ಅಥವಾ
(6) (4) (1) (0) (1) (0) (0) (0) (8) (1) (0) (0) (1) (0) ಅಂ (1) ಅಃ (1) (10) (0) (0) (0) (0) (0) (0) (0) (0) (0) (0) (0) (0) (0) (0) (2) (0) (1) (0) (6) (2) (0) (2) (3) (7) (0) (0) (0) (2) (1) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು. ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು. ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು. [ಮ]ಣ್ಣು ಹೊನ್ನು[ಹೆ]ಣ್ಣ ಬಿಟ್ಟು ಲಿಂಗಾಂಗ ಸಂಯೋಗವರಿಯದೆ ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ ಫಲಭೋಗಕ್ಕೊಳಗಾದರು. ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ. ಆರ ಬಿಟ್ಟು ಮೂರ ಕಂಡು ಮನ ಮುಳುಗಿ ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮುಚ್ಚಿ ಮೂದಲಿಸಿ ಮೊನೆಗೆಡಿಸುವ ಮಾಯಾಪ್ರಪಂಚಿನ ಬಲೆಗೆ ಸಿಲುಕದೆ ನಾನು ಧ್ಯಾನ ಮೌನ ಉಪಾವಸ್ಥೆಯಿಂದ ಷಟ್‍ಕೋಣೆಯ ಸುವರ್ಣದ್ವೀಪದ ಅರಸಿನ ಬಲವಿಡಿದು ಪಂಚವಿಂಶತಿತತ್ವಂಗಳೆಂಬ ಮಾಯಾಸುಭಟರ ಸ[ೂ]ಡಕೊಂದು ಪಂಚಬ್ರಹ್ಮವೇ ಪಂಚಭೂತಂಗಳಾಗಿ ತನುವಿಡಿದು ಲಿಂಗನಿಷೆ*ಯಿಂದ ಓಂಕಾರಸ್ವರೂಪವಾಗಿ ಅಹಂಕರಿಸದೆ ದಾಸೋಹಂಭಾವದಿಂದ ತ್ರಿಕೂಟಪರ್ವತಕ್ಕೆ ಪಶ್ಚಿಮದಿಕ್ಕಿನಲ್ಲಿ ಅನಂತ ಕಾರ್ಮುಗಿಲ ಮಿಂಚಿನಂತೆ [ತೋರುತ್ತಿಪ್ಪು]ದೀಗ ಶಾಂಭವದ್ವೀಪ. ಆ ಶಾಂಭವದ್ವೀಪದಲ್ಲಿ ನೆಲಸಿರ್ಪ ನಿರವಯಲ ಬೆಳ್ದಿಂಗಲ ಬೀಜಮಂ ನಾನು ಕಂಡು ಕಂಬನಿದುಂಬಿ ನಮಸ್ಕಾರಮಂ ಮಾಡಿದ ಘನದಿಂದ ಬ್ರಹ್ಮ ವಿಷ್ಣು ರುದ್ರ ಇಂತೀ ಮೂವರಂ ಕೆಡೆಮೆಟ್ಟಿ ಜನನ ಮರಣಂಗಳಂ ಗೆಲಿದು ನಾನು ಹುಟ್ಟುಗೆಟ್ಟೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮತ್ರ್ಯದ ಬೀಜವ ಬಿತ್ತಿ ಕುಡಿಯೊಡೆಯದ ಮುನ್ನ ಕತ್ತಲೆ ಬೆಳಗು ವಿಸ್ತರಿಸಿ ತೋರ್ಪುದರತ್ತಲೆ ನಿನ್ನ ಚಿದಂಶಿಕನಪ್ಪ ಶರಣಂಗೆ ಭೂತಳದ ಭೋಗವನೋತು ಬಳಸೆಂದು ಪ್ರೀತಿಯಿಂದ ಕಲ್ಪಿಸಿಕೊಡುವರೆ ಅಯ್ಯ? ರಾಜಹಂಸನಿಗೆ ಅಮೃತಾಹಾರವನಿಕ್ಕಬೇಕಲ್ಲದೆ ಗರುತ್ಮನ ಆಹಾರವನಿಕ್ಕುವರೆ ಅಯ್ಯ? ಅದೆಂತೆನಲು ಅವನಿಯ ಭೋಗಕ್ಕೆ ಅತಿಮಿಗಿಲೆನಿಸಿಕೊಂಬುದು ಮಜ್ಜನ ಭೋಜನ ಅನುಲೇಪನ ಆಭರಣ ವಸ್ತ್ರ ತಾಂಬೂಲವಯ್ಯ. ಇದಕ್ಕೆ ನೂರ್ಮಡಿ ಮಿಗಿಲೆನಿಸಿಕೊಂಬುದು ಸುದತಿಯರ ಮೃದುನುಡಿ ತೆಕ್ಕೆ ಚುಂಬನ ಸುರತಸಂಭ್ರಮದ ಲೀಲಾವಿನೋದವಯ್ಯ. ಆ ಸರಸ ಲೀಲಾವಿನೋದದ ಬಗೆಯ ಹೇಳಲಂಜುವೆನಯ್ಯ. ಹೇಳುವೆ- ನೀನು ಮಾಂಕೊಳದಿರಯ್ಯ. ಹೇಲಕುಳಿಯೊತ್ತಿನ ಉಚ್ಚೆಯ ಬಚ್ಚಲು. ಹಡುಕುನಾರುವ ಕೀವು ತುಂಬಿದ ಹಳೆಯ ಗಾಯ. ಕೋಲುಕುಕ್ಕುವ ತೊಗಲು ಪಡುಗ. ಆ ಪಡುಗದ ಸೊಗಸು ಮಾನವರ ತಲೆಗೇರಿ ಮುಂದಲ ಕಾಲಿನಲಿ ಅಮರ್ದಪ್ಪಿ ಪಿಡಿದು ಹೆಣ್ಣುನಾಯ ಬಾಯಲೋಳೆಯ ಗಂಡುನಾಯಿ ಚಪ್ಪರಿದು ನೆಕ್ಕಿಕೊಳುತ್ತ ಬಾಯೊಳಗೆ ಕಿಸುಕುಳದ ಬಾಯನಿಕ್ಕಿ ಒಡೆಯನೊಂದಾಗಿ ಬಂದ ಹೊಸ ಮನುಷ್ಯರ ಕಂಡ ನಾಯಂತೆ ಕರುಗಳ ಹಾಕುವ ಕಾಮದೈನ್ಯರ ಕರ್ಮಭೋಗಮಂ ಕಂಡು ಹರಣ ಹಾರಿ ಮನ ನಾಚಿ ಹೇಸಿ ಹೇಡಿಗೊಂಡು ಹೊನ್ನು ಹೆಣ್ಣು ಮಣ್ಣೆಂಬ ಮೂರು ಸಂಕಲೆಯ ಕೀಲ ಜ್ಞಾನಚೀರಣದಿಂದ ಕಡಿಗಡಿದು ವಿರಕ್ತನಾಗಿ ನಿರ್ವಾಣ ಪದಕ್ಕೆ ಕಾಮಿತನಾಗಿ ಸ್ವಾನುಭಾವದಲ್ಲಿ ಆಚರಿಸುವ ಆಚರಣೆಯಾವುದೆಂದರೆ- ಅಂಗದ ಮೇಲೆ ಲಿಂಗವುಳ್ಳ ಪಟ್ಟದರಾಣಿ ಅರಸುವೆಣ್ಣು ಅನಾದಿನಾಯಕಿ ಜಾರೆ ಪತಿವ್ರತೆ ಪುಂಡುವೆಣ್ಣು ಕೆಂಪಿ ಕರಿಕಿ ದಾಸಿ ವೇಶಿ ಮೊಂಡಿ ಮೂಕೊರತಿ ಕುಂಟಿ ಕುರುಡಿ ಇವರೆಲ್ಲರ ಭಕ್ತಿಯಿಂ ಸಮಾನಂಗಂಡು ಇವರೆಲ್ಲರಂ ಗುರುವಿನ ರಾಣಿವಾಸಕ್ಕೆ ಸರಿಯೆಂದು ನಿರ್ಧರಿಸಿ ಊರ್ವಶಿ ರಂಭೆ ತಿಲೋತ್ತಮೆಯರಿಗೆ ಸರಿಯಾದ ಶಂಖಿನಿ ಪದ್ಮಿನಿಗೆಣೆಯಾದ ರತಿಯ ಲಾವಣ್ಯಕ್ಕೆ ಸರಿಮಿಗಿಲೆನಿಪ ಚಿಲುವೆಣ್ಣುಗಳ ಗೋಮಾಂಸ ಸುರೆಗೆ ಸರಿಯೆಂದು- ಭಾವಿಸಿದೆನಯ್ಯ ನೀ ಸಾಕ್ಷಿಯಾಗಿ. ಕಬ್ಬುವಿಲ್ಲನಂ ಖಂಡಿಸಿ ಕಾಸೆಯನಳಿದು ಸೀರೆಯನುಟ್ಟು ಗಂಡು ಹೆಣ್ಣಾಗಿ ನಿನಗೆ ವಧುವಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮೂರೈದುತನುವಿಡಿದ ನರಗುರಿಗಳೆಲ್ಲಾ ಭಕ್ತರಪ್ಪರೆ? ಅಲ್ಲಲ್ಲ. ನಮ್ಮ ಶಿವಭಕ್ತರ್ಗೆ ಸದ್ಗೋಷಿ* ಸದಾಚಾರಂಗಳೇ ಪಾದಗಳು. ಗುರುವೇ ಸ್ಥೂಲತನು. ಲಿಂಗವೇ ಸೂಕ್ಷ ್ಮತನು. ಜಂಗಮವೇ ಕಾರಣತನು. ಸಮ್ಯಜ್ಞಾನವೇ ಪ್ರಾಣ. ತೀರ್ಥ ಪ್ರಸಾದವೇ ನೇತ್ರಂಗಳು. ಇಂತಪ್ಪ ತನುವಿಡಿದು ತಾವು ತಮ್ಮ ಊರಿಗೆ ಹೋಗುವಂತೆ ಮುಕ್ತಿಪುರಕ್ಕೆ ಹೋಗಿ ನೊಸಲಕಣ್ಣು ಪಂಚಮುಖ ದಶಭುಜದ ಉಮಾವಲ್ಲಭನಾದ ಪರಶಿವನ ಓಲಗದಲ್ಲಿ ಗಣಂಗಳ ಮಧ್ಯದಲ್ಲಿ ಓಲಾಡುತ್ತಿಪ್ಪರಯ್ಯ ನಮ್ಮವರು. ಇಂತಪ್ಪ ತನುವಿಡಿಯದ ಅಜ್ಞಾನಿಗಳು ಕಿರುಬಟ್ಟೆಯಲ್ಲಿ ಹರಿದು ಕಂಗೆಟ್ಟು ಕಾಡ ಹೊಕ್ಕು ಕಣ್ಣು ಕಾಣದೆ ಕಮರಿಯ ಬಿದ್ದು ಬಳಲುತ್ತಿಪ್ಪರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮಾಯೆಯ ಕಾಲು ಬಾಯಿಗೆ ಸಿಕ್ಕಿಕೊಂಡು ತೊತ್ತಳದುಳಿಸಿಕೊಂಬ ಮರುಳುಮಾನವರ ಬಗೆಯ ನೋಡಯ್ಯ ಮನವೇ. ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು ಮುಂಡೆ ಹಾರುವಿತಿಯಂತೆ ಬೆಳುವಲ್ಲ ಮಾಡಿಕೊಂಡು ತೆಂಗ ಪೋಟಾಡುವಂತೆ ಕರಸ್ಥಳದಲ್ಲಿ ಲಿಂಗವ ಹಿಡಿದುಕೊಂಡು ಠವುಳಿಕಾರನಂತೆ ಮನವ ಕದ್ದು ಮಾತನಾಡುತ್ತ ಮನೆಮನೆಗೆ ಹೋಗಿ ಹೊಟ್ಟೆಯ ಕಿಚ್ಚೆಗೆ ಸಟೆಯ ಶಾಸ್ತ್ರವ ಹೇಳುವ ಡೊಂಬರಂತೆ ಪುಸ್ತಕವ ಹಿಡಿದುಕೊಂಡು ಪುರಜನವ ಮೆಚ್ಚಿಸುವ ಕೋಡಿಗರಂತೆ ವೇಷಮಂ ಹಲ್ಲುಣಿಸಿ ಕೊಂಡು ನಿಜ ವಿರಕ್ತರಂತೆ ದೇಶಮಧ್ಯದಲ್ಲಿ ಸುಳಿದು ವಿರಕ್ತರ ಕಂಡಲ್ಲಿ ಸಟೆಯ ಭಕ್ತಿಯ ಹೊಕ್ಕು ಹೂಸಕದುಪಚಾರಮಂ ನುಡಿದು ಮಾಡಿ ನೀಡುವ ಭಕ್ತರ ಮನೆಗೆ ಭಿಕ್ಷಮುಖದಿಂದ ಹೋಗಿ ನಚ್ಚು