ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವೀರಂಗೆ ರಣಾಗ್ರದ ಕದನ ಭೋರೆಂದು ಕಟ್ಟಿದಲ್ಲಿ ದೂರದಲ್ಲಿರ್ದೆಸೆವನೊಂದಂಬಿನಲ್ಲಿ. ಸೇರಿಬಂದರೆ ಹೊಯಿವ ಬಿಲ್ಲಿನಲ್ಲಿ. ಅವು ಮೀರಿ ಬಂದಲಿ ಇರಿವ ಕಠಾರಿಯಲ್ಲಿ. ಅದು ತಪ್ಪಿದಲ್ಲಿ ತೆಕ್ಕೆಯಲ್ಲಿ ಪಿಡಿವ, ಯುದ್ಧದಲ್ಲಿ ಬಿದ್ದಲ್ಲಿ ಕಡಿವ ಬಾಯಲ್ಲಿ. ಇಂತಿ ಅವರ ಪ್ರಾಣಕ್ಕೆ ಬಂದಲ್ಲಿ ಅವ ತನ್ನ ಧೈರ್ಯ, ವ್ರತವರತುದಿಲ್ಲ. ಹೀಂಗಿರಲಿಲ್ಲವೆ ಸದ್ಭಕ್ತನ ಗುಣ? ಹೊನ್ನು ಹೆಣ್ಣು ಮಣ್ಣುಳ್ಳ ಕಾಲದಲ್ಲಿಯೇ ಪನ್ನಗಧರನ ಶರಣರಿಗೆ ಅನ್ನೋದಕ ವಸ್ತ್ರಂಗಳಿಂದುಪಚಾರವ ಮಾಡುವುದು. ನೀಡಿ ಮಾಡುವ ಭಕ್ತರ ಮಠದ ಒಡಗೊಂಡು ಹೋಗಿ ತೋರುವುದು ಅದಕ್ಕಾಗದಿರ್ದಡೆ ಹರಶರಣರ ಕಮಂಡಲ ಕೊಂಡುಹೋಗಿ ಮಡುವಿನಲ್ಲಿ ಅಗ್ಘವಣಿಯ ತಂದು, ಪಾದವ ತೊಳುವುದು. ಅದಕ್ಕಾಗದಿರ್ದಡೆ ಶಿವಶರಣ ಕಂಡು, ಇದಿರೆದ್ದು ನಮಸ್ಕರಿಸುವುದು. ಇಷ್ಟರೊಳಗೊಂದು ಗುಣವಿಲ್ಲದಿರ್ದರೆ ಅವ ಭಕ್ತನಲ್ಲ, ಅವ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವೇದವನೋದಿದವರು ವಿಧಿಗೊಳಗಾದರಲ್ಲದೆ ದೇವರಿಹರವಾವನರಿದಿಪ್ಪುದಿಲ್ಲ. ಶಾಸ್ತ್ರವನೋದಿದವರು ಸಂಶಯಕ್ಕೊಳಗಾದವರಲ್ಲದೆ ಸದ್ಗುರುವನರಿದುದಿಲ್ಲ. ಆಗಮವನೋದಿದವರೆಲ್ಲರು ಆಗುಚೇಗಿಗೆ ಒಳಗಾದರಲ್ಲದೆ ಆದಿ ಅನಾದಿಯಿಂದತ್ತಣ ಶರಣ-ಲಿಂಗ ಸಂಬಂಧವನರಿದುದಿಲ್ಲ. ಪುರಾಣವನೋದಿದವರೆಲ್ಲರು ಪೂರ್ವದ ಬಟ್ಟೆಗೊಳಗಾದವರಲ್ಲದೆ ಪೂರ್ವದ ಕರ್ಮವ ಹರಿದು ಪುರಾತನರನರಿದುದಿಲ್ಲ. ಇಂತಿವರೆಲ್ಲರು ಚರಶೇಷವ ಲಿಂಗಕ್ಕರ್ಪಿಸಲರಿಯರಾಗಿ ಇವರಿಗೆ ಲಿಂಗವು ಕಾಣಿಸದೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವೇದಂಗಳೆಲ್ಲ ಬ್ರಹ್ಮನೆಂಜಲು, ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು, ಆಗಮಂಗಳೆಲ್ಲ ರುದ್ರನೆಂಜಲು, ಪುರಾಣಂಗಳೆಲ್ಲ ವಿಷ್ಣುವಿನೆಂಜಲು, ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು, ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು. ಇಂತಿವೆಲ್ಲವ ಹೇಳುವರು ಕೇಳುವರು ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಿಹಂಗಂಗೆ ಗುರಿಯಾಸೆಯೆಂದಡೆ ಸಂಚಾರವಿಲ್ಲದೆ ಚರಿಸಬಹುದೆ? ಅರಿವಿಂಗೆ ಕುರುಹಿನಾಸೆಯೆಂದಡೆ, ಆ ಅರಿವು ಕುರುಹಿನೊಳಗಾದ ಮತ್ತೆ, ಬೇರೊಂದು ಕುರುಹೆಂಬ ನಾಮವುಂಟೆ? ಚಿತ್ರದ ಬೊಂಬೆಗಳಿದ್ದ ಮನೆ ಕಿಚ್ಚೆದ್ದು ಬೇವಲ್ಲಿ ಬೊಂಬೆಯ ಹೊತ್ತಿದ ಕಿಚ್ಚು ಚಿತ್ರವಾಗಿ ಉರಿವುದೆ? ನಿಶ್ಚಯವನರಿದ ನಿಜಾತ್ಮನು ಮತ್ತೆ ಕತ್ತಲೆಯ ಹೊಗನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಸ್ತುವ ಕಾಬರೆಲ್ಲರು ಆತ್ಮ ಹಲವು ಬಗೆ ಎಂದಡೆ, ಹಲವಾದುದುಂಟೆ? ಒಂದು ಕುಂಭದ ನೀರು ಹಲವು ರಂಧ್ರಗಳಲ್ಲಿಳಿವುದು. ಅದು ಕುಂಭದ ಭೇದವೋರಿ ಜಲದ ಭೇದವೋ? ಈ ಉಭಯ ಭೇದವ ತಿಳಿದಲ್ಲಿ ಆತ್ಮನೊಂದೆಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವಚನಾರ್ಥವ ಕಂಡಹರೆಂದು ರಚನೆಯ ಮರೆಮಾಡಿ ನುಡಿಯಲೇತಕ್ಕೆ? ದಾರಿಯಲ್ಲಿ ಸರಕು ಮರೆಯಲ್ಲದೆ ಮಾರುವಲ್ಲಿ ಮರೆ ಉಂಟೆ? ತಾನರಿವಲ್ಲಿ ಮರೆಯಲ್ಲದೆ ಬೋಧೆಗೆ ಮರೆಯಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ ? ಶಾಸ್ತ್ರದಲುಳ್ಳಡೆ ಸಮಯವಾದವಪ್ಪುದೆ ? ಪರ್ವತದಲುಳ್ಳಡೆ ಹೋದವರು ಬಹರೆ ? ನಿರ್ಬುದ್ಧಿ ಮಾನವರನೇನೆಂಬೆ! ಮನ, ವಚನ, ಕಾಯಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ ಕಂಡೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವೇದವೇದಾಂತರ, ಶಾಸ್ತ್ರಸಂಪದರ, ಆಗಮಕ್ಕತೀತರ, ಪರಬ್ರಹ್ಮಸ್ವರೂಪರ, ಪರಮವಿರಕ್ತರ ಕೂಡಿಕೊಂಡು ತಾನರಿವಲ್ಲಿ, ಅರಿವ ಕೇಳುವಲ್ಲಿ ಎಡೆದೆರಪಿಲ್ಲದೆ, ಪದಪದಾರ್ಥಂಗಳಲ್ಲಿ, ಕ್ರೀಕ್ರಿಯಾರ್ಥದಿಂದ ತತ್ವತತ್ವಾರ್ಥಂಗಳಲ್ಲಿ ಪದಚ್ಛೇದವ ಮಾಡುವ ಪರಮಾರ್ಥಿಕರ ಪಾದವ ಪದವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ವೇದವ ಪಠಸುವಲ್ಲಿ, ಶಾಸ್ತ್ರವನೋದುವಲ್ಲಿ, ಆಗಮಂಗಳ ತಿಳಿವಲ್ಲಿ, ಶಿವಜ್ಞಾನ ಅನುಭಾವವ ಮಾಡುವಲ್ಲಿ, ಪಗುಡಿ ಪರಿಹಾಸಕರ ಅರ್ತಿಕಾರರ ಹೊತ್ತುಹೋಕರಿಗಾಗಿ ಸಂಘಟ್ಟುವರ ಕೂಡಲುಂಟೆ ? ಇಂತಿವರಲ್ಲಿ ಚಚ್ಚಗೊಟ್ಟಿಯ ಮಾಡುವ ಮಿಟ್ಟೆಯ ಭಂಡರನೊಪ್ಪನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