ಅಥವಾ
(6) (4) (1) (0) (1) (0) (0) (0) (8) (1) (0) (0) (1) (0) ಅಂ (1) ಅಃ (1) (10) (0) (0) (0) (0) (0) (0) (0) (0) (0) (0) (0) (0) (0) (0) (2) (0) (1) (0) (6) (2) (0) (2) (3) (7) (0) (0) (0) (2) (1) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾನು ನಿಮ್ಮೊಡನೆ ನುಡಿವೆ ನುಡಿಯಲಂಜುವೆನಯ್ಯ. ಲಿಂಗದ ವಿನೋದಾರ್ಥವಾಗಿ ಗಮನವಂಕುರಿಸಿ ಒಂದಾದೊಂದು ದೆಸೆಗೆ ಹೋಗುತ್ತಿಪ್ಪಾಗ ಅರಣ್ಯಮಧ್ಯದಲ್ಲಿ ಹಸಿವೆದ್ದು ತನುವನಂಡಲೆವುತ್ತಿರುವಲ್ಲಿ ತೃಷೆಯೆದ್ದು ಮನವ ಮತಿಗೆಡಿಸಿ ಹಲ್ಲುಹತ್ತಿ ನಾಲಿಗೆ ಕರ್ರಗಾಗಿ ಮೂರ್ಛೆಯಾಗುತ್ತಿರಲು ಆ ಸಮಯದಲ್ಲಿ ಖರ್ಜೂರ ಮಾವು ಜಂಬುನೇರಳೆ ಮೊದಲಾದ ಎಲ್ಲಾ ಫಲಂಗಳು ಜೀವನ್ಮುಕ್ತಿಯೆಂಬ ಸಂಜೀವನರಸವ ತುಂಬಿಕೊಂಡು ವೃಕ್ಷಂಗಳಡಿಯಲ್ಲಿ ಬಿದ್ದಿರಲು ಕಣ್ಣಿನಲ್ಲಿ ನೋಡಿ ಮನದಲ್ಲಿ ಬಯಸಿ ಕೈಮುಟ್ಟಿ ಎತ್ತಿದೆನಾದರೆ ಎನ್ನ ವಿರಕ್ತಿಯೆಂಬ ಪತಿವ್ರತಾಭಾವಕ್ಕೆ ಅದೇ ಹಾನಿ ನೋಡಾ. ಅದೇನು ಕಾರಣವೆಂದೊಡೆ `ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ'ವೆಂದು ಆದ್ಯರ ವಚನ ಸಾರುತೈದಾವೆ ನೋಡಾ. ಇದು ಕಾರಣ- ಅನರ್ಪಿತವ ಭುಂಜಿಸಿ ತನುವ ರಕ್ಷಣೆಯ ಮಾಡಿ ಶ್ವಾನನ ಬಸುರಲ್ಲಿ ಬಂದು ಹೊಲೆಯರ ಬಾಗಿಲ ಕಾಯ್ದು ಹಲವು ಆಹಾರವನುಂಡು ನರಕಕ್ಕಿಳಿಯಲಾರದೆ ಮುಂದನರಿಯದೆ ನುಡಿದೆನಯ್ಯ. ಸತಿಯ ಭಾಷೆ ಪತಿಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನಿರ್ಗಮನಿಯಾದ ಶರಣಂಗೆ ಸಂಧಾನವಲ್ಲದೆ ಗಮನಿಯಾದ ಶರಣಂಗೆ ಅನುಗೊಳದೆಂಬ ಅಣ್ಣಗಳು ನೀವು ಕೇಳಿರೇ. ಸೂರ್ಯನು ರಥವನೇರಿ ಪದಾರ್ಥಂಗಳ ಚಬುಕುಮಾಡಿ ಮನೋವೇಗದಿಂ ಪಶ್ಚಿಮ ಸಮುದ್ರಕ್ಕೆ ದಾಳಿಯಿಡಲು ರವಿಕಿರಣಂಗಳು ಹಿಂದುಳಿದಿಪ್ಪವೇ? ಅದು ಕಾರಣ- ಪುಷ್ಪವಿದ್ದಲ್ಲಿ ಪರಿಮಳವಿಪ್ಪುದು. ಅಂಗವಿದ್ದಲ್ಲಿ ಲಿಂಗವಿಪ್ಪುದು. ಲಿಂಗವಿದ್ದಲ್ಲಿ ಆ ಲಿಂಗದ ಮೇಲೆ ಮನವಿಪ್ಪುದು. ಲಿಂಗದ ಮೇಲೆ ಮನವಿಪ್ಪಲ್ಲಿಯೇ ಶರಣ. ಆ ಶರಣ ನಡೆದಲ್ಲಿಯೇ ಉರಿವಗ್ನಿಯ ಮೇಲೆ ತಂಗಾಳಿ ಬೀಸಿದಂತೆ. ತ್ರಿಪುಟಿಯ ಮೇಲೆ ಚಿದ್ಭೆಳಗು ಓಲಾಡುತ್ತಿದೆ. ಆ ಶರಣ ನೋಡುವಲ್ಲಿಯೇ ಪ್ರಣವದ ಬಳ್ಳಿ ಮನವ ಸುತ್ತುತ್ತಿದೆ. ಆ ಶರಣ ನೋಡುವಲ್ಲಿಯೇ ಪಂಚವರ್ಣಂಗಳ ಸ್ವರೂಪು ಲಿಂಗಾರ್ಪಿತವಾಗುತ್ತಿದೆ. ಶರಣ ಕುಂಬ್ಥಿಸುವಲ್ಲಿಯೇ ಓಂಕಾರ ಒಡಗೂಡುವುದಯ್ಯ. ಶರಣ ರೇಚಿಸುವಲ್ಲಿಯೇ ಪಂಚಾಕ್ಷರಂಗಳು ಎಡೆಯಾಡುತ್ತಿವೆ. ಶರಣ ಸುಳಿವಲ್ಲಿಯೇ ಹಲವು ಪ್ರಕಾರದ ವಸ್ತುಗಳ ತನುಸೋಂಕು ಲಿಂಗಮನವ ತುಂಬುತ್ತಿದೆ. ಇದು ಕಾರಣ ತೋಂಟದಾರ್ಯನ ಕರುಣಪ್ರಸಾದಮಂ ಪಡೆದು ತತ್ವಸ್ವರೂಪ ಧ್ಯಾನ ಧಾರಣ ಅರ್ಪಿತಾವಧಾನವನರಿದ ಶರಣಂಗೆ ಗಮನಾಗಮನವೆಂಬುಭಯವುಂಟೇ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನಿತ್ಯವಾಗಿಪ್ಪ ಪರಮಾತ್ಮನು ಅನಿತ್ಯವಾಗಿಪ್ಪ ದೇಹದೊಡನಾಡಿ ಜೀವನಾಗಿ ಹೋಗುತ್ತಿದೆ ನೋಡಾ. ನಿತ್ಯ ಅನಿತ್ಯದ ಸಂದನಿಕ್ಕಿದ ಸಮರ್ಥರಾರಯ್ಯ? ಇದಕ್ಕೆ ಅನುಕೂಲವಾಗಿ ಮಾಡಿದವರು ಮತ್ತೊಬ್ಬರುಂಟೆಂದು ನಿನ್ನ ಮನದಲ್ಲಿ ತಿಳಿಯಬೇಡ. ಅದು ತನಗೆ ತಾನೇ ಮಾಡಿಕೊಂಡಿತು. ಅದು ಹೇಗೆಂದೊಡೆ ಆತ್ಮನು