ಅಥವಾ
(6) (4) (1) (0) (1) (0) (0) (0) (8) (1) (0) (0) (1) (0) ಅಂ (1) ಅಃ (1) (10) (0) (0) (0) (0) (0) (0) (0) (0) (0) (0) (0) (0) (0) (0) (2) (0) (1) (0) (6) (2) (0) (2) (3) (7) (0) (0) (0) (2) (1) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವಶರಣಂಗೆ ನಿಜೈಕ್ಯಪದಂಗಳು ದೊರೆಕೊಂಬುವ ತೆರನ ಶ್ರುತಿ ಗುರು ಸ್ವಾನುಭಾವದಿಂದ ನುಡಿವುತಿಪ್ಪೆ ಕೇಳಿರಯ್ಯ. ಜನನ ಮರಣಕಂಜಿ ತಾನಾರೆಂಬುದಂ ಸ್ವಾನುಭಾವದಿಂ ನೋಡಿ ಎಲ್ಲಿಂದೊಗೆದೆನೆಂಬುದಂ ಬಗೆಗೊಂಡು ಅರಿವು ತಲೆದೋರಿ ಪುಣ್ಯಪಾಪಕ್ಕೆ ಬೀಜಾಂಕುರಮಪ್ಪ ಮಲತ್ರಯಂಗಳಿಗೆ ತಲೆಗೊಡಹಿ ಭೋಗಮಂ ನೀಗಿ ಭುಕ್ತಿಯಿಂ ತೊತ್ತಳದುಳಿದು ಬಂಧುವರ್ಗಮಂ ಭಂಗಿಸಿ ಉಪಾದ್ಥಿಕೆಯನುರುಹಿ ಒಡಲಾಸೆಯಂ ತಲೆವೊಡೆಯನಿಕ್ಕಿ ಅಹಂಕಾರಂಗಳನಳಿದು ಮಮಕಾರಂಗಳಂ ಮುಂದುಗೆಡಿಸಿ ಲೋಕದ ನಚ್ಚುಮೆಚ್ಚಿಗೆ ಕಿಚ್ಚುಗುತ್ತಿ ಜ್ಞಾನ ಕ್ರೀಗಳಲ್ಲಿ ದೃಢವ್ರತವಾಗಿ ಕರಿಗೊಂಡು ಆಸನದಲ್ಲಿ ಮರಹ ಮಗ್ಗಿಸಿ ಮನ ತನುವನಪ್ಪಿ ಸರ್ವ ಕರಣಂಗಳಂ ಚರಲಿಂಗಮುಖವ ಮಾಡಿ ಆತ್ಮವಿದ್ಯಾಲಿಂಗದಲ್ಲಿ ಮನಸಂದು ಪಂಚಪ್ರಸಾದಾತ್ಮಕನಾದ ಘನಲಿಂಗದ ಬೆಳಗ ಪಿಂಡಾಂಡದಲ್ಲಿ ಜ್ಞಾನದಿಕ್ಕಿನಿಂದ ಪರಿಪೂರ್ಣವಾಗಿ ಕಂಡು ಪೆಣ್ದುಂಬಿಯನಾದವೆ ಮೊದಲಾದ ಸಿಂಹನಾದವೆ ಕಡೆಯಾದ ಆರೆರಡು ಪ್ರಕಾರದ ನಾದಂಗಳಂ ಕೇಳಿ ಹರುಷಂ ಹರವರಿಗೊಂಡು ಎನಗೆ ಶಿವತತ್ವ ಸಾಧ್ಯವಾಯಿತು. ಪರಶಿವನಲ್ಲಿ ಒಡಗೂಡಿ ಪರಬ್ರಹ್ಮವಾದೆನೆಂದು, ಅಹಂಕರಿಸಿ ಕ್ರೀಯಂ ಬಿಟ್ಟು ಗಂಬ್ಥೀರಜ್ಞಾನದೊಳಿರುವ ಶರಣಂಗೆ ಮೂರೊಂದು ವಿಧದ ಪದಂಗಳು ಬಪ್ಪವಲ್ಲದೆ ಶಿವನಲ್ಲಿ ನಿಜೈಕ್ಯವಿಲ್ಲ. ಅದೇನು ಕಾರಣವೆಂದೊಡೆ- ಷಟ್ಸ ್ಥಲಬ್ರಹ್ಮಿಯೆನಿಸಿಕೊಂಡು ಆರುಸ್ಥಲವಿಡಿದು ಆಚರಿಸಿ ಮೂರುಸ್ಥಲದಲ್ಲಿ ಅವಧಾನಿಯಾಗಿ ಎರಡೊಂದು ಸ್ಥಲ ಒಂದಾದ ಸ್ಥಲದಲ್ಲಿ ಶರಣಲಿಂಗವೆಂಬುಭಯವಳಿದು ನೂರೊಂದುಸ್ಥಲದೊಳಗೆ ಪ್ರಭಾವಿಸಿ ಪರಿಪೂರ್ಣವಾಗಿ ಸಿದ್ಧಪ್ರಸಾದವೆಂಬ ನಿಷ್ಕಲಬ್ರಹ್ಮದಲ್ಲಿ ಉರಿ ಕರ್ಪೂರದಂತೆ ಬೆಳಗುದೋರಿ ಶುದ್ಧಪ್ರಸಾದವನಂಗಂಗೊಂಡು ನಿರಂಜನ ಪ್ರಸಾದವನೊಡಗೂಡಿದ ಬಸವರಾಜದೇವರು ಉತ್ತುಂಗಲಿಂಗದಲ್ಲಿ ಐಕ್ಯವಾಗುವನ್ನಬರ ಶಿವಲಿಂಗಪೂಜೆಯಂ ಬಿಟ್ಟ[ರೆ]? ಜಪ ತಪ ನಿತ್ಯ ನೇಮಂಗಳ ಬಿಟ್ಟ[ರೆ]? ಲಿಂಗಕ್ಕೆ ಕೊಟ್ಟು ಕೊಂಬ ಅರ್ಪಿತವಧಾನಂಗಳಂ ಬಿಟ್ಟ[ರೆ]? ತೀರ್ಥಪ್ರಸಾದದಲ್ಲಿ ಒಯ್ಯಾರಮಂ ಬಿಟ್ಟ[ರೆ]? ಮಾಡಿ ನೀಡುವ ದಾಸೋಹಮಂ ಬಿಟ್ಟ[ರೆ]? ಗುರುಲಿಂಗ ಜಂಗಮವ ಕಂಡು ಪೊಡಮಡುವುದಂ ಬಿಟ್ಟ[ರೆ]? ಬಿಜ್ಜಳನ ಓಲಗದ ಸಭಾಮಧ್ಯಕ್ಕೆ ಹೋಗಿ ತನ್ನ ದಿವ್ಯ ಶ್ರೀ ಪಾದಪದ್ಮಂಗಳಂ ಬಿಜ್ಜಳಂಗೆ ತೋರಿ ಅವನ ಕರ್ಮಾದಿಕರ್ಮಂಗಳಂ ಸುಟ್ಟು ಅವನ ರಕ್ಷಿಪುದಂ ಬಿಟ್ಟ[ರೆ]? ಇಂತಿವೆಲ್ಲವು ಕ್ರೀಯೋಗಗಳು. `ಕ್ರಿಯಾದ್ವೆ ೈತಂ ನ ಕರ್ತವ್ಯಂ ಜ್ಞಾನಾದ್ವೆ ೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವ ಶುದ್ಧಾಂತು ಶಾಂಕರಿ||' ಇಂತೆಂದುದಾಗಿ ಇದುಕಾರಣ ಐಕ್ಯವಾಗುವನ್ನಬರ ಕ್ರೀಯೊಳಗೊಂಡ ಶರಣಂಗೆ ನಿಜಮುಕ್ತಿಯಲ್ಲದೆ ಐಕ್ಯವಾಗುವುದಕ್ಕೆ ಮುನ್ನವೇ ಕ್ರೀಯಳಿದ ಶರಣನು ಸಾಯುಜ್ಯಪದಸ್ಥಲನಪ್ಪನಲ್ಲದೆ ಹರನಲ್ಲಿ ಸಮರಸವಿಲ್ಲವೆಂದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಶಿವಪ್ರಸಾದವ ಬೀಸರವೋಗಬಾರದೆಂದು ಎಚ್ಚರಿಕೆ ಅವಧಾನದಿಂದರ್ಪಿಸಿ ಪ್ರಕ್ಷಾಳನ ಲೇಹ್ಯ ಅಂಗಲೇಪನದಿಂದ ಅವಧಾನವ ಮಾಡುತಿಪ್ಪ ಪರಮ ವಿರಕ್ತರೇ ಪದಾರ್ಥವಂ ತಂದು ಕರದಲ್ಲಿ ಕೊಟ್ಟರೇನ ಮಾಡುವಿರಯ್ಯ? ಭಕ್ತರು ಕ್ರೀವಿಡಿದು ಪದಾರ್ಥವ ಪರಿಯಾಣದಲ್ಲಿ ತಂದರೆ ಭಕ್ತಿ ಭಕ್ತಿಯಿಂದ ವೈಯಾರದಲ್ಲಿ ಪ್ರಸಾದವ ಸಲಿಸುವುದೇ ಎನ್ನ ಕ್ರೀಗೆ ಸಂದಿತು. ಅದಲ್ಲದೆ ಎನ್ನ ಕರಪಾತ್ರೆಗೆ ತಂದು ಭಿಕ್ಷವ ನೀಡಿದರೆ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ. ಅದು ಎನ್ನ ಜ್ಞಾನಕ್ಕೆ ಸಂದಿತು. ಅದು ಹೇಗೆಂದೊಡೆ ಹರಿಶಬ್ದವ ಕೇಳೆನೆಂದು ಭಾಷೆಯಂ ಮಾಡಿದ ಶಿವಭಕ್ತೆ ಸತ್ಯಕ್ಕನ ಮನೆಗೆ ಶಿವನು ಜಂಗಮವಾಗಿ ಭಿಕ್ಷಕ್ಕೆ ಬಂದು `ಹರಿ' ಎನ್ನಲೊಡನೆ ಹರನ ಬಾಯ ಹುಟ್ಟಿನಲ್ಲಿ ತಿವಿದಳು. ಅದು ಅವಳ ಭಾಷೆಗೆ ಸಂದಿತು. ಅವಳು ಶಿವದ್ರೋಹಿಯೇ? ಅಲ್ಲ. ನಾನು ಸಂಸಾರ ಸಾಗರದಲ್ಲಿ ಬಿದ್ದು ಏಳುತ್ತ ಮುಳುಗುತ್ತ ಕುಟುಕುನೀರ ಕುಡಿಯುವ ಸಮಯದಲ್ಲಿ ಶಿವನ ಕೃಪೆಯಿಂದ ನನ್ನಿಂದ ನಾನೇ ತಿಳಿದು ನೋಡಿ ಎಚ್ಚತ್ತು ಮೂರು ಪಾಶಂಗಳ ಕುಣಿಕೆಯ ಕಳೆದು ಭೋಗ ಭುಕ್ತ್ಯಾದಿಗಳನತಿಗಳೆದು ಅಹಂಕಾರ ಮಮಕಾರಗಳನಳಿದು ಉಪಾಧಿಕೆ ಒಡಲಾಶೆಯಂ ಕೆಡೆಮೆಟ್ಟಿ ಪೊಡವಿಯ ಸ್ನೇಹಮಂ ಹುಡಿಗುಟ್ಟಿ ಉಟ್ಟುದ ತೊರೆದು ಊರ ಹಂಗಿಲ್ಲದೆ ನಿರ್ವಾಣಿಯಾಗಿ ನಿಜಮುಕ್ತಿ ಸೋಪಾನವಾಗಿಪ್ಪ ಕರಪಾತ್ರೆ ಎಂಬ ಬಿರಿದು ಬಸವಾದಿಪ್ರಮಥರರಿಕೆಯಾಗಿ ಶಿವನ ಮುಂದೆ ಕಡುಗಲಿಯಾಗಿ ನಾನು ಕಟ್ಟದೆ ಆ ಬಿರುದಿಂಗೆ ಹಿಂದು ಮುಂದಾದರೆ ಶಿವನು ಮೂಗುಕೊಯ್ದು ಕನ್ನಡಿಯ ತೋರಿ ಅಣಕವಾಡಿ ನಗುತಿಪ್ಪನೆಂದು ನಾನು ಕರಪಾತ್ರೆಯಲ್ಲಿ ಸಂದೇಹವಿಲ್ಲದೆ ಸಲಿಸುತ್ತಿಪ್ಪೆನು. ಆ ಸಮಯದಲ್ಲಿ ಕೊಂಡುದೇ ಪ್ರಸಾದ ಒಕ್ಕುದೇ ಪದಾರ್ಥ ಇದು ಎನ್ನ ಸಮ್ಯಜ್ಞಾನದ ಬಿರುದಿಗೆ ಸಂದಿತು. ನಾನು ಪ್ರಸಾದದ್ರೋಹಿಯೆ? ಅಲ್ಲ. ಇಂತಲ್ಲದೆ. ನಾನು ಮನಸ್ಸಿಗೆ ಬಂದಂತೆ ಉಂಡುಟ್ಟಾಡಿ ರೂಪ ರಸ ಗಂಧವೆಂಬ ತ್ರಿವಿಧಪ್ರಸಾದದಲ್ಲಿ ಉದಾಸೀನವ ಮಾಡಲಮ್ಮೆನು. ಮಾಡಿದೆನಾದಡೆ ವರಾಹ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು. ಇದ ಕಡೆಮುಟ್ಟಿ ನಡೆಸು ನಡೆಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಶರಣಸತಿ ಲಿಂಗಪತಿಯೆಂದು ಬಣ್ಣಿಸಿ ಒಪ್ಪವಿಟ್ಟು ನುಡಿದುಕೊಂಬ ಕುಟಿಲವೆಣ್ಣಲ್ಲವಯ್ಯ ನಾನು. ನಿನಗೆ ಮೆಚ್ಚಿ ಮರುಳಾದ ಪತಿವ್ರತೆಯೆಂಬುದಕ್ಕೆ ದೃಷ್ಟವ ಕೊಟ್ಟು ನುಡಿವುತಿಪ್ಪೆ ಕೇಳಯ್ಯ ಗಂಡನೇ. ಮಾನವರ ಸಂಚವಿಲ್ಲದ ಮಹಾ ಘೋರಾಟವಿಯಲ್ಲಿ ನಾನು ಹೋಗುತಿಪ್ಪ ಆ ಸಮಯದಲ್ಲಿ ಸೋರ್ಮುಡಿಯ ಸೊಬಗಿನ ನಿಡುಹುಬ್ಬಿನ ಕಡುಜಾಣೆ ಅಲರ್ಗಣ್ಣ ಅಂಬುಜಮುಖಿ ಮುಗುಳ್ನಗೆಯ ಸೊಬಗುವೆಣ್ಣು ಬಂದುಗೆಯ ಬಾಯ ಅಂದವುಳ್ಳವಳು ನಳಿತೋಳ ನಾಯಕಿ ಕಕ್ಕಸ ಕುಚದ ಸೊಕ್ಕುಜವ್ವನೆ ಸೆಳೆನಡುವಿನ ಸಿರಿವಂತೆ ಕುಂಭಸ್ಥಳದ ನಿತಂಬಿನಿ ಪೊಂಬಾಳೆದೊಡೆಯ ಕಂಬುಕಂಧರೆ ಕೆಂದಳಿರಚರಣದ ಮಂದಗಮನೆ ಇಂತಪ್ಪ ಚಲುವಿನ ಕೋಮಲಾಂಗಿ ಸರ್ವಾಭರಣಂಗಳ ತೊಟ್ಟು ನವ್ಯ ದುಕೂಲವನುಟ್ಟು ಅನುಲೇಪನಗಳ ಅನುಗೈದು ನಡೆತಂದು ಎನ್ನ ಅಮರ್ದಪ್ಪಿ ಅಲಂಗಿಸಿ ಮೋಹಿಸಿ ಮುದ್ದುಮಾಡಿ ಕಾಮಾತುರದ ಭಕ್ತಿಯಿಂದ ಎನ್ನ ಕರಮಂ ಪಿಡಿದು ತನ್ನ ಕೂಟಕ್ಕೆ ಒಡಂಬಡಿಸುವ ಕಾಲದಲ್ಲಿ ನಾನು ಹುಲಿಹಿಡಿದ ಕಪಿಲೆಯಂತೆ ನಡುಗುತಿರ್ದೆನೆ ನಿನ್ನ ಸತಿಯೆಂದು ಕೈವಿಡಿದು ಎನ್ನ ರಕ್ಷಣೆಯಂ ಮಾಡು ನಿನಗಲ್ಲದೆ ಅನ್ಯರಿಗೆ ಕಿಂಚಿತ್ತು ಮನಸೋತೆನಾದೊಡೆ ನೀಂ ನೂಂಕೆನ್ನ ಜನ್ಮಜನ್ಮಾಂತರ ಎಕ್ಕಲನರಕದಲ್ಲಿ ಎನ್ನ ನೀಂ ನೂಂಕದಿರ್ದೆಯಾದಡೆ ನಿಮಗೆ ನಿಮ್ಮಾಣೆ ನಿಮ್ಮ ಅರ್ಧಾಂಗಿಯಾಣೆ ನಿಮ್ಮ ಬಸವಾದಿ ಪ್ರಥಮರಾಣೆ ಎನ್ನೀ ಅತಿಬಿರುದಿನ ಭಾಷೆಯೆಂಬುದು ನಿನ್ನ ಕರುಣವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಶಿವನ ಕೃಪೆಯಿಂದ ಎನ್ನ ಪುಣ್ಯ ಹಣ್ಣಾದಂತೆ ಸರ್ವಾಂಗದಲ್ಲಿ ಪ್ರಸಾದಂಗಳ ನಾನು ಎಡೆಬಿಡುವಿಲ್ಲದೆ ಧರಿಸಿದ್ದ ಸಂಭ್ರಮವ ನೋಡಾ ಎಲೆ ಅಮ್ಮ. ಮುಕ್ತಿಪುರವ ತೋರುವ ಪ್ರಸಾದವ ಪಂಚಸ್ಥಾನದಲ್ಲಿ ಧರಿಸಿದೆ. ಪ್ರಸಿದ್ಧಪ್ರಸಾದ ಸಿದ್ಧಪ್ರಸಾದ ಶುದ್ಧಪ್ರಸಾದ ಆದಿಪ್ರಸಾದ ಮಹಾಪ್ರಸಾದ ಎಂಬ ಪಂಚಪ್ರಸಾದಂಗಳಂ ಪಂಚಸ್ಥಾನದಲ್ಲಿ ಧರಿಸಿದೆ. ಪ್ರಸಿದ್ಧಪ್ರಸಾದವ ಆಕಾಶದಲ್ಲಿ ಧರಿಸಿದೆ. ಸಿದ್ದಪ್ರಸಾದವ ಬ್ರಹ್ಮರಂಧ್ರದಲ್ಲಿ ಧರಿಸಿದೆ. ಆಚಾರಾದಿ ಪ್ರಸಾದಮಂ ತತ್ವ ಎರಡರ ಮೇಲೆ ಧರಿಸಿದೆ. ಮಹಾಪ್ರಸಾದಮಂ ಪಶ್ಚಿಮದಲ್ಲಿ ಧರಿಸಿದೆ. ಇಂತಪ್ಪ ಪರಬ್ರಹ್ಮವೆನಿಸುವ ಪ್ರಸಾದಂಗಳ ನಾನು ದಿನಾರಾತ್ರಿಯೆನ್ನದೆ ಪೂಜೆಯ ಮಾಡಿದಲ್ಲಿ ಎನಗೆ ಪರಮಾರ್ಥದರಿವು ಕೈಸಾರಿತು. ಆ ಪರಮಾರ್ಥದರಿವು ಕೈಸಾರಿದಲ್ಲಿಯೇ ಎನ್ನ ತನು ಮನ ಧನಂಗಳು ಪದಾರ್ಥಗಳಾದವು. ಆ ಪದಾರ್ಥಂಗಳ ಏಕಚಿತ್ತ ಮನೋಭಾವದಲ್ಲಿ ತೋಂಟದ ಸಿದ್ಧಲಿಂಗನೆಂಬ ನಿಷ್ಕಲಬ್ರಹ್ಮಕ್ಕೆ ಸಮರ್ಪಿಸಿದಲ್ಲಿಯೇ ಎನಗೆ ಅನಿತ್ಯತೆ ಕೆಟ್ಟು ನಿತ್ಯವೆಂಬುದು ನಿಜವಾಯಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಶರಣು ಶರಣಾರ್ಥಿ ಲಿಂಗವೇ ಹೊನ್ನು ಹೆಣ್ಣು ಮಣ್ಣು ಬಿಟ್ಟಾತನೇ ವಿರಕ್ತನೆಂದು ವಿರಕ್ತದೇವರೆಂದು ಬಣ್ಣವಿಟ್ಟು ಬಣ್ಣಿಸಿ ಕರೆವರಯ್ಯ. ಆವ ಪರಿ ವಿರಕ್ತನಾದನಯ್ಯ ಗುರುವೇ? ಹೊನ್ನೆಂಬ ರಿಪುವು ಚೋರರ ದೆಸೆಯಿಂದ ಶಿರಚ್ಛೇದನವ ಮಾಡಿಸಿ ನೃಪರಿಂ ಕೊಲಿಸುತಿಪ್ಪುದು. ಹೆಣ್ಣೆಂಬ ರಕ್ಕಸಿ ಲಲ್ಲೆವಾತಿಂದ ಗಂಡನ ಮನವನೊಳಗುಮಾಡಿಕೊಂಡು ಸಂಸಾರಸುಖಕ್ಕೆ ಸರಿಯಿಲ್ಲವೆನಿಸಿ ಸಿರಿವಂತರಿಗಾಳುಮಾಡಿ ಇರುಳು ಹಗಲೆನ್ನದೆ ತಿರುಗಿಸುತಿಪ್ಪಳು. ಮಣ್ಣೆಂಬ ಮಾಯೆ ತನ್ನಸುವ ಹೀರಿ ಹಿಪ್ಪೆಯ ಮಾಡಿದಲ್ಲದೆ ಮುಂದಣಗುಣವ ಕೊಡದು. ಇವ ಬಿಟ್ಟಾತ ವಿರಕ್ತನೆ? ಅಲ್ಲ. ಕಾಯಕಕ್ಕಾರದೆ ಜೀವಗಳ್ಳನಾಗಿ ಮಂಡೆಯ ಬೋಳಿಸಿಕೊಂಡು ಕಂಡ ಕಂಡವರ ಮನೆಯಲ್ಲಿ ಉಂಡು ಕುಂಡೆಯ ಬೆಳೆಸಿಕೊಂಡಿಪ್ಪಾತ ಆತುಮಸುಖಿಯಯ್ಯ. ಮಾತಿನಮಾಲೆಯನಳಿದು ಕಾಯದ ಕಳವಳವನಳಿದು ಲೋಕದ ವ್ಯವಹಾರವ ನೂಂಕಿ ಅಂಬಿಲವ ಅಮೃತಕ್ಕೆ ಸರಿಯೆಂದು ಕಂಡು ಏಕಾಂಗಿಯಾಗಿ ತನುವ ದಂಡಿಸಿ ಗಿರಿಗಹ್ವದಲ್ಲಿದ್ದರೆ ವಿರಕ್ತನೆ? ಅಲ್ಲ. ಅದೇನು ಕಾರಣವೆಂದೊಡೆ ತಾಯಿಯ ಗರ್ಭದಲ್ಲಿ ಶಿಶುವು ಇಕ್ಕಿದ ಕುಕ್ಕುಟಾಸನವ ತೆಗೆಯದು. ಶೀತ ಉಷ್ಣವೆನ್ನದು. ಉಪಾಧಿಕೆಯನರಿಯದು. ಮುಚ್ಚಿದ ಕಣ್ಣು ಮುಗಿದ ಕೈಯಾಗಿ ಉಗ್ರತಪಸ್ಸಿನಲ್ಲಿಪ್ಪುದು. ಅದಕ್ಕೆ ಮುಕ್ತಿಯಾದರೆ ಇವನಿಗೆ ಮುಕ್ತಿಯುಂಟು. ಬರಿಯ ವೈರಾಗ್ಯ ಭವಕ್ಕೆ ಬೀಜವಾಯಿತ್ತು. ಇನ್ನು ನಿಜವಿರಕ್ತಿಯ ಪರಿಯಾವುದೆಂದೊಡೆ- ತ್ರಿವಿಧಪದಾರ್ಥದಲ್ಲಿ ಮನವಿಲ್ಲದೆ [ಭಕ್ತರ] ಬಣ್ಣದ ನುಡಿಗೆ ಹಣ್ಣಾಗದೆ ಅಂಗಭೋಗವ ನೂಂಕಿ ಲಿಂಗಭೋಗವ ಕೈಕೊಂಡು ಆತ್ಮತೇಜವನಲಂಕರಿಸದೆ ಅಸುವಿಗೆ ಭಿಕ್ಷವ ನೆಲೆಮಾಡಿ ಸದಾಕಾಲದಲ್ಲಿ ಮಂತ್ರಮಾಲೆಯಂ ಮನದಲ್ಲಿ ಕೂಡಿ ಆದಿ ಮಧ್ಯಾವಸಾನಮಂ ತಿಳಿದು ನಿರ್ಮಲಚಿತ್ತನಾಗಿ ಏಕಾಂತವಾಸಿಯಾಗಿ ನವಚಕ್ರಂಗಳಲ್ಲಿ ನವಬ್ರಹ್ಮಗಳ ಮೂರ್ತಿಗೊಳಿಸಿ ಕಾಯದ ಕಣ್ಣಿಂದ ಕರತಲಾಮಲಕವ ನೋಡುವಂತೆ ಮನದ ಕಣ್ಣಿಂದ ನವಬ್ರಹ್ಮಸ್ವರೂಪವ ಮನದಣಿವಂತೆ ನೋಡಿ ಸುಚಿತ್ತವೇ ಮೊದಲು ನಿರವಯವೆ ಕಡೆಯಾದ ನವಹಸ್ತಂಗಳಿಂದ ಭಾವಪುಷ್ಪಂಗಳಲ್ಲಿ ಪೂಜೆಯಂ ಮಾಡಿ ಮನದಣಿವಂತೆ ಸುಚಿತ್ತ ಗುರುವನಪ್ಪಿ ಸುಬುದ್ಧಿ ಲಿಂಗವನಪ್ಪಿ ನಿರಹಂಕಾರ ಜಂಗಮವನಪ್ಪಿ ಸುಮನ ಪ್ರಸಾದವನಪ್ಪಿ ಸುಜ್ಞಾನ ಪಾದೋದಕವನಪ್ಪಿದ ಲಿಂಗಾಂಗೀಯೀಗ ವಿರಕ್ತನು. ಇಂತಪ್ಪ ವಿರಕ್ತಿಯೆಂಬ ಪ್ರಸನ್ನತ್ವ ಪ್ರಸಾದಮಂ ಎನಗೆ ಕರುಣಿಪುದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