ಅಥವಾ
(6) (4) (1) (0) (1) (0) (0) (0) (8) (1) (0) (0) (1) (0) ಅಂ (1) ಅಃ (1) (10) (0) (0) (0) (0) (0) (0) (0) (0) (0) (0) (0) (0) (0) (0) (2) (0) (1) (0) (6) (2) (0) (2) (3) (7) (0) (0) (0) (2) (1) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ. ಪಂಚಭಕ್ಷ ್ಯ ಪರಮಾಮೃತವ ಸದಾ ದಣಿಯಲುಂಡು ಒಂದು ದಿನ ಸವಿಯೂಟ ತಪ್ಪಿದರೆ ಹಲವ ಹಂಬಲಿಸಿ ಹಲುಗಿರಿದು, ಎನ್ನ ಕೊಂದು ಕೂಗುತ್ತಿದೆ ನೋಡಾ. ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ?. ಕಲಸಿ ಕಲಸಿ ಕೈಬೆರಲು ಮೊಂಡಾದವು. ಅಗಿದಗಿದು ಹಲ್ಲುಚಪ್ಪಟನಾದವು. ಉಂಡುಂಡು ಬಾಯಿ ಜಡ್ಡಾಯಿತು. ಹೇತು ಹೇತು ಮುಕುಳಿ ಮುರುಟುಗಟ್ಟಿತ್ತು. ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು. ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತ್ತು. ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು. ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ. ಕಾಯವಿಕಾರವೆಂಬ ಕತ್ತಲೆ ಕವಿಯಿತು. ಮನೋವಿಕಾರವೆಂಬ ಮಾಯೆ ಸೆರೆವಿಡಿದಳು. ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ. ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು. ಕಾಯಾಲಾಗದೆ ದೇವ?. ಸಾವನ್ನಬರ ಸರಸವುಂಟೆ ಲಿಂಗಯ್ಯ?. ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ. ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ ಕರುಣಿ?. ಮುಕ್ತಿಗಿದೇ ಪಯಣವೋ ತಂದೆ?. ನೀನಿಕ್ಕಿದ ಮಾಯಾಸೂತ್ರಮಂ ಹರಿದು, ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ, ಅಂಗಭೋಗ-ಆತ್ಮಭೋಗಂಗಳನಡಗಿಸಿ, ಲಿಂಗದೊಳು ಮನವ ನೆಲೆಗೊಳಿಸಿ, ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎಲೆ ತಂಗಿ, ಶರಣಸತಿ ಲಿಂಗಪತಿಯಾದ ಪತಿವ್ರತಾಭಾವದ ಚಿಹ್ನೆ, ನಿನ್ನ ನಡೆ ನುಡಿಯಲ್ಲಿ, ಹೊಗರುದೋರುತ್ತಿದೆ, ನಿನ್ನ ಪೂರ್ವಾಪರವಾವುದಮ್ಮ?. ಸುತ್ತೂರು ಸಿಂಹಾಸನದ ಪರ್ವತದೇವರ ಶಿಷ್ಯರು, ಭಂಡಾರಿ ಬಸವಪ್ಪೊಡೆಯದೇವರು. ಆ ಭಂಡಾರಿ ಬಸವಪ್ಪೊಡೆಯದೇವರ ಶಿಷ್ಯರು. ಕೂಗಲೂರು ನಂಜಯ್ಯದೇವರು. ಆ ನಂಜಯ್ಯದೇವರ ಕರಕಮಲದಲ್ಲಿ, ಉದಯವಾದ ಶರಣವೆಣ್ಣಯ್ಯಾ ನಾನು. ಎನ್ನ ಗುರುವಿನ ಗುರು ಪರಮಗುರು, ಪರಮಾರಾಧ್ಯ ತೋಂಟದಾರ್ಯನಿಗೆ ಗುರುಭಕ್ತಿಯಿಂದೆನ್ನ ಶರಣುಮಾಡಿದರು. ಆ ತೋಂಟದಾರ್ಯನು, ತನ್ನ ಕೃಪೆಯೆಂಬ ತೊಟ್ಟಿಲೊಳಗೆನ್ನಂ ಮಲಗಿಸಿ, ಪ್ರಮಥಗಣಂಗಳ ವಚನಸ್ವರೂಪತತ್ವಾರ್ಥವೆಂಬ, ಹಾಲು ತುಪ್ಪಮಂ ಸದಾ ದಣಿಯಲೆರೆದು, ಅಕ್ಕರಿಂದ ರಕ್ಷಣೆಯಂ ಮಾಡಿ, ``ಘನಲಿಂಗಿ' ಎಂಬ ನಾಮಕರಣಮಂ ಕೊಟ್ಟು, ಪ್ರಾಯಸಮರ್ಥೆಯಂ ಮಾಡಿ, ಸತ್ಯಸದಾಚಾರ, ಜ್ಞಾನಕ್ರಿಯೆಗಳೆಂಬ, ದಿವ್ಯಾಭರಣಂಗಳಂ ತೊಡಿಸಿ, ಅರುಹೆಂಬ ಬಣ್ಣವ ನಿರಿವಿಡಿದುಡಿಸಿ, ಅರ್ತಿಯ ಮಾಡುತ್ತಿಪ್ಪ ಸಮಯದಲ್ಲಿ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ, ತನಗೆ ನಾನಾಗಬೇಕೆಂದು ಬೇಡಿಕಳುಹಲು, ಎಮ್ಮವರು ಅವಂಗೆ ಮಾತನಿಕ್ಕಿದರಮ್ಮಾ.
--------------
ಘನಲಿಂಗಿದೇವ
ಎನ್ನ ಮನೋಮಧ್ಯದೊಳಗೊಂದು ಅನುಮಾನ ಅಂಕುರದೋರಿತು ಕೇಳಾ ಎಲೆ ತಂಗಿ. ಲಿಂಗಾಣತಿಯಿಂ ಬಂದ ಪದಾರ್ಥವ ಮನವೊಪ್ಪಿ ಲಿಂಗಕ್ಕೆ ಕೊಟ್ಟುದೇ ಪ್ರಸಾದ. ಆ ಪ್ರಸಾದದೊಳಗಿದ್ದುದೇ ರಸ. ಹೊರಗಿದ್ದುದೇ ಹಿಪ್ಪೆ. ಮತ್ತಂ ಒಳಗಿದ್ದುದೇ ಮಧುರ ಹೊರ ಹೊರಗಿದ್ದುದೇ ಕಠಿಣ. ಕರುಣಿಸಿಕೊಂಬುದೇ ಸುಖಿತ. ಅದ ನುಡಿಯಲಂಜಿ ನಡುಗುತಿಪ್ಪೆನಯ್ಯ. ಅದೇನು ಕಾರಣ ನಡುಗುತಿಪ್ಪೆನೆಂದರೆ ಪ್ರಸಾದವೇ ಪರತತ್ವವೆಂದು ಪ್ರಮಥಗಣಂಗಳ ಸಮ್ಯಜ್ಞಾನದ ನುಡಿ ಉಲಿಯುತ್ತಿದೆ. ಇದು ಕಾರಣ- ಪ್ರಸಾದವೆಂಬ ಪರತತ್ವದಲ್ಲಿ ಜ್ಞಾನ ಅಜ್ಞಾನಗಳೆರಡೂ ಹುದುಗಿಪ್ಪವೆಂದು