ಅಥವಾ
(11) (7) (0) (0) (1) (0) (0) (0) (6) (2) (0) (4) (0) (0) ಅಂ (1) ಅಃ (1) (10) (4) (2) (0) (0) (4) (0) (3) (0) (0) (0) (0) (0) (0) (0) (14) (0) (4) (3) (10) (5) (0) (5) (10) (8) (0) (0) (0) (7) (15) (0) (0) (13) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿತ್ಯ ಚಿಲುಮೆಯ ಕೃತ್ಯಂಗಳಾದಲ್ಲಿ ತೃಣ ಕಾಷ್ಠ ವಿದಳ ಮೊದಲಾದ ಸಂಗ್ರಹಂಗಳಲ್ಲಿ ಸಂದೇಹ ಮಾತ್ರವಿಲ್ಲದೆ ಮನ ನಂಬುವನ್ನಬರ ಸೋದಿಸಬೇಕು. ಅದು ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗಕ್ಕರ್ಪಿತ.
--------------
ಅಕ್ಕಮ್ಮ
ನಾನಾ ವ್ರತದ ಭಾವಂಗಳುಂಟು. ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು. ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ ಆರನೂ ಕರೆಯೆನೆಂಬ ಕಟ್ಟಳೆಯವರುಂಟು. ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಹಿಡಿದು ನೂಕುವರುಂಟು. ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು. ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು. ಇಂತೀ ಶೀಲವೆಲ್ಲವು ನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ. ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರು ಕೂಡಿ ತಪ್ಪ ಹೊರಿಸಿದ ಮತ್ತೆ ಆ ವ್ರತವನೊಪ್ಪಬಹುದೆ ! ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ? ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು. ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ ಅವನೂಟ ಸತ್ತನಾಯಮಾಂಸ. ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ. ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ. ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು. ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ. ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು. ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.
--------------
ಅಕ್ಕಮ್ಮ
ನಾನಾ ವ್ರತಂಗಳ ಪಿಡಿವುದೆಲ್ಲವು ಮನದ ಶಂಕೆ. ಮನ ಹರಿದಾಡುವುದೆಲ್ಲವು ತನುವಿನ ಶಂಕೆ. ಮನ ತನು ಕೂಡಿ ನಡೆವುದೆಲ್ಲವು ಪ್ರಕೃತಿಯ ಶಂಕೆ. ಮನ ತನು ಪ್ರಕೃತಿ ಮೂರೊಂದಾದಲ್ಲಿ ಶೀಲವೆಂಬ ಪಾಶ ಜೀವನ ಕೊರಳ ಸುತ್ತಿತ್ತು. ಬಹಿರಂಗದ ವ್ರತ ಅಂತರಂಗದ ಅರಿವು ಉಭಯವು ಕಟ್ಟುವಡೆದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆಂಬ ಗೊತ್ತಾಯಿತ್ತು.
