ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮರ್ತ್ಯಕ್ಕೆ ಬಂದ ಭಕ್ತಕಾಯರು ತಮ್ಮ ತಮ್ಮ ಗೊತ್ತಿನಲ್ಲಿಯೆ ಮುಕ್ತರು. ತಮ್ಮ ತಮ್ಮ ನಿಷ್ಠೆಯಲ್ಲಿಯೆ ತೃಪ್ತರು. ಸ್ವ ಇಚ್ಫಾಮರಣ, ಸಂತೋಷಮರಣ, ಕಂಟಕಮರಣ, ಖಂಡನೆಮರಣ, ದಿಂಡುಮರಣ, ಅರಿಲಯಮರಣ, ಶರೀರ ನಿರವಯಮರಣ, ಅಂತರಿಕ್ಷ ಸುಮಾನಲಯ, ಸ್ವಾನುಭಾವಐಕ್ಯ, ಸದ್ಭಾವಕೂಟ, ಪರತಂತ್ರಲಯ, ಸಮ್ಯಗ್‍ಜ್ಞಾನ ಸಂಬಂಧ, ದಿವ್ಯ ಜ್ಞಾನಕೂಟ ಇಂತೀ ಸರ್ವಸಂಬಂಧ ಕಾಯಬಯಲಹರುಂಟು. ನಾನೊಂದ ಭಾವಿಸಿ ಕಲ್ಪಿಸಿದವನಲ್ಲ. ನಿಮ್ಮ ನಿಮ್ಮ ಭಾವವ ನೀವೆ ನೋಡಿಕೊಳ್ಳಿ. ಎನಗೆ ಕಟ್ಟಾಚಾರದ ನೇಮ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾಯಿತ್ತಾಡೂ ಎನ್ನ ಕ್ರೀ ತಪ್ಪಿದಲ್ಲಿ ಕಂಡಡೆ ಮಸ್ತಕವನೊಡೆಯ ಹೊಯಿವೆನು
--------------
ಅಕ್ಕಮ್ಮ
ಮಹಾವ್ರತಸ್ಥರು ವ್ರತಿಗಳ ಮನೆಗೆ ಹೋದಲ್ಲಿ, ಕಂಡುದ ಬೇಡದೆ, ಬಾಯಿಗೆ ಬಂದಂತೆ ನುಡಿಯದೆ, ಕಾಮದೃಷ್ಟಿಯಲ್ಲಿ ಮತ್ತೇನುವ ನೋಡದೆ, ಶಿವಲಿಂಗಪೂಜೆ ಶಿವಧ್ಯಾನಮೂರ್ತಿ ಶಿವಕಥಾ ಪ್ರಸಂಗ ಶಿವಶರಣರ ಸಂಗ ತಮ್ಮ ಕ್ರಿಯಾನುಭಾವದ ವಿಚಾರ ಹೀಂಗಲ್ಲದೆ ಸರಸ, ಸಮೇಳ, ಪಗುಡಿ, ಪರಿಹಾಸಕ, ಚದುರಂಗ ನೆತ್ತ ಪಗಡಿ ಜೂಜು ಶಿವಭಕ್ತಂಗೆ ಉಂಟೆ ? ಆತ್ಮನಲ್ಲಿದ್ದಡೆ ಎನ್ನ ಬೇಗೆ, ನುಡಿದಡೆ ಶರಣರ ಬೇಗೆ. ಈ ಒಡಲೇಕೆ ಅಡಗದು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನಿನ್ನ ಕೊರಳೇಕೆ ಉಡುಗದು ?
--------------
ಅಕ್ಕಮ್ಮ
ಮೂಷಕ, ವಿಹಂಗ, ಕುಕ್ಕುಟ,ಮಾರ್ಜಾಲ, ಕುಕ್ಕುರ, ದೌಷ್ಟ್ರ ಇವು ಮೊದಲಾದ ನೇಮಿಗಳೆಲ್ಲರು ಸಿಕ್ಕಿದರಲ್ಲಾ ನೀವು ಹಿಡಿದ ವ್ರತಕ್ಕೆ ಭಂಗಿತರಾಗಿ, ಭವಿಯ ಪರಾಪೇಕ್ಷದಿಂದ ದ್ರವ್ಯವ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆಂದು ಮರೆಯಲ್ಲಿ ಒಡಲ ಹೊರೆವ ಸುರೆಗುಡಿಹಿಗೆ ನೆರೆ ಭಕ್ತಿಯೇಕೆ ವ್ರತಕ್ಕೆ ದೂರ, ಆಚಾರಕ್ಕೆ ಹೊರಗು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಮೂಷಕ ಮಾರ್ಜಾಲ ಮಕ್ಷಿಕ ಇವು ಮೊದಲಾದ ಸಕಲ ಜೀವಪ್ರಾಣಿಗಳಿಗೆ ಎಲ್ಲಕ್ಕು ತನುವಿಂಗಾಚಾರ ಮನಕ್ಕರಿವು ಅರಿವಿಂಗೆ ವ್ರತವ ಬಿಡದಿದ್ದಡೇನಾಯಿತ್ತಾದಡೆ ಎನಗದೆ ಭಂಗ. ಲಿಂಗಕ್ಕು ಲಿಂಗವೆಂಬುದ ಅಂಗದ ಮೇಲೆ ಅವಧರಿಸದಿದ್ದಡೆ ನಾ ಕೊಂಡ ಪಂಚಾಚಾರಕ್ಕೆ ದೂರ. ಈ ಕಟ್ಟಿದ ತೊಡರ ಬಿಡಿಸುವುದಕ್ಕೆ ಕಟ್ಟಾಚಾರಿಗಳಾರನು ಕಾಣೆ. ಈ ಗುಣದ ದೃಷ್ಟ ಹಿಂದು ಮುಂದಿಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೀಯವಲ್ಲದೆ.
--------------
ಅಕ್ಕಮ್ಮ
ಮನಮುಟ್ಟದ ವ್ರತ, ತನುಮುಟ್ಟದ ಸುಖ, ಬೇರುಮುಟ್ಟದ ಸಾರ ಅದಾರಿಗೆ ಯೋಗ್ಯ ಮನ ವಚನ ಕಾಯ ತ್ರಿಕರಣ ಏಕವಾಗಿ ಅಂಗಕ್ಕೆ ಆಚಾರ, ಆಚಾರಕ್ಕೆ ಅರಿವು, ಅರಿವಿಂಗೆ ಕುರುಹು, ಕುರುಹಿನಲ್ಲಿ ನೇಮಕ್ಕೊಡಲಾಗಿ, ಭಾವಕ್ಕೆ ರೂಪಾಗಿ, ಬಾವಿಯ ನೀರ ಕುಂಭ ತಂದುಕೊಡುವಂತೆ, ಮಹಾಜ್ಞಾನ ಸುಖಜಲವ ಜ್ಞಾತೃವೆಂಬ ಕಣ್ಣಿಗೆ ಜ್ಞೇಯವೆಂಬ ಕುಂಭದಲ್ಲಿ ಭಾವವೆಂಬ ಜಲ ಬಂದಿತ್ತು. ಆ ಸುಜಲದಿಂದ ಅಂಗವೆಂಬ ಲಿಂಗಕ್ಕೆ ಮಜ್ಜನಕ್ಕೆರೆದೆ ಪ್ರಾಣಲಿಂಗಕ್ಕೆ ಓಗರವನಟ್ಟೆ, ಮಹಾಘನವೆಂಬ ತೃಪ್ತಿಲಿಂಗ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ನೇಮ ಸಂದಿತ್ತು.
