ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಾ ವ್ರತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ, ಕಟಕ ಪಾರದ್ವಾರ ಹುಸಿ ಕೊಲೆ ಕಳವು ಅನ್ಯಾಹಾರ ಮುಂತಾದ ನಿಂದಕ ದುರ್ಜನ ಭವಿಸಂಗ ಉಳ್ಳವರ ತಂದೆತಾಯಿಯೆಂದು ಹೆಂಡಿರುಮಕ್ಕಳೆಂದು ಬಂಧುಬಳಗವೆಂದು ಅವರನು ಅಂಗಳದಲ್ಲಿ ಕೂಡಿಕೊಂಡಡೆ, ಅವರ ತಂದು ಕೊಳನಿಕ್ಕಿದಡೆ, ತಿಂಗಳು ಸತ್ತ ನಾಯಮಾಂಸವ ತಂದು ತಿಂದ ದೋಷ ತಪ್ಪದು. ಇದಕ್ಕೆ ಹಿಂದೆ ನೆನೆಯಲಿಲ್ಲ, ಮುಂದೆ ನೋಡಲಿಲ್ಲ. ಈ ತಪ್ಪು ಹೊತ್ತಲ್ಲಿಯೆ ಅಂದಿಗೆ ನೂರು ತುಂಬಿತ್ತೆಂದು ಅಂಗವ ಬಿಡಬೇಕು. ಅಂಗವ ಬಿಡದ ಭಂಡರ ಕಂಡಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗನೊಪ್ಪ.
--------------
ಅಕ್ಕಮ್ಮ
ತನ್ನ ಸ್ವಕಾರ್ಯದಿಂದ ಮಾಡುವ ಭಕ್ತನ ವ್ರತವೆ ವ್ರತ; ಆತನಾಚಾರವೆ ಸತ್ಯ; ಆತನಾಶ್ರಯದ ಶೇಷವೆ ಸಂಜೀವನಪ್ರಸಾದ. ಆತನ ರೂಪೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಷ್ಟರೂಪು.
--------------
ಅಕ್ಕಮ್ಮ
ತಾ ಮುಳುಗಿದ ಮತ್ತೆ ಸಮುದ್ರದ ಪ್ರಮಾಣ ತನಗೇನು ? ತಾನೊಂದು ಶಸ್ತ್ರದಲ್ಲಿ ಸಲೆ ಸಂದ ಮತ್ತೆ ತನ್ನಂಗವ ಹಲವು ಶಸ್ತ್ರ ಬಂಧಿಸಿದಡೇನು ? ತಾ ನಿಂದ ನಿರಿಗೆಯಲ್ಲಿ ಸಂದ ಮತ್ತೆ ಸಂದಣಿಗಾರರ ಬಂಧದ ಮಾತೇತಕ್ಕೆ ? ಇದು ವ್ರತಾಚಾರದ ನಿಂದ ನಿರಿಗೆ, ಸಲೆ ಸಂದ ನೇಮ. ಕಟ್ಟಾಚಾರಿಯ ದೃಷ್ಟನಿಷ್ಠೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗೆ ಕಟ್ಟಿದ ತೊಡರು
--------------
ಅಕ್ಕಮ್ಮ
ತನುಶೀಲವಂತರುಂಟು, ಧನಶೀಲವಂತರುಂಟು, ಧರೆಶೀಲವಂತರುಂಟು, ಕನಕ ವನಿತೆಶೀಲವಂತರುಂಟು. ಕೆಯಿ ತೋಟ ಹಿಂದೆಸೆ ಮುಂದೆಸೆ ನಿಳಯಶೀಲವಂತರುಂಟು. ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ರಸದ್ರವ್ಯ ಪಶು ಪಾಷಾಣ ವಸ್ತ್ರ ಪರಿಮಳ ಛತ್ರ ಚಾಮರ ಅಂದಳ ಕರಿ ತುರಗಂಗಳು ಮುಂತಾದವೆಲ್ಲಕ್ಕೂ ಶೀಲವಂತರುಂಟು. ಅನುಸರಣೆಯ ಕಂಡಲ್ಲಿ, ಆಚಾರ ತಪ್ಪಿದಲ್ಲಿ, ಲಿಂಗ ಬಾಹ್ಯವಾದಲ್ಲಿ, ಆಗವೆ ಅಂಗವ ಬಿಟ್ಟು ಲಿಂಗದೊಡಗೂಡುವ ಶೀಲವಂತರಂಗವ ಕಾಣೆ. ಎನ್ನ ಕ್ರೀ ಭಂಗವಹುದಕ್ಕೆ ಮುನ್ನವೆ ನಿರಂಗವ ಹೇಳಾ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
