ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಾಜನಕ್ಕೆ ಸರ್ವಾಂಗವ ಬಾಸಣಿಸುವಾಗ ಅದು ಆ ಕುಂಭಕ್ಕೊ, ತನ್ನಂಗಕ್ಕೊ ಎಂಬುದನರಿತು, ಸರ್ವಾಂಗ ಪಾವಡವ ಕಟ್ಟುವ ವಿವರ ; ಮನ, ಬುದ್ಧಿ, ಚಿತ್ತ, ಅಹಂಕಾರ ಎಂಬ ಚತುರ್ಭಾವದ ಸೆರಗಿನಲ್ಲಿ ಗುಹ್ಯೇಂದ್ರಿಯವಂ ಕಳೆದು, ಜಿಹ್ವೇಂದ್ರಿಯವೆಂಬ ಅಂಗ ಭಾಜನಕ್ಕೆ ಸರ್ವಾಂಗ ಪಾವಡವಂ ಕಟ್ಟಿ, ಮಣ್ಣೆಂಬ ಆಸೆಯ ಬಿಟ್ಟು, ಹೊನ್ನೆಂಬ ಆಸೆಯ ಬಿಟ್ಟು, ಹೆಣ್ಣೆಂಬ ಮೋಹದಲ್ಲಿ ಮಗ್ನವಾಗದೆ, ಮಣ್ಣೆಂಬ ಆಸೆಯ ಗುರುವಿನಲ್ಲಿ, ಹೊನ್ನೆಂಬ ಆಸೆಯ ಲಿಂಗದಲ್ಲಿ, ಹೆಣ್ಣೆಂಬ ಮೋಹವ ಜಂಗಮದಲ್ಲಿ, ಕೊಡುವ ವ್ರತವನರಿಯದೆ ಆಚಾರ ಅಂಗದಲ್ಲಿ ಇಂತೀ ವ್ರತನೇಮವಲ್ಲದ ಮಣ್ಣ ಮಡಕೆಯ ಗನ್ನದಲ್ಲಿ ಕಟ್ಟಿದಡೆ ಪ್ರಸನ್ನನ ವ್ರತದಣ್ಣಗಳೆಲ್ಲರು ಇದ ಚೆನ್ನಾಗಿ ತಿಳಿದು ನೋಡಲಾಗಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತ ನೇಮ ಹರಿತವಾಯಿತ್ತು.
--------------
ಅಕ್ಕಮ್ಮ
ಭವಿಯಲಾದ ಪಾಕವ ತಂದು ಮನೆಯಲ್ಲಿರಿಸಿಕೊಂಡು ಭುಂಜಿಸುತ್ತ ಅವರ ಮನೆಯ ಒಲ್ಲೆನೆಂಬುದು ವ್ರತಕ್ಕೆ ಹಾನಿ, ಪಂಚಾಚಾರಕ್ಕೆ ದೂರ, ಪಂಚಾಚಾರಶುದ್ಭತೆಗೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರ ಬಲ್ಲನಾಗಿ ಒಲ್ಲನು.
--------------
ಅಕ್ಕಮ್ಮ
ಭಾಜನದ ಕಂಠಕ್ಕೆ ಪಾವಡವ ಬಾಸಣಿಸಲಾಗಿ ವ್ರತಕ್ಕೆ ಬೀಜ ಮೊದಲಾಯಿತ್ತು. ಭವಿಸಂಗ ಭವಿಪಾಕ ಅನ್ಯದೈವ ಪೂಜಿಸುವವರ ದೂರಸ್ಥನಾಗಿರಬೇಕು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿಯಬೇಕಾದಡೆ.
