ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಮಂಗೆ ಕೈತಲೆಗೊಟ್ಟ ಕೈವಾರಿಗಳಿಗೆಲ್ಲಿಯದೊ, ಕೈವಲ್ಯ ಪದವಿ? ಕಾಲಂಗೆ ಕಾಯವನೊಪ್ಪಿಸಿಕೊಟ್ಟ ಕಾಮುಕರಿಗೆಲ್ಲಿಯದೊ, ಕೈಲಾಸದ ಬಟ್ಟೆ? ಕರ್ಮಕಪಟದ ಕಮ್ಮರಿಯೊಳು ಸಿಲುಕಿ ಕಳವಳಿಸುತಿರ್ಪ ಕರ್ಮಕಾಂಡಿಗಳಿಗೆಲ್ಲಿಯದೊ, ಸ್ವರ್ಗಾಪವರ್ಗ? ಸೌರಾಷ್ಟ್ರ ಸೋಮೇಶ್ವ[ರ] ಲಿಂಗದ ನಿಜವನರಿಯದ ಕುಜನರಿಗೆಲ್ಲಿಯದೊ ನಿತ್ಯಾನಂದ ನಿಜಸುಖ?
--------------
ಆದಯ್ಯ
ಕಾಲ ಕರ್ಮ ಬಿಂದು ಮಾಯೆ ಜೀವ ಪ್ರಕೃತಿ ಮಲ ರೋಧನ ಕಳವು ಹಿಂಸೆ ತೃಷೆ ನಿದ್ರೆ ವ್ಯಸನಕ್ಕೆ ಕ್ಲೇಶ ಕಾಮಾದಿಗಳುಳ್ಳನ್ನಕ್ಕರ ಏಕ ಭಾಜನೆವೆಲ್ಲಿಯದೊ? ಇವೆಲ್ಲವ ಕಳೆದುಳಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗದೊಡನೆ ಏಕಭಾಜನ, ದೊರಕೊಂಬುದು.
--------------
ಆದಯ್ಯ
ಕೋಣನೊಂದು ಕುದುರೆಯ ನುಂಗಿತ್ತು. ಇರುಹೆ ಒಂದಾನೆಯ ನುಂಗಿತ್ತು. ಬಲ್ಲುಕನನಲ್ಲವೆನಿಸಿತ್ತು, [ಕ]ಟ್ಟಿದ ಪಕ್ಷಿ ನೆರೆ ಪಾರಿತ್ತು ಗಗನಕ್ಕೆ. ಚಿದಾಕಾಶವೆ ತಾನಾಗಿ, ಬಿಂದ್ವಾಕಾಶವನೊಡೆಯಿತ್ತು. ದೃಷ್ಟಾಕಾಶವ ನಷ್ಟಂಗೈಯಿತ್ತು, ಬ್ಥಿನ್ನಾಕಾಶವನೊಡಗೂಡಿತ್ತು, ಮಹದಾಕಾಶವನೊಳಕೊಂಡಿತ್ತು. ಸೌರಾಷ್ಟ್ರ ಸೋಮೇಶ್ವರನೆಂಬ ನಿಜದಾಕಾಶದಲ್ಲಿ ನಿಂದು ನಾಮರೂಪು ನಷ್ಟವಾಯಿತ್ತು.
--------------
ಆದಯ್ಯ
ಕುರುಹಿಲ್ಲದಠಾವಿನಲ್ಲಿ ತೆರಹಿಲ್ಲದಾತ್ಮಂಗೆ ಬರಿಯ ನಾಮವ ಸೈತಿಟ್ಟು ಕುರುಹದೇನು ಹೇಳಾ? ನಾಮವುಳ್ಳೆಡೆಯಲ್ಲಿ ಸೀಮೆ, ಸೀಮೆಯುಳ್ಳೆಡೆಯಲ್ಲಿ ನಾಮ ಹೋಹೋ, ತಿಳಿದು ನೋಡಿರೇ. ಹಮ್ಮು ಜಡನರಿವು ಮರವೆಯನೆಯ್ದಿಪ್ಪುದು ಮನ. ತನು, ಮನ, ಕರಣ, ಭಾವಕ್ಕಾಧಾರವಾಗಿಪ್ಪುದಾತ್ಮ. ಇನಕಿರಣ ಇನನಪ್ಪುದೆ? ವಾಯು ತಾನೇ ಆಕಾಶವೇ? ಧೂಮ್ರ ತಾನೇ ಅಗ್ನಿಯೆ? ನೆನೆವ ಮನವು ತಾನೇ ಜೀವನೆ? ಇಂತಲ್ಲ ನೋಡಾ, ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಮನವೇ ಆತ್ಮನಲ್ಲವಯ್ಯಾ ಮಲ್ಲಿಕಾರ್ಜುನ.
