ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಂಡು ಕೊಟ್ಟೆಹೆನೆಂಬುದು ಖಂಡಿತಂಗಲ್ಲದೆ ಪರಿಪೂರ್ಣಂಗುಂಟೆ ? ಉಂಡು ತೇಗಿಹೆನೆಂಬುದು ನಿತ್ಯತೃಪ್ತಂಗುಂಟೆ ? ಒಂದನರಿದು ಒಂದ ಮರೆದೆನೆಂದು ಸಂದೇಹಕ್ಕೊಳಗಾದವಂಗೆ` ಲಿಂಗವಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ಬಾಯಿ ಕೊಂಬಲ್ಲಿ, ಮೂಗು ವಾಸಿಸುವಲ್ಲಿ, ಕಣ್ಣು ನೋಡುವಲ್ಲಿ- ಇಂತೀ ಅಯಿದರ ಗುಣ ಎಡೆಯಾಟ ಅದಾರಿಂದ ಎಂಬುದ ತಾ ವಿಚಾರಿಸಿದಲ್ಲಿ, ಪಂಚಕ್ರೀಯಲ್ಲಿ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಹಿಂಚುಮುಂಚಿಗೆ ಸಿಕ್ಕದೆ, ಕುಡಿವೆಳಗಿನ ಮಿಂಚಿನ ಸಂಚದಂತಿರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು, ಅದಕ್ಕದು ಸತ್ಯವಯ್ಯ. ಎತ್ತಿನ ಮೇಲೆ ತಿತ್ತಿಯ ಮಾಡಿ ತೈಲ ತುಪ್ಪವ ಹೇರುವರು, ಅದಕ್ಕದು ಸತ್ಯವಯ್ಯ. ಆ ತಿತ್ತಿಯ ಒಳಗಣ ತೈಲ ತುಪ್ಪವ ತಂದು, ನಿತ್ಯ ಗುರು-ಲಿಂಗ-ಜಂಗಮಕ್ಕೆ ನೀಡುವ ಭಕ್ತನ ಭಕ್ತಿ ಎಂತಾಯಿತ್ತೆಂದಡೆ: ಆ ಕತ್ತೆಯ ಮೇಲೆ ಹೇರುವ ಕಳ್ಳುಗುಂಡಿಗಿಂದ ಕಡೆಯೆಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕರದಲ್ಲಿ ಲಿಂಗವ ಪಿಡಿದುಕೊಂಡು, ಕಣ್ಣುಮುಚ್ಚಿ ಸರಜಪಮಾಲೆಯ ಬೆರಳಿಂದ ಎಳೆದೆಳೆದು ಎಣಿಸುತ್ತ, ಗುರುಮೂರ್ತಿಯ ಧ್ಯಾನಿಸುತ್ತ ಕಂಡೆನೆಂಬುತ್ತ ಇರುವರೆ ಮೂಳರಿರಾ ? ನಿಮಗೆಲ್ಲಿಯದೊ ಗುರುಧ್ಯಾನ ? ವರ ಪರವಸ್ತುವಿಂಗೆ ಸರಿ ಎನಿಸಿಕೊಂಬ ಗುರುಸ್ವಾಮಿ ನಿಮ್ಮ ನೆರೆಹೊರೆಯ ಸರಿಸಮೀಪ ಗ್ರಾಮದಲ್ಲಿರಲು ಅವರನ್ನು ಲೆಕ್ಕಿಸದೆ, ಉದಾಸೀನವ ಮಾಡಿ ಕಂಡು ನಿನ್ನ ಉಂಬ ಉಡುವ ಸಿರಿ ಸಂಪತ್ತಿನೊಳು ಅವರನು ಸತ್ಕರಿಸದೆ, ಕರದಲ್ಲಿ ನೋಡಿ ಕಂಡಿಹೆನೆಂದು ಶಿರವಂ ಬಿಗಿದು, ಕಣ್ಣನೆ ತೆರೆಯದೆ, ಸ್ವರದಲಾಗ ಪಿಟಿಪಿಟಿ ಎನ್ನುತ್ತ ಅರಿದೆವೆಂಬ ಅರಿವಿಂಗೆ ಶಿರದೂಗಿ ಬೆರಗಾಗಿ ನಗುತಿರ್ದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಳ್ಳ, ಹಾದರಿಗ, ಸೂಳೆಗಾರ, ತಳವಾರನಲ್ಲಿ ಮಿಥ್ಯವಿಲ್ಲದಿರಬೇಕು. ಸತ್ಯಸದಾಚಾರಿಗಳಲ್ಲಿ ಸದ್ಭಕ್ತ ಮಿಥ್ಯತಥ್ಯವಿಲ್ಲದಿರಬೇಕು. ಈ ಗುಣ ನಿತ್ಯ ನಿಜೈಕ್ಯನ ಯುಕ್ತಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೇಳಿರಯ್ಯಾ ಮಾನವರೆ, ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ. ಗಂಡ ಹೆಂಡಿರ ಮನಸ್ಸು ಬೇರಾದರೆ ಗಂಜಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ. ಛೇ, ಛೇ, ಇದು ಭಕ್ತಿಯಲ್ಲಣ್ಣ. ಅದೇನು ಕಾರಣವೆಂದೊಡೆ, ಕಾಶಿಗೆ ಹೋದೆನೆಂಬವರು ಹೇಸಿ ತೊತ್ತಿನ ಮಕ್ಕಳಯ್ಯ. ಮೈಲಾರಕ್ಕೆ ಹೋದೆನೆಂಬವರು ಮಾದಗಿತ್ತಿಯ ಮಕ್ಕಳಯ್ಯ. ಪರ್ವತಕ್ಕೆ ಹೋದೆನೆಂಬವರು ಹಾದರಗಿತ್ತಿಯ ಮಕ್ಕಳಯ್ಯ. ರಾಚೋಟಿಗೆ ಹೋದೆನೆಂಬವರು ಲಜ್ಜೆಮಾರಿ ತೊತ್ತಿನ ಮಕ್ಕಳಯ್ಯ. ಛೇ, ಛೇ, ಇದು ಭಕ್ತಿಯಲ್ಲವಯ್ಯ. ಅದೆಂತೆಂದೊಡೆ; ಪರಬ್ರಹ್ಮ ಮೂರುತಿಯಾದ ಪರಶಿವನೆ ಗುರುನಾಮದಿಂ ಬಂದು ಇಷ್ಟಲಿಂಗವ ಧರಿಸಿ, ಪಂಚಾಕ್ಷರಿಯ ಬೋದ್ಥಿಸಿದ ಮೇಲೆ ಆ ಭಕ್ತನ ಕಾಯವೇ ಕೈಲಾಸ. ಅವನ ಒಡಲೆ ಸೇತುಬಂಧ ರಾಮೇಶ್ವರ. ಅವನ ಶಿರವೆ ಶ್ರೀಶೈಲ. ಆತ ಮಾಡುವ ಆಚಾರವೆ ಪಂಚಪರುಷ. ಇದು ತಿಳಿಯದೆ ಶಾಸ್ತ್ರದಿಂದ ಕೇಳಿ, ಅರಿಯದೆ ಮಂದಬುದ್ಧಿಯಿಂದ ಪರ್ವತಕ್ಕೆ ಹೋಗಿ ಪಾತಾಳಗಂಗೆಯಲ್ಲಿ ಮುಳುಮುಳುಗೆದ್ದರೆ, ಛೇ, ಛೇ, ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ, ನಿನ್ನ ಪಾಪವು ಹೋಗಲಿಲ್ಲವು. ಅಲ್ಲಿಂದ ಕಡೆಗೆ ಬಂದು, ಕೆಟ್ಟ ಕತ್ತಿಯ ಕೊಂಡು ಕೆರವಿನಟ್ಟೆಯ ಮೇಲೆ ಮಸೆದು ಮಸ್ತಕವ ತೋಯಿಸಿ ತಲೆಯ ಬೋಳಿಸಿಕೊಂಡರೆ, ನಿನ್ನ ತಲೆಯ ತಿಂಡಿ ಹೋಯಿತಲ್ಲದೆ ನಿನ್ನ ಪಾಪವು ಬಿಡಲಿಲ್ಲವಯ್ಯ ! ಅಲ್ಲಿಂದ ಕೋಲು ಬುಟ್ಟಿಯ ತೆಗೆದುಕೊಂಡು ಬರುವಂತಹ ದಿಂಡೆತೊತ್ತಿನ ಮಕ್ಕಳ ಕಣ್ಣಲಿ ಕಂಡು, ಪಡಿಹಾರಿ ಉತ್ತಣ್ಣನ ಎಡದ ಪಾದ ಎಕ್ಕಡದಿಂದೆ ಪಟಪಟನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕಷ್ಟಜೀವನ ಮನುಜರಿರಾ, ನೀವು ಹುಟ್ಟಿದ ಮೊದಲು, ಎಷ್ಟು ಮಂದಿ ನಿಮ್ಮ ಕಣ್ಣ ಮುಂದೆ ನಷ್ಟವಾಗಿ ಹೋದುದ ಕಂಡು ಕಂಡೂ ಹೆಂಡಿರು ತನ್ನವರೆಂಬೆನೆ? ಮಿಂಡಿಯಾಗಿ ಹಲವರ ಬಯಸುವವಳ ಮಕ್ಕಳ ತನ್ನವರೆಂಬೆನೆ? ಕೂಡುವಾಗ ದುಃಖ, ಕೂಡಿದ ಒಡವೆಯ ಮಡಗುವಾಗ ದುಃಖ, ಮಡಗಿದ ಒಡವೆಯ ತೆಗೆವಾಗ ದುಃಖ, ಪ್ರಾಣವ ಬಿಡುವಾಗ ದುಃಖ, ಹೊಲೆ ಸಂಸಾರವ ನಚ್ಚಿ ಕಾಲನ ಬಲೆಗೆ ಈಡಾ[ಗ]ದಿರೊ, ಪತಿಭಕ್ತಿ, ಮುಕ್ತಿಯೆಂಬುದ ಗಳಿಸಿಕೊಳ್ಳಿರೊ, ಸಟೆಯಂ ಬಿಡಿ, ದಿಟವಂ ಹಿಡಿ, ಘಟವುಳ್ಳ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ, ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ ವಂಚನೆಯ ಮಾಡಿ ಒಳಗಿಟ್ಟುಕೊಂಡು, ನೆಲನ ತೋಡಿ ಬಚ್ಚಿಟ್ಟುಕೊಂಡು. ಹಲವು ತೆರದ ಆಭರಣಂಗಳ ಮಾಡಿಸಿ, ಕರ ಚರಣ ಉರ ಕರ್ಣಂಗಳೊಳಗಿಟ್ಟುಕೊಂಡು, ಮತ್ತಿಷ್ಟು ಬದುಕಾಗಲೆಂದು ತನ್ನ ಕೈಯೊಳಗಿನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡುವ ಲಿಂಗಪೂಜಕನ ಪರಿ ಎಂತೆಂದೊಡೆ; ಆ ಭಕ್ತನು ಪಂಚಾಬ್ಥಿಷೇಕದಿಂದ ಲಿಂಗಕ್ಕೆ ಮಜ್ಜನವ ನೀಡಿದಡೆ ಲಿಂಗದ ಚಿತ್ತದಲ್ಲಿ ಸುಣ್ಣ ನೀರನೆತ್ತಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ವಿಭೂತಿಯ ಧರಿಸಿದಡೆ ಲಿಂಗದ ಚಿತ್ತದಲ್ಲಿ ಬೂದಿಯ ಬೊಕ್ಕಣವ ಕಟ್ಟಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಗಂಧವ ಧರಿಸಿದರೆ ಲಿಂಗದ ಚಿತ್ತದಲ್ಲಿ ಚಂಡಿಟ್ಟು ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಅಕ್ಷತೆಯನೇರಿಸಿದರೆ ಲಿಂಗದ ಚಿತ್ತದಲ್ಲಿ ಕಲ್ಲು ಹೊರಿಸಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ಪುಷ್ಪವ ಧರಿಸಿದರೆ ಲಿಂಗದ ಚಿತ್ತದಲ್ಲಿ ಬೆನ್ನ ಮೇಲೆ ಹೇರು ಹೊರಿಸಿದಂತಾಯಿತ್ತಯ್ಯಾ ! ಆ ಭಕ್ತನು ಧೂಪವ ಬೀಸಿದರೆ ಲಿಂಗದ ಚಿತ್ತದಲ್ಲಿ ಅರವನಿಕ್ಕಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ದೀಪಾರತಿಯನೆತ್ತಿದರೆ ಲಿಂಗದ ಚಿತ್ತದಲ್ಲಿ ಪಂಜುಗಳ್ಳರು ಬಂದು ಮೋರೆಯ ಸುಟ್ಟು ಬಾ[ದ್ಥಿ]ಸಿದಂತಾಯಿತ್ತಯ್ಯಾ ! ಆ ಭಕ್ತನು ಸ್ತೋತ್ರಮಂತ್ರವ ನುಡಿದರೆ ಲಿಂಗದ ಚಿತ್ತದಲ್ಲಿ ಕರ್ಣದೊಳಗೆ ತೊಣಚಿ ಹೊಕ್ಕು ಗೋಳಿಟ್ಟು ಬಾದ್ಥಿಸಿದಂತಾಯಿತ್ತಯ್ಯಾ ! ಇಂತಪ್ಪ ಲಿಂಗಬಾಧಕರನು ಲಿಂಗಪೂಜಕರೆನಬಹುದೆ ? ಆತನ ಅಂಗಳವ ಮೆಟ್ಟಬಹುದೆ ? ಇದರ ಇಂಗಿತವ ನಿಜಭಾವವುಳ್ಳ ಶರಣರು ನೀವೇ ತಿಳಿದು ನೋಡಿರೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಂಥೆ ತೊಟ್ಟವ ಗುರುವಲ್ಲ, ಕಾವಿ ಹೊತ್ತವ ಜಂಗಮವಲ್ಲ, ಶೀಲ ಕಟ್ಟಿದವ ಶಿವಭಕ್ತನಲ್ಲ, ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ. ಹೌದೆಂಬವನ ಬಾಯ ಮೇಲೆ ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕ್ರೀ ಜ್ಞಾನವೆಂಬ ಉಭಯವ ತಾವರಿಯದೆ, ಕಾಯಜೀವವೆಂಬ ಹೆಚ್ಚು ಕುಂದನರಿಯದೆ, ನಾನೀನೆಂಬ ಭಾವದ ಭ್ರಮೆ ಆರಿಗೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯದಿಂದ ಕಂಡೆಹೆನೆಂದಡೆ ಬ್ರಹ್ಮನ ಹಂಗು, ಜೀವದಿಂದ ಕಂಡೆಹೆನೆಂದಡೆ ವಿಷ್ಣುವಿನ ಹಂಗು, ಅರಿವಿನಿಂದ ಕಂಡೆಹೆನೆಂದಡೆ ರುದ್ರನ ಹಂಗು, ಕಾಬ ಕಾಬಲ್ಲಿ ಕಂಡೆಹೆನೆಂದಡೆ ನಾಡೆಲ್ಲರ ಹಂಗು. ಇವನೆಲ್ಲವನಲ್ಲಾ ಎಂದು ನಿಲಿಕಿ ನೋಡಿ ಕಂಡ ಅಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಕಟ್ಟಿದ ಲಿಂಗವ ಕಿರಿದು ಮಾಡಿ, ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ! ಇಂತಪ್ಪ ಲೊಟ್ಟಿಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕರ್ಮೇಂದ್ರಿಯ ಕಾಯವ ಕೂಡಿಪ್ಪುದು, ಭಾವೇಂದ್ರಿಯ ಜೀವವ ಕೂಡಿಪ್ಪುದು, ಜ್ಞಾನೇಂದ್ರಿಯ ಪರಮನ ಕೂಡಿಪ್ಪುದು. ಕಾಯ ಜೀವ ಪರಮನ ಕೂಡುವ ಠಾವನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ, ಕೆಡವಿ ಹಾಕಿ ಮೂಗನೆ ಕೊಯ್ಧು ಇಟ್ಟಂಗಿಯ ಕಲ್ಲಿಲೆ ತಿಕ್ಕಿ ಸಾಸಿವೆಯ ಹಿಟ್ಟನೆ ತಳಿದು ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಟ್ಟಿಹೆ ಬಿಟ್ಟಿಹೆನೆಂಬ ದಂದುಗ ನಿಮಗೇಕೆ ? ತೆರನನರಿಯದೆ ಹಲವು ತಪ್ಪಲ ತರಿ ತಂದು ಮೇಲೊಟ್ಟಲೇಕೆ ? ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ತಾನೆ ಶಿವನು ತೆರಹಿಲ್ಲದಿಪ್ಪನೆಂದಾತ ನಮ್ಮಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಲ್ಲಿನಲ್ಲಿ ಕಠಿಣ, ಖುಲ್ಲರಲ್ಲಿ ದುರ್ಗುಣ, ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು. ಇಂತೀ ಇವು ಎಲ್ಲರ ಗುಣ. ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕುರುಹೆಂಬೆನೆ ಕಲ್ಲಿನಲ್ಲಿ ಹತ್ತಿದ ಹಾವಸೆ, ಅರಿವೆಂಬೆನೆ ಕಾಣಬಾರದ ಬಯಲು, ಒಂದನಹುದು ಒಂದನಲ್ಲಾಯೆಂದು ಬಿಡಬಾರದು. ಬಿಟ್ಟಡೆ ಸಮಯವಿಲ್ಲ, ಜಿಡ್ಡ ಹಿಡಿದಡೆ ಜ್ಞಾನವಿಲ್ಲ, ಉಭಯದ ಗುಟ್ಟಿನಲ್ಲಿ ಕೊಳೆವುತ್ತಿದೇನೆ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಷ*ದಲ್ಲಿ ನಿಂದಗ್ನಿಮಥನ ಘಟವಾರಿಯಿಂದ ಅಡಗಿ ಸುಡುವುದು, ಅದರ ಭೇದ ಇಂತಿ ಚತುಷ್ಟಯವನರಿದು ಕಂಡಲ್ಲಿ ಪ್ರಾಣಲಿಂಗಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಟ್ಟಿ ಕಳೆ ಪಾಪವ, ಬಿಟ್ಟು ಕಳೆ ಪುಣ್ಯವ. ಒತ್ತು ರೋಷವ, ಸಮತೆಯ ಪಸರಿಸಾ. ಎತ್ತಿದರ್ಥವನು ಬೈಚಿಟ್ಟು, ಮನದಲ್ಲಿ ಚಕ್ಕನೆ ತೀವು ಪರಿಣಾಮವನು, ಇದು ಬಟ್ಟೆ, ದೇವತತ್ವದ ಮುಟ್ಟಲುಪದೇಶವ ಕೊಟ್ಟನಂಬಿಗ ಚೌಡ ತನ್ನನೊಲಿವರಿಗೆ.
--------------
ಅಂಬಿಗರ ಚೌಡಯ್ಯ
ಕೇಳು ನೀನೆಲೊ ಮಾನವಾ, ಸೋಮವಾರ ಅಮಾವಾಸ್ಯೆ ಹುಣ್ಣಿಮೆ ಎಂಬ ದೊಡ್ಡ ಹಬ್ಬಗಳು ಬಂದಿಹವೆಂದು ಮನೆಯ ಸಾರಿಸಿ, ರಂಗವೋಲೆಯನಿಕ್ಕಿ, ಆಸನವ ಬಲಿದು, ಪತ್ರೆ ಪುಷ್ಪ ಮೊದಲಾದ ಅನಂತ ¸õ್ಞರಂಭವ ಸವರಿಸಿ ವಿರಕ್ತನ ಕರೆತಂದು ಪೂಜೆಯ ಮಾಡುವುದಕ್ಕಿಂತಲೂ ಹೊರೆಯಲ್ಲಿ ಚರಿಸಾಡುವ ಕಾಳ ಶುನಕನ ತಂದು ಆ ಗದ್ದುಗೆಯಲ್ಲಿ ಪೂಜೆ ಮಾಡುವುದು ಮಹಾ ಲೇಸಯ್ಯಾ. ಅದೇನು ಕಾರಣವೆಂದರೆ, ಆಣವಮಲ ಮಾಯಾಮಲ ಕಾರ್ಮಿಕಮಲಕ್ಕೆ ಹೊರತೆಂದು, ಅಷ್ಟಮದ ವಿರಹಿತನೆಂದು, ಷಡ್ಗುಣವ ಸಂಹರಿಸಿದವನೆಂದು, ಶಾಸ್ತ್ರದಲ್ಲಿ ಸಂಪನ್ನನೆಂದು, ಕ್ರಿಯೆಯಲ್ಲಿ ವೀರಶೈವನೆಂದು, ನಿರಾಭಾರಿಯೆಂದು, ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು, ಮಾನ್ಯವ ಸಂಪಾದಿಸಿಕೊಂಡು, ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ, ಸರ್ವವು ಎನಗೆ ಬೇಕೆಂದು ತಮೋಗುಣದಿಂದ ದ್ರವ್ಯವ ಕೂಡಿಸಿ ವಿರತಿಸ್ಥಲವು ಹೆಚ್ಚೆಂದು ಕಾವಿಯ ಹೊದೆದು, Põ್ಞಪೀನವ ಕಟ್ಟಿ, ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು. ಇಂತಪ್ಪ ವಿರತರ ಪೂಜೆಯ ಮಾಡುವುದಕ್ಕಿಂತಲೂ ಕರೇನಾಯಿಯ ತಂದು ಪೂಜೆಯ ಮಾಡುವುದು ಮಹ ಲೇಸು ಕಂಡಯ್ಯ. ಪಂಚಾಮೃತವ ಮುಂದಿಟ್ಟರೆ ಕಣ್ಣು ನೋಡುವುದು, ದ್ರವ್ಯ ಮುಂದಿಟ್ಟರೆ ಕೈಯು ಮುಟ್ಟುವುದು, ಎಂದು ಪೇಳುವ ವಿರತರ ನಾಲಗೆಯು ಆ ನಾಯ ಬಾಲಕ್ಕಿಂತಲು ಕರ ಕಷ್ಟವು. ಇಂತಹ ವಿರತರ ಪೂಜೆಯ ಮಾಡುವಾತನು, ಆ ಜಂಗಮವು ಉಭಯತರ ಮೂಗು ಸವರಿ ಕತ್ತೆಯನೇರಿಸಿ ಪಡಿಹಾರಿಕೆಗಳ ಪಾದುಕೆಯಿಂದ ಪಡಪಡ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕುಲವಾದ ಛಲವಾದ ವಾಗ್ವಾದಂಗಳಲ್ಲಿ ಹೋರುವನ್ನಬರ ಅರುಹಿರಿಯಪ್ಪರೆ ? ಹಸುಳೆಯ ಕನಸಿನಂತೆ, ಹುಸಿಮಾತಿನ ಮಂತ್ರದಂತೆ, ಎಸಕವಿಲ್ಲದ ಅರಿಕೆಯಂತಿರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಯ ಜೀವವೆಂಬ ಹೆಚ್ಚು ಕುಂದನರಿಯದೆ ಕ್ರೀ ಜ್ಞಾನ....ನಾನೀನೆಂಬ ಭಾವದ ಭ್ರಮೆಯು ಆರಿಗೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕಾಲ ವೇಳೆಯನರಿತು ಕೂಗಿದ ಕೋಳಿಯ ಕಂಡು ಊರೆಲ್ಲರು ಬೆಳಗಾಯಿತ್ತೆಂದು ಏಳುವರಿಂದ ಕಡೆಯೆ ? ಹೇಳುವ ಕೇಳುವ ಮಾತ ಕೇಳಿ ಆರ ಮರೆದು ಮೂರನರಿದು ಈರೈದು ಕಂಡು ಬೇರೈದರಲ್ಲಿ ಗಾರಾಗದೆ, ಸಾರಿದೆ, ಕೆಡಬೇಡೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೇಳಿದೇನೆಲೆ ಮಾನವ, ಪಂಚಮಹಾಪಾತಕ ದೋಷಾದಿಗಳನ್ನು ಮಾಡಿ ಬಾಯಿಲೆ `ಶಿವ ಶಿವ ಎಂದು ಶಿವನ ನೆನೆದರೆ ಭವ ಹರಿಯಿತೆಂಬ ವಿಚಾರಗೇಡಿಗಳ ಮಾತು ಕೇಳಲಾಗದು. ಜ್ಯೋತಿಯ ನೆನೆದರೆ ಕತ್ತಲೆ ಹಿಂಗುವುದೇ ? ರಂಭೆಯ ನೆನೆದರೆ ಕಾಮದ ಕಳವಳ ಹೋಗುವುದೇ ? ಮೃಷ್ಟಾನ್ನವ ನೆನೆದರೆ ಹೊಟ್ಟೆ ತುಂಬುವುದೆ ? ಮಾಡಿದಂತಹ ದೋಷವು ಹೋಗಲಾರದು. ಇಂತಪ್ಪ ದುರಾಚಾರಿಗಳ ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಕರ್ಮೇಂದ್ರಿಯವಯಿದು, ಭಾವೇಂದ್ರಿಯವಾರು, ಜ್ಞಾನೇಂದ್ರಿಯ ಮೂರು. ಅಯಿದು ಆರು ಮೂರನೊಂದು ಮಾಡಿ ಬೇರೊಂದ ತಿಳಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ

ಇನ್ನಷ್ಟು ...