--------------
ಅಕ್ಕಮ್ಮ
ತನುವಿಂಗೆ ಕ್ರೀ, ಆತ್ಮಂಗೆ ವ್ರತ. ಆ ವ್ರತಕ್ಕೆ ನಿಶ್ಚಯ ಕರಿಗೊಂಡು ಬಾಹ್ಯದ ಕ್ರೀ, ಅರಿವಿನ ಆಚರಣೆ, ಭಾಷೆ ಓಸರಿಸದೆ ನಿಂದಾತನೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ತನುವ್ರತ ಮನವ್ರತ ಮಹಾಜ್ಞಾನವ್ರತ - ತ್ರಿಕರಣದಲ್ಲಿ ಶುದ್ಧವಾಗಿಯಲ್ಲದೆ ಕ್ರೀ ಶುದ್ಧವಿಲ್ಲ. ಕ್ರೀ ಶುದ್ಧವಾಗಿಯಲ್ಲದೆ ತನು ಶುದ್ಧವಿಲ್ಲ. ತನು ಶುದ್ಧವಾಗಿಯಲ್ಲದೆ ಮನ ಶುದ್ಧವಿಲ್ಲ. ಮನ ಶುದ್ಧವಾಗಿಯಲ್ಲದೆ ಜ್ಞಾನ ಶುದ್ಧವಿಲ್ಲ. ಜ್ಞಾನ ಶುದ್ಧವಾಗಿ ನಿಂದು ಮಾಡಿಕೊಂಡ ನೇಮ ತಪ್ಪದೆ, ಶರಣರಿಗೆ ದೂರಿಲ್ಲದೆ, ಮನಕ್ಕೆ ಮರವೆ ಇಲ್ಲದೆ, ಮಹಾಜ್ಞಾನವೆ ವ್ರತ ನೇಮ ಲಿಂಗವಾಗಿ, ಶ್ರುತ ದೃಷ್ಟ ಅನುಮಾನಕ್ಕೆ ಅಗೋಚರವಾಗಿ ನಿಂದ ಶೀಲವಂತನಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಅಂಗ.
--------------
ಅಕ್ಕಮ್ಮ
ತಮ್ಮ ಆಯತದ ಉಪ್ಪೆಂದು ಬಳಸುವನ್ನಕ್ಕ ತಾವು ತಂದು ಮಾಡಿಕೊಂಬ ಮೃತ್ತಿಕೆಯ ಸಾರವೆ ಲೇಸು. ಅದೆಂತೆಂದಡೆ ಮಹಾ ಅಂಬುಧಿಗಳಲ್ಲಿ ತಾಕುಸೋಂಕು, ತಟ್ಟುಮುಟ್ಟು ಬಹವಾದ ಕಾರಣ. ಇಂತೀ ಇವ ತಾನರಿದ ಮತ್ತೆ ಆಯತವೆಂಬುದೇನು ತನ್ನ ಕಾಯ ಮನ ಅರಿದು ಮಾಡಿಕೊಂಬುದೆ ವ್ರತ. ಇಂತಿವನರಿಯದೆ ಬಳಸುವ ಬಳಕೆಗಳೆಲ್ಲವು ಸೌಕರಿಯವಲ್ಲದೆ ವ್ರತಕ್ಕೆ ಸಲ್ಲದ ಆಚಾರವಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಇದೆ ಆಣತಿ.
--------------
ಅಕ್ಕಮ್ಮ
ತಾ ವ್ರತಿಯಾಗಿ ಮಕ್ಕಳೆಂದು ಮಾಡದಿರ್ದಡೆ ಆ ವ್ರತಕ್ಕೆ ತಾನೆ ಹೊರಗು. ತನ್ನಂಗ ಮನ ಭಾವ ಕರಣಂಗಳಲ್ಲಿ ಸಂಗದಲ್ಲಿ ಇದ್ದವರಿಗೆಲ್ಲಕ್ಕೂ ತನ್ನಂಗದ ವ್ರತವ ಮಾಡಬೇಕು. ಇದು ಸೀಮೆವಂತರಯುಕ್ತಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಚಾರ ಸೊತ್ತು.