--------------
ಅಕ್ಕಮ್ಮ
ನೇಮವ ಮಾಡಿಕೊಂಡು ತನ್ನಯ ಸಂಸಾರದ ಕಾಮ್ಯಾರ್ಥಕ್ಕಾಗಿ ಐದು ಹತ್ತು ಹದಿನೈದೆಂದು ಮೀರಿ ಬಂದಡೆ ಕೃತ್ಯವಿಲ್ಲ ಎಂದು ಅವರಿಗಿಕ್ಕಿಹೆವೆಂದು ಭಕ್ತರ ಮನೆಯಲ್ಲಿ ಹೊಕ್ಕು ಹೊಕ್ಕು ಬೇಡುವುದು ಭಕ್ತನ ಯುಕ್ತಿಯೆ? ಆರೊಡವೆಯ ಆರಿಗೆ ಬೇಡಿ ಮಾಡಿ ತಾನು ದಾರಿಯಾದೆನೆಂಬ ಭೋಗಿಯ ನೋಡಾ? ವೇಶಿಯ ಪುತ್ರ ಪೈತೃಕವ ಮಾಡಿದಲ್ಲಿ ಅದೇತರ ಊಟ? ಅದೇತರ ಮಾಟ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ನೆರಹಿ ಮಾಡುವ ಮಾಟ ಅಘಹರನ ಮುಟ್ಟದು. ಬೇಡಿ ಮಾಡುವ ಮಾಟ ಪುಣ್ಯವೃದ್ಧಿಗೆ ಸಲ್ಲದು. ಕೃತ್ಯಕ್ಕೆ ಒಡೆಯರ ಕಟ್ಟಳೆಯಿಲ್ಲದೆ ಒಲ್ಲೆನೆಂದಡೆ ಮನಮುಟ್ಟದ ಕಟ್ಟಳೆಯ ಗುತ್ತಿಗೆಯ ಹೋದವರುಂಟೆ? ನಿಶ್ಚಯವನರಿಯದ ಕೃತ್ಯವ ಮಾಡಿಕೊಂಡಂತೆ ಮತ್ತೆ ಅದ ಬಿಟ್ಟು ಕೃತ್ಯವಿಲ್ಲದಿರೆ ಮತ್ತೊಂದುವ ಮುಟ್ಟಿದೆನಾದಡೆ ಹೊಟ್ಟೆಯೊಳಗಣ ಸತ್ತ ಕತ್ತೆಯಮರಿಯ ನರಿಯು ತಿಂದು ಮಿಕ್ಕುದ ನಾಯಿತಿಂದಡೆ, ಇದರಚ್ಚುಗಕ್ಕಂಜಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಗೊತ್ತಿಗೆ ಮರೆಯಾದ.
--------------
ಅಕ್ಕಮ್ಮ
ನಾನಾ ವ್ರತ ನೇಮ ಭೇದಂಗಳಲ್ಲಿ ಅರುವತ್ತುನಾಲ್ಕು ವ್ರತ, ಐವತ್ತಾರು ಶೀಲ, ಮೂವತ್ತೆರಡು ನೇಮ, ನಿತ್ಯಕೃತ್ಯ ಲೆಕ್ಕಕ್ಕವಧಿಯಿಲ್ಲ, ಅಗೋಚರ. ಆಚಾರವಾರಿಗೂ ಅಪ್ರಮಾಣ, ನೀತಿಯ ಮಾತಿಂಗೆ ಆಚಾರ, ಶಿವಾಚಾರವೆ ಸರ್ವಮಯಲಿಂಗ, ಪಂಚಾಚಾರಶುದ್ಧಭರಿತ, ರಾಮೇಶ್ವರಲಿಂಗಕ್ಕೆ ಪ್ರಾಣವಾಗಿರಬೇಕು.
