ಅಥವಾ
(5) (1) (1) (2) (2) (0) (0) (0) (1) (0) (0) (3) (0) (0) ಅಂ (1) ಅಃ (1) (18) (1) (4) (1) (0) (2) (0) (2) (0) (0) (0) (0) (0) (0) (0) (5) (0) (1) (1) (1) (5) (0) (5) (3) (8) (1) (3) (0) (0) (1) (3) (0) (6) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯದ ಕಾನನದಲ್ಲಿ ಭಾವದ ನವಿಲು ನಲಿದಾಡುತ್ತಿರೆ, ಒಂದು ಹಾವಿನ ಮರಿ ಬಂದು ಹಾಯಿತ್ತು. ನವಿಲಂಜಿ ಹೋಗುತ್ತಿರಲಾಗಿ, ಹಾವಿನ ಮರಿಯ ನವಿಲಗರಿ ನುಂಗಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಚೋದ್ಯವಾದ ಕಾರಣ.
--------------
ಸಗರದ ಬೊಮ್ಮಣ್ಣ
ಕಾಲಾಂಧರ ಸಂಹಾರಕ್ಕೆ ಮೊದಲೇ ಲೀಲೆ. ಉಮಾಪತಿಗೆ ಮೊದಲೆ ನಾ ನೀನೆಂಬುದಕ್ಕೆ ನೀ ಕುರುಹಾಗಿ. ನಾನರಿವುದಕ್ಕೆ ಮೊದಲೆ ನಿನ್ನಿರವಾವುದು ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಕಣ್ಣಿನ ಬಾವಿಯಲ್ಲಿ ಕಾಣದ ಕಣ್ಣಿಯ ಬಿಟ್ಟು, ಮಹೀತಳವ ನೆಮ್ಮಿ ಪಾತಾಳಕ್ಕೆ ಬಿಡಲು, ಆಕಾಶದುದಕ ಬಂದು ತುಂಬಿತ್ತು. ಸಗರದ ಬೊಮ್ಮನೊಡೆಯ ತನುಮನ ಸಂಗವಾದಲ್ಲಿಯೆ ಎನ್ನ ಪ್ರಾಣಲಿಂಗಕ್ಕೆ ಮಜ್ಜನವಾಯಿತ್ತು.
--------------
ಸಗರದ ಬೊಮ್ಮಣ್ಣ
ಕಂಡಮಂಡಲ ರಣಭೂಮಿಯಲ್ಲಿ ಅಖಂಡಿತಮಯರು ಕಡಿದಾಡಿ, ಹಿಡಿಖಂಡದ ಕರುಳ ಖಂಡಿಸಿ, ಶಿರ ತಂಡತಂಡದಲ್ಲಿ ದಿಂಡುರುಳಿತ್ತು. ಅಖಂಡಿತನ ಮನ ಖಂಡೆಹದ ಬೆಂಬಳಿಯ ಗಾಯದಲ್ಲಿ ಸುಖಿತನು. ರಣಭೂಮಿಯಲ್ಲಿ ಅಖಂಡಿತ ಗೆದ್ದ. ಸಗರದ ಬೊಮ್ಮನೊಡೆಯ ತನುಮನ ಕೂಡಿ ಸಂಗದ ಸಂಗಸುಖಿಯಾದ.
--------------
ಸಗರದ ಬೊಮ್ಮಣ್ಣ
ಕಾಯದ ಮೇಲಿಹ ಲಿಂಗ ಕೈಬಿಡುವನ್ನಕ್ಕ ಕೈಗೆ ಭಿನ್ನ. ವಸ್ತ್ರವ ಬಿಟ್ಟು ನೋಡಿ ಕಾಬನ್ನಕ್ಕ ಕಂಗಳಿಗೆ ಭಿನ್ನ. ಕಂಗಳು ಕಂಡು ಮನದಲ್ಲಿ ಬೇಧಿಸುವನ್ನಕ್ಕ ರೂಪಿಂಗೆ ಭಿನ್ನ. ಉಭಯಗುಣವಳಿದು, ಎರಡರ ಅಭಿಸಂದಿಯ ಕಾಣಿಕೆ ಹಿಂಗಿ, ನಿಜವ ಕಾಣಿಸಿಕೊಂಬುದು. ತಾನಾಗಿ ಕಂಡಲ್ಲಿಯೆ ಇದಿರಿಡುವುದು, ನಾಮನಷ್ಟ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ತಾನು ತಾನೆ.
--------------
ಸಗರದ ಬೊಮ್ಮಣ್ಣ
ಕಾಯದೊಳಗಣ ಕೂಟವ ಬಿಟ್ಟು, ಕಣ್ಣಿನೊಳಗಣ ನೋಟವ ಬಿಟ್ಟು, ಮನದೊಳಗಣ ಜಗದಾಟವ ಬಿಟ್ಟು, ಏತರಲ್ಲಿದ್ದೊ ಕಲೆದೋರದೆ, ಕಂಜಪತ್ರದ ಅಂಬುವಿನಂತೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು.
--------------
ಸಗರದ ಬೊಮ್ಮಣ್ಣ
ಕಾಯಗುಣದಲ್ಲಿದ್ದು ಕರಣಂಗಳಂತಾಡದಿದ್ದಡೆ, ಕಾಯದ ಸಂಗವೇ ಲೇಸು, ಇಂದ್ರಿಯಂಗಳ ಸಂಸರ್ಗದಲ್ಲಿದ್ದು ಮುಟ್ಟುವ ಸಂಗವ ಬಲ್ಲಡೆ, ಇಂದ್ರಿಯಂಗಳ ಸಂಗವೇ ಲೇಸು. ಅವಗುಣದಲ್ಲಿದ್ದು ಅರತು, ತನ್ನಯ ಸಾವರಿತಡೆ, ಸಾವಯವ ಲೇಸು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಕೂಡಿ ಕೂಟವಾದ ಮತ್ತೆ.
--------------
ಸಗರದ ಬೊಮ್ಮಣ್ಣ
ಕಾರುಕನ ಹೃದಯದ ಕಪಟ, ಕಣಿಲೆಂದು ಕೈಯ ಕಲ್ಲು, ತನು ಕಟ್ಟಳೆಹೀನನ ಹೊಗುತೆ, ಸೈರಣೆಯವಳೊಳುಪಿನ ಮಾತು, ಇವು ಸಾರದ ಪ್ರಸ್ಥದಂತೆ, ವೇಷಡಂಬಕನ ಚಾತುರಿಯದ ಗೀತ[ದಂತೆ]. ಇಂತೀ ಘಾತುಕತನದ ವೇಷವ ಬಿಟ್ಟು, ನುಡಿ ನಡೆ ಸಿದ್ಧಾಂತವಾಗಬೇಕು. ಸಗರದ ಬೊಮ್ಮನೊಡೆಯ ಇವರಿಗೆ ಸದರವೆ ಹರಿ, ಕುಟಿಲ ಬಿಟ್ಟು ಅರಿ, ತನುಮನ ಸಂಗಮೇಶ್ವರಲಿಂಗವ.
--------------
ಸಗರದ ಬೊಮ್ಮಣ್ಣ
ಕಲ್ಪಿತವಿಲ್ಲದ ಭೂಮಿಯಲ್ಲಿ, ಅಕಲ್ಪಿತದ ಕಲ್ಲು ಹುಟ್ಟಿತ್ತು. ಕಲ್ಲಿನ ಹೊರೆಯಲ್ಲಿ ಮೂರು ಬೆಲ್ಲ ಹುಟ್ಟಿತ್ತು. ಬೆಲ್ಲವ ಮೆದ್ದವರಲ್ಲಿಯೇ ಕಲ್ಲು ಮೆದ್ದವರು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿಗೆ.
