ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶೀಲವಂತರು ಶೀಲವಂತರು ಎಂದು ಶೀಲದಲ್ಲಿ ಆಚರಿಸುವ ಅಣ್ಣಗ[ಳೇ] ನಿಮ್ಮ ಶೀಲವಾವುದು ಹೇಳಿರೋ, ಅರಿಯದಿದ್ದರೆ ಕೇಳಿರೋ: ಶಿರಸ್ಸಿನಲ್ಲಿ ಶಿವನಿಪ್ಪ, ಕಟಿಯಲ್ಲಿ ವಿಷ್ಣುವಿಪ್ಪ, ಆಧಾರದಲ್ಲಿ ಬ್ರಹ್ಮನಿಪ್ಪ, ಲಲಾಟದಲ್ಲಿ ವಿಭೂತಿರುದ್ರಾಕ್ಷಿ, ಜಿಹ್ವೆಯಲ್ಲಿ ಪಂಚಾಕ್ಷರಿಯು. ಇಂತಪ್ಪ ಅಷ್ಟಾವರಣದಲ್ಲಿ ಸವೆಯದೆ, ಸಂಸಾರವೆಂಬ ಶರದ್ಥಿಯಲ್ಲಿ ಮುಳುಗೇಳುವರು ಶೀಲವಂತರಲ್ಲ. ಬರಿದೆ ನಾವು ಶೀಲವಂತರೆಂಬುವ ಮನುಜ ಕೇಳು: ಕಣ್ಣೇ ಕಂಚುಗಾರ, ಕರ್ಣವೇ ಬಣಜಿಗ, ಮೂಗೇ ಈಳಿಗ, ಕೊರಳೇ ಕುಂಬಾರ, ತುಟಿಯೇ ಹೆಂಡಗಾರ, ಹಲ್ಲೆ ಕಲ್ಲುಕುಟಿಗ, ತಲೆಯೇ ಮೋಪುಗಾರ, ಬೆನ್ನೇ ಜೇಡ, ಅಂಗೈಯೇ ಅಕ್ಕಸಾಲಿಗ, ಮುಂಗೈಯೇ ಬಡಿಗ, ಕರವೇ ಕೋಮಟಿಗ, ಕಣಕಾಲೇ ಕಾಳಿಂಗ, ಕುಂಡಿಯೇ ಕುಡುವೊಕ್ಕಲಿಗ, ಒಳದೊಡೆಯೇ ಸಮಗಾರ, ಹೊರದೊಡೆಯೇ ಮಚ್ಚಿಗ, ಮೇಗಾಡಿ ಹೊಲೆಯ, ಬುದ್ಧಿಯೇ ಬಯಲಗಂಬಾರ. -ಇಂತಪ್ಪ ಕುಲ ಹದಿನೆಂಟು ಜಾತಿ ಎಲು ಮಾಂಸವನು ತುಂಬಿಟ್ಟುಕೊಂಡು ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ ಎಂದು ಹೊಡೆದಾಡುವಂತಹ ಅಣ್ಣಗಳನ್ನು ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ ವಾಮಪಾದುಕೆಯಿಂದ ಪಡಪಡನೆ ಹೊಡಿ ಎಂದಾತ, ನಮ್ಮಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಶರಣ ಸತಿ, ಲಿಂಗ ಪತಿ ಎಂಬರು. ಶರಣ ಹೆಣ್ಣಾದ ಪರಿಯಿನ್ನೆಂತು ? ಲಿಂಗ ಗಂಡಾದ ಪರಿಯಿನ್ನೆಂತು ? ನೀರು ನೀರು ಕೂಡಿ ಬೆರೆದಲ್ಲಿ, ಭೇದಿಸಿ ಬೇರೆ ಮಾಡಬಹುದೆ ? ಗಂಡು ಹೆಣ್ಣು ಯೋಗವಾದಲ್ಲಿ ಆತುರ ಹಿಂಗೆ ಘಟ ಬೇರಾಯಿತ್ತು. ಇದು ಕಾರಣ ಶರಣ ಸತಿ, ಲಿಂಗ ಪತಿ ಎಂಬ ಮಾತು ಮೊದಲಿಂಗೆ ಮೋಸ, ಲಾಭಕ್ಕಧೀನವುಂಟೆರಿ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶಿವಭಕ್ತರ ಮನೆಗೆ ಹೋಗಿ ಒರಳಕ್ಕಿಯನಾಯ್ದು ತಂದು, ಲಿಂಗಕ್ಕೆ ಬೋನವ ಮಾಡಿ, ಜಂಗಮಕ್ಕೆ ನೀಡಿ, ಒಕ್ಕುದ ಕೊಂಡವ ಪೋಪನೈ ಕೈಲಾಸಕ್ಕೆ. ಅವರಿಗೆ ಮುಕ್ಕಣ್ಣನಲ್ಲದೆ ಉಳಿದ ಭುವನತ್ರಯದವರು ಸರಿಯಲ್ಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶಿವಭಕ್ತನಾದ ಬಳಿಕ ಅನ್ಯಭಜನೆಯ ಮಾಡದಿರಬೇಕು. ಶಿವಭಕ್ತನಾದ ಬಳಿಕ ಪರಸತಿ, ಪರನಿಂದೆ, ಪರಧನವ ಹಿಡಿಯದಿರಬೇಕು. ಶಿವಭಕ್ತನಾದ ಬಳಿಕ ಲಿಂಗಕ್ಕೆ ತೋರದೆ ಪ್ರಸಾದವ ಮುಟ್ಟದಿರಬೇಕು. ಅಂಗಲಿಂಗವು ಸಮರಸವಾಗಿರಬೇಕು. ದಾರಿದ್ರ್ಯವು ಬಂದರೆ ಅಂಗವೇ ನಿನ್ನದೆಂದರಿಯಬೇಕು. ಸಂಪತ್ತು ಬಂದರೆ ನಿನ್ನದೆಂದು ಭಾವಿಸಬೇಕು. ಲಿಂಗಬಾಹ್ಯರಿಗೆ ನರಕ ತಪ್ಪದು. ಇಷ್ಟಲಿಂಗಮವಿಶ್ವಸ್ಯ ಅನ್ಯಲಿಂಗಮುಪಾಸತೇ ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾಚರೇತ್ ಇದು ಕಾರಣ, ಪ್ರಾಣಲಿಂಗದ ಭಕ್ತಿಯ ಮರೆದು ಯಮಪಟ್ಟಣಕ್ಕೆ ಹೋಹರೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು ತನ್ನ ಮಠಕ್ಕೆ ಬಂದ ಲಿಂಗಜಂಗಮದ ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯ. ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂಬ ಹಂದಿಗಳೆತ್ತ ಬಲ್ಲರಯ್ಯಾ ಸತ್ಯರ ನೆಲೆಯ. ಮುಂದಿರ್ದ ನಿಧಾನವ ಕಾಣಲರಿಯದೆ ಸಂದಿಗೊಂದಿಯ ಹೊಕ್ಕು ಅರಸಿ ಬಳಲುವ ಅಂಧಕನಂತೆ, ಎಂದಾದರೂ ತನ್ನ ವ್ಯಸನವೆತ್ತಿದಾಗ ಒಂದೊಂದು ಪರಿಯಲ್ಲಿ ಸಿದ್ಧಾನ್ನಂಗಳು ಮಾಡಿ ಚೆಂದ ಚೆಂದದಲಿ ಬೋನ ಪದಾರ್ಥಂಗಳಂ ಮಾಡಿ ತಮ್ಮ ಹಿಂದಣ ಮುಂದಣ ಹರಕೆಯನೊಡಗೂಡಿ ಬಂಧುಬಳಗವ, ಮುಯ್ಯೂಟವ ಕೂಡಿ ಆ ದಿನದಲ್ಲಿ ಚಂದ್ರಶೇಖರನ ಭಕ್ತರಿಗೆ ದಣಿ[ಯೆ] ಉಣಲಿಕ್ಕಿದೆನೆಂಬ ಅಂಧಕ ಮೂಳಹೊಲೆಯರಿಗೆ ಎಂದೆಂದಿಗೂ ಮುಕ್ತಿಯಿಲ್ಲವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶೀಲವಂತನೆಂಬವ ಶಿವದ್ರೋಹಿ, ಭಾಷೆವಂತನೆಂಬವ ಬ್ರಹ್ಮೇತಿಕಾರ, ನೇಮಸ್ತನೆಂಬವ ನೇಮಕ್ಕೆ ಗುರಿಯಾದ, ಅಚ್ಚ ಪ್ರಸಾದಿ ನಿಚ್ಚಕುನ್ನಿ. ಇವರು ನಾಲ್ವರು ಹೋದಲ್ಲಿ ಹೊಗಲಾಗದು, ಬಂದಲ್ಲಿ ಬರಲಾಗದು, ನಿಂತಲ್ಲಿ ನಿಲಲಾಗದು, ಕುಳಿತಲ್ಲಿ ಕುಳ್ಳಿರಲಾಗದು. ಈ ನಾಲ್ವರಿಗೂ ಲಿಂಗವಿಲ್ಲ, ಗುರುವಿಲ್ಲ, ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲ, ನಾ ಮೊದಲೇ ಇಲ್ಲ. ಅದೇನು ಕಾರಣವೆಂದಡೆ, ನಿರಂತರ ಜಂಗಮ ಕೈ ಕಡ[ವಸ]ವಾಗಿ ಬರುತ್ತಿರಲು ಅವರ ಕಪ್ಪರ ಬಟ್ಟಲು ನಮ್ಮ ಭಾಜನ ಭಾಂಡವ ಮುಟ್ಟಬಾರದು ಎಂಬ [ಮನದ]ಹೊಲೆಯರಿಗೆಲ್ಲಿಯ ಶೀಲವೋ ಅಂಬಿಗರ ಚೌಡಯ್ಯ!
