ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಮಶೀಲ ನೇಮ ಒಂದಾದಲ್ಲಿ ಉಡುವ ತೊಡುವ ಕೊಡುವ ಕೊಂಬ ಅಡಿಯೆಡೆ ಮುಂತಾಗಿ ಸಕ್ಕರೆಯ ಬುಡಶಾಖೆಯಂತೆ ಮಧುರಕ್ಕೆ ಹೆಚ್ಚು ಕುಂದಿಲ್ಲದೆ ಇಪ್ಪ ನೇಮ ಕಟ್ಟಾಚಾರ ನಿಶ್ಚಯವಾದವಂಗೆ, ಅಂಗ ಹಲವಲ್ಲದೆ ಕುಂದಣ ಒಂದೆ ಭೇದ. ನೇಮ ಹಲವಲ್ಲದೆ ಜ್ಞಾನವೊಂದೆ ಭೇದ. ಭೂಮಿ ಹಲವಲ್ಲದೆ ಅಪ್ಪುವೊಂದೆ ಭೇದ, ಬಂದ ಯೋನಿ ಒಂದೆ. ತಾ ಮುಂದಿಕ್ಕುವ ಯೋನಿ ಒಂದಾದ ಕಾರಣ. ಹಿಟ್ಟು ಹಲವಾದಡೆ ಅಪ್ಪದಕಲ್ಲು ಒಂದೆಯಾದಂತೆ. ಇದು ತಪ್ಪದ ಆಚಾರ, ಇದಕ್ಕೆ ಮಿಥ್ಯತಥ್ಯವಿಲ್ಲ, ತಪ್ಪದು ನಿಮ್ಮಾಣೆ. ಆಚಾರಕ್ಕರ್ಹನಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ ಸ್ಥೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ. ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ. ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ? ಇದ ನಾನರಿಯೆ, ನೀವೆ ಬಲ್ಲಿರಿ. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು ? ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ, ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ, ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ.
--------------
ಅಕ್ಕಮ್ಮ
ಸರ್ವ ಇಂದ್ರಿಯಗಳ ಒಂದು ಮುಖವ ಮಾಡಿ ಸರ್ವ ಮೋಹಂಗಳಲ್ಲಿ ನಿರ್ಮೋಹಿತನಾಗಿ, ಅಂಗದಿಚ್ಫೆಯ ಮರೆದು ವ್ರತವೆಂಬ ಆಚಾರಲಿಂಗವ ಧರಿಸಬೇಕಲ್ಲದೆ ತನುವಿಗೆ ಬಂದಂತೆ ಮುಟ್ಟಿ, ಮನಕ್ಕೆ ಬಂದಂತೆ ಹರಿದು, ನಾನಿಲ್ಲಿ ಒಬ್ಬ ಶೀಲವಂತನಿದ್ದೇನೆ ಎಂದು ಕಲಹಟ್ಟಿಯಂತೆ ಕೂಗುತ್ತ ಕೊರಚುತ್ತ ಅಲ್ಲಿ ಬೊಬ್ಬಿಡುತ್ತ ಶೂಲವನೇರುವ ಕಳ್ಳನಂತೆ ಬಾಹ್ಯದಲ್ಲಿ ಬಾಯಾಲುವ, ಮನದಲ್ಲಿ ಸತ್ತೆಹೆನೆಂಬ ಸಂದೇಹದವನಂತೆ ಸಾಯದೆ, ಹೊರಗಣ ಕ್ರೀ ಶುದ್ಭವಾಗಿ, ಒಳಗಳ ಆತ್ಮ ಶುದ್ಧವಾಗಿ, ಉಭಯ ಶುದ್ಧವಾಗಿಪ್ಪುದು ಪಂಚಾಚಾರ ನಿರುತ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸರ್ವಾಂಗಭರಿತನು
--------------
ಅಕ್ಕಮ್ಮ
ಸಂದೇಹವ ಹರಿದವಂಗಲ್ಲದೆ ಸಹಭೋಜನ ಭಾಜನವಿಲ್ಲ. ಸಂದಿತ್ತು ಸಲ್ಲದೆಂಬ ಸಂಕಲ್ಪವಳಿದವಂಗಲ್ಲದೆ ಭರಿತಾರ್ಪಣವಿಲ್ಲ. ನೇಮ ತಪ್ಪಿದಲ್ಲಿ ಆಶೆಯು ಬಿಟ್ಟವಂಗಲ್ಲದೆ ಸರ್ವವ್ರತದ ದೆಸೆಯಿಲ್ಲ. ಇಂತೀ ಆಶೆಯ ಪಾಶದಿಂದ ತಾ ಹಿಡಿದ ವ್ರತದ ಭಾಷೆಯ ತಪ್ಪಿ ಮತ್ತೆ ಪ್ರಾಯಶ್ಚಿತ್ತವೆಂದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ ಇಹಪರಕೆ ಹೊರಗೆಂದು ಡಂಗುರವಿಕ್ಕುವ.
--------------
ಅಕ್ಕಮ್ಮ
ಸಮಶೀಲಸಂಪಾದಕರು ಬಂದಿದ್ದಲ್ಲಿ ತಮ್ಮ ತಮ್ಮನೆಯಲ್ಲಿ ವಿಶೇಷ ದ್ರವ್ಯವ ಸಂಚವಿರಿಸಿ ಇದ್ದುದನಿದ್ದಂತೆ ಎಡೆಮಾಡೆಂದಡೆ ಬದ್ಧಕತನವಲ್ಲದೆ ಆ ವ್ರತ ನಿರ್ಧರವೆ ? ಆ ಹರಶರಣರು ಮನೆಯಲ್ಲಿ ಬಂದಿರೆ ಅವರ ಮಲಗಿಸಿ, ತಾ ತನ್ನ ಸತಿಯ ನೆರೆದಡೆ, ಅವರ ನಿಲಿಸಿ ತಾ ಮತ್ತೊಂದಕ್ಕೆ ಹೋದಡೆ, ಶರಣಸಂಕುಳಕ್ಕೆ ಹೊರಗು, ಅವರಲ್ಲಿ ಮುಯ್ಯಾಂತು ಬೀಳ್ಕೊಂಡು ತನ್ನ ಸಂದೇಹ ಒಂದೂ ಇಲ್ಲದಂತೆ ಉಭಯವ ತಿಳಿದು ಮಾಡುವ ಮಾಟಕ್ಕೆ ಹಿಡಿದ ವ್ರತಕ್ಕೆ ಭಾವಶುದ್ಧವಾಗಿ ಇಪ್ಪುದು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸಂಪಾದನೆ.
--------------
ಅಕ್ಕಮ್ಮ
ಸರಸಕ್ಕೆ ಸತ್ತವರುಂಟೆ ? ವಿನೋದಕ್ಕೆ ಪಾರದ್ವಾರ ಉಂಟೆ ? ಅರ್ತಿಯೆಂದು ಕಣ್ಣ ಕುತ್ತಿದಡೆ ಆ ಕೆಟ್ಟ ಕೇಡು ಅದಾರಿಗೆ ಪೇಳಾ ? ಸತ್ಯನಾಗಿದ್ದು ಭಕ್ತರು ಜಂಗಮದಲ್ಲಿ ಚಚ್ಚಗೋಷ್ಠಿಯನಾಡುವ ಮಿಟ್ಟಿಯ ಭಂಡರಿಗೆ ಸತ್ಯಸದಾಚಾರ ಮುಕ್ತಿಭಾವ ಒಂದೂ ಇಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಸೆರೆಗೆ ಸತಿ ಸಿಕ್ಕಿದಲ್ಲಿ ಅಪಮಾನವನರಸಲಿಲ್ಲ. ಹುತ್ತವನೇರಿ ಹುಲ್ಲ ಕಚ್ಚಿದಲ್ಲಿ ಪಟುಭಟತನವನರಸಲಿಲ್ಲ. ವ್ರತಾಚಾರಕ್ಕರ್ಹನಾಗಿ ಭವಿದ್ರವ್ಯವನೊಲ್ಲೆನೆಂದು ಆ ಭವಿಯ ಸೀಮೆಯ ಭಕ್ತನ ಕೈಯಿಂದ ಕೊಂಡು ಭಕ್ತ ಕೊಟ್ಟನೆಂದು ತಕ್ಕೊಂಬ ಮಿಟ್ಟೆಯ ಭಂಡನ ಶೀಲ ಸಿಕ್ಕಿತ್ತು. ಹೊಸ್ತಲ ಪೂಜಿಸುವ ಪಾಣ್ಬೆಯಂತಾಯಿತ್ತು. ಇನ್ನಾರಿಗೆ ಹೇಳುವೆ ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವೆ ನೀನೆ ಬಲ್ಲೆ.
--------------
ಅಕ್ಕಮ್ಮ
ಸರ್ವಶೀಲದ ವ್ರತದಾಯತವೆಂತುಟೆಂದಡೆ ತನ್ನ ವ್ರತವಿಲ್ಲದ ಗುರುವ ಪೂಜಿಸಲಾಗದು. ವ್ರತವಿಲ್ಲದ ಜಂಗಮದ ಪ್ರಸಾದವ ಕೊಳಲಾಗದು. ವ್ರತವಿಲ್ಲದವರ ಅಂಗಳವ ಮೆಟ್ಟಲಾಗದು. ಅದೆಂತೆಂದಡೆ ಗುರುವಿಗೂ ಗುರು ಉಂಟಾಗಿ, ಲಿಂಗಕ್ಕೂ ಉಭಯಸಂಬಂಧ ಉಂಟಾಗಿ. ಆ ಜಂಗಮಕೂ ಗುರುಲಿಂಗ ಉಭಯವುಂಟಾಗಿ ಜಂಗಮವಾದ ಕಾರಣ. ಇಂತೀ ಗುರುಲಿಂಗಜಂಗಮಕ್ಕೂ ಪಂಚಾಚಾರ ಶುದ್ಧವಾಗಿರಬೇಕು. ಪುರುಷನ ಆಚಾರದಲ್ಲಿ ಸತಿ ನಡೆಯಬೇಕಲ್ಲದೆ ಸತಿಗೆ ಸ್ವತಂತ್ರ ಉಂಟೆ ? ಇಂತೀ ಉಭಯದ ವ್ರತವೊಡಗೂಡಿದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ವ್ರತವೆ ವಸ್ತು.
--------------
ಅಕ್ಕಮ್ಮ
ಸಂದೇಹವುಳ್ಳನ್ನಕ್ಕ ವ್ರತಾಂಗಿಯಲ್ಲ. ಅಲಗಿನ ಮೊನೆಗಂಜುವನ್ನಕ್ಕ ಪಟುಭಟನಲ್ಲ. ತ್ರಿವಿಧದ ಅಂಗವುಳ್ಳನ್ನಕ್ಕ ಲಿಂಗಾಂಗಿಯಲ್ಲ. ಸೋಂಕು ಬಂದಲ್ಲಿ ಆ ಅಂಗವ ಬಿಡದಿದ್ದಡೆ ಶೀಲವಂತನಲ್ಲ. ಈ ನೇಮಂಗಳಲ್ಲಿ ನಿರತನಾದವಂಗೆ ಅಲ್ಲಿ ಇಲ್ಲಿಯೆಂಬ ಅಂಜಿಕೆ ಎಲ್ಲಿಯೂ ಇಲ್ಲದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಯೂ ಇಲ್ಲ.
--------------
ಅಕ್ಕಮ್ಮ
ಸಪ್ಪೆಯ ವ್ರತವೆಂಬುದ ನಾವರಿಯೆವು, ನೀವು ಹೇಳಿರಯ್ಯಾ. ಸರ್ವ ಫಲರಸ ಘೃತ ತೈಲ ಮಧುರ ವಿದಳಧಾನ್ಯ ಮುಂತಾದವಕ್ಕೆ ಎಲ್ಲಕ್ಕೂ ತಮ್ಮ ತಮ್ಮಲ್ಲಿಯ ರುಚಿ ಸಪ್ಪೆಯ ನೇಮವನೊಂದನೂ ಕಾಣೆ. ಇದ ನೀವೆ ಬಲ್ಲಿರಿ. ಸಪ್ಪೆ ಯಾವುದೆಂದಡೆ ಸುಖದುಃಖಂಗಳೆಂಬುದನರಿಯದೆ, ತನುವಾಡಿದಂತೆ ಆಡದೆ, ಮನ ಹರಿದಂತೆ ಹರಿಯದೆ, ಬಯಕೆ ಅರತು ಭ್ರಾಮಕ ಹಿಂಗಿ ಸರ್ವವಿಕಾರ ವಿಸರ್ಜನವಾಗಿ, ಹಿಂದಾದುದ ಮರೆದು ಮುಂದಕ್ಕೆ ಗತಿಯೆಂದು ಒಂದ ಕಾಣದೆ, ಹಿಂದು ಮುಂದೆಂದು ಒಂದನರಿಯದಿದ್ದುದೆ ಸಪ್ಪೆ. ಇದು ಅಂತರಂಗದ ವ್ರತ ಲವಣವ ಬಿಟ್ಟುದು ಬಹಿರಂಗ ಶೀಲ. ಇಂತೀ ಉಭಯವ್ರತ ಏಕವಾದಲ್ಲಿ ಸರ್ವಸಪ್ಪೆ ಸಂದಿತ್ತು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಪ್ಪೆಯ ವ್ರತ ಅರ್ಪಿತವಾಯಿತ್ತು.