--------------
ಅಕ್ಕಮ್ಮ
ಭಾಜನಕ್ಕೆ ಸರ್ವಾಂಗ ಮುಸುಕಿಟ್ಟಲ್ಲಿ ಸರ್ವವ್ಯಾಪಾರ ನಿರಸನವಾಗಿರಬೇಕು ; ಸರ್ವಸಂಗವನೊಲ್ಲದೆ ಇರಬೇಕು. ಒಡೆಯರು ಭಕ್ತರಲ್ಲಿ ನಿಗರ್ವಿಯಾಗಿ ಬಂದು ನಿಂದುದ ಜಂಗಮಲಿಂಗವ ಮುಂದಿರಿಸಿ, ಅವರು ಕೈಕೊಂಡು ಮಿಕ್ಕ ಪ್ರಸಾದವ ಲಿಂಗಕ್ಕೆ ಅರ್ಪಿತವ ಮಾಡಿ, ಗುರುಲಿಂಗಜಂಗಮದಲ್ಲಿ ಸಂದುಸಂಶಯವಿಲ್ಲದೆ ಆಚಾರವೆ ಪ್ರಾಣವಾಗಿ ನಿಂದುದು ರಾಮೇಶ್ವರಲಿಂಗದಂಗ.
--------------
ಅಕ್ಕಮ್ಮ
ಭಕ್ತರ ಮನೆಯಲ್ಲಿ ಭಕ್ತರು ಬಂದು ಕಳವು ಪಾರದ್ವಾರವ ಮಾಡಿದರೆಂದು ಹೊರಹಾಯ್ಕಿ ಎಂದು ನುಡಿಯಬಹುದೆ ? ಒಡೆಯರು ಭಕ್ತರ ನಿಂದೆಯ ಕೇಳೆನೆಂದು ತನ್ನೊಡವೆ ಒಡೆಯರು ಭಕ್ತರ ದ್ರವ್ಯವೆಂದು ಭಾವಿಸಿದಲ್ಲಿ ಮತ್ತೊಬ್ಬ ಅರಿಯದ ತುಡುಗುಣಿ ಮುಟ್ಟಿದಡೆ ಅವ ಕೆಡುವ. ಆಚಾರಕ್ಕೆ ಹೊರಗು, ತಾನರಿಯದಂತಿರಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸ್ಥನ ನೇಮ.
--------------
ಅಕ್ಕಮ್ಮ
ಭಕ್ತಂಗೆ ಬಯಕೆ ಉಂಟೆ ? ನಿತ್ಯಂಗೆ ಸಾವುಂಟೆ ? ಸದ್ಭಕ್ತಂಗೆ ಮಿಥ್ಯ ತಥ್ಯ ಉಂಟೆ ? ಕರ್ತೃ ಭೃತ್ಯನಾದ ಠಾವಿನಲ್ಲಿ ಪ್ರತ್ಯುತ್ತರಂಗೆಯ್ದಡೆ ಸತ್ಯಸದಾಚಾರಕ್ಕೆ ಹೊರಗು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಣತಿ.
--------------
ಅಕ್ಕಮ್ಮ
ಭರಿತಾರ್ಪಣವೆಂದು ಸ್ಥಲವನಂಗೀಕರಿಸಿದಲ್ಲಿ ಆ ಭರಿತ ಅಂಗಕ್ಕೊ, ಲಿಂಗಕ್ಕೊ, ಆತ್ಮಕ್ಕೊ, ಸರ್ವೇಂದ್ರಿಯ ವಿಕಾರಕ್ಕೊ ? ಹಿಡಿವ, ಬಿಡುವ, ಕೊಡುವ, ಕೊಂಬ ಸಡಗರಿಸುವ ಎಡೆಗಳಲ್ಲಿಯೆ ಘೃತ, ರಸಾನ್ನ, ಸಕಲಪದಾರ್ಥಗಳ ಯಥೇಷ್ಡವಾಗಿ ಗ್ರಾಸಿಸುವ ಭರಿತವೊ ? ಆತ್ಮನ ಕ್ಷುಧೆಯ ಆಶಾಪಾಶವೊ ? ಅಲ್ಲ, ಲಿಂಗಕ್ಕೆ ಸಂದುದನೆಲ್ಲವನು ಒಂದೆ ಭಾವದಲ್ಲಿ ಕೊಳಬೇಕೆಂದು ಸಂದೇಹವೊ ? ಇಂತೀ ಗುಣಂಗಳಲ್ಲಿ ಅಹುದಲ್ಲವೆಂಬುದ ತಿಳಿದು ನೋಡಿಕೊಳ್ಳಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಭಕ್ತರ ಮನೆಗೆ ಸತ್ಯಶರಣರು ಬಂದಲ್ಲಿಯೆ ಮದುವೆಯ ಉತ್ಸಾಹಕ್ಕಿಂದ ವೆಗ್ಗಳವೆಂದು ಕಂಡು, ತನುಕರಗಿ, ಮನಬೆರಸಿ, ಕಂಗಳುತುಂಬಿ ಪುಳಕಿತವಾಗಿ ವಂಚನೆ ಸಂಕಲ್ಪವೆಂಬ ಶಂಕೆದೋರದೆ, ನಿಶ್ಶಂಕನಾಗಿ ಮಾಡುವ ಭಕ್ತನ ವಂಕದ ಬಾಗಿಲೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಮಸ್ತಕ.