ನಾನು ನುಡಿಯಲಮ್ಮೆ. ತಥಾಪಿ ನುಡಿದರೆ, ಎನಗೆ ಮತ್ರ್ಯಲೋಕದ ಮಣಿಹವೆಂದಿಗೂ ತೀರದೆಂದು ಕಠಿಣ ಪದಾರ್ಥವ ಲಿಂಗಕ್ಕೆ ಕೊಟ್ಟು ಕೊಳಲಮ್ಮೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎಲೆ ಮನ ಬುದ್ಧಿ ಚಿತ್ತ ಅಹಂಕಾರವೆಂಬ, ಎನ್ನ ಚತುರ್ವಿಧ ಮಂತ್ರಿ ಪ್ರಧಾನರು ಕೇಳಿರಯ್ಯ, ನಾನು ಕೆಟ್ಟು ಭ್ರಷ್ಟನಾಗಿ ಹೋದ ಕರ್ಮದ ಅಂಡಲೆಯ ಬಗೆಯ. ನಾನು ಸ್ವರ್ಗ ಮತ್ರ್ಯ ಪಾತಾಳದೊಳಗುಳ್ಳ ಭೋಗರಾಜ್ಯಕ್ಕೆ ಅರಸಾಗಿ ಅನಂತಕಾಲ ಪಟ್ಟವನಾಳಿ ಎನ್ನ ಚತುರಂಗಬಲಕ್ಕೆ ಬೇಡಿದ ಪಡಿ ಕಂದಾಯಮಂ ಕೊಟ್ಟು ಕೊಟ್ಟು ನಷ್ಟವಾಗಿ ಎನಗೆ ಎರಡುನಲವತ್ತೆರಡುಲಕ್ಷದಭವರಾಟಳದ ಋಣಬಿದ್ದಿತ. ಆ ಋಣಕ್ಕಂಜಿ ಭೋಗರಾಜ್ಯಮಂ ಬಿಟ್ಟು ದರಿದ್ರನಾದೆನು. ಎನಗೆ ನೀವು ಮಾಡುವ ರಾಜಕಾರ್ಯದ ಮಣಿಹ ನಿಮಗೆ ತೆಗೆಯಿತು. ಎನ್ನ ನಂಬಿ ಕೆಡಬೇಡ, ಕೆಡಬೇಡ. ನಿಮ್ಮ ಪೂರ್ವಾಶ್ರಯಕ್ಕೆ ನೀವು ಹೋಗಿರೆಲೆ. ಅಜ್ಞಾನತಮಕ್ಕೆ ಜ್ಯೋತಿಃಪ್ರಕಾಶವನುಳ್ಳ ಸಮ್ಯಜ್ಞಾನವೇ ನೀನು ಕೇಳಯ್ಯ. ಆತ್ಮನು ಜ್ಞಾನಸ್ವರೂಪನೆಂದು ವೇದಾಗಮಂಗಳು ಸ್ಮೃತಿ ಸಾರುತ್ತಿವೆ. ನಾನು ಜೀವತ್ವಮಂ ಅಳಿದು ಶರಣತ್ವಮಂ ಕೈವಿಡಿದೆ. ಎನ್ನೊಳಗೆ ನೀನು, ನನೆಯೊಳಗಣ ಪರಿಮಳದಂತೆ ಹುದುಗಿಪ್ಪೆಯಾಗಿ, ನೀನೂ ನಾನೂ, ಗೋಳಕಾಕಾರಸ್ವರೂಪವಾದ ನಿಷ್ಕಲಬ್ರಹ್ಮದಲ್ಲಿ, ಉದಯವಾದ ಸಹೋದರರು. ಎಂಟುಬೀದಿಯ ಪಟ್ಟಣದ ಚೌದಾರಿಯ ಏಕಾಂತವೀಥಿಯ, ಸುವರ್ಣವರ್ಣದ ಸಿಂಹಾಸನದ ಮೇಲಿಪ್ಪ, ಮನೋನಾಥನೆನಗೆ ಕಾಣಿಸಿ, ``ನಿನ್ನ ಶ್ರೀ ಚರಣಮಂ ಎಂದೆಂದೂ ಪೂಜೆಮಾಡುವ ಭೃತ್ಯ'ನೆಂದು, ಭಯಭಕ್ತಿಯಿಂದ ಬಣ್ಣಿಸಿ, ಎನ್ನ ಮಾಯಾಪಾಶಮಂ ಸುಡುವಂತೆ ಛಲವನ್ನುಂಟು ಮಾಡು. ಚಿದಾಕಾಶದಲ್ಲಿ, ಆರು ಮೂರಾಗಿ, ಮೂರು ಒಂದಾಗಿ, ಎರಡುವೀಥಿಯ ಮಾಣಿಕ್ಯಪುರದ ಸಂಗಮಸ್ಥಾನವೆಂಬ, ಅರಮನೆಯಲ್ಲಿ ನೆಲೆಸಿಪ್ಪ ಮಹಾರಾಯನ ಮುಂದೆ, ಎನ್ನನಿಕ್ಕಿ ``ನಿನ್ನ ಆದಿ ಅನಾದಿಯ ಹಳೆಯ' ನೆಂದು ಬಿನ್ನಪಂಗೈದು ಕರುಣಾರಸಮಂ ಬೀರಿಸಿ, ಎನಗೆ ಮುಕ್ತಿರಾಜ್ಯಮಂ ಕೊಡು'ವಂತೆ ಸಂಧಾನಮಂ ಮಾಡು. ಆ ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿಸಿ ಅಭಯ ಹಸ್ತಮಂ ಕೊಡಿಸಿ ಎನ್ನ ಎಂಬತ್ತುನಾಲ್ಕು ಲಕ್ಷ ಭವರಾಟಾಳದ ಋಣವ ತಿದ್ದುವಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎನ್ನಂತರಂಗದಲ್ಲಿ ಕುಮಂತ್ರ ಕುಡಿವರೆದ ಭೇದವ ನಿನ್ನೊಡನೆ ಮರೆಯಿಲ್ಲದೆ ಆಡುತಿಪ್ಪೆನಯ್ಯ ಒಡೆಯನೇ. ಜಾಗ್ರದವಸ್ಥೆಯಲ್ಲಿ ಲೋಕೋಪಚಾರ ಬಿಡದು. ಜಿಹ್ವಾಲಂಪಟತನ ಉಡುಗದು. ಸುಖ ದುಃಖಕ್ಕೆ ಎನ್ನ ಮನ ಮರುಗುತಿರ್ದು ಬಳಿಕ ಎನಗೆ ಇಷ್ಟಲಿಂಗದ ಪೂಜೆಯೆಲ್ಲಿಯದೋ? ಸ್ವಪ್ನಾವಸ್ಥೆಯಲ್ಲಿ ಬ್ರಹ್ಮಾಂಡದೊಳಗುಳ್ಳ ಕಡೆ ಮೊದಲಿಲ್ಲದ ದುರ್ವಿಕಾರ ಸ್ವಪ್ನದಲ್ಲಿ ಹರಿದಾಡುವ ಜೀವಂಗೆ ಪ್ರಾಣಲಿಂಗದ ಪೂಜೆಯೆಲ್ಲಿಯದೋ? ಸುಷುಪ್ತ್ಯವಸ್ಥೆಯಲ್ಲಿ ಲಿಂಗವ ಕೂಡಿ ಮೈಮರೆದಿರದೆ ಕನಸಿನಲ್ಲಿ ಸ್ತ್ರೀಯ ಕೂಡಿ ಇಂದ್ರಿಯಂಗಳ ಬಿಟ್ಟು ಆನಂದಿಸುವ ಕಾಮವಿಕಾರಿಗೆ ಭಾವಲಿಂಗದ ಪೂಜೆಯೆಲ್ಲಿಯದೋ? ಈ ಪ್ರಕಾರದ ದುರ್ಗುಣಂಗಳ ನಾನು ಮರೆಮಾಡಿಕೊಂಡು ಶರಣನೆಂದು ವಚನಂಗಳ ಹಾಡಿದರೆ ತಿಂಗಳ ಬೆಳಕಿನ ಸಿರಿಯಂ ಕಂಡು ನಾಯಿ ಹರುಷಂಗೊಂಡು ಬಳ್ಳಿಟ್ಟು ಬೊಗಳಿದಂತಾಯಿತು. ಅದೇನು ಕಾರಣವೆಂದೊಡೆ ನೀ ಎನ್ನ ಅಂಗದ ಮೇಲಕ್ಕೆ ಬಂದೆ ಎಂಬ ಸಂತೋಷಕ್ಕೆ ಉಬ್ಬಿ ಕೊಬ್ಬಿ ಅಹಂಕರಿಸಿ ಹಾಡಿದೆನಲ್ಲದೆ ನುಡಿವಂತೆ ನಡೆಯಲಿಲ್ಲ ನಡೆದಂತೆ ನುಡಿಯಲಿಲ್ಲ. ಇದು ಕಾರಣ ಎನ್ನ ಮನದ ಕಾಳಿಕೆಯ ಕರುಣದಿಂದ ಕಳೆದು ಅವಸ್ಥಾತ್ರಯಂಗಳಲ್ಲಿ ನಿನ್ನನಪ್ಪಿ ಅಗಲದಿಪ್ಪಂತೆ ಎನ್ನನು ಪರಮಕಾಷಿ*ಯ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎನ್ನ ತಂದೆಯ ಬಸುರಲ್ಲಿ ಬಂದಳೆಮ್ಮವ್ವೆ ಎನ್ನ ತಂಗಿಯರಿಬ್ಬರೂ ಹೆಂಡಿರಾದರೆನಗೆ. ಎನ್ನ ಸತಿಯರು ಎನ್ನ ಮದವಳಗಿತ್ತಿಯ ಮಾಡಿ, ಎಮ್ಮಪ್ಪಗೆ ಮದುವೆಯ ಮಾಡಿದರು. ಎನ್ನ ಗಂಡನ ಮನೆಯೊಡವೆಯನೆನ್ನ ಉಗುರುಕಣ್ಣಿನಲ್ಲೆತ್ತಿ ಒಗತನವ ಮಾಡುವೆನು. ಎಮ್ಮಕ್ಕನ ಕೈಯಿಂದ ಎನ್ನ ಗಂಡನ ಹೆಂಡತಿಯೆನಿಸಿಕೊಂಬೆನು. ಎನ್ನ ಗಂಡ ಆಳಲಿ ಆಳದೆ ಹೋಗಲಿ ಪತಿಭಕ್ತಿಯ ಬಿಡೆ ಕಾಣಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ. ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗಸ್ವರೂಪವಾದ ಘ್ರಾಣ, ಗುರುಲಿಂಗಸ್ವರೂಪವಾದ ಜಿಹ್ವೆ, ಶಿವಲಿಂಗಸ್ವರೂಪವಾದ ನೇತ್ರ, ಜಂಗಮಲಿಂಗಸ್ವರೂಪವಾದ ತ್ವಕ್ಕು, ಪ್ರಸಾದಲಿಂಗಸ್ವರೂಪವಾದ ಶ್ರೋತ್ರ, ಮಹಾಲಿಂಗಸ್ವರೂಪವಾದ ಪ್ರಾಣ, ಪಂಚಬ್ರಹ್ಮ ಸ್ವರೂಪವಾದ ತನು, ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ, ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ, ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ, ಎಂತು ನುಸುಳುವೆನಯ್ಯ?. ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ. ಬೇಗೆವರಿದು ನಿಂದುರಿದೆನಯ್ಯ. ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ. ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ, ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು, ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ. ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ, ಫಲವು ಬೇಡ, ಪದವು ಬೇಡ ನಿಮ್ಮ ಶ್ರೀಪಾದವನೊಡಗೂಡಲೂಬೇಡ, ಎನಗೆ ಪುರುಷಾಕಾರವೂ ಬೇಡವಯ್ಯ. ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಎನ್ನ ಕಾಯ ಪ್ರಸಾದವಾಯಿತ್ತು. ಎನ್ನ ಜೀವ ಪ್ರಸಾದವಾಯಿತ್ತು. ಎನ್ನ ಪ್ರಾಣ ಪ್ರಸಾದವಾಯಿತ್ತು. ಎನ್ನ ಕರಣೇಂದ್ರಿಯಂಗಳೆಲ್ಲವು ಪ್ರಸಾದವಾದುವು ನೋಡಾ. ನೀವೆನ್ನ ಕರಸ್ಥಲದಲ್ಲಿ ಪ್ರಸಾದ ರೂಪಾದಿರಾಗಿ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