--------------
ಸಗರದ ಬೊಮ್ಮಣ್ಣ
ಕರಣಂಗಳ ಕಾಳಿಕೆಯಳಿದುದೆ ನಿರಂಜನದ ಬೆಳಗಯ್ಯಾ. ಊಧ್ರ್ವಮಧ್ಯದಲ್ಲಿ ತಿರುಗಾಡುವ ಹಂಸನ ಶಂಕೆಯ ಹರಿದುದೆ, ಅಖಂಡಿತದ ಕಡ್ಡಿವತ್ತಿಯ ತುದಿವೆಳಗಯ್ಯಾ. ಒಂಕಾರವೆ ದಿವ್ಯಸಂಚಾರವಯ್ಯಾ. ಶ್ರುತಿಸ್ಮೃತಿತತ್ವವೆ ಸಕಲನಾದಪೂಜೆಯಯ್ಯಾ. ಎನ್ನ ಸಕಲೇಂದ್ರಿಯ ಭಾವಚ್ಛೇದನವೆ ನಿಮಗಾಲವಟ್ಟವಯ್ಯಾ. ಎನ್ನ ಚಿತ್ತ ಸುಚಿತ್ತವಾದುದೆ ನಿಮಗೆ ಛತ್ರವಯ್ಯಾ. ಪ್ರಕೃತಿ ಪ್ರಪಂಚುಭಾವ ತಲೆದೋರದೆ ಸೂಸದೆ, ಘನ ಒಲೆದಾಡುವುದೆ ಚಾಮರವಯ್ಯಾ. ನಿಮಗೆನ್ನ ಚತುಷ್ಟಯ ಭಾವಹಿಂಗಿ ನಿಬ್ಬೆರಗಾದುದೆ ಆಭರಣವಯ್ಯಾ. ಒಬ್ಬುಳಿಯ ತನುಭಾವ ಕೂಡಿದುದೆ ಲಿಂಗಸುಖವಾಸದ ವಸ್ತ್ರವಯ್ಯಾ. ಇಂತೀ ಪೂಜೆ, ಸಗರದ ಬೊಮ್ಮನೊಡೆಯ ನೀ ನಾನೆಂಬುಭಯವನರಿದು ಮರೆದಲ್ಲಿಯೆ, ಸದಮಲಾನಂದ ಪೂಜೆಯಯ್ಯಾ.
--------------
ಸಗರದ ಬೊಮ್ಮಣ್ಣ
ಕಂಡೆ, ಆಕಾಶದಲ್ಲಿ ಒಂದು ಉಡುಪತಿಯ. ಅದು ಅರ್ಧ ನಿಜರೂಪು, ಅರ್ಧ ತಮರೂಪು. ಅದು ಜಗಕ್ಕೆ ಉಡುಪತಿ, ಎನಗದು ಸಮಧಿಪತಿ. ಅದರ ತೊಡಿಗೆಯ ಗಡಣ ಉಭಯಮಾರ್ಗ. ಅದರಸುವಿನ ಉಡುವ ಗಡಣವನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಕಂಗಳಸೂತಕ ಹೋಯಿತ್ತು, ನಿಮ್ಮಂಗದ ದರ್ಶನದಿಂದ. ಮನದ ಸೂತಕ ಹೋಯಿತ್ತು, ನಿಮ್ಮ ನೆನಹು ವೇಧಿಸಿ. ಸಕಲಸೋಂಕಿನ ಭ್ರಾಂತು ಬಿಟ್ಟಿತ್ತು, ನಿಮ್ಮ ಹಿಂಗದ ಅರಿಕೆಯಲ್ಲಿ. ಇಂತೀ ನಾನಾವಿಧದ ಭೇದೋಪಭೇದಂಗಳೆಲ್ಲವು, ನಿಮ್ಮ ಕಾರುಣ್ಯದಲ್ಲಿಯೆ ಲಯ, ಸಗರದಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಕಪ್ಪೆ ಕಚ್ಚಿ ಹಾವು ಸತ್ತಿತ್ತು. ಹಾವಾಡಿಗ ಬಂದು ನೋಡಲಾಗಿ, ಆ ಹಾವಿದೆ. ಹಾವು ಸತ್ತಿತ್ತು, ಇದೇನು ಗುಣವೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಕಾಡುಗುರಿ ಈಯಿತ್ತೊಂದು ಮೂದೇವರ ಮುಲ್ಲನ ಮರಿಯ. ಅದಕ್ಕೆ ಮೇಹಿಲ್ಲ, ಹಾಲನೊಲ್ಲದು. ಅದು ಬಾಲೆಯರ ಬಣ್ಣದ ಲೋಲಮರಿ. ಸಾಲುಗಾಲಿನಲ್ಲಿ ಹರಿದಾಡುತ್ತಿದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಒಲಿದು ಒಲ್ಲದ ಕಾರಣ.
