ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವ್ರತಾಚಾರವೆಂಬುದು ತನಗೊ, ತನ್ನ ಸತಿಗೊ, ಇದಿರ ಭೂತಹಿತಕೊ ? ತಾನರಿಯದೆ ತನಗೆ ವ್ರತ ಉಂಟೆ ? ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ ಅನ್ಯರಿಗೆ ಕೊಡಬಹುದೆ ? ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ ? ಇಂತೀ ತಮ್ಮ ಕ್ರೀವಂತರಲ್ಲಿಯೆ ತಂದು ಕ್ರೀವಂತರಲ್ಲಿಯೆ ಕೊಟ್ಟು ಉಭಯ ಬ್ಥಿನ್ನವಿಲ್ಲದೆ ಇಪ್ಪುದೆ ಸಜ್ಜನವ್ರತ, ಸದಾತ್ಮ ಯುಕ್ತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಮುಕ್ತಿ.
--------------
ಅಕ್ಕಮ್ಮ
ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ ! ವ್ರತವೆಂದೇನು ಆಚಾರವೆಂದೇನು? ಅನ್ಯರು ಮಾಡಿದ ದ್ರವ್ಯವನೊಲ್ಲದಿಪ್ಪುದು ವ್ರತವೆ? ಆರನು ಕರೆಯದಿಪ್ಪುದು ಆಚಾರವೆ? ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ. ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ. ಇಂತೀ ಕ್ರೀಯನರಿತು, ಕ್ರೀಯ ಶುದ್ಧತೆಯಾಗಿ ನಿಂದುದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.
--------------
ಅಕ್ಕಮ್ಮ
ವ್ರತವೆಂಬುದೇನು ? ಮನವಿಕಾರಿಸುವುದಕ್ಕೆ ಕಟ್ಟಿದ ಗೊತ್ತು. ಜಗದ ಕಾಮಿಯಂತೆ ಕಾಮಿಸದೆ, ಜಗದ ಕ್ರೋಧಿಯಂತೆ ಕ್ರೋಧಿಸದೆ, ಜಗದ ಲೋಭಿಯಂತೆ ಲೋಭಿಸದೆ, ಮಾಯಾಮೋಹಂಗಳು ವರ್ಜಿತವಾಗಿ ಮನಬಂದಂತೆ ಆಡದೆ, ತನುಬಂದಂತೆ ಕೂಡದೆ ವ್ರತದಂಗಕ್ಕೆ ಸಂಗವಾಗಿ ನಿಂದ ಸದ್ಭಕ್ತನ ಅಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.
--------------
ಅಕ್ಕಮ್ಮ
ವ್ರತವೆಂಬ ಸೀಮೆಯ ವಿವರವೆಂತುಟೆಂದಡೆ ಬೀಗಿ ಬೆಳೆದ ಹೊಲಕ್ಕೆ ಬೇಲಿಯ ಕಟ್ಟಿದಡೆ ಚೇಗೆಯುಂಟೆ? ಹಾವ ಪಶುವಿಂಗೆ ಮಾಣಿಸಿದಡೆ ದೋಷ ಉಂಟೆ ಗಾವಿಲಂಗೆ ಭಾವದ ಬುದ್ಧಿಯ ಹೇಳಿದವಂಗೆ ನೋವುಂಟೆ? ಬೇವ ನೋವ ಕಾಯಕ್ಕೆ ಜೀವವೆಂಬ ಬೆಳಗೇ ವ್ರತ. ಭಾವವೆಂಬ ಬೇಲಿಯ ಸಾಗಿಸಿಕೊಳ್ಳಿ. ಲೂಟಿಗೆ ಮೊದಲೆ ಬಸವ ಚೆನ್ನಬಸವಣ್ಣ ಪ್ರಭುದೇವ ಮೊದಲಾಗಿ ಶಂಕೆಗೆ ಮುನ್ನವೆ ಹೋದೆಹೆನೆಂಬ ಭಾವ ತೋರುತ್ತಿದೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಏಲೇಶ್ವರದ ಗೊತ್ತು ಕೆಟ್ಟಿತ್ತು.
