ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಿಸಿತ ನಡುವೆ ಇದ್ದ ಕಿರಾತಂಗೆ ಹೊಸ ವಾಸನೆಯ ಬಲ್ಲನೆ? ಸಕಲವ್ಯಾಪಾರದಲ್ಲಿ ಮೂಡಿ ಮುಳುಗುವವ ಸುಖದ ತದ್ರೂಪರ ಬಲ್ಲನೆ? ವಿಕಳತೆಗೊಂಡು ಅಖಿಳರ ಕೂಡಿ ಸುಖದುಃಖದಲ್ಲಿ ಬೇವವಂಗೆ ಅಕಳಂಕತನವುಂಟೆ? ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪರಧನ-ಪರಸತಿ-ಪರನಿಂದೆಗಳಿರೆ ಮುಂದೆ ನರಕವು ಎಂದು ಗುರುವಾಕ್ಯ ಸಾರುತ್ತಿದೆ. ಪರಧನ-ಪರಸತಿ-ಪರಭೂಮಿಗಳುಪಿ ಹತವಾಗಿ ಹೋದ ದುರ್ಯೋಧನ. ಹರಿವ ನದಿಯ ಮಿಂದು ಗೋದಾನ ಮಾಡುವ ನರಕಿಗಳ ನುಡಿಯ ಕೇಳಲಾಗದು. ಹದಿನಾಲ್ಕು ಲೋಕಕ್ಕೆ ಕರ್ತೃ ಶಿವನೊಬ್ಬನೇ ಎಂದು ಶ್ರುತಿಗಳು ಪೊಗಳುತ್ತಿಹವು. ಅರತ ದೇವರ ಪೂಜೆಯ ಮಾಡಿ, ಇಷ್ಟಲಿಂಗವ ಮರೆವ ಮೂಳ ಹೊಲೆಯರಿಗೆ ಮುಕ್ತಿ ಆಗದೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಪ್ರಾಣ ಪ್ರಣವವೆಂಬರು, ಪ್ರಾಣಕ್ಕೂ ಪ್ರಣವಕ್ಕೂ ಏನು ಸಂಬಂಧ? ಪ್ರಾಣವೆ ಪ್ರಳಯಕ್ಕೊಳಗಾಗಿ ತಿರುತಿರುಗಿ ಬಪ್ಪುದಕ್ಕೆ ಒಡಲಾಯಿತ್ತು. ಪ್ರಣವವೆ ಪ್ರಸನ್ನವಾಗಿಪ್ಪುದೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪುಷ್ಪವ ಕಂಡುದಕ್ಕೆ ಮತ್ತೆ ಮೂದಲೆ ಉಂಟೆ? ವ್ರತಗೆಟ್ಟವಂಗೆ, ಆಚಾರಭ್ರಷ್ಟಂಗೆ, ಪರಸತಿ ಪರಧನ ದುರ್ಭಿಕ್ಷಂಗೆ, ಪರ ಅಪರವನರಿಯದ ಪಾತಕಂಗೆ ಅಘೋರನರಕಕ್ಕೆಡೆಯಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪ್ರಸಾದವ ನಂಬಿದಡೆ ಭಿಲ್ಲಮರಾಯನಂತೆ ನಂಬಬೇಕಯ್ಯಾ, ಪ್ರಸಾದವ ನಂಬಿದಡೆ ಬಿಬ್ಬಬಾಚಯ್ಯಗಳಂತೆ ನಂಬಬೇಕಯ್ಯಾ, ಪ್ರಸಾದವ ನಂಬಿದಡೆ ವಾಮನಮುನೀಶ್ವರನ ಶಿಷ್ಯನಂತೆ ನಂಬಬೇಕಯ್ಯಾ, ಪ್ರಸಾದವ ನಂಬಿದಡೆ ಮರುಳುಶಂಕರದೇವರಂತೆ ನಂಬಬೇಕಯ್ಯಾ. ಇಂತು ನಂಬಿ ಕೊಂಡಡೆ ಮಹಾಪ್ರಸಾದ! ನಂಬದೆ ಸಮಯದಾಕ್ಷಿಣ್ಯಕ್ಕೆ ಮನದಳುಕಿನಿಂ ಕೊಂಡಡೆ ಅದು ತನಗೆ ಸಿಂಗಿಯ ಕಾಳಕೂಟವಿಷವೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪನ್ನಗಂಗೆ ನನ್ನಿಯ ಗಾರುಡವಲ್ಲದೆ ಮಿಕ್ಕಾದ ದ್ವಯಜಿ[ಹ್ವಿ]ಗಳಿಗುಂಟೆ ? ತಿಳಿದ ಸದೈವಂಗೆ ಸದ್ಭಕ್ತಿ ಸದಾಚಾರವಲ್ಲದೆ, ವಿಶ್ವಾಸಘಾತಕಂಗೆ ಅಪ್ರಮಾಣಂಗೆ ಮುಕ್ತಿ ವಿರಕ್ತಿಯಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪರಪುರುಷಾರ್ಥವನರಿಯದೆ ಕೆಟ್ಟ ನರಗುರಿಗಳು