿ ನಿಂದಡೆ ಸತ್ಯಶುದ್ಧ ಭಿಕ್ಷವ ಮಾಡಿ, (ಬೇಡಿ?) ಬಂದ ಪದಾರ್ಥವ ಸಮರ್ಪಿಸಿ, ಪರದ್ರವ್ಯದಲ್ಲಿ ರಿಣಭಾರನಾಗದೆ, ಸತ್ಯಶುದ್ಧ ನಡೆನುಡಿಯಿಂದಾಚರಿಸಿ, ಶ್ರದ್ಧಾದಿ ಸಮರಸಾಂತ್ಯಮಾದ ಸದ್ಭಕ್ತಿಯ ತಿಳಿದು ಅನಾದಿಕುಳ ಸನ್ಮತವಾದ ದಶವಿಧ ಪಾದೋದಕ, ಏಕಾದಶ ಪ್ರಸಾದದ ವಿಚಾರ ಮೊದಲಾದ ಅರ್ಪಿತಾವಧಾನವ, ಪರಿಪೂರ್ಣಮಯ ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ, ಅಚ್ಚ ಪ್ರಸಾದಿಸ್ಥಲದ ಶರಣತ್ವವ ಪಡೆದು, ಸತ್ಯಸದಾಚಾರವುಳ್ಳ ಸದ್ಗುರುಲಿಂಗಜಂಗಮದ ನಿಜನಿಷ*ತ್ವಮಂ ತಿಳಿದು, ದಂತಧಾವನಕಡ್ಡಿ ಮೊದಲು Põ್ಞಪ ಕಟಿಸೂತ್ರ ಕಡೆಯಾದ ಸಮಸ್ತ ಪದಾರ್ಥವ ಗುರು_ಲಿಂಗ_ಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುದ ಹಾರೈಸಿ, ಕೊಂಡು ಇಂತು ಅಂತರಂಗ ಪರಿಪೂರ್ಣವಾಗಿ ನಿಂದ ಸಮಯದಲ್ಲಿ, ಸ್ವಯ_ಚರ_ಪರಲೀಲೆಯ ಧರಿಸಿ ಜಂಗಮಾಕೃತಿಯಿಂದ ಬಂದ ಗುರುಲಿಂಗಜಂಗಮದ ವೃತ್ತಸ್ಥಾನವಾದ ಮೊಳಪಾದ ಪರಿಯಂತರವು ತೊಳದು ಬಹುಗುಣಿಯಲ್ಲಿ ಮಡಗಿಕೊಂಡು, ಹೊಸಮನೆ, ಹೊಸಧನ, ಧಾನ್ಯ ಭಾಂಡಭಾಜನ, ಹೊಸ ಅರುವೆ_ಆಭರಣ, ಜನನಿಜಠರದಿಂದಾದ ಅಂಗಾಂಗ, ಕಾಯಿಪಲ್ಯ, ಉಚಿತಕ್ರಿಯೆ ಮೊದಲಾಗಿ ಅರಿದಾಚರಿಸುವದು ನೋಡ ! ಆ ಮೇಲೆ ಗುರುಲಿಂಗಜಂಗಮದ ಪ್ರಕ್ಷಾಲನೆ ಮಾಡಿದ ಪಾದವನ್ನು ಮೂರು ವೇಳೆ ಅಡಿಪಾದವ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳ್ಯಕ್ಕೆ ದಶಾಂಗುಲಿಗಳ ಒಂದು ವೇಳೆ ಸ್ಪರ್ಶನವ ಮಾಡಿದ ಉದಕವನ್ನು ಭಾಂಡಭಾಜನದಲ್ಲಿ ತುಂಬಿ ಸ್ವಪಾಕವ ಮಾಡುವುದು. ಆ ಸಮಯದಲ್ಲಿ ಬಿಂದುಮಾತ್ರ [ವಾದರೂ] ಇಷ್ಟಲಿಂಗ ಬಾಹ್ಯವಾದ ಭವಿಜನ್ಮಾತ್ಮರಿಗೆ ಹಾಕಲಾಗದು. ಇನ್ನು ಜಂಗಮದ ಅಂಗುಷ* ಎರಡು_ಅಂಗುಲಿ ಎಂಟರಲ್ಲಿ ತನ್ನ ತರ್ಜನಿ ಬೆರಳಿಂದ ಮೊದಲಂತೆ ಪಾದೋದಕವ ಮಾಡಿ, ಬಟ್ಟಲಲ್ಲಿ ಮಡಗಿ, ಪೂರ್ವದಲ್ಲಿ ಭಾಂಡದೊಳಗೆ ತುಂಬಿದ ಗುರುಪಾದೋದಕದಿಂದ ವಿಭೂತಿ ಘಟ್ಟಿಯ ಅಭಿಷೇಕವ ಮಾಡಿ, ಈ ಬಟ್ಟಲಲ್ಲಿ ಮಡಗಿದ ಲಿಂಗಪಾದೋದಕದಲ್ಲಿ ಮಿಶ್ರವ ಮಾಡಿ, ಇಪ್ಪತ್ತೊಂದು ಪ್ರಣಮವ ಲಿಖಿಸಿ ಶ್ರೀಗುರುಲಿಂಗಜಂಗಮವು ತಾನು ಮಂತ್ರಸ್ಮರಣೆಯಿಂದ ಸ್ನಾನ_ಧೂಳನ_ಧಾರಣವ ಮಾಡಿ, ಲಿಂಗಾರ್ಚನೆ ಕ್ರಿಯೆಗಳ ಮುಗಿಸಿಕೊಂಡು, ಆ ಮೇಲೆ ತೀರ್ಥವ ಪಡಕೊಂಬುವಂಥ ಲಿಂಗಭಕ್ತನು ಆ ಜಂಗಮಲಿಂಗಮೂರ್ತಿಯ ಸಮ್ಮುಖದಲ್ಲಿ ಗರ್ದುಗೆಯ ರಚಿಸಿಕೊಂಡು, ಅಷ್ಟಾಂಗಯುಕ್ತನಾಗಿ ಶರಣಾರ್ಥಿ ಸ್ವಾಮಿ ! ಜಂಗಮಲಿಂಗಾರ್ಚನೆಗೆ ಅಪ್ಪಣೆಯ ಪಾಲಿಸಬೇಕೆಂದು ಬೆಸಗೊಂಡು, ಆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ ಪರಾತ್ಪರ ಜ್ಞಾನಜಂಗಮ ಲಿಂಗಮೂರ್ತಿಗೆ ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಸಮರ್ಪಿಸಿ, ಆ ಮೇಲೆ, ತನ್ನ ವಾಮಕರದಂಗುಲಿ ಮಧ್ಯದಲ್ಲಿ ಷಡಕ್ಷರಂಗಳ ಲಿಖಿಸಿಕೊಂಡು ಅರ್ಚಿಸಿ, ತನ್ನ ಹೃನ್ಮಂದಿರಾಲಯದಲ್ಲಿ ನೆಲಸಿರುವ ಜ್ಯೋತಿರ್ಮಯ ಇಷ್ಟಮಹಾಲಿಂಗವ ನಿರೀಕ್ಷಿಸಿ ಆ ಪರಶಿವಜಂಗಮಲಿಂಗದೇವನ ಚರಣಾಂಗುಷ*ವ, ತನ್ನ ವಾಮಕರಸ್ಥಲದಲ್ಲಿ ಸುತ್ತು ಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯಗಳ ಮಾಡಿ, ಆಮೇಲೆ ಇಷ್ಟಲಿಂಗಜಪಪ್ರಣಮ ಒಂದು ವೇಳೆ ಪ್ರಾಣಲಿಂಗ ಜಪಪ್ರಣಮ ಒಂದು ವೇಳೆ ಭಾವಲಿಂಗ ಜಪಪ್ರಣಮ ಒಂದು ವೇಳೆ ಪ್ರದಕ್ಷಿಣವ ಮಾಡಿ ಜಂಗಮಸ್ತೋತ್ರದಿಂದ ಶರಣು ಮಾಡಿ ಪೂಜೆಯನಿಳುಹಿ, ಪಾತ್ರೆಯಲ್ಲಿರುವ ಗುರುಪಾದೋದಕದಲ್ಲಿ ಬಿಂದುಯುಕ್ತವಾಗಿ ಮೂಲ ಪ್ರಣಮವ ಲಿಖಿಸಿ ಬಲದಂಗುಷ*ದಲ್ಲಿ ನೀಡುವಾಗ ಷಡಕ್ಷರಿಮಂತ್ರವ ಆರು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಗುರುವೆಂದು ಭಾವಿಸುವುದು. ಎಡದಂಗುಷ*ದ ಮೇಲೆ ನೀಡುವಾಗ ಪಂಚಾಕ್ಷರವ ಐದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ಅನಾದಿಲಿಂಗವೆಂದು ಭಾವಿಸುವುದು. ಎರಡಂಗುಷ*ದ ಮಧ್ಯದಲ್ಲಿ ನೀಡುವಾಗ ಒಂಬತ್ತಕ್ಷರವ ಒಂದು ವೇಳೆ ಸ್ಮರಿಸಿ, ನೀಡುವಾಗ ಅಲ್ಲಿ ತ್ರಿಕೂಟಸಂಗಮ ಅನಾದಿಜಂಗಮವೆಂದು ಭಾವಿಸುವುದು. ಈ ಪ್ರಕಾರದಲ್ಲಿ ನೀಡಿದ ಮೇಲೆ ದ್ರವವನಾರಿಸಿ, ಭಸ್ಮಧಾರಣವ ಮಾಡಿ, ಒಂದೆ ಪುಷ್ಪವ ಧರಿಸಿ, ನಿರಂಜನ ಪೂಜೆಯಿಂದ ಪ್ರದಕ್ಷಣವ ಮಾಡಿ, ನಮಸ್ಕರಿಸಿ, ಆ ತೀರ್ಥದ ಬಟ್ಟಲೆತ್ತಿ ಆ ಜಂಗಮಲಿಂಗಕ್ಕೆ ಶರಣಾರ್ಥಿಯೆಂದು ಅಭಿವಂದಿಸಿ. ಅವರು ಸಲಿಸಿದ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಸ್ವರೂಪ ಜಂಗಮ ತೀರ್ಥದ ಸ್ತೋತ್ರವ ಮಾಡಿ, ಅಷ್ಟಾಂಗ ಹೊಂದಿ ಶರಣುಹೊಕ್ಕು, ನಿಮ್ಮ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ ! ಎಂದು ಬೇಡಿಕೊಂಡು ಬಂದು ಮೊದಲ ಹಾಂಗೆ ಗರ್ದುಗೆಯ ಮೇಲೆ ಮೂರ್ತವ ಮಾಡಿಕೊಂಡು ಆ ಜಂಗಮ ಮೂರ್ತಿಗಳು ಸಲಿಸಿದೋಪಾದಿಯಲ್ಲಿ ತಾನು ಸಲಿಸುವುದು. ಆಮೇಲೆ ಷಟ್ಸ್ಥಲಭಕ್ತ ಮಹೇಶ್ವರರು ಅದೇ ರೀತಿಯಲ್ಲಿ ಸಲಿಸುವುದು. ಉಳಿದ ಷಟ್ಸ್ಥಲಮಾರ್ಗವರಿಯದ ಲಿಂಗಧಾರಕಶಿಶುವಾಗಿಲಿ, ಶಕ್ತಿಯಾಗಲಿ, ದೊಡ್ಡವರಾಗಲಿ ಆ ಗರ್ದುಗೆಯ ತೆಗೆದು ಲಿಂಗಕ್ಕೆ ಅರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು. ಅದೇನು ಕಾರಣವೆಂದಡೆ, ಅವರಿಗೆ ಇಪ್ಪತ್ತೊಂದು ದೀಕ್ಷೆ, ಷಟ್ಸ್ಥಲಮಾರ್ಗ, ಸರ್ವಾಚಾರ ಸಂಪತ್ತಿನಾಚರಣೆ ಮುಂದಿದ್ದರಿಂದ ಅವರು ಬಟ್ಟಲೆತ್ತಲಾಗದು. ಹೀಂಗೆ ಸಮಸ್ತರು ಸಲಿಸಿದ ಮೇಲೆ ಕೊಟ್ಟು_ಕೊಂಡ, ಭಕ್ತ_ಜಂಗಮವು ಇರ್ವರು ಕೂಡಿ ಮುಕ್ತಾಯವ ಮಾಡಿದಲ್ಲಿಗೆ ದಶವಿಧ ಪಾದೋದಕವಾಗುವುದು. ಆ ಮೇಲೆ ಗುರುಪಾದೋದಕದಿಂದ ಪಾಕವ ಮಾಡಿದ ಭಾಂಡಭಾಜನಂಗಳು ತಾಂಬೂಲ ಪದಾರ್ಥ ಮುಂತಾಗಿ ಇರ್ವರು ಕೂಡಿ ಮೌನಮಂತ್ರ ಧ್ಯಾನದಿಂದ ಹಸ್ತಸ್ಪರ್ಶನವ ಮಾಡಿ. ಶುದ್ಧ ಪ್ರಸಾದವೆಂದು ಭಾವಿಸಿ, ಬಹುಸುಯಿದಾನದಿಂದ ಸಮಸ್ತ ಜಂಗಮಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂಥಿಣಿಯ ನೋಡಿ, ನಿರೀಕ್ಷಿಸಿ, ಶರಣಾರ್ಥಿ ! ಸ್ವಾಮಿ ! ಮಹಾಲಿಂಗಾರ್ಪಿತವ ಮಾಡಬೇಕೆಂದು ಅಭಿವಂದಿಸಿ, ಪತಿವ್ರತತ್ವದಿಂದ ಜಂಗಮಕ್ಕೆ ನಿರ್ವಂಚಕನಾಗಿ, ಭಕ್ತ_ಜಂಗಮವೆಂಬ ಉಭಯನಾಮವಳಿದು ಕ್ಷೀರ ಕ್ಷೀರ ಬೆರೆತಂತೆ ನಿರಾಕಾರ_ ನಿಶ್ಯಬ್ಧಲೀಲೆ ಪರಿಯಂತರವು ಶ್ರೀಗುರುಲಿಂಗಜಂಗಮಪಾದೋದಕಪ್ರಸಾದವ ಸಪ್ತವಿಧಭಕ್ತಿಯಿಂದ ಸಾವಧಾನಿಯಾಗಿ ಆಚರಿಸುವಾತನೆ ಜಂಗಮಭಕ್ತನಾದ ಅಚ್ಚಪ್ರಸಾದಿಯೆಂಬೆ ಕಾಣಾ ! ಗುಹೇಶ್ವರಲಿಂಗದಲ್ಲಿ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ. ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ. ಮನಬಂದ ಪರಿಯಲ್ಲಿ ನುಡಿವಿರಿ, ಗುಹೇಶ್ವರಲಿಂಗ ನಿಮಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು

ಇನ್ನಷ್ಟು ...