ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುವಿಡಿದು ಲಿಂಗವಾವುದೆಂದರಿಯಬೇಕು, ಲಿಂಗವಿಡಿದು ಜಂಗಮವಾವುದೆಂದರಿಯಬೇಕು, ಜಂಗಮವಿಡಿದು ಪ್ರಸಾದವಾವುದೆಂದರಿಯಬೇಕು, ಪ್ರಸಾದವಿಡಿದು ಪರಮಪರಿಣಾಮವೆಡೆಗೊಳ್ಳಬೇಕು. ಅಂತಪ್ಪ ಪರಮಪರಿಣಾಮವೆ ಪರಬ್ರಹ್ಮವೆಂದರಿತಲ್ಲಿ, ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
--------------
ಆದಯ್ಯ
ಗಗನದ ಪುತ್ಥಳಿ ಬಯಲ ಬಣ್ಣವನುಟ್ಟು. ಅಂಜನದ ತಿಲಕವನ್ನಿಟ್ಟು, ಬ್ರಹ್ಮ ವಿಷ್ಣು ರುದ್ರರನಲಂಕರಿಸಿಕೊಂಡು ತ್ರಿಜಗದೊಳಗೆ ತನ್ಮಯವಾಗಿ ಸುಳಿಯಿತ್ತು ನೋಡಾ. ಇಂತಿದನರಿಯದೆ ಜಗದೊಳಗಣ ಹಿರಿಯರೆಲ್ಲಾ ಬರುಸೂರೆ ಹೋದರು. ಮಾತಿನ ಜಾಣರೆಲ್ಲಾ ನಿಜಗೆಟ್ಟರು. ಇದನರಿತು ಉಟ್ಟುದ ಹರಿದು, ಇಟ್ಟುದ ಸುಟ್ಟು, ತೊಟ್ಟುದ ತೊಡದು, ಉಲುಮೆಯನುಸುರಲೊಲ್ಲದೆ, ಶಬ್ದಮುಗ್ಧವಾದ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಗುರುವೆ ಅಂಗ, ಲಿಂಗವೆ ಮನ, ಜಂಗಮವೇ ಪ್ರಾಣವಯ್ಯಾ. ನಾದವೆ ಗುರು, ಬಿಂದುವೆ ಲಿಂಗ, ಕಳೆಯೆ ಜಂಗಮವಯ್ಯಾ. ಇದಕ್ಕೆ ಶ್ರುತಿ: ನಾದಂ ಗುರುಮುಖಂಚೈವ ಬಿಂದುಂ ಲಿಂಗಮುಖಂ ತಥಾ ಕಲಾಂ ಚರಮುಖಂ ಜ್ಞಾತ್ವಾ ಗುರುರ್ಲಿಂಗಂತು ಜಂಗಮಃ ಇಂತೆಂದುದಾಗಿ ಪ್ರಸಾದಕಿನ್ನೇವೆ? ಗುರುವೆ ಲಿಂಗ, ಲಿಂಗವೆ ಜಂಗಮ, ಜಂಗಮವೆ ಪ್ರಸಾದ, ಪ್ರಸಾದವೆ ಪರಿಪೂರ್ಣವಾದಡೆ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ತಾನೆ.
--------------
ಆದಯ್ಯ
ಗುರುಲಿಂಗಜಂಗಮ ಒಂದಾದ ಕ್ರಿಯೆಯಲ್ಲಿ ನಿಂದ ಪ್ರಕಾಶಂಗೆ ಆವ ಸಂದೇಹವಿಲ್ಲ. ಆವ ವಿಷಯಂಗಳೊಳಗೆ ಮನವಿಹುದು ಆ ರೂಪು ತಾನಾಗಿಹುದಾಗಿ ಸೌರಾಷ್ಟ್ರ ಸೋಮೇಶ್ವರಲಿಂಗದ ವಿಷಯದೊಳಿಪ್ಪ ಮನ ತದ್ರೂಪ ತ[ಲ್ಲೀ]ಯ.
--------------
ಆದಯ್ಯ
ಗುರುಕರಾಬ್ಜದಿಂದ ಉದಯಿಸಿದ ಶಿಷ್ಯನು ಬೀಜವೃಕ್ಷದಂತೆ ಅನ್ಯವಲ್ಲದಿಪ್ಪನಾಗಿ, ಗುರು ತಾನಾದ ಶಿಷ್ಯನು ಗುರುತನದ ಹಮ್ಮಿಲ್ಲದೆ ಆ ಶಿಷ್ಯನಾಗಿ ನಿಂದ ಸಹಜನಯ್ಯಾ. ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದಸಾಧ್ಯವಾಯಿತ್ತಾಗಿ ಅಭೇದ್ಯನಯ್ಯಾ.
--------------
ಆದಯ್ಯ
ಗುರುಕಾರುಣ್ಯ ವೇದ್ಯವಾದ ಬಳಿಕ ಜನನ ಸೂತಕವಿಲ್ಲ, ಘನಲಿಂಗಸಂಗದಲ್ಲಿ ಮನವು ನಿವಾಸಿಯಾದ ಬಳಿಕ ಜಾತಿಸೂತಕವಿಲ್ಲ, ತತ್ವಪರಿಜ್ಞಾನದಿಂ ತನ್ನ ತಾನರಿದ ಬಳಿಕ ಪ್ರೇತಸೂತಕವಿಲ್ಲ. ಸರ್ವೇಂದ್ರಿಯಂಗಳಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ಮತವಾದ ಬಳಿಕ ಜಡದುಃಖಕರ್ಮ ಸಂಕಲ್ಪವಿಕಲ್ಪಂಗಳಿನಿತು ನಾನಾ ಸೂತಕಂಗಳೇನೂ ಇಲ್ಲ ನೋಡಯ್ಯಾ.
--------------
ಆದಯ್ಯ
ಗುರುಲಿಂಗದ ದೃಷ್ಟಿಯಲ್ಲಿ ದೃಷ್ಟಿನಟ್ಟು, ಕಂಗಳು ಕರಗಿ, ಅವಗ್ರಹಿಸಿ ಬೆರಸಿ ಶಿವಜ್ಞಾನಾನುಭಾವದಲ್ಲಿ ಮನ ಕರಗಿ, ಮನ, ಕಂಗಳು ಏಕರಸವಾಗಿ ಸೌರಾಷ್ಟ್ರ ಸೋಮೇಶ್ವರನ ಕರುಣ ಪಾದೋದಕದೊಳಗೆ ಬೆರಸಿತ್ತು.
--------------
ಆದಯ್ಯ
ಗೊತ್ತ ಮೆಟ್ಟಿ ದಾಂಟಿ ಹುಟ್ಟದೆ ಹೋದ ಪರಿಯ ನೋಡಾ. ಕತ್ತಲೆ ಬೆಳಗನೊತ್ತರಿಸಿ ಹತ್ತೆ ಸಾರಿನಿಂದ ಪರಿಯ ನೋಡಾ. ಒತ್ತಿವಿಡಿದ ಅಸುರನ ನೆತ್ತಿಯನೊಡೆದು, ಮುತ್ತ ಸರಗೋದ ಪರಿಯ ನೋಡಾ. ಸೌರಾಷ್ಟ್ರ ಸೋಮೇಶ್ವರ ಲಿಂಗದೊಡನಾಡಿ ಹೊಡೆಯ ಕೊಯ್ದ ಪರಿಯ ನೋಡಾ.
--------------
ಆದಯ್ಯ
ಗತಿಗೆಟ್ಟು, ಮತಿಯ ಹಂಗ ಮರೆದು, ಕಾಮಿಸಿ ಕಲ್ಪಿಸಿ, ಭಾವಿಸುವ ಭಂಗಹಿಂಗಿ, ಭಾವಕಲ್ಪನೆಯ ಮೀರಿ, ಭಾವಭೇದವಳಿದು ನಿರ್ಭಾವಪದದಲ್ಲಿ ನಿಂದುದು ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಭೇದವಳಿದು ಅವಿರಳ ಶರಣನ ಇರವು.
--------------
ಆದಯ್ಯ
ಗಂಧಘ್ರಾಣ ಆಚಾರಲಿಂಗಸಹಿತ ಲಿಂಗಾರ್ಪಿತ, ಜಿಹ್ವೆರಸ ಗುರುಲಿಂಗಸಹಿತ ಲಿಂಗರ್ಪಿತ, ನೇತ್ರರೂಪು ಶಿವಲಿಂಗಸಹಿತ ಲಿಂಗಾರ್ಪಿತ, ತ್ವಕ್ಕುಸ್ವರುಶನ ಜಂಗಮಲಿಂಗಸಹಿತ ಲಿಂಗಾರ್ಪಿತ, ಶ್ರೋತ್ರಶಬ್ದ ಪ್ರಸಾದಲಿಂಗಸಹಿತ ಲಿಂಗಾರ್ಪಿತ, ಆತ್ಮತೃಪ್ತಿ ಮಹಾಲಿಂಗಸಹಿತ ಲಿಂಗಾರ್ಪಿತ. ಇದಕ್ಕೆ ಶ್ರುತಿ: ಲಿಂಗದೃಷ್ಟ್ಯಾ ನಿರೀಕ್ಷರ ಸ್ಯಾತ್ ಲಿಂಗಹಸ್ತೇನ ಸ್ಪರ್ಶನಂ ಲಿಂಗಜಿಹ್ವಾರಸಾಸ್ವಾದೋ ಲಿಂಗಘ್ರಾಣೇನ ಘ್ರಾತಿತೇ ಲಿಂಗಶ್ರೋತ್ರೇಣ ಶ್ರವಣಂ ಲಿಂಗಾಸ್ಯೇನೋಕ್ತಿರುಚ್ಯತೇ ಲಿಂಗೇನಾನುಗತಂ ಸರ್ವಂ ಇತ್ಯೇತತ್ಸಹ ಭಾಜನಂ ಇಂತೆಂದುದಾಗಿ, ಷಡುಸ್ಥಲಬ್ರಹ್ಮ ಲಿಂಗಾಂಗದಿಂ ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗ [ಅ]ಗವನೊಳಕೊಂಡಿತ್ತಾಗಿ ಅಂಗವೇ ಲಿಂಗವಾಯಿತ್ತು ನೋಡಾ.
--------------
ಆದಯ್ಯ
ಗಾಳಿಯ ನಾರಿನಲ್ಲಿ ಬೆಟ್ಟ ಕಟ್ಟುವಡೆಯಿತ್ತ ಕಂಡೆ. ಆ ಬೆಟ್ಟವೊಂದು ಮಾನದೊಳಗಡಕವಾದುದ ಕಂಡೆ. ಆ ಮಾನದೊಳಗೆ ಎಂಟು ಮಂದಿ ಹಿರಿಯರ ಕಂಡೆ. ಅವರ ಗುಹ್ಯದಲ್ಲಿ ನರರು ಸುರರು ನೆರೆದಿಪ್ಪುದ ಕಂಡು, ಬೆರಗಾದೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಗುರುವಿನಲ್ಲಿ ಗುಣವನರಸಲಿಲ್ಲ, ಲಿಂಗದಲ್ಲಿ ಲಕ್ಷಣವನರಸಲಿಲ್ಲ, ಜಂಗಮದಲ್ಲಿ ಕುಲವನರಸಲಿಲ್ಲ, ಪಾದೋದಕದಲ್ಲಿ ಶುದ್ಧವನರಸಲಿಲ್ಲ, ಪ್ರಸಾದದಲ್ಲಿ ರುಚಿಯನರಸಲಿಲ್ಲ. ಸೌರಾಷ್ಟ್ರ ಸೋಮೇಶ್ವರನ ಶರಣರಲ್ಲಿ ಮತ್ತೇನನೂ ಅರಸಲಿಲ್ಲ.