--------------
ಅಕ್ಕಮ್ಮ
ವ್ರತ ನೇಮ ಶೀಲಮಂ ಮಾಡಿಕೊಂಡು, ಸಮಯಾಚಾರದಲ್ಲಿ ನಡೆದೆನೆಂಬ ಭಕ್ತನ ಕ್ರಮವೆಂತೆಂದಡೆ ; ತಾನು ಭೋಗಿಸುವಂತಹ ಸಕಲದ್ರವ್ಯಂಗಳೆಲ್ಲವನು, ಜಂಗಮಕ್ಕೆ ಕೊಟ್ಟು ತಾನು ಕೊಳಬೇಕು. ಅವಾವೆಂದಡೆ ಮಜ್ಜನ ಭೋಜನ ಅಂದಣ ಸತ್ತಿಗೆ ಚಾಮರ ಆನೆ ಕುದುರೆ ಕನ್ನಡಿ ಪರಿಮಳ ಲೇಪನ ಗಂಧ ಅಕ್ಷತೆ ವಸ್ತ್ರ ರತ್ನಾಭರಣ ತಾಂಬೂಲ ಮೆಟ್ಟಡಿ ಮಂಚ ಸುಪ್ಪತ್ತಿಗೆ ಒಡೆಯರಿಗೆ ಆಯಿತೆಂಬುದ ಕೇಳಿ, ಆ ಒಡೆಯನ ವಾಕ್ಯಪ್ರಸಾದದಿಂದ, ಮಹಾಪ್ರಸಾದವೆಂದು ಎಲ್ಲ ವ್ರತಂಗಳಿಗೆಯೂ ಜಂಗಮಪ್ರಸಾದವೆ ಪ್ರಾಣ; ಎಲ್ಲ ನೇಮಕ್ಕೆಯೂ ಜಂಗಮದರ್ಶನವೆ ನೇಮ; ಎಲ್ಲ ಶೀಲಕ್ಕೆಯೂ ಜಂಗಮದ ಮಾಟವೆ ಶೀಲ; ಎಲ್ಲ ವ್ರತ ನೇಮ ಶೀಲಂಗಳೆಲ್ಲವು ಜಂಗಮವ ಮುಂದಿಟ್ಟು ಶುದ್ಧತೆಯಹ ಕಾರಣ, ಆ ಜಂಗಮದಲ್ಲಿ ಅರ್ಥ, ಪ್ರಾಣ, ಅಭಿಮಾನ ಮುಂತಾದ ಈ ಮೂರಕ್ಕು ಕಟ್ಟು ಮಾಡಿದೆನಾದಡೆ ಎನಗೆ ದ್ರೋಹ. ಆ ಜಂಗಮದ ದರ್ಶನದಿಂದವೆ ಸಕಲದ್ರವ್ಯಂಗಳು ಪವಿತ್ರವು ; ಆ ಜಂಗಮಪ್ರಸಾದದಿಂದವೆ ಮಹಾಘನಲಿಂಗಕ್ಕೆ ತೃಪ್ತಿ. ಇಷ್ಟನರಿದ ಬಳಿಕ ಜಂಗಮಲಿಂಗಕ್ಕೆ ಸಂದೇಹವ ಮಾಡಿದೆನಾದಡೆ ಎನಗೆ ಕುಂಭೀಪಾತಕ ನಾಯಕನರಕ ತಪ್ಪದು. ಈ ಜಂಗಮದ ಭಕ್ತಿ ಕಿಂಚಿತ್ತು ಕೊರತೆ ಇಲ್ಲದ ಹಾಗೆ ಜೀವವುಳ್ಳ ಪರಿಯಂತರ ಇದೆ ಆಚಾರವಾಗಿ, ಇದೇ ಪ್ರಾಣವಾಗಿ ನಡೆದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನೊಡಗೂಡುವೆನು.
--------------
ಅಕ್ಕಮ್ಮ
ವ್ರತಾಚಾರವ ಅವಧರಿಸಿದ ಭಕ್ತಂಗೆ ಕತ್ತಿ ಕೋಲು ಅಂಬು ಕಠಾರಿ ಈಟಿ ಕೊಡಲಿ ಮತ್ತಾವ ಕುತ್ತುವ ಕೊರವ ಹಾಕುವ, ಗಾಣ ಮುಂತಾಗಿ ದೃಷ್ಟದಲ್ಲಿ ಕೊಲುವ ಕೈದ ಮಾಡುತ್ತ, ಮತ್ತೆ ಅವ ವ್ರತಿಯೆಂದಡೆ ಮೆಚ್ಚುವರೆ ಪರಮಶಿವೈಕ್ಯರು ಇಂತಿವ ಶ್ರುತದಲ್ಲಿ ಕೇಳಲಿಲ್ಲ, ದೃಷ್ಟದಲ್ಲಿ ಕಾಣಲಿಲ್ಲ, ಅನುಮಾನದಲ್ಲಿ ಅರಿಯಲಿಲ್ಲ. ಸ್ವಪ್ನದಲ್ಲಿ ಕಂಡಡೆ ಎನ್ನ ವ್ರತಕ್ಕದೇ ಭಂಗ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಒಲ್ಲೆನು.
--------------
ಅಕ್ಕಮ್ಮ
ವ್ರತವ ಹಿಡಿವಲ್ಲಿ, ವ್ರತವ ಉಪದೇಶ ಮಾಡುವಲ್ಲಿ, ಹಿಡಿವಾತನ ಯುಕ್ತಿ ಎಂತೆಂದಡೆ ಮನ, ವಚನ, ಕಾಯ, ತ್ರಿಕರಣಶುದ್ಧಾತ್ಮನಾಗಿ, ಸತಿ, ಸುತ, ಬಂಧುವರ್ಗಂಗಳೆಲ್ಲವು ಏಕತ್ರವಾಗಿ, ನಡೆವುದ ನಡೆಯದಿಹುದೆಂಬುದ ಸ್ಥಿರೀಕರಿಸಿ, ಶ್ರುತ, ದೃಷ್ಟ, ಅನುಮಾನ, ಮೂರನೊಂದುಮಾಡಿ ಮತ್ತೆ ಏನುವ ತೋರದ ವ್ರತವಸ್ತುವನಾದರಿಸಬೇಕು. ವ್ರತ ದೀಕ್ಷೆಯ ಮಾಡುವಲ್ಲಿ ಗುರುವಿನ ಇರವೆಂತೆಂದಡೆ ; ಅವನ ಆಗು ಚೇಗೆಯನರಿತು ಅರ್ತಿಕಾರರಿಗೆ ಇದಿರು ಮೆಚ್ಚುವಭೇದ. ಹಿರಣ್ಯದ ಒದಗಿನ ಲಾಗು, ಕೊಲೆ ಹಗೆಯಪ್ಪನ ರಾಗವಿರಾಗಗಳೆಂಬ ಭಾವವ ವಿಚಾರಿಸಿ, ಈ ವ್ರತ ನೇಮ ನಿನಗೆ ಲಾಗಲ್ಲ ಎಂದು ಅರೆಬಿರಿದಿನ ನೇಮ. ತೊಡಕಿನಂಬಿನ ಘಾಯ ತಪ್ಪಿದಡೆ ಇಹಪರದಲ್ಲಿ ಉಭಯದೋಷz ಹೀಗೆಂದು ಉಪದೇಶವಂ ಕೊಟ್ಟು ಸಂತೈಸುವುದು ಗುರುಸ್ಥಲ. ಆ ಗುಣಕ್ಕೆ ಮುಯ್ಯಾಂತು, ಪರಮಹರುಷಿತನಾಗಿ, ಗಣಸಮೂಹಂ ಕೂಡಿ, ಪರಮ ವಿರಕ್ತರಂ ಕರೆದು, ಮಹತ್ತು ನೆರಹಿ, ಗುರುಲಿಂಗಜಂಗಮಸಾಕ್ಷಿಯಾಗಿ ಮಾಡುವುದೆ ವ್ರತ. ಹೀಗಲ್ಲದೆ, ಮನಕ್ಕೆ ಬಂದಂತೆ, ತನು ಹರಿದಾಡುವಂತೆ, ಊರೂರ ದಾರಿಗರಲ್ಲಿ ವ್ರತವ ಮಾಡಿಕೊಳ್ಳಿಯೆಂದು ಸಾರಲಿಲ್ಲ. ಇಂತೀ ಉಭಯವನರಿತು ವ್ರತಕ್ಕೆ ಅರ್ಹನಾಗಬೇಕು. ಇಂತೀ ಸರ್ವಗುಣಸಂಪನ್ನ ಮಾಡಿಸಿಕೊಂಬವನೂ ತಾನೆ, ಮಾಡುವಾತನೂ ತಾನೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ವ್ರತವೆಂಬುದೇನು ?