ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಲ್ಲದ ಹೊಗೆಯನಿಕ್ಕಿ, ಭರಣಿಯ ಹೊರವಂತೆ ಇರಬೇಡವೆ ಗುರುವಿನುಪದೇಶ? ದಾರಿಯ ಹಸಮಾಡಿ ನೀರ ತಿದ್ದುವಂತೆ ಇರಬೇಡವೆ ಗುರುವಿನುಪದೇಶ? ಹಾಲುಂಬ ಹಸುಳೆಗೆ ಕೂಳು ಮೈಯಕ್ಕುವುದೆ? ಬುದ್ಧಿಹೀನರು ಬಲ್ಲರೆ ಪರಬ್ರಹ್ಮದ ಸುಖವ? ಈ ಭೇದವನರಿಯದ ಗುರುಶಿಷ್ಯರಿಬ್ಬರೂ ಇದ್ದ ಊರೊಳಗಿರೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬ್ರಹ್ಮ ಕುಮಾರ, ವಿಷ್ಣು ಅಬಳ, ಲೆಕ್ಕವಿಲ್ಲದ ರುದ್ರರು ನೋಡಾ. ದೇವರ್ಕಳೆಲ್ಲಾ ಗರ್ವದಲೈದಾರೆ, ಅವರೆತ್ತಬಲ್ಲರು ಶಿವನಾದಿಯಂತುವ? ಶಾಶ್ವತಪದಕ್ಕೆ ಸಲ್ಲದ ಕಾರಣ, ಇವರು ವೇಷಧಾರಿಗಳೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು ನೀಗಿರೊ ನಿಮ್ಮ ಭವಬಂಧನದ ಸಾಗರವನು. ಪ್ರಾಣತ್ಯಾಗವು ಈಗಲೋ ಆಗಲೋ ಯಾವಾಗಲೋ ಎಂದರಿಯಬಾರದು. ರೋಗ ರುಜೆಗಳಿಗೆ ಅಗರವು ನಿಮ್ಮ ಒಡಲು. ತನು-ಮನ-ಪ್ರಾಣವ ನೆಚ್ಚದಿರು, ನಾಗಭೂಷಣನ ಪಾದಪೂಜೆಯ ಮಾಡಿ, ಶಿವಯೋಗದಲಿ ಲಿಂಗವನೊಡಗೂಡಿ ಸಾಗಿ ಹೋಗುವವರನು ಭವಗೇಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ? ವಿಷ್ಣು ನಿಮ್ಮ ಬಲ್ಲಡೆ ಗೋಪಾಲನಹನೆ? ರುದ್ರ ನಿಮ್ಮ ಬಲ್ಲಡೆ ಜಡೆಯ ಕಟ್ಟುವನೆ? ಪಶುಪತಿ ನಿಮ್ಮ ಬಲ್ಲಡೆ ವೇಷವ ಹೊತ್ತು ತೊಳಲುವನೆ? ಗಂಗೆವಾಳುಕರು ನಿಮ್ಮ ಬಲ್ಲಡೆ ಲಿಂಗವ ಪೂಜಿಸುವರೆ? ತಮ್ಮ ಬಲ್ಲಡೆ, ನಿಮ್ಮ ಬಲ್ಲರು. ಅನ್ನಕ ತಡವೆಂದಾತ ನಮ್ಮಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೆಟ್ಟದ ಲಿಂಗವ ಹಿರಿದುಮಾಡಿ, ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ, ಅಣುರೇಣುತೃಣಕಾಷ್ಠ ಮೊದಲಾದ ಬ್ರಹ್ಮಾಂಡ ಪರಿಪೂರ್ಣವಾದ ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂದ್ಥಿಸಿ ಸರ್ವಸಂ[ಕು]ಲವ ತೋರಿದ ಬಳಿಕ, ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ ನಟ್ಟ ಕಲ್ಲಿಂಗೆ ಅಡ್ಡಬೀಳುವ ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು, ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು. ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು.
--------------
ಅಂಬಿಗರ ಚೌಡಯ್ಯ
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ, ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು. ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ [ನಿಜ]ಶರಣನು.
