ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
--------------
ಆದಯ್ಯ
ಅಂಗದಂತೆ ಲಿಂಗವಾಗಿರ್ದ ದೇಹ, ಲಿಂಗದಂತೆ ಅಂಗವಾಗಿರ್ದ ದೇಹ, ಈ ಕಾಯದ್ವಯಂಗಳಿಗೆ ಅಂಗಕಳಾ ಲಿಂಗಕಳಾ ಪ್ರಭಾವ ಒಂದಾಗಿ, ತನುವಿನ ಕೈಮುಟ್ಟಿ ಪ್ರಾಣಲಿಂಗ ಜಂಗಮದಾಸೋಹ ಮಾಡುತ್ತಿರಲು, ಆ ಜಂಗಮದ ಸ್ಥೂಲಪ್ರಾಸಾದವೆ ಬಸವಣ್ಣನ ಸಾಕಾರ. ಅಂತಪ್ಪ ಸಾಕಾರವನರಿವುತ್ತಿದ್ದರಿವು ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾಗಿ ನೆನೆವುತ್ತ ನೆನೆವುತ್ತ ನೆನೆಯದಂತಿರ್ದೆನಯ್ಯಾ
--------------
ಆದಯ್ಯ
ಅಂಗದಾಸೆಯುಳ್ಳನ್ನಕ್ಕ ಭಯ ಬಿಡದು ನೋಡಾ ಅಯ್ಯಾ. ಜೀವನ ಭ್ರಾಂತುಳ್ಳನ್ನಕ್ಕ ಪ್ರಕೃತಿ ಹಿಂಗದು ನೋಡಾ ಅಯ್ಯಾ. ಮನದ ಸಂಚಲ ಉಳ್ಳನ್ನಕ್ಕ ಕರ್ಮವಳಿಯದು ನೋಡಾ ಅಯ್ಯಾ. ಕಾಮಾದಿ ಭೋಗಂಗಳುಳ್ಳನ್ನಕ್ಕ ಪುಣ್ಯಪಾಪಂಗಳು ತೊಲಗವು ನೋಡಾ ಅಯ್ಯಾ. ಇಹಪರಂಗಳ ಸಾರುವನ್ನಕ್ಕ ಭವ ಹಿಂಗದು ನೋಡಾ ಅಯ್ಯಾ. ಆನೆಂಬುದುಳ್ಳನ್ನಕ್ಕ ನೀನೆಂಬುದು ಬಿಡದು ನೋಡಾ ಅಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ತಾನೆಂಬನ್ನಕ್ಕ ಲಿಂಗಸಾಹಿತ್ಯವಿಲ್ಲ ನೋಡಾ ಅಯ್ಯಾ.
--------------
ಆದಯ್ಯ
ಅಂಗದ ಮೇಲಣ ಲಿಂಗ ಅಂಗದಲ್ಲಿ ಪೂರ್ಣವಾಗಿ ತನುಗುಣವಳಿಯಿತ್ತು. ಮನದ ಮೇಲಣ ಲಿಂಗ ಮನದಲ್ಲಿ ಪೂರ್ಣವಾಗಿ ನೆನಹಿನ ಸಂಕಲ್ಪ ಕೆಟ್ಟಿತ್ತು. ಪ್ರಾಣದ ಮೇಲಣ ಲಿಂಗ ಪ್ರಾಣದಲ್ಲಿ ಪೂರ್ಣವಾಗಿ ಪ್ರಾಣನ ಪ್ರಕೃತಿ ನಷ್ಟವಾಯಿತ್ತು. ಭಕ್ತಿ-ಜ್ಞಾನ ಲಿಂಗಸನ್ನಿಹಿತವಾಗಿರಬಲ್ಲರಾಗಿ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು ಸ್ವತಂತ್ರರು.
--------------
ಆದಯ್ಯ
ಅಂದಿನವರು! ಇಂದಿನವರು! ಎಂಬ ಸಂದೇಹಿಗಳಿಗೆ ಸಂದೇಹ ಮುಂದುಗೊಂಡಿಪ್ಪುದು ನೋಡ! ಅಂದೊಂದು ಪರಿ, ಇಂದೊಂದು ಪರಿಯೆ? ಗುರುಲಿಂಗಜಂಗಮ ಅಂದೊಂದು ಪರಿ, ಇಂದೊಂದು ಪರಿಯೆ? ಪಾದೋದಕ ಪ್ರಸಾದ ಅಂದೊಂದು ಪರಿ, ಇಂದೊಂದು ಪರಿಯೆ? ಶರಣಲಿಂಗಸಂಬಂಧ ಅಂದೊಂದು ಪರಿ, ಇಂದೊಂದು ಪರಿಯೆ? ಅರಿವು ಆಚರಣೆ ಅಂದೊಂದು ಪರಿ, ಇಂದೊಂದು ಪರಿಯೆ? ಸ್ಥಲಕುಲಂಗಳು ಅಂದೊಂದು ಪರಿ, ಇಂದೊಂದು ಪರಿಯೆ? ಸೌರಾಷ್ಟ್ರ ಸೋಮೇಶ್ವರಲಿಂಗವು ಅಂದೊಂದು ಪರಿ, ಇಂದೊಂದು ಪರಿಯೆ?
--------------
ಆದಯ್ಯ
ಅಂಗದ ಮೇಲೆ ಶಿವಲಿಂಗಸಾಹಿತ್ಯವಿಲ್ಲದ ಅಂಗ ಅನೇಕ ಅಘೋರಪಾಪಕ್ಕೆ ಅವಕಾಶವಾಗಿಪ್ಪುದಯ್ಯಾ. ಇದಕ್ಕೆ ಶ್ರುತಿ: ``ಯಾ ತೇ ರುದ್ರ ಶಿವಾ ತನೂರಘೋರಪಾಪಕಾಶಿನೀ ಇದು ಕಾರಣ ಗುರುಕಾರುಣ್ಯವ ಪಡೆದು ಲಿಂಗಾನುಗ್ರಹಕನಾದ ಪ್ರಾಣಲಿಂಗಸಂಬಂಧಿಯೇ ಶಿವೈಕ್ಯನು. ಅಂತಪ್ಪ ಶಿವೈಕ್ಯಂಗೆ ಅಧರ್ಮವೇ ಧರ್ಮ, ವಿಷವೇ ಪಥ್ಯ, ಅರಿಯೇ ಮಿತ್ರರು. ಅಂದೆಂತೆದಡೆ: ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮತಾಂ ವ್ರಜೇತ್ ಪೂಜಿತೇ ಪಾರ್ವತೀನಾಥೇ ವಿಪರೀತೇ ವಿಪರ್ಯಯಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರಿಗೆ ಸರಿಯಿಲ್ಲವಾಗಿ ಅಪ್ರತಿಮರು.
--------------
ಆದಯ್ಯ
ಅಂಗವೆ ಲಿಂಗ, ಲಿಂಗವೆ ಅಂಗವೆಂದೆಂಬರು. ಅಂಗವು ಲಿಂಗವೆ? ಲಿಂಗಕ್ಕೆ ಅಂಗವುಂಟೆ? ಅದು ತಾ ನಾಮ ರೂಪು ಕ್ರೀಯೆ ಇಲ್ಲವಾಗಿ. ಮಾತು ಮನ ನಿಲುಕದ ಲಿಂಗವು ಅಂಗವಪ್ಪುದು ಮಿಥ್ಯ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಂಗೈಯೊಳಗಣ ಹಂಸೆ ಹಾಲನೊಲ್ಲದೆ ನೀರ ಕುಡಿಯಿತ್ತು. ನೀರು ಬಾಯಾರಿ ನೀರಡಿಸಿ ಅರಕೆಗೊಂಡಿತ್ತು. ಅರಗಿನ ಮಾಡ ಉರಿಯುಂಡು ಗರಿಗತವಾಯಿತ್ತು. ಕರ್ಪುರದ ಮಾಡ ಅಗ್ನಿಯನೊಳಕೊಂಡು ಉರಿಯದು ನೋಡಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಂಗವೆಂಬ ಅಂಗನೆ ಆತ್ಮನೆಂಬ ಪುರುಷನನಪ್ಪಿ ಮುಂಡೆತನವಿಲ್ಲದೆಯಿಪ್ಪ ಭೇದವ ತಿಳಿದು ನೋಡಿರಣ್ಣಾ. ಕುಂಟಣಿಯಾದ ಒಡಹುಟ್ಟಿದ ಮನ ನಪುಂಸಕನಾದ ಕಾರಣ ಲಿಂಗಸಂಗಿಯಲ್ಲದೆ ಹೋದ ಕೇಳಿರಣ್ಣಾ. ಆತ್ಮನು ಪುರುಷನಾದಡೂ ಲಿಂಗವ ಕೂಡುವ ಭರದಿಂದ ಸತಿಯಾಗಬಲ್ಲ. ಶರಣಸತಿ ಲಿಂಗಪತಿಯೆಂಬುದುಂಟಾಗಿ, ಶಿವಜ್ಞಾನವೆಂಬ ಸಖಿಯ ಕೈವಿಡಿದು ಸೌರಾಷ್ಟ್ರ ಸೋಮೇಶ್ವರಲಿಂಗವ ಕೂಡಿ ಸುಖಿಯಾದನು.