--------------
ಅಕ್ಕಮ್ಮ
ಭವಿ ನಿರೀಕ್ಷಣೆಯಾದ ದ್ರವ್ಯಂಗಳ ಮುಟ್ಟೆನೆಂಬಲ್ಲಿ ಮುಟ್ಟಿದ ಭೇದವಾವುದು ಹೇಳಿರಣ್ಣಾ. ಧಾನ್ಯ ವಿದಳಫಲ ಪಂಫಲಾದಿಗಳಲ್ಲಿ ಆಯತಕ್ಕೆ ಮುನ್ನವೊ ಆಯತದೊಳಗಾದಲ್ಲಿಯೊ? ಆ ನಿರೀಕ್ಷಣೆ ವ್ರತಕ್ಕೆ ದ್ರವ್ಯ ಮೊದಲಾದ ದ್ರವ್ಯಕ್ಕೆ ವ್ರತ ಮೊದಲೊ, ಅಲ್ಲ, ತಾ ಮಾಡಿಕೊಂಡ ನೇಮವೆ ಮೊದಲೊ? ಇದ ನಾನರಿಯೆ; ನೀವು ಹೇಳಿರಯ್ಯಾ. ಭಾಷೆಗೆ ತಪ್ಪಿದ ಬಂಟ, ಲೇಸಿಗೆ ಒದಗದ ಸ್ತ್ರೀ, ವ್ರತದ ದೆಸೆಯನರಿಯದ ಆಚಾರರ, ಕೂಸಿನವರವ್ವೆ ಹಣದಾಸೆಗೆ ಕರೆದು ತಾ ಘಾಸಿಯಾದಂತಾಯಿತ್ತು. ವ್ರತಾಚಾರದ ಹೊಲಬು ನಿಹಿತವಾದುದಿಲ್ಲ. ಏತದ ತುದಿಯಲ್ಲಿ ತೂತು ಮಡಕೆಯ ಕಟ್ಟಿದಲ್ಲಿ ಬಾವಿಯ ಘಾತಕ್ಕೆಸರಿ. ತೂತಿನ ನೀರಿನ ನಿಹಿತವನರಿಯದವನಂತೆ ವ್ರತಾಚಾರ ಸಲ್ಲದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ನೇಮಘಾತಕರುಗಳಿಗಿದಸಾಧ್ಯ.
--------------
ಅಕ್ಕಮ್ಮ
ಭವಿಪಾಕವ ಮುಟ್ಟದೆ ಸಮಸ್ತ ಮತದಿಂದ ಅಯೋಗ್ಯವಾದ ಪದಾರ್ಥವನುಳಿದು ಯೋಗ್ಯವಾದ ಪದಾರ್ಥವ ಕೊಂಡು, ಪಾದೋದಕದಲ್ಲಿ ಪವಿತ್ರತೆಯಿಂದ ಸ್ವಪಾಕವ ಮಾಡಿ, ಪರಶಿವಲಿಂಗವೆಂದರಿದು ಸುಖಿಸಿ ನಿಜೈಕ್ಯರಾದರು. ಇದನರಿಯದ ಆಡಂಬರದ ವೇಷವ ಧರಿಸಿ ಉದಕ ಹೊಯ್ದು ಸ್ವಯ ಚರ ಪರ ಷಟ್ಸ್ಥಲವ ಬೊಗಳುವ ಕುನ್ನಿಗಳ ಕಂಡು ನಾಚಿತ್ತು ಕಾಣಾ, ಎನ್ನ ಮನವು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
--------------
ಅಕ್ಕಮ್ಮ