--------------
ಅಕ್ಕಮ್ಮ
ನಚ್ಚುಮಚ್ಚಿನ ವ್ರತ, ನಿಷ್ಠೆಹೀನನ ಪೂಜೆ, ಭಕ್ತಿ ಇಲ್ಲದವನ ಮಾಟಕೂಟ ಇಂತಿವು ಸತ್ಯವಲ್ಲ. ಆ ವ್ರತ ನೇಮ ನಿತ್ಯಂಗಳಲ್ಲಿ ಮನ ವಚನ ಕಾಯ ತ್ರಿಕರಣ ಶುದ್ಧವಾಗಿ, ಬಾಹ್ಯಕ್ರೀಯಲ್ಲಿ ಅರಿವ ಆತ್ಮನಲ್ಲಿ, ಮಿಕ್ಕಾದ ಪದಾರ್ಥಂಗಳಲ್ಲಿ ಸದ್ಭಾವ ತಾನಾಗಿ, ಅರಿವಿಂಗೂ ಆಚಾರಕ್ಕೂ ಎಡೆದೆರಪಿಲ್ಲದೆ ಕ್ರೀಯೆ ವಸ್ತುವಾಗಿ, ವಸ್ತುವೆ ಕ್ರೀಯಾಗಿ, ಬಣ್ಣ ಬಂಗಾರದಂತೆ ನಿಂದಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ
--------------
ಅಕ್ಕಮ್ಮ
ನಿರ್ಧನಿಕರು ನಡೆನುಡಿಗಳಿಂದ ತಾಕುಸೋಂಕು ಬರಲಾಗಿ ಒಳಹೊರಗು ಎಂಬ ಸಂದೇಹಕ್ಕೆ ಈಡನಿಕ್ಕಿ, ಕಂಡಡೆ ನುಡಿಯದೆ ಬಂದಡೆ ಕರೆಯದೆ ಇಪ್ಪವರ ನೋಡಾ ! ಧನಪತಿಶ್ರುತ ದೃಷ್ಟದಲ್ಲಿ ಕೆಡೆನುಡಿದು ಅಂಗಳ ಬಾಗಿಲಲ್ಲಿ ತಳ್ಳಿದಡೆ ಇಲ್ಲಿಯೆ ಲೇಸೆಂದು ಕುಳ್ಳಿರುವರ ಕಂಡು ನಾಚಿತ್ತಯ್ಯಾ ಎನ್ನ ಮನ. ಆಚಾರಕ್ಕೆ ಅರಸುಂಟೆ? ಇಂತೀ ಶೀಲವಂತರೆಲ್ಲರು ಮಹಾಲಕ್ಷ್ಮಿಯ ಮನೆಯ ಎತ್ತಾಗಿ ಉತ್ತು, ತೊತ್ತಾಗಿ ಕೊಬ್ಬಿ, ಕತ್ತೆಯಾಗಿ ಹೊತ್ತು ಸಾವರೆಲ್ಲರು ಸದ್ಭಕ್ತರೆ? ಆಚಾರಕ್ಕೆ ಅರಸಾದಡು ಆಕಾಶವ ನೋಡುವುದಕ್ಕೂ ನೂಕು ತಾಕೆ? ಕಂಡ ಮತ್ತೆ ಒಳಗಿಟ್ಟುಕೊಳ್ಳಬಹುದೆ? ಇದು ಕಾರಣದಲ್ಲಿ ಭಕ್ತಿ ಎನಗೆ ಸ್ವಪ್ನವಾಯಿತ್ತು ಸತ್ಯವೆಂಬುದು ಬೆಚ್ಚಿ ಓಡುತ್ತಿದೆ. ಎನಗಿನ್ನು ಮುಕ್ತಿಯಾವುದು? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎನಗೊಂದು ಗೊತ್ತ ತೋರಾ.
--------------
ಅಕ್ಕಮ್ಮ