--------------
ಆದಯ್ಯ
ಕೆಲರು ಚತುರ್ವೇದಭಾರಕರಾದರು, ಕೆಲರು ಆಗಮಂಗಳಲ್ಲಿ ಸವೆದರು, ಕೆಲರು ಷಟ್‍ತರ್ಕಂಗಳಲ್ಲಿ ಮೋಹಿಸಿದರು, ಅಲ್ಲದೆ ತಾರಕ್ರಹ್ಮವನರಿತುದಿಲ್ಲ. ಅದೆಂತೆಂದೊಡೆ: ಕೇಚಿದಾಗಮಜಾಲೇಷು ಕೇಚಿನ್ನಿಗಮಸಂಚಯೇ ಕೇಚಿತ್ತರ್ಕೇಣ ಮುದ್ಯಂತಿ ನೈವ ಜಾನಂತಿ ತಾರಕಂ ಎಂದುದಾಗಿ ಜ್ಞಾನಾಜ್ಞಾನದ ಮಧ್ಯದಲ್ಲಿ ಕರ್ಮಬಲದಲ್ಲಿ ಹುಟ್ಟಿದ ಚೌರಾಶಿ ಜೀವರಾಶಿಗಳಲ್ಲಿಲ್ಲ. ಪಂಚೇಂದ್ರಿಯಪ್ರೀತಿಯಿಂದ ನಡೆವ ಪ್ರಾಣಿಗಳೆಲ್ಲರು ಲಿಂಗವನರಿಯದೆ ಕಾಲಚಕ್ರ ಕರ್ಮಚಕ್ರ ಪ್ರಳಯಚಕ್ರಕ್ಕೊಳಗಾದರು. ಸೌರಾಷ್ಟ್ರ ಸೋಮೇಶ್ವರಲಿಂಗವ ಪೂಜಿಸಬಂದು, ಲಿಂಗದ ಮರೆದ ಕಾರಣ.
--------------
ಆದಯ್ಯ
ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು ಹುಲ್ಲು ತಿನ್ನದು, ನೀರ ಕುಡಿಯದು, ಇರ್ದಲ್ಲಿ ಇರದು, ಹೋದತ್ತ ಹೋಗದು. ಇದೇನು ಸೋಜಿಗ ಬಲ್ಲರೆ ಹೇಳಿರಣ್ಣಾ, ಎತ್ತ ಬಿಟ್ಟಿತ್ತು, ಸತ್ತನೊಳಕೊಂಡು ಮುತ್ತನುಗುಳಿ ಹೋಯಿತ್ತು. ಇದೇನು ವಿಪರೀತ, ಬಲ್ಲರೆ ಹೇಳಿರಣ್ಣಾ, ಎತ್ತು ಕೆಟ್ಟಿತ್ತು, ಅರಸುವರ ಕಾಣೆನಣ್ಣಾ. ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ, ಎತ್ತೆತ್ತ ಪೋಯಿತ್ತೆಂದರಿಯೆನಣ್ಣಾ.
--------------
ಆದಯ್ಯ
ಕಾಯದ ಗತಿಯಿಲ್ಲ, ನಡೆವವನಲ್ಲ. ಅಕಾಯಚರಿತ್ರನು, ಅನುಪಮಲಿಂಗೈಕ್ಯನು. ಕುಲ, ಛಲ, ವಿದ್ಯಾಮದ, ಮೋಹ, ಬಲುವಿಡಿಯ. ನಿರಹಂಕಾರವಿಡಿದು, ನಿರಂಗ ಸುಜ್ಞಾನ ಒಡಲಾ[ಗಿ] ಭರಿತಪ್ರಸಾದವಲ್ಲದನ್ಯವನರಿಯ. ಇದಕ್ಕೆ ಶ್ರುತಿ: ಶುಚಿರೂಪಂ ನಚಾಜ್ಞಾನಂ ಅರ್ಪಿತಾನರ್ಪಿತಂ ತಥಾ ಯಥಾ ವರ್ತೇತ ಯಸ್ಯಾಪಿ ಶಿವೇನ ಸಹ ಮೋದತೇ ಎಂದುದಾಗಿ ಅಂಗರುಚಿಯ ಹಂಗು ಹಿಂಗಿ ಲಿಂಗರುಚಿಯ ಸಂಗವಾದ ಸುಸಂಗಿ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಕುಂಜರನ ಪಂಜರವೆ ಸಂಜೀವನವಾದವರೆಲ್ಲರೂ ಭಕ್ತರೆಂತಪ್ಪರಯ್ಯಾ? ಮುಪ್ಪುರದಲ್ಲಿ ಮುಳುಗಿದವರೆಲ್ಲರೂ ಯುಕ್ತರೆಂತಪ್ಪರಯ್ಯಾ? ಭೂತಭವಿಷದ್ವರ್ತಮಾನಕ್ಕೆ ಸಿಲುಕಿದವರೆಲ್ಲರೂ ವಿರಕ್ತರೆಂತಪ್ಪರಯ್ಯಾರಿ ಇಂತಪ್ಪವರು ನಮ್ಮ ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಸಲ್ಲದೆ ಹೋದರು.
--------------
ಆದಯ್ಯ
ಕಾಯದ ಜನನಸ್ಥಾನ ಅಷ್ಟತನುವಿನ ಕೊನೆಯ ಮೊನೆಯಲ್ಲಿ, ವಾ[ಕಿ]ನ ಜನನಸ್ಥಾನ ಮನದ ಕೊನೆಯ ಮೊನೆಯಲ್ಲಿ, ಮನದ ಜನನಸ್ಥಾನ ಚಿತ್ತಿನ ಕೊನೆಯ ಮೊನೆಯಲ್ಲಿ, ಚಿತ್ತಿನ ಜನನಸ್ಥಾನ ಆತ್ಮನ ಕೊನೆಯ ಮೊನೆಯಲ್ಲಿ, ಸೌರಾಷ್ಟ್ರ ಸೋಮೇಶ್ವರನ ಜನನಸ್ಥಾನ ``ಸರ್ವಂ ಖಲ್ವಿದಂ ಬ್ರಹ್ಮ ಎಂಬಲ್ಲಿ.
--------------
ಆದಯ್ಯ
ಕಾಳ ರಕ್ಕಸಿಗೆ ಮೂರು ಬೆನ್ನು, ಐದು ಬಸುರು, ಆರು ಕಣ್ಣು, ಏಳು ಮೊಲೆ, ಎಂಟು ಭುಜ, ಹತ್ತು ತೋಳು, ಹದಿನಾರು ಪಾದ, ಹದಿನೆಂಟು ತಲೆ, ಮೂವತ್ತಾರು ಬಾಯಿ, ಐವತ್ತೆರಡು ನಾಲಗೆ, ಅರುವತ್ತುನಾಲ್ಕು ಕೋರೆದಾಡೆ. ಈ ಪರಿಯಲ್ಲಿ ಜಗವೆಲ್ಲವನಗಿದಗಿದು ಉಗುಳುತ್ತಿರ್ದಳಯ್ಯಾ, ಸೌರಾಷ್ಟ್ರ ಸೋಮೇಶ್ವರಾ, ನೀ ಮುಟ್ಟೆ ಬಟ್ಟಬಯವಾದಳು.
--------------
ಆದಯ್ಯ
ಕಾಮಿತವಿಲ್ಲ ಕಲ್ಪಿತವಿಲ್ಲ ನಾಮಸೀಮೆಯೆಂಬುದಿಲ್ಲ. ಭಾವಿಸಲಿಲ್ಲ ಲಕ್ಷಿಸಲಿಲ್ಲ ರೂಹಿಸಲಿಲ್ಲ. ವಾಙ್ಮನಾತೀತವೆಂದಲ್ಲಿ ನೆನೆಯಲಿಲ್ಲ. ಅತ್ಯತಿಷ್ಠದ್ದಶಾಂಗುಲವೆಂದಲ್ಲಿ ಲಕ್ಷಿಸಲಿಲ್ಲ. ಸರ್ವಗೌಪ್ಯ ಮಹಾದೇವಾಯೆಂದಲ್ಲಿ ರೂಹಿಸಲಿಲ್ಲ. ಇಲ್ಲ ಇಲ್ಲ ಎನಲಿಲ್ಲ ಅಲ್ಲಿಯೇ ನಿರ್ಲೇಪವಾದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡಾ.
--------------
ಆದಯ್ಯ
ಕಿಗ್ಗೊಂಬಿನ ಕಪಿ ಅಗ್ಗೊಂಬಿನ ಕಪಿಯನಣಕಿಸಲು ಕಿಗ್ಗೊಂಬಿನ ಕಪಿ ಅದೇ ಕೊಂಬಿಗೆ ಬಿದ್ದಿತ್ತು, ಅಗ್ಗೊಂಬಿನ ಕಪಿ ಆಕಾಶಕ್ಕೆದ್ದಿತ್ತು. ಬಿದ್ದ ಕಪಿ ಬಯಲಾಯಿತ್ತು, ಎದ್ದ ಕಪಿ ನಿರ್ವಯಲಾಯಿತ್ತು. ಸೌರಾಷ್ಟ್ರ ಸೋಮೇಶ್ವರನೆಂಬ ನಾಮ ನಿರ್ನಾಮವಾಯಿತ್ತು.
--------------
ಆದಯ್ಯ
ಕರಸ್ಥಲದಲ್ಲಿ ಲಿಂಗವಿರಲು ಆ ಹಸ್ತವೇ ಕೈಲಾಸ, ಈ ಲಿಂಗವೇ ಶಿವನು. ಇದು ಕಾರಣ ಇಲ್ಲಿಯೇ ಕೈಲಾಸ. ಇದಲ್ಲದೆ ಬೇರೆ ಬೆಳ್ಳಿಯ ಬೆಟ್ಟವೇ ಕೈಲಾಸವೆಂದು ಅಲ್ಲಿಪ್ಪ ರುದ್ರನೇ ಶಿವನೆಂದು ಕೈಲಾಸಕ್ಕೆ ಹೋದಹೆ ಬಂದಹೆನೆಂಬ ಭ್ರಾಂತು ಬೇಡ ಕೇಳಿರಣ್ಣಾ. ಕಾಯದ ಅನುಗ್ರಹ ಲಿಂಗದಲ್ಲಿ ಶ್ರದ್ಧೆ ಇಲ್ಲದೆ ಇರಲು ಇನ್ನೆಲ್ಲಿಯ ನಂಬುಗೆಯಯ್ಯಾ? ಅಲ್ಲಲ್ಲಿಗೆ ಹರಿಹಂಚಾಗಿ ಕೆಡಬೇಡ ಕೇಳಿರಣ್ಣಾ. ಅಂಗದೊಳಗೆ ಲಿಂಗಾಂಗ ಸಂಗವನರಿತು ಒಳಹೊರಗು ಒಂದೇಯಾಗಿ ಶಿಖಿಕರ್ಪುರ ಸಂಗದಲ್ಲಿ ಕರ್ಪುರ ಉರಿಯಾಗಿಪ್ಪಂತೆ, ಸರ್ವಾಂಗದಲ್ಲಿ ಲಿಂಗಸೋಂಕಿ ಅಂಗಭಾವವಳಿದು, ಲಿಂಗಭಾವ ತನ್ಮಯವಾಗಿಪ್ಪ ತದ್ಗತಸುಖ ಉಪಮಾತೀತವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕಂಡೆ ಕಾಣೆನೆಂಬುದು ಕಂಗಳ ಭ್ರಮೆ, ಕೂಡಿದೆನಗಲಿದೆನೆಂಬುದು ಕಾಯ ಭ್ರಮೆ, ಅರಿದೆ ಮರೆದೆನೆಂಬುದು ಚಿದೋಹಂ ಭ್ರಮೆ, ಓದು ವೇದಂಗಳ ಜಿನುಗು ಉದುಮನದ ಭ್ರಮೆ, ಇಹ ಪರಂಗಳನಾಸೆಗೆಯ್ವುದು ಜೀವ ಭ್ರಮೆ, ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ.
--------------
ಆದಯ್ಯ
ಕ್ಷೀರಸಮುದ್ರದಲ್ಲಿ ಬೆರಸಿದ ಜಲವೆಲ್ಲ ಕ್ಷೀರವಾಗಿಪ್ಪುದೆಂತಂತೆ ಮನ ನಿಮ್ಮಲ್ಲಿ ಬೆರಸಿದ ಬಳಿಕ ಅಹಂಕಾರವಿಲ್ಲ. ಅಹಂಕಾರವಿಲ್ಲಾಗಿ ಪ್ರಾಣ ನಿಮ್ಮಲ್ಲಿ ಸಂಚಿತ. ಇಂತಾದ ಬಳಿಕ ಅಂಗವೆಂಬುದಿಲ್ಲ, ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲದೆ ಮತ್ತೇನೂ ಇಲ್ಲ.
--------------
ಆದಯ್ಯ
ಕಂಗಳ ಬೆಳಗು ತವೆಯುಡುಗಿ ತೊಳತೊಳಗಿ ಬೆಳಗುತಿರ್ದಿತ್ತಯ್ಯಾ. ಸುನಾದ ಮಹಾನಾದಂಗಳು ಸುಸರವಾಗಿ ಸೂಚಿಸುತಿರ್ದಿತ್ತಯ್ಯಾ. ಸುಜ್ಞಾನಭರಿತವೆ ಚಿದಂಬರದ ಚಿತ್ತಚಿತ್ತು ತಾನಾಗಿರ್ದಿತ್ತಯ್ಯಾ. ಸತ್ತು ಸತ್ತು ಸದಾ ಸತ್ತು ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾಗಿರ್ದನಯ್ಯಾ.
--------------
ಆದಯ್ಯ
ಕಟ್ಟಣೆಯೊಳಗಣ ಕಾಂಸ್ಯಕದಂತೆ, ಅಣಿಯೊಳಗಣ ಕೇಣದಂತೆ, ಚಿನ್ನದೊಳಗಣ ಬಣ್ಣದಂತೆ, ಪಟದೊಳಗಣ ತಂತುವಿನಂತೆ, ಎನ್ನಲ್ಲಿ ಭಿನ್ನವಿಲ್ಲದಿದ್ದೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕರ್ಮಮಲಮಾಯೆಗಳಿಲ್ಲದ, ಈಷಣತ್ರಯಂಗಳಿಗೆ ಸಲ್ಲದ, ಷಡುಮಿತ್ರರಿಗೆ ನಿಲುಕದ, ತಾಪತ್ರಯಂಗಳಿಗೆ ತಲ್ಲಣಿಸದ, ಆಶೆಯಾಮಿಷ ತಾಮಸಂಗಳು ಹೊದ್ದದ, ನಿಸ್ಸೀಮಗುರುವಿನಂಘ್ರಿವಿಡಿದು ಗುರುಕಾರುಣ್ಯವ ಪಡೆದು ಜನ್ಮಜರಾಮರಣ ವೃಂದಂಗಳ ಕಳೆದೆನಯ್ಯಾ ಸೌರಾಷ್ಟ್ರ ಸೋಮೇಶ್ವರನೆಂಬ ಗುರುವೇಧೆಯಿಂದಯ್ಯಾ.
--------------
ಆದಯ್ಯ
ಕಾಮದ ಸೀಮೆಯ ಕಳೆಯದನ್ನಕ್ಕ, ಕೋಪದ ಕೂಪ ಹೂಳದನ್ನಕ್ಕ, ಲೋಭದ ಲಾಭ ಕ್ಷಯಿಸದನ್ನಕ್ಕ, ಮೋಹದ ಗಾಯ ನಂದದನ್ನಕ್ಕ, ಮದದುನ್ಮದ ಕೆದರದನ್ನಕ್ಕ, ಮಚ್ಚರದ ಕೆಚ್ಚು ಬಿಚ್ಚದನ್ನಕ್ಕ, ಅರಿಗಳಾರತವಡಗಿ ನಿರುತವಾಗದನ್ನಕ್ಕ, ಸೌರಾಷ್ಟ್ರ ಸೋಮೇಶ್ವರಲಿಂಗವೆಂತು ಸಾಧ್ಯವಪ್ಪುದಯ್ಯಾ?