--------------
ಆದಯ್ಯ
ಅಂಗದ ಕಳವಳ, ಮನದ ಸಂಚಲ, ಭಾವದ ಭ್ರಾಂತು, ಅರುವಿನ ಮರಹು, ಭಕ್ತಿಯ ಭಿನ್ನ, ಜ್ಞಾನದ ಕಳಂಕು ಪ್ರಾಣನ ಪ್ರಕೃತಿ, ಸ್ಥಾನಮಾನವೆಂಬ ಲಕ್ಷ, ಇಹಪರಂಗಳ ತೃಷ್ಣೆ, ಭವರೋಗಂಗಳ ಬಂಧ, ಇಂದ್ರಿಯಂಗಳಿಚ್ಛೆ, ತಾಪತ್ರಯಂಗಳ ಸುಖದುಃಖ, ಮಲತ್ರಯಂಗಳಾಸೆ, ಪಂಚಮಲಂಗಳ ಸಂಚ, ಅಷ್ಟಮದಂಗಳ ಘಟ್ಟಿ, ಷಡೂರ್ಮಿಗಳ ವಿಕಾರ ಇಂತಪ್ಪ ಅಖಿಳದೊಳು ಸಿಲುಕದ ಅಕಳಂಕರಪ್ಪ, ಸಮ್ಯಜ್ಞಾನ, ಸಹಜಸಮಾಧಾನಯೋಗದೊಳಿರ್ಪ, ಮಹಾಶರಣರ ತೋರಿಸಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಆದಯ್ಯ
ಅಂಗದ ಮೇಲಣ ಲಿಂಗ ಹಿಂಗಿದಾತ ಭವಿ ಎಂಬರು. ಅಂಗದ ಮೇಲಣ ಲಿಂಗ ಹಿಂಗದಾತನ ಭಕ್ತನೆಂಬರು. ಅಂಗದೊಳಗೆ ಬೆರಸಿರ್ಪ ಲಿಂಗದ ಹೊಲಬನಾರೂ ಅರಿಯರು. ಆ ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿವುದೆ? ಅಂಗದೊಳಗಣ ಲಿಂಗ ಹಿಂಗದೆ ಆರಾಧಿಸಬಲ್ಲಡೆ ಹಿಂಗುವದು ಭವಮಾಲೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಂಗದ ಮೇಲೆ ಸಾಕಾರವಿಡಿದು ಮಂತ್ರಾಹ್ವಾನಂಗಳಿಂದಷ್ಟವಿಧಾರ್ಚನೆ ಷೋಡಶೋಪಚರಿಯಂಗಳಿಂ ವ್ಯಾಪಿಸಿಕೊಂಬುದೆ ಇಷ್ಟಲಿಂಗ. ಆ ಇಷ್ಟಲಿಂಗಕ್ಕೆ ಆಶ್ರಯವಾಗಿ ಚತುರ್ದಶೇಂದ್ರಿಯಂಗಳಲ್ಲಿ ತನ್ಮುಖವಾಗಿ ಸರ್ವೇಂದ್ರಿಯಂಗಳಿಗೆ ಚೈತನ್ಯವಾಗಿ ಪ್ರಾಣನಲ್ಲಿ ಪರಿಪೂರ್ಣನಾಗಿಪ್ಪುದೇ ಪ್ರಾಣಲಿಂಗ. ಆ ಪ್ರಾಣಲಿಂಗಕ್ಕೆ ಆದಿಯಾಗಿ ಭಾವಭ್ರಮೆಗಳು ನಷ್ಟವಾಗಿ ಅನುಭಾವದಲ್ಲಿ ಲೀನವಾಗಿ ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯಂಗಳಲ್ಲಿ ಭರಿತವಾಗಿ ಭಾವ ಬ್ರಹ್ಮವೆಂಬ ಭೇದವಿಲ್ಲದೆ ಸನ್ನಿಹಿತಭಾವದಿಂದಿಪ್ಪುದೇ ಭಾವಲಿಂಗ. ಇಂತೀ ಮೂರು ಲಿಂಗದ ಮೂಲ, ಆರು ಲಿಂಗದ ಅಂತ್ಯವನೊಳಕೊಂಡು ಮಾರ್ಗಕ್ರೀ ನಿಃಕ್ರೀಯಾಗಿ, ಧ್ಯಾನ ನಷ್ಟವಾಗಿ, ಮಂತ್ರ ಗೋಪ್ಯವಾಗಿ, ಜ್ಞಾನ ಶೂನ್ಯವಾಗಿ, ಭಾವ ದಿಗಂಬರವಾಗಿ, ಘನಕ್ಕೆ ಘನವಾದ ಪರಬ್ರಹ್ಮವು ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಅಂಗದಲ್ಲಿ ಲಿಂಗವಿರಲು ಎನ್ನ ತನು ನಿರ್ಮಲವಾಯಿತ್ತು, ಮನದಲ್ಲಿ ಅರಿವಿರಲು ಎನ್ನ ಮನ ನಿರ್ಮಲವಾಯಿತ್ತು, ಪ್ರಾಣದಲ್ಲಿ ಪ್ರಸಾದವಿರಲು ಎನ್ನ ಪ್ರಾಣ ನಿರ್ಮಲವಾಯಿತ್ತು. ಪಂಚೇಂದ್ರಿಯಂಗಳಲ್ಲಿ ಪಂಚಲಿಂಗವೆಡೆಗೊಂಡಿರಲು ಇಂದ್ರಿಯಂಗಳು ನಿರ್ಮಲವಾದವು. ಸೌರಾಷ್ಟ್ರ ಸೋಮೇಶ್ವರನ, ಶರಣರ ಸಂಗದಿಂದ ಶಿವಪ್ರಸಾದ ದೊರೆಕೊಂಡಿತ್ತಾಗಿ ಸರ್ವಾಂಗಲಿಂಗವಾಯಿತ್ತು.
--------------
ಆದಯ್ಯ
ಅಂಗಲಿಂಗರತಿಯಿಂದ ಆಯತವಾಯಿತ್ತು, ಪ್ರಾಣಲಿಂಗರತಿಯಿಂದ ಸ್ವಾಯತವಾಯಿತ್ತು, ಭಾವಲಿಂಗರತಿಯಿಂದ ಸನ್ನಿಹಿತವಾಯಿತ್ತು. ಇಂತು ಆಯತ ಸ್ವಾಯತ ಸನ್ನಹಿತ ಇಂತೀ ತ್ರಿವಿಧವೊಂದಾದ ಬಳಿಕ ಕೊಟ್ಟುಕೊಂಬ ಉಪಚರಿಯಕ್ಕೆ ಇಂಬಿಲ್ಲ, ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ.
--------------
ಆದಯ್ಯ
ಅಂಗ ಲಿಂಗವಾದಡದ್ಭುತಕ್ಕಾಳಪ್ಪುದೆ? ಮನ ಲಿಂಗವಾದರೆ ನಿಚ್ಚನಿಚ್ಚ ಲಯವಪ್ಪುದೆ? ಪ್ರಾಣ ಲಿಂಗವಾದಡೆ ಪ್ರಕೃತಿಯ ತಳೆವುದೆ? ಅರಿವು ಲಿಂಗವಾದರೆ ಮರಹಿಂಗೊಳಗಹುದೆ? ಭಾವ ಲಿಂಗವಾದಡೆ ಸಕಲವಿಷಯಂಗಳಿಗೆ ಭ್ರಮಿಸುವುದೆ? ಜ್ಞಾತೃ ಜ್ಞಾನ ಜ್ಞೇಯ ಲಿಂಗವಾದರೆ ಅರಿವುದೇನು ಅರಿಹಿಕೊಂಬುದೇನು? ಇವು ತಾ ತಮ್ಮಂತೆ, ಸೌರಾಷ್ಟ್ರ ಸೋಮೇಶ್ವರಲಿಂಗ ಮುನ್ನಿನಂತೆ.
