ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ ಶಿಷ್ಯನ ಮಾಡಿಕೊಂಬುವ ಹೆಡ್ಡಜಡಜೀವಿಗಳನೇನೆಂಬೆನಯ್ಯ ! ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ ! ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ, ಅವನ ಆದಿ-ಅಂತ್ಯವ ತಿಳಿಯದೆ, ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ ಹುಟ್ಟಂಧಕನೆಂಬೆನಯ್ಯ ! ತನ್ನ ಗುರುತ್ವವನರಿಯದ ಗುರುವಿಂದ ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ ! ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮಚ್ಚರಯ್ಯ ! ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂ ಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ ? ದೇವರಿಲ್ಲದ ದೇಗುಲಕ್ಕೆ ಮಂತ್ರ, ಅಬ್ಥಿಷೇಕವುಂಟೆ ? ಅರಿವು ನಷ್ಟವಾಗಿ ಕುರುಹಿನ ಹಾವಚೆಯ ನಾನರಿಯೆನೆಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲವ ತಿಂಬುವ ತೆರನಂತೆ, ಗುರುವಿನುಪದೇಶವ ಕೊಂಡು, ಅನೀತಿ ದೇವರುಗಳ ಎಡೆಯ ತಿನ್ನುವಂತಹ ಮಾದಿಗರು ನೀವು ಕೇಳಿರೊ. ಅಂಡಜ ಉತ್ಪತ್ತಿ ಎಲ್ಲ ದೇವರಿಂದಾಯಿತ್ತು. ಮೈಲಾರ, ಬೀರ, ಭೈರವ, ಧೂಳ, ಕೇತನೆಂಬ ಕಿರಿ ದೈವಕ್ಕೆರಗಿ, ಭಕ್ತರೆನಿಸಿಕೊಂಬುವ ಚಂಡಿನಾಯಿಗಳ ಕಂಡು ಮನ ಹೇಸಿತ್ತೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ, ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ, ಸರ್ವಾಪತ್ತಿಗಾಧಾರ ಬಸವಣ್ಣ, (ಸ್ವರ್ಗ) ಮತ್ರ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ. ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದಾತನಂಬಿನ (ಗ) ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗುರುವಿನೊಳಡಗಿದ ಭಕ್ತ ಪರವ ಕಂಡುದಿಲ್ಲ, ಲಿಂಗದೊಳಡಗಿದ ಭಕ್ತ ಜಂಗಮವ ಕಂಡುದಿಲ್ಲ. ಇವರಿಬ್ಬರ ಭಕ್ತಿಯೂ ಹುರಿಗೂಡದ ಹಗ್ಗದಂತಾಯಿತ್ತು ನೋಡಯ್ಯ. ಅರಿವು ಆಚಾರವಿಡಿದು ಆಚರಿಸಿದ ಸದ್ಭಕ್ತನು. ಗುರು ಲಿಂಗ ಜಂಗಮವ ನೆರೆ ಕಂಡು ಸನ್ಮತನಾಗಿ ಇ[ಹ] ಪರವೆಂಬುಭಯ ಸಂಕಲ್ಪವರತದಲ್ಲದಿಲ್ಲವೆಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ, ಗಾಳಿ ನಿನ್ನಾಧೀನವಲ್ಲಯ್ಯಾ. ನಾಳೆ ತೂರಿಹೆನೆಂದಡೆ ಇಲ್ಲಯ್ಯಾ. ಶಿವಶರಣೆಂಬುದೊಂದು ಗಾಳಿಯ ಹಡೆದಲ್ಲಿ, ಬೇಗ ತೂರೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗಿಡುವಿನ ಪುಷ್ಪವ ಕೊಯ್ಯೆನು, ಮಡುವಿನಗ್ಘವಣಿಯ ತುಳುಕೆನು, ಸ್ಥಾವರಂಗಳ ಪೂಜಿಸೆನು. ಕೇಳು ಕೇಳು ನಮ್ಮಯ್ಯಾ; ಮನದಲ್ಲಿ ನೆನೆಯೆ, ವಚನಕ್ಕೆ ತಾರೆ, ಹೊಡವಂಟು ಬೇರು ಮಾಡುವವನಲ್ಲ. ಬಸುರೊಳಗಿರ್ದು ಕಾಲನಿಡುವ ಬುದ್ಧಿ ಕೂಡದೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗುರುವೆಂಬೆನೆ ಹಲಬರ ಮಗ, ಲಿಂಗವೆಂಬೆನೆ ಕಲುಕುಟಿಕನ ಮಗ, ಪ್ರಸಾದವೆಂಬೆನೆ ಒಕ್ಕಲಿಗನ ಮಗ, ಪಾದೋದಕವೆಂಬೆನೆ ದೇವೇಂದ್ರನ ಮಗ ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ. ತನ್ನೊಳಗ ನೋಡೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು ? ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು ? ಅವು ತಮ್ಮ ಅಂಗದ ಸ್ವಭಾವದಂತೆ. ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗುರುವೆಂಬ ಭಾವ ಬ್ರಹ್ಮಮೂರ್ತಿ, ಲಿಂಗವೆಂಬ ಭಾವ ವಿಷ್ಣುಮೂರ್ತಿ, ಜಂಗಮವೆಂಬ ಭಾವ ರುದ್ರಮೂರ್ತಿ. ಅದೆಂತೆಂದಡೆ; ಅನಾದಿವಸ್ತು ರೂಪಾಗಬೇಕಾದ ಕಾರಣ, ಅಹಂ ಬ್ರಹ್ಮವೆಂಬ ಆಕಾರವಿಡಿದು ಬ್ರಹ್ಮಮೂರ್ತಿಯಾದ, ಜ್ಞಾನರುದ್ರ ಪೀಠಸಂಬಂಧಿಯಾದ ಕಾರಣ ವಿಷ್ಣುಮೂರ್ತಿಯಾದ, ಚಿದ್ಘನರುದ್ರ ಚತುರ್ವಿಧಫಲಂಗಳೊಳಗಾದ ಕಾರಣ ಸಂಹಾರರುದ್ರನಾದ. ಸಂಹಾರ ಅಡಗಿ ನಿಂದು, ಉಮಾಪತಿತತ್ವವ ಬಿಟ್ಟು ಸ್ವಯಂಭುಲಿಂಗವಾದ. ಆ ಸ್ವಯಂಭು ಜಂಗಮವೆಂಬಲ್ಲಿ ನಿಂದು ನಿಜವ ಕಂಡಲ್ಲಿ ಲಿಂಗವಾದ. ಲೀಯವಾಗಿ ಕಾಣಲ್ಪಟ್ಟುದ ನಿಲಿಸಿ ಭಾವರಹಿತನಾಗಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