ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಜಾತನನೊಲಿಸದೊಡೆ ಅದೇತರ ಮಂತ್ರ, ಅದೇತರ ಆಗಮ ಹೇಳಿರೋ, ಆಚಾರ್ಯ ಕೊಟ್ಟ ಸಲಾಕಿ ಯಾತರಲ್ಲಿ ನಚ್ಚುವಿರಿ? ಅದಾವ ಮುಖದಲ್ಲಿ, ಲಿಂಗ ಬಂದಿಪ್ಪುದು ? ರೂಪಿಲ್ಲದಾತ ನಿಮ್ಮ ಮಾತಿಂಗೆ ಬಂದಡೆ, ಅದೇತರ ಮಾತೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಡವಿಯ ತೊಪ್ಪಲ ತರತರ ತಂದು ತಿಂದು ಒಡಲ ದಂಡಿಸಿಕೊಂಡು, ಪಡೆ, ಗವಿಯೊಳಗೆ ತಪಸ್ಸಿದ್ದೇವೆಯೆಂದು ಕಡು ಹೆಮ್ಮೆಯಲ್ಲಿ ನುಡಿವ ಅಣ್ಣಗಳು ನೀವು ಕೇಳಿರೋ. ಷಡುರಸಂಗಳು ಹುಟ್ಟಿದವು ಶಿವನ ಕರುಣರಸದಲ್ಲಿ, ಆ ರುಚಿಗಳ ಸುಖಮಂ ಪಡೆದವುದಕ್ಕೆ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಪದಾರ್ಥವ ಹಿಡಿದ ಭಕ್ತನ ಮನೆಯಲ್ಲಿ ಗುರುಲಿಂಗಜಂಗಮಕ್ಕೆ ನೀಡಿ ಮಾಡುವ ಭಕ್ತಿಪದಾರ್ಥವಾದ ಷಡುರುಚಿಯ ಕೊಂಬುದಕ್ಕೆ ನಿಮ್ಮಲ್ಲಿಯೆ ಷಡ್ವಿಧಲಿಂಗಂಗಳುಂಟು. ಅವ ನೋಡಿ ಎಚ್ಚತ್ತು ಸವಿಸವಿದರ್ಪಿಸಬಲ್ಲಡೆ ಮಹಾಮಹಿಮ, ತಾನೇನ ಮಾಡಲು ಜಡನಲ್ಲ, ಅಜಡನು ತಾನೆಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಗ್ನಿ ದಿಟವೆಂದಡೆ ತಾ ಹುಸಿ, ಕಾಷ*ವಿಲ್ಲದೆ. ಕಾಷ*ದಲ್ಲಿ ಅಡಗಿ ಸುಡದಿಪ್ಪ ಭೇದವನರಿತಡೆ, ಪ್ರಾಣಲಿಂಗಿಯೆಂದೆಂಬೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂತರಂಗವ ಬಿಟ್ಟು ಮಂಡೆ ಬೋಳಾದ ಮೇಲೆ ಅಂಗಕೆ ಚೆಂದವುಂಟೆ ಚೆಂದ ಅಲಂಕಾರವುಂಟೆ ತಮ್ಮಂಗದ ಸಂಗವನರಿಯದೆ ಭಂಡರನೇನೆಂಬೆನೆಂದಾತ ನಮ್ಮ ದಿಟ್ಟ ವೀರಾಧಿವೀರ ನಿಜ ಭಕ್ತ ಅಂಬಿಗರ ಚವುಡಯ್ಯನು
--------------
ಅಂಬಿಗರ ಚೌಡಯ್ಯ
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ, ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ, ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ. ಎಸಗುವ ಸಂಸಾರದ ಕುರುಹಿಲ್ಲದಾಂತಗೆ ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂದಾದಿಬಿಂದುವಿನೊಳೊಂದಿದ ಹುಟ್ಟು, ಆ ಹುಟ್ಟನೆ ಹಿಡಿದು ಅಂದ ಚೆಂದದಲ್ಲಿ ತೊಳಸಿ ಆಡುತ್ತೈದಾರೆ ಜಗವೆಲ್ಲಾ! ಅಂದಗೆಟ್ಟವರೆಲ್ಲಾ ಬಂದೇರಿ ಹರುಗೋಲ, ಒಂದೆ ಹುಟ್ಟಿನಲ್ಲಿಳುಹುವೆನೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅನಾದಿಪರಶಿವನಿಂದ ಸಾಕಾರಲೀಲೆಯ ಧರಿಸಿ, ಮರ್ತ್ಯಕ್ಕವತರಿಸಿ, ಶ್ರೀಗುರುಲಿಂಗಜಂಗಮದಿಂದ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡೆದು, ಲಿಂಗಾಂಗಸಮರಸಾನಂದವನರಿದು, ತನ್ನ ಸ್ವಸ್ವರೂಪು ನಿಲುಕಡೆಯ ತಿಳಿದು, ಸತ್ಯ-ಸದಾಚಾರ-ಸನ್ಮಾರ್ಗದ ಗೊತ್ತನರಿದು, ಪಂಚಸೂತಕಪಾತಕ, ಅರುವೈರಿ, ಅಷ್ಟಮದಂಗಳಡಿಮೆಟ್ಟಿ, ಆಚರಿಸುವ ಭಕ್ತಗಣಂಗಳು ಇಂತಿಷ್ಟು ಸತ್ತುಚಿತ್ತಾನಂದನಿತ್ಯಪರಿಪೂರ್ಣ ಅವಿರಳಾನಂದ ನಿಜಾಚರಣೆಯನರಿಯದ ಗುರುವಾಗಲಿ, ಲಿಂಗವಾಗಲಿ, ಜಂಗಮವಾಗಲಿ, ಶರಣನಾಗಲಿ, ಭಕ್ತನಾಗಲಿ, ಪ್ರಸಾದಿಯಾಗಲಿ, ಅವರಿಂದ ಪಾದೋದಕಪ್ರಸಾದವ ಕೊಂಡರೆ ಯಮದಂಡಣೆಗೊಳಗು ನೋಡಾ, ಅಂತ್ಯದಲ್ಲಿ ಠೌರವ, ಎಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಖಂಡಪರಿಪೂರ್ಣ ನುಡಿಗೆಡೆಯಿಲ್ಲದ, ಎಡೆಗೆ ಕಡೆಯಿಲ್ಲದ, ಏಕೋಭರಿತ ಲಿಂಗವು ತಾನಾಗಿದ್ದ ಬಳಿಕ, ಮತ್ತೆ ಲಿಂಗವು ಹೋಯಿತ್ತು, ಇದ್ದಿತ್ತೆಂದಾಡಿಕೊಂಡ ಸೂತಕದ ಯೋಗಿಭ್ರಮಿತರ ಮಾತ ಕೇಳಲಾಗದು, ಅ[ದ]ಂತಿರಲಿ, ಅದು ಎಂತಿದ್ದುದಂತೆ. ಅದಕ್ಕೆ ಕ್ರೀಯಿಲ್ಲ, ನಿಃಕ್ರಿಯೆ ಒಡಲು ಆಯಿತ್ತಾಗಿ. ಅದನಂತಿಂತೆಂದು ದೂಷಿಸಿ ನುಡಿವ ಅನಾಚಾರಿಗಳಿಗೆ ಲಿಂಗವೆಲ್ಲಿಯದೊ ? ನಿಜವೆಲ್ಲಿಯದೊ ? ಅವರು ಲಿಂಗಕ್ಕೆ ದೂರ, ಅವರು ತಮ್ಮ ತಾವರಿಯದೆ ಕೆಟ್ಟರೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು; ತುಂಬಿದ ಸಾಗರದೊಳಗೆ ನೋಡಯ್ಯ. ನಿಂದ ದೋಣಿಯನೇರಿದಂದಿನ ಹುಟ್ಟ ಕಂಡವರಂದವನರಿದಾತ ತೊಳಸುತ್ತಿದ್ದನು. ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅರಿಯದ ಗುರು ಅರಿಯದ ಶಿಷ್ಯಂಗೆ ಅಂಧಕನ ಕೈಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳಲೆ ಮರುಳೆ. ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯ! ಪಾಷಾಣಕ್ಕೆ ಗಿರಿ ಸವೆದವು. ಪತ್ರೆಗೆ ತರು ಸವೆದವು. ಸಪ್ತಸಾಗರಂಗಳು ಮಜ್ಜನಕ್ಕೆ ಸವೆದವು. ಅಗ್ನಿ ಧೂಪಕ್ಕೆ ಸವೆಯಿತ್ತು. ವಾಯು ಕಂಪಿತಕ್ಕೆ ಸವೆಯಿತ್ತು ಉಘೆ! ಚಾಂಗು ಭಲಾ! ಎಂಬ ಶಬ್ದ ಸವೆಯಿತ್ತು. ಎನ್ನಗಿನ್ನೆಂತೊ, ಉಮೇಶನ ಶರಣರು ಮಹಮನೆಯಲ್ಲಿ ಶಿವಲಿಂಗಾರ್ಚನೆಗೆ ಕುಳ್ಳಿದ್ದಡೆ, ನಾನವರ ಪಾದರಕ್ಷೆಯ ಕಾಯ್ದಕೊಂಡಿದ್ದೇನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಂಗದೊಳಗಿಪ್ಪುದು ಲಿಂಗವಲ್ಲ, ಅಂಗದ ಹೊರಗಿಪ್ಪುದು ಲಿಂಗವಲ್ಲ. ಎಲ್ಲ ಅಂಗಂಗಳನೊಳಕೊಂಡಿಪ್ಪ ಲಿಂಗ, ಹೋಗುತ್ತ ಬರುತ್ತ ಇಪ್ಪುದಲ್ಲ! ಚಲನೆಯಿಲ್ಲದ ಅಚಲವಪ್ಪ ಲಿಂಗಕ್ಕೆ, ಹೋಯಿತ್ತು ಎಂಬ ಸಂದೇಹವಿಲ್ಲವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