ಅಥವಾ
(6) (4) (1) (0) (1) (0) (0) (0) (8) (1) (0) (0) (1) (0) ಅಂ (1) ಅಃ (1) (10) (0) (0) (0) (0) (0) (0) (0) (0) (0) (0) (0) (0) (0) (0) (2) (0) (1) (0) (6) (2) (0) (2) (3) (7) (0) (0) (0) (2) (1) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಿ ಜ್ಞಾನವೈರಾಗ್ಯವು ಅಲ್ಲಮಪ್ರಭುವಿನ ವರ್ಗಕ್ಕಲ್ಲದೆ ಅಳವಡದೆಂದು ಉತ್ತರಜ್ಞಾನಿಗಳು ನುಡಿವುತ್ತಿಪ್ಪರು. ಪಂಚೇಂದ್ರಿಯಂಗಳ ರತಿವಿರತಿಯಾದ ಪರಮವಿರಕ್ತರೇ ನೀವಾಚರಿಸುವ ಭಕ್ತಿ ಜ್ಞಾನ ವೈರಾಗ್ಯದ ಬಗೆಯ ಬಣ್ಣಿಸಿರಯ್ಯ. ಗುರು ಲಿಂಗ ಜಂಗಮ ತೀರ್ಥ ಪ್ರಸಾದ ಇಂತಿಪ್ಪ ಪಂಚಾಚಾರವೇ ಪಂಚಬ್ರಹ್ಮವೆಂದು ಭಯ ಭಕ್ತಿಯಿಂದ ನಮಿಸಿ ಅಂಗೀಕರಿಸುವುದೇ ಎನ್ನ ಭಕ್ತಿ. ಪೂರ್ವಾಶ್ರಯ ಬಂಧುಭ್ರಮೆ ಆತ್ಮತೇಜ ಲೋಕದ ನಚ್ಚು ಮಚ್ಚು ಇಂತಿವ ಸುಟ್ಟು ಮಲತ್ರಯಂಗಳ ಹಿಟ್ಟುಗುಟ್ಟಿ ತೂರಿ ಬಿಡುವುದೇ ಎನ್ನ ಜ್ಞಾನ. ಕ್ಷತ್ತು ಮೈದೋರಿ ಭಿಕ್ಷಕ್ಕೆ ಹೋದಲ್ಲಿ ಭಾಂಡವ ತೊಳೆದ ದ್ರವ್ಯಪದಾರ್ಥಮಂ ತರಲೊಡನೆ ಹರುಷದಿಂದ ಲಿಂಗಾರ್ಪಿತವ ಮಾಡಿ ಸಾಕೆಂದ ಬಳಿಕ ಮತ್ತೊಂದು ಗೃಹವನಾಶೆಮಾಡಿ ಹೋದೆನಾದರೆ ಎನ್ನ ವೈರಾಗ್ಯಕ್ಕೆ ಕುಂದು ನೋಡಾ. ಅದೇನು ಕಾರಣವೆಂದೊಡೆ ಗಂಡನಿಕ್ಕಿದ ಪಡಿಯನುಂಡು ಮನೆಗಡೆಯದಿಪ್ಪವಳು ಪತಿವ್ರತೆಯಲ್ಲದೆ ಗಂಡನಿಕ್ಕಿದ ಪಡಿಯನೊಲ್ಲದೆ ನೆಲ್ಲಗೂಳಿಗಾಸೆಮಾಡಿ ನೆರಮನೆಗೆ ಹೋಗುವ ಬಲ್ಲಾಳಗಿತ್ತಿಗೆ ಪತಿಭಕ್ತಿ ಅಳವಡುವುದೇ ಅಯ್ಯ? ಲಿಂಗಾಣತಿಯಿಂದ ಬಂದ ಪದಾರ್ಥವ ಕೈಕೊಂಡಾತ ಶರಣಸತಿ ಲಿಂಗಪತಿಯಲ್ಲದೆ ಲಿಂಗಾಣತಿಯಿಂದ ಬಂದ ಪದಾರ್ಥವ ಸಟೆಗೆ ಉಂಡು ಕೊಂಡಂತೆ ಮಾಡಿ ಸಾಕೆಂದು ನೂಕಿ ಅಂಗದಿಚ್ಚೆಗೆ ಹರಿದು ಮತ್ತೊಂದು ಮನೆಗೆ ಆಶೆಮಾಡಿ ಹೋಗುವ ಜೀವಗಳ್ಳರಿಗೆ `ಶರಣಸತಿ ಲಿಂಗಪತಿ' ಭಾವ ಅಳವಡುವುದೇ ಅಯ್ಯ. ಭಕ್ತಿ ಜ್ಞಾನ ವೈರಾಗ್ಯ ರಹಿತರಾಗಿ ನಿಜಮುಕ್ತಿಯನರಸುವ ಅಣ್ಣಗಳಿರವು ಬಂಜೆ ಮಕ್ಕಳ ಬಯಸಿ ಬಟ್ಟೆಯ ಬೊಮ್ಮಂಗೆ ಹರಸಿಕೊಂಡಂತಾಯಿತ್ತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಭಕ್ತಿಯಿಂದ ವಿರಕ್ತರೆಂದು ಬಾಯತುಂಬ ಕರೆಯಿಕೊಂಬ ವಿರಕ್ತರೆಲ್ಲ ವಿರಕ್ತರೇ ಅಯ್ಯ? ವಿರಕ್ತರದೊಂದು ಸಾಮಥ್ರ್ಯ ಸುಗುಣ ಸಮುದ್ರೆಯನೊರೆವುತಿಪ್ಪೆ ಕೇಳಿರಣ್ಣ. ಕಾಯದ ಕಣ್ಣ ಜಾಗ್ರದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸಿ ಕಾಯಗುಣಂಗಳ ಕೆಲಕ್ಕೆ ತೊಲಗಿಸಿ ತತ್‍ಪದನಾಗಿ ಮನದಕಣ್ಣ ಸ್ವಪ್ನದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸಿ ಮನೋವಿಕಾರಮಂ ಹಸಗೆಡಿಸಿ ತ್ವಂಪದನಾಗಿ ಭಾವದಕಣ್ಣ ಸುಷುಪ್ತಿಯಲ್ಲಿ ಭಾವಲಿಂಗಕ್ಕೆ ಸಮರ್ಪಿಸಿ ಭಾವದಿಚ್ಛೆಯ ತಪ್ಪಿಸಿ ಅಸಿಪದವಾಗಿ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯನೊಂದುಮಾಡಿ ಪರಬ್ರಹ್ಮ ಸ್ವರೂಪವಾಗಿ ಜಾಗ್ರತ್ ಸ್ವಪ್ನ ಸುಷುಪ್ತಿಯೆಂಬರಿವರಿತು ಹಸಿವು ತೃಷೆ ವಿಷಯ ವ್ಯಾಪಾರಂಗಳಂ ಸುಟ್ಟುರುಹಿದ ತೋಂಟದ ಸಿದ್ಧಲಿಂಗ, ಅಲ್ಲಮಪ್ರಭು, ಅನಿಮಿಷದೇವರು, ಇಂತಿವರು ವಿರಕ್ತರಲ್ಲದೆ ಮತ್ತೆ ವಿರಕ್ತರೆಂಬ ನುಡಿ ನಿಮ್ಮ ಹಡಪದಲ್ಲಿರಲಿ. ಅದೇನು ಕಾರಣವೆಂದೊಡೆ || ಗ್ರಂಥ || `ವಿಕಾರಂ ವಿಷಯಾದ್ದೂರಂ ರಕಾರಂ ರಾಗವರ್ಜಿತಂ| ಕ್ತಕಾರಂ ತ್ರಿಗುಣಂ ನಾಸ್ತಿ ವಿರಕ್ತಸ್ಯಾರ್ಥಮುಚ್ಯತೇ'|| ಇಂತೆಂದುದಾಗಿ ಹಗಲಾದರೆ ಹಸಿವು ತೃಷೆಗೆ ಬಾಯಿಬಿಟ್ಟು ಇರುಳಾದರೆ ವಿಷಯಾತುರನಾಗಿ ಕಳವಳಿಸಿ ಕನಸ ಕಂಡು ಬೆದರಿ ಶಿವಶಿವ ಎಂದು ಕುಳಿತು ಸುಷುಪ್ತಿಯಲ್ಲಿ ಮೈಮರೆದು ಮುಟ್ಟಿ ತಟ್ಟಿದ ಸವುಜ್ಞೆಯನರಿಯದಿಪ್ಪವರೆಲ್ಲ ವಿರಕ್ತರೆ? ಅಲ್ಲಲ್ಲ. ಅವರು ತ್ರಿವಿಧ ಪದಾರ್ಥವನತಿಗಳೆದು ಗುರು ಲಿಂಗ ಜಂಗಮವನಂತರಂಗದಲ್ಲಿ ಪೂಜೆಯ ಮಾಡುವ ದಾಸೋಹಿಗಳಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಭಕ್ತಿ ಜ್ಞಾನ ವೈರಾಗ್ಯ ತಪ್ಪದೆ ಷಟ್‍ಸ್ಥಲಮಾರ್ಗದಿರವು ತಪ್ಪದೆ ಜ್ಞಾನ ಕ್ರೀಗಳಲ್ಲಿ ಪ್ರೇಮ ತಪ್ಪದೆ ಶರಣಸತಿ ಲಿಂಗಪತಿಯಾದ ಭಾವ ತಪ್ಪದೆ ಇಷ್ಟ ಪ್ರಾಣ ಭಾವಲಿಂಗಗದ ಪೂಜೆ ತಪ್ಪದೆ ಷಡ್ವಿಧಲಿಂಗದಲ್ಲಿ ಅರ್ಪಿತಾವಧಾನ ತಪ್ಪದೆ ತೀರ್ಥಪ್ರಸಾದದಲ್ಲಿ ಒಯ್ಯಾರ ತಪ್ಪದೆ ಮಂತ್ರಗಳಂ ಒಡವರೆದು ಲಿಂಗಸಂಧಾನ ತಪ್ಪದೆ ಹಿಡಿದ ವ್ರತಂಗಳಲ್ಲಿ ನಿಷೆ* ತಪ್ಪದೆ ನಡೆದಂತೆ ನುಡಿದು ನುಡಿದಂತೆ ನಡೆವ ಭಾವ ತಪ್ಪದೆ ದ್ವೆ ೈತಾದ್ವೆ ೈತವ ನೂಂಕಿ ಬರಿಯ ವೈರಾಗ್ಯವನೊಪ್ಪುಗೊಳ್ಳದೆ ನಿಜವಿರಕ್ತಿಯ ಹೊಲಬುದಪ್ಪದೆ ಪಂಚೈವರೊಂದಾಗಿ ಸದ್ಯೋನ್ಮುಕ್ತಿಗೆ ಮನವನಿಟ್ಟು ಅರ್ತಿಯಿಂದಾಚರಿಸುವರಯ್ಯ ನಿಮ್ಮ ಶರಣರು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