--------------
ಆದಯ್ಯ
ಗುರುಕಾರುಣ್ಯವ ಪಡೆದು ಲಿಂಗಾನುಗ್ರಾಹಕನಾಗಿ ಅಂಗ ಲಿಂಗ ವೇಧೆಯಿಂದಿರಲು ಆ ಇಷ್ಟಲಿಂಗಕ್ಕೆ ಅಂಗವೇ ಅರ್ಪಿತ. ಮತ್ತಾ ಇಷ್ಟಲಿಂಗಕ್ಕೆ ಮನಕ್ಕೆ ವೇದ್ಯವಾಗಿ ಪ್ರಾಣನಲ್ಲಿ ಪ್ರವೇಶವಾಗಿ ಲಿಂಗವೇ ಪ್ರಾಣವಾಗಿರಲು ಆ ಪ್ರಾಣಲಿಂಗಕ್ಕೆ ಮನವೇ ಅರ್ಪಿತ. ಇಷ್ಟ ಪ್ರಾಣ ಸಂಗ ಸಂಯೋಗ ಸಮರಸಾನುಭಾವ ಲಿಂಗದನುವರಿತು, ಅರಿಕೆಯರತ ಅರುವಿನ ತೃಪ್ತಿಯೇ ಭಾವಲಿಂಗಾರ್ಪಿತ. ಇದಕ್ಕೆ ಶ್ರುತಿ: ಇಷ್ಟಲಿಂಗಾರ್ಪಿತಂ ಚಾಂಗಂ ಪ್ರಾಣಲಿಂಗಾರ್ಪಿತಂ ಮನಃ ಭಾವಲಿಂಗಾರ್ಪಿತಾ ತೃಪ್ತಿರಿತಿ ಭೇದೋ ವರಾನನೇ ಇಂತೆಂದುದಾಗಿ, ಇಷ್ಟ ಪ್ರಾಣ ತೃಪ್ತಿ ಸಮರಸಾದ್ವೈತವಾದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
--------------
ಆದಯ್ಯ
ಗರುಡನನುರಗನ ಬಾಣದಿಂ ಪರಿಹರಿಸುವೆನೆಂಬವನಂತೆ, ಅರಗಿನ ಪುತ್ಥಳಿಯನುರಿಯ ಕರುಮಾಡದಲ್ಲಿರಿಸುವನಂತೆ, ಮಂಜಿನ ಮನುಜಂಗೆ ಬಿಸಿಲ ಹೊದಿಕೆಯ ಹೊದಿಸುವನಂತೆ, ಸುರತಸಂಗದಿಂದುರವಣಿಪ ಮೋಹದಜ್ಞತೆಯಿಂ ಪರಕೆ ಪರವಾದ ಪರಬ್ರಹ್ಮವನರಿವೆನೆಂಬ ಪರಿಭವಾತ್ಮರಿಗೆಲ್ಲಿಯದೊ, ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು.
--------------
ಆದಯ್ಯ
ಗುರುಕರಣವೆಂಬ ಪಾದೋದಕದಲ್ಲಿ ನಾಂದು ನಾಂದು, ನಿಃಕ್ರೀಯಾಯಿತ್ತಯ್ಯಾ. ಇಂತು ನಿರ್ಮಲನಾಗಿ ಲಿಂಗಕ್ಕೆ ಮಜ್ಜನಕ್ಕೆರದು ಲಿಂಗೋದಕವಾಯಿತ್ತು. ಲಿಂಗಸೋಂಕಿನಿಂದ ಪಾದೋದಕವಾಯಿತ್ತು. ಲಿಂಗಾರ್ಪಿತದಿಂದ ಪ್ರಸಾದೋದಕವಾಯಿತ್ತು. ಲಿಂಗೋದಕ ಮಜ್ಜನದಲ್ಲಿ ಪಾದೋದಕ ಕರಚರಣಮುಖ ಪ್ರಕ್ಷಾಲನದಲ್ಲಿ ಪ್ರಸಾದೋದಕ ಲಿಂಗಭೋಗೋಪಭೋಗದಲ್ಲಿ. ಇಂತೀ ತ್ರಿವಿಧೋದಕದ ಪರಿಯನರಿತು ಲಿಂಗಭೋಗೋಪಭೋಗದಲ್ಲಿ ಭೋಗಿಸಬಲ್ಲರೆ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಗುರುವಿನಂತರಂಗದೊಳಗೆ ಶಿಷ್ಯ, ಶಿಷ್ಯನಂತರಂಗದೊಳಗೆ ಗುರು. ಈ ಗುರುಶಿಷ್ಯಸಂಬಂಧ ಶರೀರಪ್ರಾಣದಂತೆ ಭಿನ್ನವಿಲ್ಲದೆ, ಗುರುವೆಂಬ ಭಾವ ತೋರದಿರ್ದಡೆ ಆತ ಶಿಷ್ಯ. ಶಿಷ್ಯನೆಂಬ ಭಾವ ತೋರದಿರ್ದಡೆ ಆತ ಗುರು. ಇಂತು ಭಾವ ಭೇದಗಟ್ಟಿರಲು ಮೌನಮುದ್ರೆಯಿಂದುಪದೇಶವ ಮಾಡಿದ ಗುರುಸೇವೆಯಿಂ ತತ್‍ಶಿಷ್ಯನ ಸಂಶಯ ವಿಚ್ಛಿನ್ನವಾಗಿ, ಉಪಮಾತೀತವಾದ ಉಪದೇಶದಿಂ ಲಿಂಗಸೇವ್ಯದಲ್ಲಿ ತನ್ನಂಗವ ಮರದಿಪ್ಪ ಸುಖವನುಪಮಿಸಬಾರದಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