ವಸ್ತುವ ಕಾಂಬುದಕ್ಕೆ ನಿಚ್ಚಣಿಕೆ. ವ್ರತವೆಂಬುದೇನು ? ಇಂದ್ರಿಯಂಗಳ ಸಂದಮುರಿವ ಕುಲಕುಠಾರ. ವ್ರತವೆಂಬುದೇನು ? ಸಕಲ ವ್ಯಾಪಕಕ್ಕೆ ದಾವಾನಳ. ವ್ರತವೆಂಬುದೇನು ? ಸರ್ವದೋಷನಾಶನ. ವ್ರತವೆಂಬುದೇನು ? ಚಿತ್ತಸುಯಿದಾನದಿಂದ ವಸ್ತುವ ಕಾಂಬುದಕ್ಕೆ ಕಟ್ಟಿದ ಗುತ್ತಗೆ. ವ್ರತವೆಂಬುದೇನು ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರಿಗೆ ತತ್ತಲಮಗನಾಗಿಪ್ಪನು.
--------------
ಅಕ್ಕಮ್ಮ
ವ್ರತವ ಮಾಡಿಕೊಂಡಲ್ಲಿ ರತಿಗೆಡದೆ, ಕ್ಷೇತ್ರವಾಸಂಗಳ ಬೇಡದೆ, ಪಡಿವರ ಧಾನ್ಯಂಗಳೆಂದು, ಗುಡಿಗಳ ಹೊಕ್ಕು, ಸರಿಗರತಿಯರಲ್ಲಿ ಅಡುಮೆಯಾಗದೆ ಭಕ್ತರಲ್ಲಿ ಬೇಡುವಾಗಳೆ ಕೆಟ್ಟಿತ್ತು ವ್ರತ. ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ವ್ರತವನಾಶ್ರಯಿಸಿದ ಮತ್ತೆ ಹುಸಿ ನುಸುಳು ಕೊಲೆ ಕಳವು ಪಾರದ್ವಾರವ ಮಾಡುವನ್ನಬರ ವ್ರತಸ್ಥನಲ್ಲ, ನೇಮಕ್ಕೆ ಸಲ್ಲ, ಅವಂಗಾಚಾರವಿಲ್ಲ. ಅವ ರಾಜನೆಂದು ದ್ರವ್ಯದಾಸೆಗಾಗಿ ಅವನ ಮನೆಯ ಹೊಕ್ಕು ವಿಭೂತಿ ವೀಳೆಯ ಮೊದಲಾದ ಉಪಚಾರಕ್ಕೊಳಗಾದವ ಸತ್ತಕುಕ್ಕುರನ ಕೀಟಕ ತಿಂದು ಅದು ಸತ್ತಡೆ ತಾ ತಿಂದಂತೆ ಪಂಚಾಚಾರಶುದ್ಧಕ್ಕೆ ಹೊರಗು. ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ಮುನ್ನವೆ ಹೊರಗು.
--------------
ಅಕ್ಕಮ್ಮ
ವ್ರತಿಗಳ ಮನೆಗೆ ವ್ರತಿಗಳು ಬಂದಲ್ಲಿ ಎನ್ನ ಮನೆಗೆ ಇವರು ಬಂದರೆಂದು ಭಿನ್ನಭಾವವಾದಾಗಲೆ ವ್ರತಕ್ಕೆ ದೂರ, ಆಚಾರಕ್ಕೆ ಕೊರತೆ. ತಮ್ಮ ಮನೆಗೆ ತಾವು ಬಂದರೆಂದು ಅನ್ಯಭಿನ್ನವಿಲ್ಲದೆ ಅರ್ಥ ಪ್ರಾಣ ಅಭಿಮಾನವೆಂದು ಕಟ್ಟುಮಾಡಿದಡೆ ಸಮಯಾಚಾರಕ್ಕೆ ದೂರ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಒಪ್ಪದ ನೇಮ.