--------------
ಆದಯ್ಯ
ಕುರುಹಿಲ್ಲದಠಾವ ನೋಡುವ ಪರಿಯೆಂತೊ, ನೋಡಲಿಲ್ಲದ ಠಾವ ಹೇಳುವ ಪರಿಯೆಂತೊ, ಹೇಳಲಿಲ್ಲದ ಠಾವ ಕೇಳುವ ಪರಿಯೆಂತೊ, ಜೀವ ಮನಸ್ಸೆಂದೆರಡ ನುಡಿಯಬೇಡ ನೆನೆವ ಮನವು ತಾನೆ ಜೀವ ಕಾಣಿರೇ. ಕಾಯಜೀವದುಭಯ ಕುಳದ ಹೆಸರಿಟ್ಟು ತೋರುವುದು ಕಾಯಕ್ಕೊ? ಜೀವಕ್ಕೊ? ಹೆಸರಾ[ವ] ಎಡೆಯಲ್ಲಿ ಅಡಗಿತ್ತು? ಬಲ್ಲಡೆ ನೀವು ಹೇಳಿರೇ. ಈ ಪರಿಯಲ್ಲದೆ ನಾಮಕ್ಕೆ ಸೀಮೆ ಇಲ್ಲ, ಆತ್ಮಂಗೆ ರೂಹಿಲ್ಲ. ನಿಃಕಳಂಕಶಾಂತಮಲ್ಲಿಕಾರ್ಜುನದೇವರೆಂಬ ನಾಮ ಕಳಂಕು ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕಲ್ಲಿನಲ್ಲಿ ಕನಕ ಒಗೆದಡೆ ಕನಕ ಕಲ್ಲಿಂಗೆ ಕಿಂಕರನಪ್ಪುದೆ? ಶುಕ್ತಿಯಲ್ಲಿ ವರಿõ್ಞಕ್ತಿಕ ಒಗೆದಡೆ ವರಿõ್ಞಕ್ತಿಕ ಶುಕ್ತಿಗೆ ಕಿಂಕರನಪ್ಪುದೆ? ಧರೆಯಲ್ಲಿ ಸುರತರು ಒಗೆದಡೆ ಸುರತರು ಧರೆಗೆ ಕಿಂಕರನಪ್ಪುದೆ? ಜನನಿಯುದರದಲ್ಲಿ ಘನಶರಣ ಒಗೆದಡೆ ಜನನಿ ಜನಕಂಗೆ ಕಿಂಕರನಪ್ಪ[ನೆ]? ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು ಸ್ವತಂತ್ರಶೀಲರಗ್ರಗಣ್ಯರು.
--------------
ಆದಯ್ಯ
ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ ಕ್ರೋಧ,ಲೋಭ, ಚಿತ್ತದಲ್ಲಿ ಮೊಳೆಯದೆ, ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ, ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ, ಪ್ರಕೃತಿ ವಿಕೃತಿ ಭ್ರಾಂತು ಭಾವದಲ್ಲಿ ಫಲಿಸದೆ, ಸುಜ್ಞಾನದಿಂದ ಧರ್ಮಾಧರ್ಮಂಗಳ ವರ್ಮನರಿತು ಮನಕ್ಕೆ ಮನಸ್ಸಾಕ್ಷಿಯಾಗಿ ಸದ್ವರ್ತನೆ ಸಮತೆ ಸಾರಹೃದಯ ಅನಿಂದೆ ಅನುಬಂಧ ಅಕಪಟ ಪಟುತರವಾಗಿ ಸಟೆಯುಳಿದು ದಿಟಘಟಿಸಿ ನಿಜ ನಿರುಗೆಯಾದಲ್ಲಿ ಸೌರಾಷ್ಟ್ರ ಸೋಮೇಶ್ವರನೆಡೆಬಿಡವಿಲ್ಲದಿಪ್ಪನು.