ನೀವು ಕೇಳಿರೋ: ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು. ಮರಳಿ ಕೊಟ್ಟದ್ದಕ್ಕೆ ಕೀರ್ತಿದೇಹವ ಪಡೆದವರ ಪರಿಯ ಕೇಳು ಎಲೇ ಮನವೇ: ಪರಪುರುಷಾರ್ಥಿಯಾದರೆ, ವೀರವಿಕ್ರಮನಂತಾಗಬೇಕು, ಪರಪುರುಷಾರ್ಥಿಯಾದರೆ, ಬಸವಕುಮಾರನಂತಾಗಬೇಕು, ಪರಪುರುಷಾರ್ಥಿಯಾದರೆ, ಕಪೋತಪಕ್ಷಿಯಂತಾಗಬೇಕು, ಇಂತೀ ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು. ಹಣವೇನು ದೊಡ್ಡಿತ್ತುರಿ ಹೆಣ್ಣೇನು ದೊಡ್ಡಿತ್ತುರಿ ಮಣ್ಣೇನು ದೊಡ್ಡಿತ್ತುರಿ ಅನ್ನವೇನು ದೊಡ್ಡಿತ್ತುರಿ ಇಂತಿವುಗಳೊಳು ಒಂದನಾದರೂ ಪರಪುರುಷಾರ್ಥಕ್ಕೆ ನೀಡದೆ ಮಾಡದೆ, ತನ್ನ ಶರೀರವ ಹೊರೆದುಕೊಂಡು ಬದುಕುವೆನೆಂಬ ಹೊಲೆ ಮಾದಿಗರುಗಳಿಗೆ ಇಹ-ಪರ ನಾಸ್ತಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪೃಥ್ವಿಯನೆತ್ತಿತ್ತು ಬಿಂದು, ಬಿಂದುವನೆತ್ತಿತ್ತು ಶಬ್ದ. ಶಬ್ದವನೆತ್ತಿತ್ತು ರೇಚಕ ಪೂರಕ ಕುಂಭಕ. ಈ ರೇಚಕ ಪೂರಕ ಕುಂಭಕ, ಈಡ ಪಿಂಗಳ ಸುಷುಮ್ನವನೆತ್ತಿತ್ತು. ಈ ಈಡ ಪಿಂಗಳ ಸುಷುಮ್ನಯನೆತ್ತಿತ್ತು ರಜ್ಜು. ರಜ್ಜುವನೆತ್ತಿತ್ತು ರೇಣು. ಸಾಕಾರ ನಿರಾಕಾರ ಮೂರು ಲೋಕವ ನಿಲಿಸಿ ನೋಡೆ, ಕಂಡೆನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪೊಡವಿಗೀಶ್ವರ ಗೌರಿಯೊ[ಡನೆ] ಮದುವೆಯಾದಂದು, ಒಡನಾಡಿದ ಮಾಧವ ಗೋವನಾದ, ಮಿಗೆ ಓದಿದ ಬ್ರಹ್ಮ ಹೋತನ ತಿಂದ, ಎಡೆಯಲಾದ ಜಿನ್ನ ಉಟ್ಟುದ ತೊರೆದ. ಇವರ ಪೊಡಮಟ್ಟು ಪೊಡಮಟ್ಟು ಧಾತುಗೆಟ್ಟವರ ಕೇಡಿಂಗೆ ಕಡೆಯಿಲ್ಲೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪುಣ್ಯಪಾಪವಿರಹಿತ ಕಂಡಾ, ಕ್ರೀಯೇಕೆ? ಒಬ್ಬನೇ ಕಂಡಾ, ಆರು ದರ್ಶನವೇಕೆ? ಮಾಟವೆಂಬುದೆಲ್ಲವು ಕೋಟಲೆ ಎಂದು ಕಳದು ದೂಟಿಸಿ ನುಡಿದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪೃಥ್ವಿ ಶುದ್ಧವೆಂಬೆನೆ? ಪೃಥ್ವಿ ಶುದ್ಧವಲ್ಲ. ಜಲ ಶುದ್ಧವೆಂಬೆನೆ? ಜಲ ಶುದ್ಧವಲ್ಲ. ಅಗ್ನಿ ಶುದ್ಧವೆಂಬೆನೆ? ಅಗ್ನಿ ಶುದ್ಧವಲ್ಲ. ವಾಯು ಶುದ್ಧವೆಂಬೆನೆ? ವಾಯು ಶುದ್ಧವಲ್ಲ. ಆಕಾಶ ಶುದ್ಧವೆಂಬೆನೆ? ಆಕಾಶ ಶುದ್ಧವಲ್ಲ. ಗುರುವೆ ನೀ ಕೇಳಯ್ಯ, ಹುಸಿ ನುಸುಳ ಕಳೆದು ಜ್ಞಾನವೆಂಬ ಬೆಳಗ ಸಾಧಿಸಬಲ್ಲಡೆ ಇದೊಂದೆ ಶುದ್ಧವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