--------------
ಅಂಬಿಗರ ಚೌಡಯ್ಯ
ಬ್ರಹ್ಮದ ಮಾತನಾಡಿ, ಕನ್ನೆಯರ ಕಾಲದೆಸೆಯಲ್ಲಿ ಕುಳಿತಡೆ ಪರಬೊಮ್ಮದ ಮಾತು ಅಲ್ಲಿಯೆ ನಿಂದಿತ್ತೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬರೆದು ಓದಿಸುವ ಅಕರಿಗಳೆಲ್ಲ ನೀವು ಕೇಳಿರೋ: ತರ್ಕ ವ್ಯಾಕರಣ ಛಂದಸ್ಸು ನಿಘಂಟು ವೇದಶಾಸ್ತ್ರವನೋದಿ ಕೇಳಿ ಗಂಗೆಗೆ ಹರಿವವರನೇನೆಂಬೆ? ಪರವಧುವೆಂಬುದನರಿಯಿರಲ್ಲಾ! ನೆರೆದಿರ್ದ ಪಾಪವ ಹೊನಲಿನಲ್ಲಿ ಕಳೆದೆನೆಂಬ ಅಣ್ಣಗಳ ಬೆಡಗು ಬೇಡೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬ್ರಹ್ಮಕ್ಕೆ ಬಾಯಿ ತೆರೆದು ಮಾತನಾಡಿ, ಪರಬೊಮ್ಮದ ವಶ್ಯವ ನುಡಿದು, ಒಮ್ಮನ ಅಂಬಲಿಯನಿಕ್ಕೆಂದು ಹಲುಬುವ ಹೊಲಬುಗೆಟ್ಟವರ ಕಂಡು ಅವರಿಗೆ ಒಲವರವಿಲ್ಲಾ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬ್ರಹ್ಮ ಮೊದಲನರಿಯ, ವಿಷ್ಣು ತುದಿಯನರಿಯ, ಎಡೆಯಣ ಮಾನವರೆತ್ತ ಬಲ್ಲರೊ ಮೃಡನಂತುವ? ಇತ್ತಣ ಮನ[ದ]ವರಿತ್ತಿತ್ತ ಕೇಳಿ ಅತ್ತಣ ಸುದ್ದಿ ನಿಮಗೇತಕ್ಕೆ ನಿಸ್ಸಂಗಿ ನಿರೂಪದ ಮಹಾತ್ಮರೆ ಬಲ್ಲರೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೆಟ್ಟದ ಲಿಂಗವ ಹಿರಿದು ಮಾಡಿ[ಕೊಂ]ಡು ಪರಿವ ಕೊಟ್ಟಿ ಮೂಳರಿರಾ, ಬಿಟ್ಟುಕೊಡಿ ನಿಮ್ಮ ಇಷ್ಟಲಿಂಗವ. ನಮ್ಮ ಕೈಗೆ ಕೊಡದಿದ್ದಡೆ, ನಟ್ಟನಡುನೀರೊಳಗೊಯ್ದಿ, ಕಟ್ಟಿ ಮುಳುಗಿಸಿ ನಿಮ್ಮನು ಲಿಂಗೈಕ್ಯರ ಮಾಡುವೆನೆಂದಾತ ನಮ್ಮಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬ್ರಹ್ಮನ ಘನವೆಂತೆಂಬಿರಯ್ಯ, ಬ್ರಹ್ಮನು ಘನವಲ್ಲ, ಬ್ರಹ್ಮನು ಕಮಲದಲ್ಲಿ ಹುಟ್ಟಿದ. ಆ ಕಮಲವು ಘನವೆಂತೆಂಬಿರಯ್ಯ, ಕಮಲವು ಘನವಲ್ಲ, ಕಮಲ ಕೆಸರಿನಲ್ಲಿ ಹುಟ್ಟಿತು. ಕೆಸರು ಘನವೆಂತೆಂಬಿರಯ್ಯಾ, ಕೆಸರು ಘನವಲ್ಲ, ಕೆಸರು ನೀರಿನಲ್ಲಿ ಹುಟ್ಟಿತು. ನೀರು ಘನವೆಂತೆಂಬಿರಯ್ಯ, ನೀರು ಘನವಲ್ಲ, ನೀರು ಸಮುದ್ರದಲ್ಲಿ ಹುಟ್ಟಿತು. ಸಮುದ್ರವು ಘನವೆಂತೆಂಬಿರಯ್ಯ, ಸಮುದ್ರವು ಘನವಲ್ಲ, ಸಮುದ್ರವು ಅಗಸ್ತ್ಯಮುನಿಯ ಕುಡಿತೆಗೆ ಸಾಲದಾಗಿ ಹೋಯಿತ್ತು. ಅಗಸ್ತ್ಯನು ಘನವೆಂತೆಂಬಿರಯ್ಯ, ಅಗಸ್ತ್ಯನು ಘನವಲ್ಲ, ಅಗಸ್ತ್ಯನು ಕು-ಂಭದಲ್ಲಿ ಹುಟ್ಟಿದ. ಕುಂಭವು ಘನವೆಂತೆಂಬಿರಯ್ಯ, ಕುಂಭವು ಘನವಲ್ಲ, ಕುಂಭವು ಭೂಮಿಯಲ್ಲಿ ಹುಟ್ಟಿತು. ಭೂಮಿಯು ಘನವೆಂತೆಂಬಿರಯ್ಯ, ಭೂಮಿಯು ಘನವಲ್ಲ, ಭೂಮಿಯು ಆದಿಶೇಷನ ತಲೆಗೆ ಸಾಲದಾಗಿ ಹೋಯಿತ್ತು. ಆದಿಶೇಷನು ಘನವೆಂತೆಂಬಿರಯ್ಯ, ಆದಿಶೇಷ ಘನವಲ್ಲ, ಆದಿಶೇಷನು ಪಾರ್ವತಿದೇವಿಯ ಕಿರುಬೆರಳಿನುಂಗುರಕೆ ಸಾಲದಾಗಿ ಹೋಗಿದ್ದ. ಪಾರ್ವತಿದೇವಿಯು ಘನವೆಂತೆಂಬಿರಯ್ಯ, ಪಾರ್ವತಿದೇವಿ ಘನವಲ್ಲ, ಪಾರ್ವತಿದೇವಿಯು ಪರಮೇಶ್ವರನ ಎಡಗಡೆಯ ತೊಡೆಯ ಬಿಟ್ಟು ಬಲಗಡೆಯ ತೊಡೆಯನರಿಯಳು, ಪರಮೇಶ್ವರನು ಘನವೆಂತೆಂಬಿರಯ್ಯ, ಪರಮೇಶ್ವರನು ಘನವಲ್ಲ, ನಮ್ಮ ಪರಮೇಶ್ವರನು ಭಕ್ತನಾದ ಬಸವಣ್ಣನ ಎದೆಯೊಳಗೆ ಅಡಗಿರ್ದನೆಂದು ವೇದಗಳು ಸಾರುವವು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ? ಕ್ರೀಗೆ ಅರಿವಿಲ್ಲದೆ ಅರಿವಿಗೆ ಅರಿವುಂಟೆ? ಮೊಳೆ ಮೊಳೆತು ಪುನರಪಿ ಬೀಜವಾದಂತೆ, ಅರಿವು ಕ್ರೀಯಲ್ಲಿ ನಿಂದು ಉಭಯವು ತಾನಾದ ತೆರದಂತೆ, ಆ ಎರಡರಲ್ಲಿ ಕೂಡಿದ ಉಳುಮೆಯನರಿಯಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬಯಲ ಉದಕವ ಹಿಡಿದು ಮಜ್ಜನಕ್ಕೆರೆವೆನಯ್ಯ. ಸಕಲವನುಳಿದೊಂದು ಪುಷ್ಪದ ಪೂಜೆಯ ಮಾಡುವೆನಯ್ಯ. ಸುಗಂಧ ದುರ್ಗಂಧವ ಕಳೆದು ಧೂಪಾರತಿಯ ಮಾಡುವೆನಯ್ಯಾ. ಪರಬ್ರಹ್ಮವ ಹಿಡಿದು ನಿವಾಳಿಯನೆತ್ತುವೆನಯ್ಯಾ. ಪುಣ್ಯಪಾಪವ ಕಳೆದು ಓಗರವನಿಕ್ಕುವೆನಯ್ಯಾ. ಹದಿನಾಲ್ಕು ಭುವನವನೊಳಗುಮಾಡಿ ಹೊರಗೆ ನಿಂದು ಸದಾಶಿವನ ಪೂಜಿಸಿದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು, ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು. ಅದೇನು ಕಾರಣವೆಂದಡೆ: ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ. ಇವರು ದೇವರೆಂಬುದ ನಾ ಬಲ್ಲೆನಾಗಿ, ಒಲ್ಲೆನೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೆಲ್ಲಕ್ಕೆ ಚದುರಸವಲ್ಲದೆ ಸಿಹಿಗೆ ಚದುರಸವುಂಟೆ? ಕುರುಹಿಂಗೆ ಪೂಜೆಯಲ್ಲದೆ ಅರಿವಿಂಗೆ ಪೂಜೆ ಉಂಟೆ? ಅರಿವು ಕರಿಗೊಂಡಲ್ಲಿ ಕೈಯ ಕುರುಹು ಅಲ್ಲಿಯೆ ಲೋಪವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