--------------
ಆದಯ್ಯ
ಕೂಳ ಪ್ರಸಾದವೆಂದು ನುಡಿವ ಜಾಳು ಮಾತ ಕೇಳಿ, ಕೂಳಿಂಗೆ ಆಳಾಗಿ ಬೇಳಾದ ಬೇಳುವೆಯಲಾಳಿದವಂಗೇಕೊ ಗುರುಲಿಂಗಜಂಗಮಪ್ರಸಾದದ ನೆನಹು? ಪ್ರಸಾದದಲ್ಲಿ ಪ್ರಸನ್ನವಾದ ಪ್ರಸಾದಲಿಂಗಪ್ರಸನ್ನತೆಯ ಪ್ರಸಾದದಿಂದ ಜನಿಸಿದಾತ ಜಂಗಮ. ಆ ಜಂಗಮಮುಖದಿಂದ ತೋರಿತ್ತು ಪ್ರಸಾದ. ಇದು ಕಾರಣ ಗುರುವಿಂಗೂ ಜಂಗಮಪ್ರಸಾದ, ಲಿಂಗಕ್ಕೂ ಜಂಗಮಪ್ರಸಾದ, ಚತುರ್ದಶಭುವನಕ್ಕೂ ಜಂಗಮಪ್ರಸಾದ. ಇದಕ್ಕೆ ಶ್ರುತಿ: ಗುರುಣಾ ಲಿಂಗಸಂಬಂಧಃ ತಲ್ಲಿಂಗಂ ಜಂಗಮಸ್ಥಿತಂ ಜಂಗಮಸ್ಯ ಪ್ರಸಾದೇನ ತ್ರೈಲೋಕ್ಯಮುಪಜೀವಿತಂ ಇಂತೆಂದುದಾಗಿ ಪ್ರಸಾದವನರಿತು ಪ್ರಸಾದವೆ ಪ್ರಾಣವಾಗಿರಬಲ್ಲಡೆ ಸೌರಾಷ್ಟ್ರ ಸೋಮೇಶ್ವರಲಿಂಗವೆಂಬೆನು.
--------------
ಆದಯ್ಯ
ಕಾಯದ ಅವಗುಣಂಗಳ ಕಾಣದೆ ವಾಯುಕ್ಕೆ ವಾಯವ ನುಡಿವ ವಾಯುಪ್ರಾಣಿಗಳಿಗೆ ಕಾಣಬಹುದೆ ಪರಮಾತ್ಮನಿರವು? ಹುಲುಮೊರಡಿಯಲ್ಲಿ ಕಲ್ಪತರುವ ಕಂಡೆಹೆನೆಂದು ಕಳವಳಿಸಿ ಬಳಲುವನಂತೆ, ಗೋರಿಕಲ್ಲೊಳಗೆ ಚಿಂತಾಮಣಿಯನರಸಿ ಬೆರಟುಗೊಂಡವನಂತೆ, ಕಂಗಳಯ್ಯಂಗೆ ಮಣಿಮುಕುರನ ತೋರೆ ಕಾಣ್ಬನೆ ತನ್ನ ಪ್ರತ್ಯಂಗವ? ತಮ್ಮಲ್ಲಿರ್ದಾತ್ಮನ ತಾವರಿಯದವರು ನಿಮ್ಮನೆತ್ತ ಬಲ್ಲರಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕೃಶ ಮಧ್ಯ ಸ್ಥೂಲ, ಹ್ರಸ್ವ ದೀರ್ಘವಪ್ಪ ಬಹುಘಟದಂಬುವಿನಲ್ಲಿ ಇನಬಿಂಬ ಪ್ರತಿಬಿಂಬಿಸುತ್ತಿರಲು ಅದು ಒಂದು ಬಿಂಬವೊ, ಬಹುಬಿಂಬವೊ? ಅಂಗ ಪ್ರತ್ಯಂಗ ನಿಚಯಂಗಳಲ್ಲಿ ಚೇತನಿಸುವ ಚೈತನ್ಯಾತ್ಮಕನು ಏಕಾತ್ಮನೊ, ಹಲವಾತ್ಮನೊ? ತತ್ವಪರಿಜ್ಞಾನದಿಂ ತಿಳಿದುನೋಡಲು ವಿಶ್ವಾವಕಾಶವಾಗಿಪ್ಪ ಆತ್ಮನು ಹೋಗುವ ಹೊರಡುವಠಾನ್ನಾವುದೊ? ಹೋಗಲಿಲ್ಲ ಬರಲಿಲ್ಲದಾತ್ಮನ ಹೋಯಿತ್ತು ಬಂದಿತ್ತೆಂಬ ಲೀಲೆವಾರ್ತೆಯನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ

ಇನ್ನಷ್ಟು ...