--------------
ಅಂಬಿಗರ ಚೌಡಯ್ಯ
ಶಿಖಿಯನೆ ಕಟ್ಟಿ, ಮಾಹೇಶ್ವರಿಕೆಯನೆ ಕೊಡುವರೆ, ಆತನ ವೃತ್ತಿಗಳ ತಿಳಿಯಬೇಕಯ್ಯಾ. ಜಾತಿಸೂತಕವ ನೇತಿಗಳೆಂದಾತಂಗೆ ದೀಕ್ಷೆಯ ಕೊಟ್ಟಡೆ, ಸುಸರ ನೋಡಾ. ಈಸುವನತಿಗಳೆಯದೆ ಉಪದೇಶವ ಮಾಡಿದ ಆಚಾರ್ಯಂಗೆ ಮಾರಿಯೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಶ್ರೀಗುರುಲಿಂಗಜಂಗಮದ ಲೀಲೆಯ ಧರಿಸಿ, ಪರಸ್ತ್ರೀಯಳೆಂಬ ಹಡಿಕೆಯ ಯೋನಿದ್ವಾರದಲ್ಲಿ ತೊಳಲುವ ಜಡಜೀವಿಡಂಬಕನಲ್ಲಿ ಸಮಯಾಚಾರವ ಮಾಡುವಾತಂಗೆ ಭವಿಜನ್ಮ ತಪ್ಪದು ನೋಡ! ತಾನಿದ್ದಲ್ಲಿಗೆ ಪ್ರಸಾದಪುಷ್ಪತೀರ್ಥದೆಡೆ ಪ್ರಸಾದವ ತರಿಸಿಕೊಂಡಾತಂಗೆ ಶುನಿಸೂಕರಜನ್ಮ ತಪ್ಪದು ನೋಡ! ಸಮಪಂಕ್ತಿಯಲ್ಲಿ ವಾಮನವಾದ ಉಕ್ಕಳವ ಕೊಟ್ಟುಕೊಂಡಾತಂ- ದೀಕ್ಷಾಹೀನ, ಆಚಾರಭ್ರಷ್ಟ! ತನ್ನ ಪವಿತ್ರಕರ್ತುವಾದ ಗುರುವಿನಾಜ್ಞೆಯ ಮೀರಿ ಗುರುನಿಂದ್ಯವ ಮಾಡುವ ಗುರುದ್ರೋಹಿ, ಪರದೈವ-ಪರದ್ರವ್ಯಾಪಹಾರಕನ ಕೂಡೆ ಪಾದೋದಕ-ಪ್ರಸಾದವ ಏಕಭಾಜನವ ಮಾಡಿದಾತಂU ಶತಸಹಸ್ರಜನ್ಮಾಂತರದಲ್ಲಿ ಕ್ರಿಮಿಕೀಟಕಜನ್ಮ ತಪ್ಪದು ನೋಡ! ಸತ್ಯಸದಾಚಾರದ ವರ್ಮಾವರ್ಮವ ಭೇದಿಸಿ, ಹರಗುರುವಚನೋಕ್ತಿಯಿಂದ ಪ್ರಮಾಣಿಸಿ, ಬುದ್ಧಿಯ ಹೇಳುವಾತನೆ ಮಹಾಪ್ರಭುವೆಂದು ಭಾವಿಸುವಾತನೆ ಸದಾಚಾರಿ ಸನ್ಮಾರ್ಗಿ ನೋಡ! ಇದ ಮೀರಿ ಆಜ್ಞೋಪದೇಶವ ಕೇಳದೆ ತನ್ನ ಮನಬಂದಂತೆ ಚರಿಸುವ ಭ್ರಷ್ಟನ ಮೋರೆಯ ಮೇಲೆ ಶರಣಗಣಂಗಳ ರಕ್ಷೆಯಿಂದ ಹೊಡದು, ಆ ಮೇಲೆ ಗಾರ್ದ[ಭ]ಜನ್ಮದಲ್ಲಿ ಜನಿಸೆಂದಾತನಂಬಿಗರ ಚೌಡಯ್ಯನು. ನೋಡ, ಸಂಗನ ಬಸವೇಶ್ವರ.
--------------
ಅಂಬಿಗರ ಚೌಡಯ್ಯ
ಶುಕ್ಲಶೋಣಿತಪಿಂಡೈಕ್ಯನ ಚಿತ್ತವಾಯು ಆರು ದಳದ ಪದ್ಮದಲ್ಲಿಹುದು. ಮೊಲೆ ಮುಡಿ ಬಂದರೆ ಆ ಪಿಂಡವನು ಹೆಣ್ಣೆಂಬರು. ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು, ಆ ಇಬ್ಬರ ನಡುವೆ ಸುಳಿದ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ ನೋಡಾ. ಇದರಂತುವ ತಿಳಿದು ನೋಡಿಹೆನೆಂದರೆ ಶ್ರುತಿಗಳಿಗೋಚರೆಂದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