ನಿತ್ಯ ಚಿಲುಮೆಯ ಕೃತ್ಯವೆಂದು ಮಾಡುವಲ್ಲಿ, ಮಳಲಿನ ಮರೆಯ ನೀರ ಬಳಸದೆ, ಸಲೆ ಪೃಥ್ವಿಯಲ್ಲಿ ನೆಲೆ ಚಿಲುಮೆಯಂ ಕಂಡು ದಿನಕೃತ್ಯ ತಪ್ಪದೆ ನೇಮ ಸಲುವಂತೆ ಕಾಷ್ಠವಂ ತೊಳೆದು ಜೀವಜಂತುಗಳ ನೋಡಿ, ಉಂಡೆ ಮರನಂ ಒಡೆಯದೆ, ಜೀರ್ಣವಾದ ಕಾಷ್ಠಮಂ ಒಲೆಗಿಕ್ಕದೆ ತುಳಿಯದ ಧಾನ್ಯವಂ ಶೋಧಿಸಿ, ಲತೆ ಪರ್ಣ ಮೊದಲಾದ ಪಚ್ಚೆ ಪೈರು ಗೆಣಸು ವಿದಳ ಹುಡುಕಂ ಮುಟ್ಟದೆ, ಲಿಂಗಾವಧಾನದಲ್ಲಿ ಸ್ವಯಂ ಪಾಕವಂ ಮಾಡಿ ಸ್ವಾನುಭಾವದಿಂದ ಲಿಂಗಾರ್ಚನೆಯ ಮಾಡಿ ಬೇಡದೆ ಕಾಡದೆ ಸ್ವ ಇಚ್ಫಾಪರನಾಗಿ ಆರೈದು ನಡೆವಲ್ಲಿ, ನೀರು ನೆಲ ಬಹುಜನಗ್ರಾಮ ಗಣಸಮೂಹಸಂಪದಸಮಯಕ್ಕೆ ಸಿಕ್ಕದೆ ತ್ರಿವಿಧಕ್ಕೊಳಗಲ್ಲದೆ, ಇಂತೀ ನೇಮವೆ ತಾನಾಗಿ, ತಾನೆ ನೇಮವಾಗಿ, ಉಭಯಕ್ಕೆ ತೆರಪಿಲ್ಲದೆ ನಿಂದುದು ಆಚಾರವೆ ಪ್ರಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ನಿತ್ಯ ಚಿಲುಮೆಯ ನೇಮಕ್ಕೆ ಶಿವಭಕ್ತರ ಸೀಮೆಯಲ್ಲಿಯಲ್ಲದೆ ಇರಲಿಲ್ಲ. ಶಿವಭಕ್ತರು ಮುಟ್ಟಿ ತಂದ ದ್ರವ್ಯವನಲ್ಲದೆ ಒಪ್ಪಲಿಲ್ಲ. ಭೋಜನಕ್ಕೆ ತಮ್ಮಾಯತದ ಜಲ ಲಿಂಗಮುದ್ರೆಯ ಸೀಮೆಯ ಮೃತ್ತಿಕೆ ಮರಕಲ್ಲು ಮುಂತಾದ ಮತ್ತಾವಾವ ಗುಣಂಗಳೆಲ್ಲವು ಲಿಂಗಧಾರಣ ಸೀಮೆಯಾಗಿ, ಮತ್ತೆ ಆವಾವ ಗುಣಂಗಳಿಂದ ಮನವೆಟ್ಟುವನ್ನಬರ ಚಿತ್ತಸುಯಿಧಾನಿಯಾಗಿ, ತನ್ನಾಯತದ ಕೈಯ ಧಾನ್ಯವ ಕುಟ್ಟುವಲ್ಲಿ, ಒರಳು ಒನಕೆಯ ಶಬ್ದವಂ ಭವಿಗಳು ಕೇಳದಂತೆ ಸ್ವಯಂ ಪಾಕವ ಮಾಡುವಲ್ಲಿ, ಅಗ್ನಿಯಲ್ಲಿ ಕಾಷ್ಠದಲ್ಲಿ ಭೂಮಿಯಲ್ಲಿ ಸುಜಲದಲ್ಲಿ ಇಂಬಿಡುವಲ್ಲಿ ತೆಗೆವಲ್ಲಿ ಲಿಂಗಸುಯಿಧಾನಿಯಾಗಿ, ಮಜ್ಜನ ದಂತಾವಳಿಗಳಲ್ಲಿ ಶುಚಿರ್ಭೂತನಾಗಿ, ಜಂಗಮಲಿಂಗದ ಮುಂದಿಟ್ಟು ಅವರು ಸ್ವೀಕರಿಸುವನ್ನಕ್ಕ ನೇತ್ರತುಂಬಿ ನೋಡಿ ಅವರ ಕಾರುಣ್ಯವ ಪಡೆದು ಇಪ್ಪುದು ಸದ್ಭಕ್ತನ ವ್ರತ ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.
--------------
ಅಕ್ಕಮ್ಮ