--------------
ಅಕ್ಕಮ್ಮ
ತಂದೆಯ ಒಂದಾಗಿ ಬಂದ ಸಹೋದರ ಗಂಡೆಲ್ಲ ತಂದೆಯಾದ ಕಾರಣ, ಆ ತಂದೆಯ ಒಡಹುಟ್ಟಿದ ಹೆಣ್ಣೆಲ್ಲ ತನಗೆ ತಾಯಲ್ಲವೆ? ಆಕೆಯನತ್ತೆಯೆಂಬ ಜಗದ ತೆತ್ತುಮತ್ತರ ನಾವರಿಯೆವಯ್ಯಾ. ಮತ್ತೆ, ತಾವು ಬಳಸುವುದಕ್ಕೆ ಗೊತ್ತಿಲ್ಲವೆಂದಾಕೆಯ ಮಗಳನು ಸತಿಯನೆ ಮಾಡಿಕೊಳ್ಳಬಹುದೆ? ಹೆತ್ತತಾಯ ಮಗಳ ಮಗಳು ಒಡಹುಟ್ಟಿದವಳಲ್ಲವೆ? ಸೊಸೆ ಮಾವನೆಂದು ಸತಿಯಂ ಮಾಡಿಕೊಂಬರು ನೋಡಾ. ಸೊಸೆಗೂ ಮಾವಂಗೂ ಸಂಸರ್ಗ ನಿಲ್ಲುವುದೆ? ಸತ್ಯಕ್ಕೆ ಸಮವಲ್ಲ, ಭಕ್ತಿಗೆ ಇದಿರಿಲ್ಲವೆಂದರಿದು ಮತ್ತೆ ಜಗದಲ್ಲಿ ಹೊತ್ತು ಹೋರಲೇಕೆ? ಇದು ಆಚಾರಕ್ಕೆ ನಿಶ್ಚಯ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕೊಳುಕೊಡೆಯೆಂಬ ಸೂತಕ ಸದಾಚಾರದಲ್ಲಿ ಅಡಗಿತ್ತು.
--------------
ಅಕ್ಕಮ್ಮ
ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ, ತನ್ನಾಚಾರಕ್ಕೆ ಹೊರಗಾದವರ ಅಣ್ಣತಮ್ಮನೆಂದು ತಾಯಿತಂದೆ ಎಂದು, ಹೊನ್ನು ಮಣ್ಣು ಹೆಣ್ಣಿನವರೆಂದು ಅಂಗೀಕರಿಸಿದಡೆ, ಅವರಂಗಣವ ಕೂಡಿದಡೆ, ಅವರೊಂದಾಗಿ ನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರನೊಳಗಿಟ್ಟುಕೊಳ್ಳ
--------------
ಅಕ್ಕಮ್ಮ
ತುಷವ ಕಳೆದ ತಂಡುಲವನಡಬೇಕು. ಸಿಪ್ಪೆಯ ಕಳೆದ ಹಣ್ಣ ಮೆಲಬೇಕು. ಕ್ರೀಯನರಿತು ಆಚಾರವನರಿಯಬೇಕು. ಆಚಾರವನರಿತು ವ್ರತಕ್ಕೆ ಓಸರಿಸದಿರಬೇಕು. ಮನ ವಸ್ತುವಾಗಿ, ವಸ್ತು ತಾನಾಗಿ, ಉಭಯ ಭಿನ್ನಭಾವವಿಲ್ಲದೆ ನಿಂದವಂಗೆ ಸಹಭೋಜನದಂಗ. ಶೋಕ, ರೋಗ, ಜನನಮರಣಾದಿಗಳಲ್ಲಿ ಆಕರಣೆಗೊಳಗಾಗುತ್ತ ಆರು ಸಹಭೋಜನಕ್ಕೆ ಘಾತಕತನವಲ್ಲವೆ ? ಇಂತೀ ಜಗದ ವರ್ತಕರು ಮೆಚ್ಚಬೇಕೆಂಬ ಕೃತ್ಯವ ಸದ್ಭಕ್ತರು ನೀವೆ ಬಲ್ಲಿರಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ ಈ ಭಾವವ ನೀನೆ ಬಲ್ಲೆ.