--------------
ಆದಯ್ಯ
ಅಂಗದ ಕಳೆ ಲಿಂಗಸಂಗವಾಗಿ, ಅಂಗವೆಂಬ ಶಂಕೆಯ ಭಂಗವ ತೊರದು. ಲಿಂಗಾಂಗಸಂಗವೆಂಬ ಸಂದ ಮೀರಿ ಪರಮಪ್ರಕಾಶದಿಂದ ಬೆಳಗುವ ಸ್ವಯಂಜ್ಯೋತಿ ನಿಜದಲ್ಲಿ ನಿಂದು ತನ್ಮಯವಾದ ಪರಮಲಿಂಗಕಾಯರು ಸಚ್ಚರಿತ್ರ ನಿಶ್ಚಿಂತರು, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಅಂತರಂಗದ ಆತ್ಮಜ್ಯೋತಿ ಬಹಿರಂಗವ ಮುಟ್ಟಿ ಮುಟ್ಟದು ನೋಡಾ. ಓದುವಾದಿಂಗೆ ನಿಲುಕದು, ಶ್ರತಿಸ್ಮøತಿಗಳಿಗೆ ಅಳವಡದು ನೋಡಯ್ಯಾ. ಸೌರಾಷ್ಟ್ರ ಸೋಮೇಶ್ವರಲಿಂಗದ ಅನುಸಂಧಾನದಲ್ಲಿ ನಿಂದುದು ನೋಡಾ.
--------------
ಆದಯ್ಯ
ಅಂಗಲಿಂಗ ಮನಲಿಂಗ ಪ್ರಾಣಲಿಂಗ ಭಾವಲಿಂಗ ಜ್ಞಾತೃ ಜ್ಞಾನ ಜ್ಞೇಯ ಲಿಂಗ ಇದಕ್ಕೆ ಶ್ರುತಿ: ಓಮಿದಂ ದೇವಾನಾಮಿದಂ ಸರ್ವಾನಾಮಿದಂ ಆತ್ಮಮಯಂ ದೇವಾಃ ಓಂ ಚ ಮೇ ಶರಶ್ಚ ಮೇ ಭಯಂಚ ಮೇ ವಚಶ್ಚ ಮೇ ಶ್ವಸನಂಚ ಮೇ ಶಿಖರಂಚ ಮೇ ಶೈಲಂಚ ಮೇ ವ್ರೀಹಿಶ್ಚ ಮೇ ತಿಲಂಚ ಮೇ ಹೇಮಚ ಮೇ ವಿದುಂಚ ಮೇ ಪೂಷಂಚ ಮೇ ತೃಣಂಚ ಮೇ ಧಾತೃಂಚ ಮೇ ಭೋಕ್ತøಂಚ ಮೇ ಜ್ಞಾತೃಂಚ ಮೇ ಜ್ಞೇಯಂಚ ಮೇ ದೇಹಶ್ಚ ಮೇ ಆತ್ಮಂಚ ಮೇ ಅಖಿಲಂಚ ಮೇ ಇತ್ಯನ್ಯೋನ್ಯಂ ಉಪಯುಕ್ತೇ ವ್ಯತಿರಿಕ್ತಂ ತಸ್ಮೈ ತೇ ನಮಃ ಇಂತೆಂದುದಾಗಿ ಶಿವ ಸರ್ವಾವಯವವಾದ ಸರ್ವಾಂಗಲಿಂಗಿಗಳನೆನಗೊಮ್ಮೆ ತೋರಿಸಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಂಗಸುಖಿಗೆ ಲಿಂಗಸುಖವಳವಡದು, ಲಿಂಗಸುಖಿಗೆ ಅಂಗಸುಖವಿಂಬುಗೊಳದು. ವಾಗಾದ್ವೈತ, ಕ್ರಿಯಾದ್ವೈತ, ಭಾವಾದ್ವೈತ ಇಂತೀ ತ್ರಿವಿಧಾದ್ವೈತ ಲಿಂಗಸುಖಸಾಹಿತ್ಯವಾದಲ್ಲಿ, ನರಕವಿಲ್ಲ, ಸ್ವರ್ಗವಿಲ್ಲ, ಕರ್ಮವಿಲ್ಲ, ಭವವಿಲ್ಲ, ಮರಣವಿಲ್ಲ, ಫಲವಿಲ್ಲ, ಪದವಿಲ್ಲ, ಇಹವಿಲ್ಲ, ಪರವಿಲ್ಲ. ಸೌರಾಷ್ಟ್ರ ಸೋಮೇಶ್ವರಾ, ನೀ ಸಾಕ್ಷಿಯಾಗಿ ಅಂಗಸುಖಿಗೆ ಲಿಂಗಸುಖ ದೊರಕೊಳ್ಳದು.
--------------
ಆದಯ್ಯ