--------------
ಸಗರದ ಬೊಮ್ಮಣ್ಣ
ಕಾಲಕಣ್ಣಿನಲ್ಲಿ ಒಬ್ಬ ಬಾಲೆ ಹುಟ್ಟಿದಳು. ಆ ಬಾಲೆಗೆ ಮೊಲೆ ಒಂದೆ, ಉಂಬ ಮಕ್ಕಳು ಐವರು. ಅವಳ ಗಂಡ ಶಿಖಂಡಿ, ಮಕ್ಕಳು ಹುಟ್ಟಿದ ಭೇದವ ಹೇಳಾ. ಮಕ್ಕಳು ಅಪ್ಪಾ ಎಂಬುವುದಕ್ಕೆ ಮೊದಲೆ ಸತ್ತ, ಹೆತ್ತ ತಂದೆ. ಅವನ ಹೆಂಡತಿ ಅವನೊಂದಾಗಿ ಹೊಂದಲೊಲ್ಲದೆ, ಮಿಂಡನೊಂದಿಗೆ ಹೊಂದಿದ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಕಾಯಕ್ಕೆ ಲಿಂಗವ ಕಟ್ಟುವಾಗ, ಆ ಕಾಯವ ಬಾಧೆಗೆ ಹೊರಗುಮಾಡಬೇಕು. ಮನಕ್ಕೆ ಅರಿವ ಪೇಳುವಾಗ, ಕರಣಂಗಳ ಮರಣವ ಮಾಡಬೇಕು. ಇದು ಕಾರಣ, ಅಂಗಕ್ಕೆ ಕ್ರೀ, ಮನಕ್ಕೆ ಮರವೆಯಿಲ್ಲದೆ ಕೂಡಲಾಗಿ, ಸಂಗವಾಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಕರೆವ ಕಾಮಧೇನು ಒಂದು ಕರುವನೀದು, ಕರೆಯದೆ ಹೋಯಿತ್ತು. ಆ ಕರು ಅರಿದು, ತನ್ನ ತಾಯನೀದು, ಕರುವಿಂಗೆ ತಾಯಿ ಕರುವಾಗಿ, ಎಡೆಬಿಡುವಿಲ್ಲದೆ ಕರೆವುತ್ತಿದೆ. ಹಾಲಿನ ಮಧುರ ತಲೆಗೇರಿ ಅಳಿಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವ ವೇದಿಸಿದ ಕಾರಣ.
--------------
ಸಗರದ ಬೊಮ್ಮಣ್ಣ
ಕಂಚಿನ ಮಂಜುಳದಲ್ಲಿ ತೋರುವ ನಂಜು, ಕೊಲುವರಿಗೆ ಬಿಂದು. ಸಾಕಾರ ನಿಂದಲ್ಲಿ ಆತ್ಮಂಗೊಡಲೆ ? ಆ ಒಡಲೊಡೆದು, ಒಡಲೊಡೆಯನನರಿತಡೆ, ಅದು ಸಂಸಾರಕ್ಕೆ ಬಿಡುಗಡೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