--------------
ಅಕ್ಕಮ್ಮ
ವೇಷ ಎಲ್ಲಿರದು ? ಸೂಳೆಯಲ್ಲಿ, ಡೊಂಬನಲ್ಲಿ, ಭೈರೂಪನಲ್ಲಿರದೆ ? ವೇಷವ ತೋರಿ ಒಡಲ ಹೊರೆವ ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೊ ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ?
--------------
ಅಕ್ಕಮ್ಮ
ವ್ರತನೇಮಿಯಾಗಿರ್ದಲ್ಲಿ, ಹಿರಿಯರು ಭಕ್ತರು ಮಿಕ್ಕಾದ ಮನುಜರಲ್ಲಿ ಸರಸಮೇಳ, ಪರಿಹಾಸಕಂಗಳಲ್ಲಿಂದ ಕೆಲದಲ್ಲಿ ನಿಂದಿತ್ತು. ವ್ರತ ಹೋಯಿತ್ತು, ಆಚಾರ ಕೆಟ್ಟಿತ್ತು. ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ದೂರವಾಯಿತ್ತು.
--------------
ಅಕ್ಕಮ್ಮ
ವಿಷವ ಅಂಗಕ್ಕೆ ಕೊಂಡು ವೇಧಿಸಿದಲ್ಲಿ, ಆವ ಠಾವಿನಲ್ಲಿ ಗಾಯ ? ಅದಾವ ಠಾವಿನ ಕುರುಹು ? ಲಿಂಗದಷ್ಟ ಅಂಗಕ್ಕಾದಲ್ಲಿ ಅದಾರಿಗೆ ಮೊರೆ ? ಅದಾರಿಗೆ ಕೈಲೆಡೆ ? ಆಚಾರಗೂಡಿಯೆ ಆ ಘಟವಳಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ ಇದಿರೆಡೆಯಿಲ್ಲದೆ ಕೂಡಬೇಕು.
--------------
ಅಕ್ಕಮ್ಮ
ವಿಪ್ರಂಗೆ ವೇದಮಂತ್ರವ ಬಿಟ್ಟು ವಿಜಾತಿಯಲ್ಲಿ ಬೆರಸಲಿಕ್ಕೆ ಸುಜಾತಿಗೆ ಹೊರಗಪ್ಪರು ನೋಡಾ. ಶ್ರೀ ವಿಭೂತಿ ಶ್ರೀ ರುದ್ರಾಕ್ಷಿ ಶಿವಲಿಂಗ ಮುಂತಾದ ನಾನಾ ವ್ರತ ನೇಮ ನಿತ್ಯದ ಭಾವವ ಬಿಟ್ಟು ಬಂದವನ ಗುರುವಾದಡು ಲಿಂಗವಾದಡು ಜಂಗಮವಾದಡು ನೋಡಿದಡೆ ನುಡಿಸಿದಡೆ ಆ ಘಟವಿದ್ದೆಡೆಯಲ್ಲಿ ನಾನಿದ್ದೆನಾದಡೆ ಎನ್ನ ವ್ರತಕ್ಕದೆ ಭಂಗ. ಅನುಸರಣೆಯಲ್ಲಿ ಬಂದವರ ಕಂಡು ಕೇಳಿ ಅವರ ಅಂಗಳವ ಕೂಡಿಕೊಂಡವರ ಇದ ನಾನರಿತು ಅಂಗೀಕರಿಸಿದೆನಾದಡೆ ಇಹಪರಕ್ಕೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾದಡೂ ವ್ರತಬಾಹ್ಯವಾದಡೆ ಎತ್ತಿಹಾಕುವೆನು.
--------------
ಅಕ್ಕಮ್ಮ