--------------
ಅಕ್ಕಮ್ಮ
ಸೀಮೋಲ್ಲಂಘನವೆಂಬುದ ನಾನರಿಯೆ, ನೀವೆ ಬಲ್ಲಿರಿ. ಇದ್ದ ಮನೆಯ ಬಿಡಲಾರದೆ, ತೊಟ್ಟಿದ್ದ ತೊಡಿಗೆಯ ಅಳಿಯಲಾರದೆ, ಇದ್ದ ಠಾವ ಬಿಟ್ಟು ಹೋಗೆನೆಂಬುದು ಛಲವೆ ? ಅದು ತನ್ನ ಸೀಮೆಯೊ ಜಗದ ಸೀಮೆಯೊ ಎಂಬುದ ತಾನರಿಯಬೇಕು. ತನ್ನ ಸೀಮೆಯಲ್ಲಿ ಬಂದಂಗವ ಜಗದ ಸೀಮೆಯಲ್ಲಿ ಅಳಿಯಬಹುದೆ ತನ್ನಂಗಕ್ಕೆ ಕಂಟಕ ನೇಮ ತಪ್ಪಿ ಬಂದಲ್ಲಿ ಅಂಗವ ಲಿಂಗದಲ್ಲಿ ಬೈಚಿಟ್ಟು ಕೂಡಿದ ಅಂಗ ಸೀಮೋಲ್ಲಂಘನ. ಇಂತೀ ನೇಮ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಂದಿತ್ತು
--------------
ಅಕ್ಕಮ್ಮ
ಸ್ಥಾವರಕ್ಕೆ ಲಿಂಗಮುದ್ರೆ, ಪಾಷಾಣಕ್ಕೆ ಲಿಂಗಮುದ್ರೆ, ಗೋವಿಗೆ ಲಿಂಗಮುದ್ರೆ, ಮತ್ತಾವಾವ ರೂಪಿನಲ್ಲಿ ಲಿಂಗಾಂಕಿತವ ಮಾಡಿದಡೂ ಪ್ರೇತಾಂಕಿತಭೇದ. ಅದೆಂತೆಂದಡೆ ; ತರು ಫಲವ ಹೊತ್ತಂತೆ ಸವಿಯನರಿಯವಾಗಿ. ಮಾಡಿಕೊಂಡ ನೇಮಕ್ಕೆ ತಮ್ಮ ಭಾವದ ಶಂಕೆಯಲ್ಲದೆ ಧರಿಸಿದ್ದವು ಇದಾವ ಲಿಂಗವೆಂದರಿಯವು. ತಾನರಿದು ಆ ವ್ರತ ನೇಮ ಮಾಟವ ಮಾಡುವಲ್ಲಿ ಶೀಲದ ತೊಡಿಗೆ, ನೇಮದ ಖಂಡಿತ, ಮಾಟದ ಕೂಟ ಇಂತಿವನರಿದು ತನುವಿಂಗಾಚಾರ, ಮನಕ್ಕೆ ವ್ರತ, ಮಾಟಕ್ಕೆ ನೇಮ, ಕೂಟಕ್ಕೆ ನಿಶ್ಚಯ.ಇಂತೀ ಮತ್ರ್ಯದ ಆಟವುಳ್ಳನ್ನಕ್ಕ ಸದಾತ್ಮನಿಹಿತವಿರಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ.
--------------
ಅಕ್ಕಮ್ಮ
ಸದೈವ ಆವಾವ ಗೋತ್ರದಲ್ಲಿ ಬಂದಡೂ ಎಣ್ಣೆ ನೀರಿನಂತೆ, ಮಣ್ಣು ಹೊನ್ನಿನಂತೆ, ತನ್ನ ಅನು ಆಚಾರಕ್ಕೆ ಬಂದವರ ತನ್ನವರೆಂದು ಭಾವಿಸಬೇಕಲ್ಲದೆ, ತನ್ನ ಆಚಾರಕ್ಕೆ ಹೊರಗಾದವರ ಅಣ್ಣ ತಮ್ಮನೆಂದು ತಂದೆ ತಾಯಿಯೆಂದು, ಮಿಕ್ಕಾದವರ ಹೊನ್ನು ಹೆಣ್ಣು ಮಣ್ಣಿನವರೆಂದು, ದಿಕ್ಕುದೆಸೆಯೆಂದು ಅಂಗೀಕರಿಸಿದಡೆ, ಅವರಂಗಳವ ಕೂಡಿದಡೆ, ಅವರೊಂದಾಗಿ ನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರ ಒಳಗಿಟ್ಟುಕೊಳ್ಳ
--------------
ಅಕ್ಕಮ್ಮ