--------------
ಅಕ್ಕಮ್ಮ
ಮಾಡಿ ನೀಡುವ ಭಕ್ತನನರಸಿಕೊಂಡು ಹೋಗಿ ಗಡ್ಡ ಮಂಡೆ ಬೋಳಿನ ಕುರುಹ ತೋರಿ, ಬಲ್ಲವರಂತೆ ಅಧ್ಯಾತ್ಮವ ನುಡಿದು ಉಪಾಧಿಯಿಂದ ಒಡಲ ಹೊರೆವಾತ ವಿರಕ್ತನೆ ಅಲ್ಲ. ವಿರಕ್ತನ ಪರಿ ಎಂತೆಂದಡೆ ; ಆಚಾರಸಹಿತವಾಗಿ ಭಕ್ತಿ ಭಿಕ್ಷವ ತೆಗೆದುಕೊಂಡು ಉಪಾಧಿರಹಿತವಾಗಿಪ್ಪ ವಿರಕ್ತನ ತೋರಿ ಬದುಕಿಸಯ್ಯಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
--------------
ಅಕ್ಕಮ್ಮ
ಮಣ್ಣಮಡಕೆಯ ಮುಸುಕಿಟ್ಟು ಗನ್ನದಲ್ಲಿ ನೀರು ತುಂಬಿ, ಇದಿರಿಗೆ ಬಿನ್ನಾಣವ ತೋರುತ ಇಂತೀ ಬಣ್ಣ ಬಚ್ಚಣೆಯ ಶೀಲವ ನಾನೊಪ್ಪೆ. ಇದಿರು ಕಂಡಲ್ಲಿ ಹಾಕಿ, ಆರೂ ಕಾಣದಡೆ ತಾನೊಪ್ಪಿಕೊಂಡಿಪ್ಪ ಭಂಡನ ಶೀಲ ಮೂರು ಕುಂಡೆಯೊಳಗಾಯಿತ್ತು. ಇದರಂಗವ ಬಿಟ್ಟು, ಮನ ಲಿಂಗದಲ್ಲಿ ನಿಂದು, ಧನ ಜಂಗಮದಲ್ಲಿ ಸಂದು, ಬಂಧನವಿಲ್ಲದೆ ನಿಂದ ನಿಜೈಕ್ಯನ ಅಂಗವೆ ಸರ್ವಾಂಗಶೀಲ. ಆತ ಮಂಗಳಮಯಮೂರುತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಮರ್ಕಟ, ಕುಕ್ಕುಟ, ಮಾರ್ಜಾಲ, ಶುನಕ, ಶೂಕರ, ವಿಹಂಗ ಇಂತಿವು ಮೊದಲಾದ ಅನ್ಯಜೀವಪ್ರಾಣಮಂ ಸಲಹದೆ ಸಲಹುವರ ಮನೆಯಲ್ಲಿ ತಾನೊಪ್ಪಿಕೊಳ್ಳದೆ, ಪರಪಾಕ ರಸದ್ರವ್ಯವ ಮುಟ್ಟದೆ, ಬಾಹ್ಯಜಲವಂ ಬಿಟ್ಟು ಪಾದತೀರ್ಥ ಪ್ರಸಾದವಿಲ್ಲದೆ ತಾ ನೇಮವನೊಲ್ಲದೆ, ಬೇರೊಂದು ಭಿನ್ನದೈವವೆಂದು ಪ್ರಮಾಣಿಸದೆ, ಪಾದತೀರ್ಥ ಪ್ರಸಾದವಿಲ್ಲದವರ ಮನೆಯಲ್ಲಿ ಒಲ್ಲದೆ, ತನ್ನನುವಿಂಗೆ ಅನುವಾದುದನರಿದು ಸಂಬಂಧಿಸಿ ಇಪ್ಪುದು ನೇಮ ಕ್ರೀ. ಇಂತೀ ಭಾವಶುದ್ಧವಾಗಿ ನಡೆವುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಬಾಹ್ಯನೇಮ.
--------------
ಅಕ್ಕಮ್ಮ