ಭೋಗವೆಂಬ ಸೂಜಿಯಂ ಪಿಡಿದು ಆ ಸೂಜಿಗೆ ಮೂರೊಂದು ಕರಣ ಎರಡು ಮೂರು ಇಂದ್ರಿಯಂಗಳೆಂಬ ನವಸೂತ್ರವನೇರಿಸಿ ತನು ಮನದಂಚ ಸೇರುವೆಯಂ ಮಾಡಿ ಕಂಠದಾರಮಂ ಕಟ್ಟಿ ಸಂದರಿಯಬಾರದಂತೆ ಅದು ತನಗೆ ತಾನೆ ಹೊಲುಕೊಂಡಿತ್ತು. ಇದು ಬಿಚ್ಚಿ ಬೇರೆ ಮಾಡುವ ಪರಿಯಾವುದಯ್ಯ? ಭೋಗವೆಂಬ ಸೂಜಿಯಂ ಮುರಿದು ನಾಲ್ಕು ಕರಣ ಐದಿಂದ್ರಿಯವೆಂಬ ಒಂಬತ್ತು ದಾರಮಂ ತುಂಡತುಂಡಿಗೆ ಹರಿಯಲೊಡನೆ ತನು ಪ್ರಕೃತಿಯಂ ಕೂಡಿತ್ತು. ಪ್ರಾಣ ಪರಬ್ರಹ್ಮವಂ ಕೂಡಿತ್ತು ಕಾಣಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನಿಜಮುಕ್ತಿಗೆ ಸದಾ ಸಂಧಾನದಲ್ಲಿರಬೇಕೆಂದು ಶಿವಶರಣರು ನುಡಿಯುತ್ತಿಪ್ಪರು. ಆ ಸಂಧಾನದ ಹೊಲಬ ನಾನರಿಯೆ, ಎನಗೆ ಮುಕ್ತಿಯಿಲ್ಲ. ಇನ್ನೇವೆನೆಂದು ಕಂಬನಿದುಂಬಿ ಕರಗುತಿಪ್ಪೆ ಮನವೇ. ಗುರು ಕೊಟ್ಟ ಸಂಧಾನವೆ ಕರಕಮಲದಲ್ಲಿ ಪ್ರಸನ್ನ ಪ್ರಸಾದಮಂ ಪ್ರತ್ಯಕ್ಷವಾಗಿ ತೋರುತ್ತಿದೆ. ಗುರು ಕೊಟ್ಟ ಸಂಧಾನವೆ ಎಂಟೆಸಳಿನ ಚೌದಳದ ಮಧ್ಯದಲ್ಲಿ ಹೊಂಗಲಶದಂತೆ ಥಳಥಳನೆ ಹೊಳೆಯುತ್ತಿದೆ. ಗುರುಕೊಟ್ಟ ಸಂಧಾನವೆ ಮುಪ್ಪುರದ ಮಧ್ಯದಲ್ಲಿ ರತ್ನ ಮಿಂಚಿನಂತೆ ಕುಡಿವರಿದು ಉರಿಯುತ್ತಿದೆ. ಗುರು ಕೊಟ್ಟ ಸಂಧಾನವೆ ಪಂಚಪತ್ರದ ಮಧ್ಯದಲ್ಲಿ ಬೆಳ್ದಿಂಗಳ ಲತೆಯಂತೆ ಬೀದಿವರಿದು ಬೆಳಗ ಬೀರುತ್ತಿದೆ. ಈ ಪ್ರಕಾರದ ಬೆಳಗೆ ಮುಕ್ತಿಸಂಧಾನವಾಗಿ ಒಪ್ಪುತ್ತಿಹವು. ಇವನೆ ಕಣ್ದುಂಬಿ ನೋಡು ಇವನೆ ಮನದಣಿವಂತೆ ಹಾಡು ಇವನೆ ಅಪ್ಪಿ ಅಗಲದಿಪ್ಪುದೇ ನಿಜಮುಕ್ತಿ. ತಪ್ಪದು ನೀನಂಜಬೇಡ. ಗುರು ಕೊಟ್ಟ ಸಂಧಾನವಂ ಮರೆದು ಭಿನ್ನವಿಟ್ಟು ಲಕ್ಷಿಪರ ಸಂಧಾನವೆಲ್ಲಾ ಭವಸಂಧಾನವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನಿರ್ವಾಣಪದಕ್ಕೆ ಕಾಮಿತನಾಗಿ ಸಕಲಪ್ರಪಂಚಿನ ಗರ್ವವಂ ನೆಗ್ಗಲೊತ್ತಿ ಏಕಲಿಂಗನಿಷಾ*ಪರವಾಗಿ ಆಚರಿಸುವ ಪರಮ ವಿರಕ್ತರ ಉಪಾಧಿಕೆಯಿಲ್ಲದ ಕ್ರೀಗಳಾವುವಯ್ಯ ಎಂದರೆ- ತ್ರಿಸಂಧ್ಯಾಕಾಲದಲ್ಲಿ ಲಿಂಗಪೂಜೆ ಲಿಂಗೋದಕ ಹಲ್ಲುಕಡ್ಡಿ ಮೊದಲಾದ ಸಕಲ ಪದಾರ್ಥಂಗಳ ಇಷ್ಟಲಿಂಗಕ್ಕೆ ಕೊಟ್ಟು ಕೊಂಬ ಎಚ್ಚರಿಕೆ ತೀರ್ಥಪ್ರಸಾದದಲ್ಲಿ ಅವಧಾನ ಅಚ್ಚ ಲಿಂಗೈಕ್ಯರ ಮನೆಯಲ್ಲಿ ಭಿಕ್ಷ ಕಠಿಣ ಪದಾರ್ಥಂಗಳಂ ಹಿಡಿದರೆ ಹಿಡಿದಂತೆ ಬಿಟ್ಟರೆ ಬಿಟ್ಟಂತೆ ಇಪ್ಪುದು. ತದ್ದಿನವ ಕಳೆದು ಭವಿ ಭಕ್ತಿಯನೊಪ್ಪುಗೊಳ್ಳದೆ ಬಿದ್ದ ಫಲಂಗಳ ಮುಟ್ಟದೆ ರಾತ್ರಿಯ ಕಾಲಕ್ಕೆ ಭಿಕ್ಷ ಬಿಡಾರವೆಂದು ಭಕ್ತರು ಬಿನ್ನಹ ಮಾಡಿದರೆ ಕೈಕೊಂಬುದು ಅಲ್ಲದಿದ್ದರೆ ಹೋಗಲಾಗದು. ಭಕ್ತರು ವಿಭೂತಿ ಮುಂತಾದಿ ಪದಾರ್ಥಕ್ಕೆ ಹೇಳಿದರೆ ಇಚ್ಛೆಯಾದರೆ ಕೈಕೊಂಬುದು ಒಲ್ಲದಿದ್ದರೆ ಬಿಡುವುದು. ಒಪ್ಪಿಕೈಕೊಂಡ ಬಳಿಕ ವಿಭೂತಿಯ ಮೀರಲಾಗದು. ವಿಭೂತಿಯ ಕಟ್ಟು ವಿರಕ್ತರಿಗೆ ಇಲ್ಲವೆಂಬುದು ಶರಣಸ್ಥಲಕ್ಕೆ ಸಲ್ಲದು. ಇಂತಿವೆಲ್ಲವು ಗಣಂಗಳು ಒಪ್ಪವಿಟ್ಟ ಆಚರಣೆ. ಈ ಆಚರಣೆಯ ಸಮಾಧಿಯೋಗ ಪರಿಯಂತರ ನಡೆಸುವಾತನೀಗ ನಿರಂಗ ಶರಣ. ಅದಲ್ಲದೆ ಪುರಾತನರ ಗೀತವನೋದಿ ಪುರಾತನರ ಮಕ್ಕಳಾದ ಬಳಿಕ ಕಿರಾತರ ಮಕ್ಕಳಂತೆ ಮನ ಬಂದ ಪರಿಯಲ್ಲಿ ನಡೆಯಲಾಗದು. ಪುರಾತನರಂತೆ ನಡೆವುದು. ಹೀಗಲ್ಲದೆ ಹೊತ್ತಿಗೊಂದು ಬಗೆ ದಿನಕೊಂದು ಪರಿಯಾಗಿ ನಡೆಸುವಲ್ಲಿ ಶರಣನೇನು ಮುಗಿಲಬಣ್ಣದ ಬೊಂಬೆಯೆ? ಶರಣ ಮೊಲನಾಗರೇ? ಶರಣನಿಂದ್ರಚಾಪವೇ? ಶರಣ ಗೋಸುಂಬೆಯೇ? ನೋಡಿರಯ್ಯ ಕಡಿದು ಕಂಡರಿಸಿ ಒಪ್ಪವಿಟ್ಟ ರತ್ನದಪುತ್ಥಳಿಯ ಪ್ರಕಾಶದಂತೆ ನಿಜಗುಂದದಿಪ್ಪುದೀಗ ಶರಣಸ್ಥಳ. ಬಾಲಕನಿಲ್ಲದ ಅಂಗನೆಯ ಮೊಲೆಯಲ್ಲಿ ಹಾಲು ತೊರೆವುz ಅಯ್ಯ? ಕ್ರಿಯವಿಟ್ಟು ನಡೆವ ಆಚರಣೆಯೆಲ್ಲಿಯದೋ ಮುಕ್ತಿಯ ಪಥಕ್ಕೆ ಕ್ರಿಯೆ ಸಾಧನವಲ್ಲದೆ? ಅದು ಹೇಗೆಂದೊಡೆ- ಕ್ರೀಯೆಂಬ ಬೀಜದಲ್ಲಿ ಸಮ್ಯಜ್ಞಾನವೆಂಬ ವೃಕ್ಷ ಪಲ್ಲವಿಸಿತ್ತು. ಆ ವೃಕ್ಷ್ಲದಲ್ಲ್ವಿ ಭಕ್ತಿಯೆಂಬ ಹೂವಾಯಿತ್ತು. ಆ ಹೂವು ಲಿಂಗನಿಷೆ*ಯೆಂಬ ಹಣ್ಣಾಯಿತ್ತು. ಆ ಹಣ್ಣಿನ ಅಮೃತಸಾರಮಂ ನಾನು ದಣಿಯಲುಂಡು ಬಸವಾದಿ ಪ್ರಮಥರ ಪಡುಗ ಪಾದರಕ್ಷೆಯಂ ಹಿಡಿವುದಕ್ಕೆ ಯೋಗ್ಯನಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನಿಜಗುಣ ಚೆಂದಿಮರಸರು ಕರಸ್ಥಲದ ನಾಗಿದೇವರೊಳಗಾದ ಎಲ್ಲಾ ವಿರಕ್ತರು ಆವ ಕ್ರಿಯೆಯಲ್ಲಿ ಆಚರಿಸಿ ಲಿಂಗೈಕ್ಯರಾದರೆಂದು ಕೆಟ್ಟು ನುಡಿವ ಭವಹೇತುಗಳು ನೀವು ಕೇಳಿರೆ. ಅವರು ತುಂಬಿದ ತೊರೆಯ ಸಂಭ್ರಮದಿಂದ ಹಾಯ್ದರು. ಶಕ್ತಿಯ ಮುಂದೆ ಹಾಲು ಬೋನ ಹಣ್ಣು ಕಜ್ಜಾಯವಿಕ್ಕಿರಲು ಆ ಶಕ್ತಿಯ ಮಾತನಾಡಿಸಿ ಉಂಡರು. ವಿಷವ ಪದಾರ್ಥವೆಂದು ಕೊಡಲು ಉಂಡು ದಕ್ಕಿಸಿಕೊಂಡರು. ಭಿಕ್ಷಕ್ಕೆ ಹೋದಲ್ಲಿ ಕಾಮುಕ ಸ್ತ್ರೀ ಬಂದು ಹಿಡಿದಡೆ ಅವರಂಗಳದಲ್ಲಿ ಅವಳ ಅನುಭವಿಸುವಾಗ ಆ ಸಮಯದಲ್ಲಿ ಮನೆಯೊಡೆಯ ಬಂದು ಕಡಿದರೆ ಖಂಡೆಯದ ಮೊನೆಗೆ ಬಯಲಾಗಿ ತೋರಿದರು. ಪಚ್ಚೆಯ ಕಡಗಮಂ ತಿರುಗಣಿಯ ಮಡುವಿಗಿಟ್ಟು ತಿರುಗಿ ಕರೆದುಕೊಂಡರು. ಕೆಂದೆಂಗಿನ ಎಳನೀರ ಭಾವಾರ್ಪಣವ ಮಾಡಿದರು. ಪಟ್ಟದರಸಿನ ರಾಣಿಯು ಪಲ್ಲಕ್ಕಿಯ ಮೇಲೆ ಹೋಗುವಲ್ಲಿ ಅವಳ ಬಟ್ಟಮೊಲೆವಿಡಿದು ಮುದ್ದಾಡಿ ಇರಿಸಿಕೊಂಡು ಬಯಲಾದರು. ದೇವೇಂದ್ರಭೋಗಮಂ ಬಿಟ್ಟರು. ತನು ನಿಲಿಸಿ ಪ್ರಾಣವ ಕೊಂಡೊಯ್ದರು. ಉಂಗುಷ*ದಲ್ಲಿ ಧರಿಸಿದ್ದ ಲಿಂಗಮಂ ತೆಗೆಯಲು ಆ ಲಿಂಗದ ಕೂಡೆ ಪ್ರಾಣವ ಕಳುಹಿದರು. ಮಿಡಿವಿಲ್ಲಿನೊಳಗೆ ಲಿಂಗವನೆಚ್ಚು ಆ ಲಿಂಗದೊಡನೆ ನಿರವಯಲಾದರು. ಉಪಾಧಿಕೆಯೊಡಲಾಸೆಯ ಸುಟ್ಟರು. ಚಳಿ ಮಳೆಯೆನ್ನದೆ ಅರಣ್ಯದಲ್ಲಿದ್ದರು. ಹಸಿದರೆ ಕೆಸರ ಮೆದ್ದರು. ಅವರು ಲಿಂಗಾಂಗರೂಢರಾಗಿ ಲಿಂಗದಲೈಕ್ಯರಾದರು. ನೀವು ಅವರಂತೆ ಲಿಂಗಾಂಗವ ತೋರಬೇಕು. ಅದಿಲ್ಲದಿದ್ದರೆ ಜ್ಞಾನಕ್ರಿಯಗಳಿಂದಿರಬೇಕು. ಅದಿಲ್ಲದಿದ್ದರೆ ಸುಮ್ಮನಿದ್ದು ಶಿವಶರಣರ ಮನಸಿಂಗೆ ಬರಬೇಕು. ಹೀಗಲ್ಲದೆ ಹೊಟ್ಟೆಯಕಿಚ್ಚಿನ ಬಾಯಿ ಬಡಕುತನವೇತಕಯ್ಯ ನಿಮಗೆ? ಆನೆ ಮದವೆದ್ದು ಸೋಮವೀಥಿಯ ಸೂರೆಮಾಡಿತೆಂದು ಆಡು ಮದವೆದ್ದು ಬೇಡಗೇರಿಗೆ ಹೋಗಿ ಕೊರಳ ಮುರಿಸಿಕೊಂಬಂತೆ ಅಂದಿನ ಕಾಲದ ಹನುಮ ಲಂಕೆಯ ದಾಂಟಿದನೆಂದು ಇಂದಿನ ಕಾಲದ ಕಪಿ ಹಳ್ಳವ ದಾಂಟಿದಂತೆ ಅರ್ತಿಯಿಂದ ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು ತೊತ್ತು ತಿಪ್ಪೆಯನೇರಿದಂತೆ ರಾಜಕುಮಾರ ತೇಜಿಯನೇರಿದನೆಂದು ರಜಕನ ಕುವರ ಕುನ್ನಿಯನೇರಿದಂತೆ ಬಲಮುರಿಯ ಶಂಖ ಧಿಗಿಲು ಭುಗಿಲೆಂದು ರುsುಂಕರಿಸಿತೆಂದು ಕೆರೆಯೊಳಗಣ ಗುಳ್ಳೆ ಕೀಚು ಕೀಚೆಂದಂತೆ ತಮ್ಮಿರವ ತಾವರಿಯದೆ ಬಾಳುವ ಕಾಲದಲ್ಲಿ ಮರಣದ ಮದ್ದಕೊಂಬ ಈ ಖೂಳ ಮಾನವರ ಎನಗೊಮ್ಮೆ ತೋರದಿರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