ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೆಳ್ಳೆ, ಭಂಗಿ, ನುಗ್ಗಿ, ಉಳ್ಳೆ ಮೊದಲಾದವನೆಲ್ಲವ ಬಿಡಬೇಕು. ಬೆಳ್ಳೆಯಲ್ಲಿ ದೋಷ, ಭಂಗಿ ನುಗ್ಗಿಯಲ್ಲಿ ಲಹರಿ, ಉಳ್ಳೆಯಲ್ಲಿ ದುರ್ಗುಣ, ವ್ರತ ಲಿಂಗಕ್ಕೆ ಸಲ್ಲವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು.
--------------
ಅಕ್ಕಮ್ಮ
ಬಂದುದ ಸಾಕೆನ್ನದೆ, ಬಾರದುದ ತಾ ಎನ್ನದೆ, ಗಡಿಗೆ ಬಟ್ಟಲು ನಮ್ಮೆಡೆಯಲ್ಲಿ ಒಡಗೂಡಿ ಸುರಿಯೆನ್ನದೆ, ಮಂತ್ರ ಭಿನ್ನವಾಗಿ, ಮತ್ತಾರಿಗು ಸಂಚರಿಸದೆ, ಕೆಲಬಲದಿಂದ ಅವರಿಗೆ ಅದು ನೇಮವೆಂದೆನಿಸದೆ ಲಿಂಗಕ್ಕೆ ಬಂದು ಸಂದುದ ಆನಂದದಿಂದ ಸ್ವೀಕರಿಸಿ ನಿಂದುದೆ ಭರಿತಾರ್ಪಣ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು. ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು. ತಲೆ ಜಡೆಗಟ್ಟಿದವರೆಲ್ಲ ಹೊಲೆಯರ ಸಂತಾನ. ಆವ ಪ್ರಕಾರವಾದಡೇನು ಅರಿವೆ ಮುಖ್ಯವಯ್ಯಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಬಸವಣ್ಣ, ಚೆನ್ನಬಸವಣ್ಣ, ಪ್ರಭು, ವೀರಮಡಿವಳ, ನಿಜಗುಣಶಿವಯೋಗಿ, ಸಿದ್ಭರಾಮ, ಮೋಳಿಗೆಯಯ್ಯ, ಆಯ್ದಕ್ಕಿಯ ಮಾರಯ್ಯ, ಏಕಾಂತರಾಮಯ್ಯ, ಅಜಗಣ್ಣ, ಶಕ್ತಿ, ಮುಕ್ತಿ, ಮಹಾದೇವಿಯಕ್ಕ ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳು ಕೊಟ್ಟ ವ್ರತಪ್ರಸಾದ. ಆ ಪ್ರಸಾದ ಎನಗೆ ಪ್ರಸನ್ನ, ನಿಮಗೆ ಮರ್ತ್ಯದ ಮಣಿಹ ಹಿಂಗುವನ್ನಕ್ಕ. ಎನ್ನ ವ್ರತದಲ್ಲಿ, ಎನ್ನ ಆಚಾರದಲ್ಲಿ, ನಾ ಹಿಡಿದ ನೇಮದಲ್ಲಿ, ಭಾಷೆಯಲ್ಲಿ, ನಾ ತಪ್ಪಿದಡೆ, ತಪ್ಪ ಹೊತ್ತಲ್ಲಿ ನಿಮ್ಮ ಕೇಳಿದಡೆ, ನಾ ಸತ್ತಿಹೆನೆಂದು ಕೂಡಿದಡೆ, ಮತ್ತೆ ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಯಿಂದ ಘಟವ ಬಿಟ್ಟಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಕ್ರೀ ಭಿನ್ನಚಿಹ್ನದೋರದಲ್ಲಿಯೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ನಿನ್ನಲ್ಲಿಯೆ ಲೀಯ.
--------------
ಅಕ್ಕಮ್ಮ
ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ. ಪರಪಾಕ ಮುಂತಾದ ದ್ರವ್ಯವ ಬಿಟ್ಟಲ್ಲಿ ಶೀಲವಂತನಲ್ಲ. ಅದೆಂತೆಂದಡೆ ; ಅದು ಮನದ ಅರೋಚಕ, ಆ ಗುಣ ಜಗದ ಮಚ್ಚು, ಸರ್ವರ ಭೀತಿ, ದ್ರವ್ಯದ ಒದಗು ; ಈ ಗುಣ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ; ಪರಾಪೇಕ್ಷೆಯ ಮರೆದು, ಪರಸತಿಯ ತೊರೆದು, ಗುರುಲಿಂಗಜಂಗಮದಲ್ಲಿ ತಾಗು ನಿರೋಧಮಂ ತಾಳದೆ, ಹೆಣ್ಣು ಹೊನ್ನು ಮಣ್ಣಿಗಾಗಿ ತಪ್ಪಿ ನುಡಿಯದೆ, ಒಡೆಯರು ಭಕ್ತರಲ್ಲಿ ತನ್ನ ಕುರಿತ ಗೆಲ್ಲ ಸೋಲಕ್ಕೆ ಹೋರದೆ, ತನಗೊಂದು ಬೇಕೆಂದು ಅನ್ಯರ ಕೈಯಲ್ಲಿ ಹೇಳಿಸದೆ, ಬಹು ಢಾಳಕತನವಂ ಬಿಟ್ಟು ಸರ್ವರ ಆತ್ಮ ಚೇತನವನರಿತು, ತಾ ಮರೆದುದ ಅರಿದು ಎಚ್ಚತ್ತು ನೋಡಿ, ಅಹುದಾದುದ ಹಿಡಿದು ಅಲ್ಲದುದ ಬಿಟ್ಟು, ಬಹುದುಃಖಮಂ ಮರೆದು ಇಂತೀ ಸರ್ವಗುಣಸಂಪನ್ನನಾಗಿ ಆತ್ಮಂಗೆ ಅರಿವಿನ ಶೀಲವ ಮಾಡಿ, ಕಾಯಕ್ಕೆ ಮರವೆ ಇಲ್ಲದ ಆಚಾರವನಂಗೀಕರಿಸಿ, ಇಂತೀ ಕಾಯ, ಮನ, ಅರಿವಿನ ಆಚಾರದಲ್ಲಿ ನಿಂದಲ್ಲಿ ನಿಂದು, ಏತಕ್ಕೂ ಮರವೆಯಿಲ್ಲದೆ ಸರ್ವ ಅವಧಾನಂಗಳಲ್ಲಿ ಹೊರಗಣ ಮಾಟ ಒಳಗಣ ಕೂಟ ಉಭಯ ಶುದ್ಧವಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಜಿಡ್ಡು ಹರಿಯಿತ್ತು.
--------------
ಅಕ್ಕಮ್ಮ