--------------
ಅಕ್ಕಮ್ಮ
ತನ್ನ ತಾ ಬಂದುದ ಸೋಂಕಿಲ್ಲದುದ ವಿಚಾರಿಸಿ, ತನ್ನನುವಿಂಗೆ ಬಂದುದ ಕೈಕೊಂಬುದು, ಬಾರದ ದ್ರವ್ಯಕ್ಕೆ ಭ್ರಮೆಯಿಲ್ಲದೆ ಚಿತ್ತದೋರದಿಪ್ಪುದು ಭರಿತಾರ್ಪಣ. ಅರ್ಪಿತವ ಮುಟ್ಟಿ ಅನರ್ಪಿತವ ಜಾಗ್ರ ಸ್ವಪ್ನದಲ್ಲಿ ಮುಟ್ಟದಿಪ್ಪುದು ಭರಿತಾರ್ಪಣ. ಲಿಂಗಕ್ಕೆ ಸಲ್ಲದುದ ಇರಿಸದೆ, ಸಲುವಷ್ಟನೆ ಅರ್ಪಿತವ ಮಾಡಿ, ಮುಂದಣ ಸಂದೇಹವ ಮರೆದು, ಹಿಂದಣ ಸೋಂಕನರಿದು, ಉಭಯದ ಖಂಡಿತವ ಖಂಡಿಸಿ ನಿಂದುದು ಭರಿತಾರ್ಪಣ. ಹೀಗಲ್ಲದೆ, ಭಾಷೆಗೂಳಿನ ಭಟರಂತೆ, ಓಗರ ಮೇಲೋಗರದಾಸೆಗೆ ಲೇಸಿನ ದ್ರವ್ಯಕ್ಕೆ ಆಸೆ ಮಾಡಲಿಲ್ಲ. ಬಂದುದ ಕೈಕೊಂಡು ಸಂದನಳಿದು ನಿಂದುದೆ ಭರಿತಾರ್ಪಣ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕ್ರೀ ಭಾವದ ಭೇದ.
--------------
ಅಕ್ಕಮ್ಮ
ತಾ ಮಾಡುವ ಕೃಷಿಯ ಮಾಡುವನ್ನ ಬರ ಮಾಡಿ, ಕೃಷಿ ತೀರಿದ ಮತ್ತೆ ಗುರುದರ್ಶನ ಲಿಂಗಪೂಜೆ ಜಂಗಮಸೇವೆ ಶಿವಭಕ್ತರ ಸುಖಸಂಭಾಷಣೆ ಶರಣರ ಸಂಗ ಈ ನೇಮವನರಿವುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ. ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ಆತನೆ ಚೇತನಭಾವ.
--------------
ಅಕ್ಕಮ್ಮ
ತೋಡಿದ ಬಾವಿ, ಬಳಸುವ ಭಾಜನಕ್ಕೆ ಮರೆಯಲ್ಲದೆ, ಹರಿದಾಡುವ ಚಿತ್ತಕ್ಕೆ, ಸರ್ವವ ಕೂಡುವ ಪ್ರಕೃತಿಗೆ, ಗೆಲ್ಲ ಸೋಲಕ್ಕೆ, ಅಲ್ಲ ಅಹುದೆಂಬುದಕ್ಕೆ ಎಲ್ಲಿಯೂ ಮರೆಯ ಕಾಣೆ. ಬಹುಮಾತನಾಡುವ ಬಾಯಿ ಸರ್ವರ ಕೂಡಿ ಬೆರೆದೆನೆಂಬಂಗಕ್ಕೆ ಮರೆಯ ಕಾಣೆ. ಕಳ್ಳನ ಜಾಳಿಗೆಯಂತೆ ಒಳ್ಳೆಯ ಮುದ್ರೆಯನಿಕ್ಕಿದಡೆ ಸುರಿದಲ್ಲಿಯೆ ಕಾಣಬಂದಿತ್ತು. ಕಲ್ಲಿಯ ಬಳಸಿನ ನೂಲಿನಂತೆ ಚಲ್ಲಿ ಸಿಕ್ಕಿನಲ್ಲಿ ತುಯಿದಡೆ ಆ ಕಳ್ಳರ ಬಲ್ಲವರಿಗೆ ಎಲ್ಲಿಯ ವ್ರತ ! ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರುವ ಬಲ್ಲನಾಗಿ ಒಲ್ಲನು.
--------------
ಅಕ್ಕಮ್ಮ