ಮಚ್ಚ ನುಡಿದು ಉಂಡುಕೊಂಡು ದಿನಕಾಲಮಂ ನೂಂಕಿ ಮನೋವಿಕಾರದಿಂದ ಪರಧನ ಪರಸ್ತ್ರೀಯರಿಗಳುಪಿ ಭವಿ ಭಕ್ತರೆನ್ನದೆ ಉಂಡುಟ್ಟಾಡಿ ತೀರ್ಥ ಪ್ರಸಾದವೆಂಬ ಅಳುಕಿಲ್ಲದೆ ಚೆಲ್ಲಾಡಿ ನಡೆಯಿಲ್ಲದ ನಡೆಯ ನಡೆದು ನುಡಿಯಿಲ್ಲದ ನುಡಿಯ ನುಡಿದು ತನ್ನ ಕಪಟವನರಿಯದೆ ಶಿವಶರಣರ ಮೇಲೆ [ಮಿಥ್ಯವನಾಡಿ] ಹಗೆಯಂ ಸಾಧಿಸಿ ಹಸಿಯ ಮಾದಿಗರಂತೆ ಹುಸಿಯ ನುಡಿದು ಶಿವಶರಣರ ಮೇಲೆ ಒಂದೊಂದ ನುಡಿಯ ಗಳಹುತಿಪ್ಪ ನರಕ ಜೀವರುಗಳಿಗೆ ಮಾಡಿದ ಪರಿಭವದ ರಾಟವಾಳವು ಗಿರುಕು ಗಿರುಕೆಂದು ತಿರುಗುತ್ತಲಿದೆಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತೆ ಎಂಬ ಸಪ್ತಮಲ ವ್ಯಸನ ಮದಂಗಳೆನ್ನನಾವರಿಸಿ ಕಾಡುತ್ತಿವೆಯಯ್ಯ. ನಿಮ್ಮುವ ನಾನೆಂತರಿವೆನಯ್ಯ? ನಿಮ್ಮುವ ನಾನೆಂತು ನೆನೆವೆನಯ್ಯ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯಾ, ಇಂತಿವ ಕಳೆದು, ಎನಗೆ ನಿಮ್ಮ ಪರಮಭಕ್ತಿಯ ಪಾಲಿಸಯ್ಯ ನಿಮ್ಮ ಧರ್ಮ.
--------------
ಘನಲಿಂಗಿದೇವ
ಮುಂದನರಿಯದ ಮತಿಗೆಟ್ಟ ಮರುಳು ಮನವೇ ಕಾಲ ಕಾಮರ ಗೆಲುವ ಉಪಾಯವಾವುದೆಂದು ತಲೆಯೂರಿ ನೆಲನ ಬರೆವುತಿಪ್ಪೆ ಮೊಲ ಜಂಬುಕಂಗಳ ಹುಯ್ಯಲಿಗೆ ಆನೆಯ ಘೌಜನಡ್ಡಮಾಡಬೇಕೇ? ಕಾಲ ಕಾಮರ ಗೆಲುವುದಕ್ಕೆ ಆಲೋಚನೆಯೇತಕಯ್ಯ ಮನವೆ? ಪಂಚೇಂದ್ರಿಯಂಗಳು ಪಂಚಬ್ರಹ್ಮವನಪ್ಪಿ ಅಗಲದಿಪ್ಪುದೇ ಪಂಚಬಾಣನ ಹರಣದ ಕೇಡು. ನಾನು ಪರಬ್ರಹ್ಮದಲ್ಲಿಯೇ ಜನನ. ಎನ್ನ ತನು ಮನ ಧನಂಗಳ ಪರಬ್ರಹ್ಮಕ್ಕೆ ಮಾರುಕೊಟ್ಟೆನೆಂಬ ನಿಚ್ಚಟದ ನುಡಿಯೇ ಕಾಲನ ಗಂಟಲಗಾಣ. ಅದು ಹೇಗೆಂದೊಡೆ ಲಿಂಗಾಂಕಿತವಾದ ವೃಕ್ಷಂಗಳ ಮಂಡಲಾಧಿಪತಿ ಮೊದಲಾಗಿ ಮುಟ್ಟಲಮ್ಮ. ಆನೆಯ ತನುಜನ ಆಡು ಮುರಿದರೆ ಹೀನವಾರಿಗಪ್ಪುದಯ್ಯ? ಈ ಪ್ರಕಾರದ ಸಮ್ಯಜ್ಞಾನದಿಂದ ನಿಮ್ಮ ಶರಣರು ಕಾಲ ಕಾಮರ ಗೆಲಿದರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