ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈಶ್ವರನ ಕಾಬುದೊಂದಾಸೆಯುಳ್ಳೊಡೆ ಪರದೇಶಕ್ಕೆ ಹೋಗಿ ಬಳಲದಿರು, ಕಾಶಿಯಲ್ಲಿ ಕಾಯವ ವಿನಾಶವ ಮಾಡಲುಬೇಡ. ನಿನ್ನಲ್ಲಿ ನೀ ತಿಳಿದು ನೋಡಾ, ಸರ್ವೇಶ ಮುಳ್ಳಗುತ್ತ ತೆರಹಿಲ್ಲೆಂದಡೆ, ಒಂದು ಗೋಂಟ ಸಾರಿರ್ದನೆ ? ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಈರೇಳು ಭುವನವನೊಳಕೊಂಡ ಮಹಾಘನಲಿಂಗವು ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು, ಪೂಜೆಗೊಂಬ ಪರಿಯ ನೋಡ! ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ ಸಂಗವ ಬಲ್ಲಾತನೆ ಸದಾಚಾರಸದ್ಭಕ್ತನು! ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ, ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ ಭಂಡರು ಭಕ್ತರಾದವರುಂಟೆ ? ಹೇಳ! ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು! ಅದೆಂತೆಂದಡೆ: ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ ? ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ ? ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ ? ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ ? ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಮರಳಿ ತನ್ನ ಜಾತಿಯ ಕೂಡಿದಡೆ ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ! ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ, ಗಣಿಯನೇರಿದ ಡೊಂಬ ಮೈಮರದಿಪ್ಪಂತೆ, ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು ನಡುನೀರೊಳು ಹೋಗುವ ಹರುಗೋಲು ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು!
--------------
ಅಂಬಿಗರ ಚೌಡಯ್ಯ
ಈಶಲಾಂಛನವ ತೊಟ್ಟು ಮನ್ಮಥವೇಷಲಾಂಛನವ ತೊಡಲೇತಕ್ಕೆ ? ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ ? ಅಂದಳ ಛತ್ರ, ಆಭರಣ, ಕರಿತುರಗಂಗಳ ಗೊಂದಣವೇತಕ್ಕೆ ? ಅದು ಘನಲಿಂಗದ ಮೆಚ್ಚಲ್ಲ, ಎಂದನಂಬಿಗ ಚೌಡಯ್ಯ
--------------
ಅಂಬಿಗರ ಚೌಡಯ್ಯ