ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಚ್ಚಣೆಯ ಬೊಂಬೆ ನೀರಾಗಲಾಗಿ, ನಿಶ್ಚಯಿಸಿಕೊಳ್ಳಬಲ್ಲದೆ ? ಉಚ್ಚೆಯ ಬಚ್ಚಲ, ಕೊಚ್ಚೆಯ ಠಾವು, ಪೂಜಿಸುವ ನಿಶ್ಚಯರಿಗೆ, ಮರೆಮಾಡುವ ಮೆಚ್ಚುನುಂಗಿಗೇಕೆ ನಿಶ್ಚಯದ ಅರಿವು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ, ಬಣ್ಣವನೊರೆದು ಬಂಗಾರದ ಇರವನರಿಯಬಹುದೆ ? ಜೀವವರಿದು ಜ್ಞಾನವ ಕಾಣಬೇಕಲ್ಲದೆ ಜೀವವಳಿದು ಜ್ಞಾನಕ್ಕೆ ಉಳಿವುಂಟೆ ? ಅದು ಜ್ಯೋತಿಯ ಮೇಲಣ ತಮವದೆ, ಕೆಳಗೆ ಬೆಳಗು, ತುದಿಯಲ್ಲಿ ಸಮವದೆ ತಿಳಿದು ನೋಡಿ. ಆ ಪರಿಯ ಇರವು ಜೀವಪರಮನ ಕಲೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ.
--------------
ಸಗರದ ಬೊಮ್ಮಣ್ಣ
ಬಾಳೆಗೆ ಮುಳ್ಳು ಹುಟ್ಟಿ, ಕಿತ್ತಳೆ ಹಲಸಾಗಿ, ಹಲಸಿನ ಹಣ್ಣು ಹೊಲಸು ಹುಟ್ಟಿತ್ತು. ಬಿತ್ತು ಕಹಿಯಾಯಿತ್ತು. ಉಳಿದ ಹಾರೆ ಸವಿಯಾಯಿತ್ತು. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಬೆಂಕಿಗೆ ಚಳಿ ಬಂದು, ಉದಕವ ಕಾಯಲಾಗಿ, ಹಿಮಹಿಂಗಿ ಜ್ವರ ಬಂದಿತ್ತು. ಜ್ವರದ ತಾಪಕಾರದೆ ಅರುಹಿರಿಯರೆಲ್ಲರು ಮಡಿದರು. ಅಜ ಕುಡಿಕೆಯ ನೀರಿನಲ್ಲಿ, ಆ ಕುಡಿಕೆಯ ಒಡೆಯದೆ ಒಡೆದು, ಹಿಮ್ಮಡಿಯಲ್ಲಿ ಒಡನೋಡಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿಯಬಲ್ಲಡೆ.
--------------
ಸಗರದ ಬೊಮ್ಮಣ್ಣ
ಬಂದೆ ಗುಡಿಯ ಹೊತ್ತು, ಡೊಂಬರ ಹಿಂದೆ ಹೋದೆ ಸುತ್ತಿ. ಸೂಳೆಯ ಮಚ್ಚಿ ನಾಣುಗೆಟ್ಟೆ. ಕಾಯವೆಂಬ ಗುಡಿ, ಮೋಹವೆಂಬ ಸೂಳೆ. ಅರಿವ ಮನ ಅರಿಯದೆ ಡೊಂಬರಾಟವೆಂಬ ಬಂಧದಲ್ಲಿ ಹೊಕ್ಕು ನೊಂದೆ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ, ನಿನ್ನೊಂದಾಗಿ ಕೊಂಡಾಡಲಂಜುವೆ.
--------------
ಸಗರದ ಬೊಮ್ಮಣ್ಣ