ಅಥವಾ
(6) (4) (1) (0) (1) (0) (0) (0) (8) (1) (0) (0) (1) (0) ಅಂ (1) ಅಃ (1) (10) (0) (0) (0) (0) (0) (0) (0) (0) (0) (0) (0) (0) (0) (0) (2) (0) (1) (0) (6) (2) (0) (2) (3) (7) (0) (0) (0) (2) (1) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಚಾರಲಿಂಗವ ಅಂಗೈಯೊಳಗಳವಡಿಸಿ ಮಜ್ಜನಕ್ಕೆರೆದು ತ್ರಿಪುಂಡ್ರಮಂ ಧರಿಯಿಸಿ ಪುಷ್ಪಜಾತಿಗಳಿಂದರ್ಚಿಸಿ ಪೂಜೆಮಾಡುವ ಕರವು ಆ ಪೂಜೆಗೆ ಮೆಚ್ಚಿ ಪಂಚಸ್ಫರ್ಷನಂಗಳಂ ಮರೆಯಲೊಡನೆ ಆ ಕರದಲ್ಲಿ ಜಂಗಮಲಿಂಗ ನೆಲೆಗೊಂಡಿತ್ತು. ಆ ಲಿಂಗದ ಪ್ರಕಾಶಮಂ ನೋಡುವ ನೇತ್ರಂಗಳು ಆ ಪ್ರಕಾಶಕ್ಕೆ ಮೆಚ್ಚಿ ಪಂಚವರ್ಣಂಗಳಂ ಮರೆಯಲೊಡನೆ ಅ ನೇತ್ರಂಗಳಲ್ಲಿ ಶಿವಲಿಂಗವೆ ನೆಲೆಗೊಂಡಿತ್ತು. ಆ ಲಿಂಗದ ಸದ್ವಾಸನೆಯಂ ವಾಸಿಸುವ ಘ್ರಾಣ ಆ ವಾಸನೆಗೆ ಮೆಚ್ಚಿ ಪಂಚಗಂಧಂಗಳಂ ಮರೆಯಲೊಡನೆ ಆ ಘ್ರಾಣದಲ್ಲಿ ಆಚಾರಲಿಂಗ ನೆಲೆಗೊಂಡಿತ್ತು. ಆ ಲಿಂಗದ ಮಂತ್ರಸ್ವರೂಪವನೆತ್ತಿ ಕೊಂಡಾಡುವ ಜಿಹ್ವೆ ಆ ಮಂತ್ರಕ್ಕೆ ಮೆಚ್ಚಿ ಪಂಚರಸಂಗಳಂ ಮರೆಯಲೊಡನೆ ಆ ಜಿಹ್ವೆಯಲ್ಲಿ ಗುರುಲಿಂಗ ನೆಲೆಗೊಂಡಿತ್ತು. ಆ ಲಿಂಗಮಂ ಮನವೊಲಿದು ಹಾಡುವ ನಾದಮಂ ಕೇಳುವ ಶ್ರೋತ್ರ ಆ ನಾದಕ್ಕೆ ಮೆಚ್ಚಿ ಪಂಚನಾದಂಗಳಂ ಮರೆಯಲೊಡನೆ ಆ ಶ್ರೋತ್ರದಲ್ಲಿ ಪ್ರಸಾದಲಿಂಗ ನೆಲೆಗೊಂಡಿತ್ತು. ಆ ಲಿಂಗವ ನೆನೆವ ಮನ ಆ ನೆನಹಿಂಗೆ ಮೆಚ್ಚಿ ಪಂಚಪರಿಣಾಮಂಗಳಂ ಮರೆಯಲೊಡನೆ ಆ ಮನದಲ್ಲಿ ಮಹಾಲಿಂಗ ನೆಲೆಗೊಂಡಿತ್ತು. ಈ ಷಡಿಂದ್ರಿಯಂಗಳೂ ಲಿಂಗವನಪ್ಪಿ ಅಗಲದ ಕಾರಣ ಆ ಲಿಂಗವೊಲಿದು ಷಡಿಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿ ನೆಲೆಗೊಂಡಿತ್ತು. ಇಂತಪ್ಪ ಇಷ್ಟಲಿಂಗದಲ್ಲಿ ಶರಣಂ ನಿಷ್ಠೆ ನಿಬ್ಬೆರಗಾಗಿ ಧ್ಯಾನಯೋಗಮಂ ಕೈಕೊಂಡು ಷಡುವರ್ಣಮಂ ಮರೆಯಲೊಡನೆ ಆ ಲಿಂಗವೊಲಿದು ಅಂಗವೇದ್ಥಿಸಿ ಜ್ಞಾನಕ್ರೀಗಳಲ್ಲಿ ಷಡ್ವಿಧ ಪ್ರಾಣಲಿಂಗವಾಗಿ ನೆಲೆಗೊಂಡಿತ್ತು. ಆ ಪ್ರಾಣಲಿಂಗಳಂ ಶರಣ ಮಂತ್ರಮಾಲೆಯಂ ಹೃದಯದೊಳಿಂಬಿಟ್ಟು ಮನವೆಂಬರಳ್ದ ತಾವರೆಯಲ್ಲಿ ಜಾಗ್ರತ್ ಸ್ವಪ್ನದಲ್ಲಿ ಪೂಜಿಸುವ ಧಾರಣಯೋಗದೊಳಿರ್ದು ಕ್ರೀಯ ಮರೆಯಲೊಡನೆ ಆ ಲಿಂಗವೊಲಿದು ಮನವೇದ್ಥಿಸಿ ಭಾವಂಗಳಡಗಿ ತ್ರಿವಿಧ ಭಾವಲಿಂಗವಾಗಿ ನೆಲೆಗೊಂಡಿತ್ತು. ಆ ಭಾವಲಿಂಗಗಳ ಶರಣನೊಡೆವೆರೆಯಲೊಡನೆ ಕರ್ಪೂರ ಹೋಗಿ ಉರಿಯ ಹಿಡಿದಂತಾದ ಸಮಾದ್ಥಿಯೋಗದೊಳಿರ್ದು ಜ್ಞಾನವ ಮರೆಯಲೊಡನೆ ಆ ಶರಣಂಗೆ ಆ ಲಿಂಗವೊಲಿದು ಸರ್ವಾಂಗಲಿಂಗವಾಯಿತು. ಆತನೇ ಪರಬ್ರಹ್ಮ. ಇದನರಿಯದೆ ಜ್ಞಾನಕ್ರೀಗಳಿಂದಾಚರಿಸಿ ಲಿಂಗಾಂಗ ಸಂಯೋಗವಾಗದೆ ಕೆರಹಿನಟ್ಟೆಗೆ ನಾಯಿ ತಲೆದೂಗುವಂತೆ ತಮ್ಮ ಅರಿವಿಂಗೆ ತಾವೇ ತಲೆದೂಗಿ `ಅಹಂ ಬ್ರಹ್ಮ'ವೆಂಬ ಚೌರಾಶಿ ಹೊಲೆಯರ ಎನಗೆ ತೋರದಿರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ ಮುನ್ನ ನೀನು ಶಾಖೆದೋರುವಲ್ಲಿ ನಿನ್ನೊಳಂಕುರಿಸಿ ನಾನು ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ ಗರ್ಭದಿಂದ ಬಂದು ಬಂದು ಒಮ್ಮೆ ಮಾನವನಪ್ಪಂದಿಗೆ ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ. ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ. ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ ಶರಣವೆಣ್ಣಾಗಿ ಹುಟ್ಟಿದೆನಯ್ಯ. ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು. ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು. ಎನಗೆ ನಿನ್ನೊಳು ನುಡಿಯಬೇಕೆಂಬ ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು. ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು. ಭಕ್ತಿಯೆಂಬ ವಿರಹಾಗ್ನಿ ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು ನಿಂತಲ್ಲಿ ನಿಲಲೀಸದಯ್ಯ. ಕುಳಿತಲ್ಲಿ ಕುಳ್ಳಿರಲೀಸದಯ್ಯ. ಮನ ನಿಂದಲ್ಲಿ ಮನೋಹರವಪ್ಪುದಯ್ಯ. ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ. ನಾನು ಧರೆಯೊಳುಳಿವುದರಿದು. ಪ್ರೇಮದಿಂ ಬಂದು ಕಣ್ದುಂಬಿ ನೋಡಿ ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ ಲಲ್ಲೆವಾತಿಂ ಗಲ್ಲವ ಪಿಡಿದು ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ ಕೂಡೆನ್ನ ಪ್ರಾಣೇಶನೇ. ಕೂಡಿದಿರ್ದೊಡೆ ಗಲ್ಲವ ಪಿಡಿ. ಪಿಡಿಯದಿರ್ದೊಡೆ ಬೊಟ್ಟಾಡು. ಬೊಟ್ಟಾಡದಿರ್ದೊಡೆ ಆಲಂಗಿಸು. ಆಲಂಗಿಸದಿರ್ದೊಡೆ ಕೈವಿಡಿ. ಕೈವಿಡಿಯದಿರ್ದೊಡೆ ಮಾತಾಡು. ಮಾತಾಡದಿರ್ದೊಡೆ ನೋಡು. ನೋಡದಿರ್ದೊಡೆ ಬಾ. ಬಾರದಿರ್ದೊಡೆ ಪ್ರಮಥಗಣಂಗಳೊಡನೆನ್ನವಳೆಂದು ನುಡಿ. ನುಡಿಯದಿರ್ದೊಡೆ ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು. ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು. ಕರ್ಮ ಕಾಂತಿಯಪ್ಪುದು. ಕಾಮ ಕೈದುಗೊಂಬ, ಕಾಲ ಕಲಿಯಪ್ಪ. ಭವಕ್ಕೆ ಬಲ್ಮೆ ದೊರೆವುದು. ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ, ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ. ಹೊಗಲಂಜುವೆನಯ್ಯ. ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ. ಇಂತಿವಂ ತಿಳಿದು ನಿನ್ನ ಮನದೊಳು ನನ್ನವಳೆಂದರೆ ದಿವಾರಾತ್ರೆಯುಳ್ಳನ್ನಬರ ಎನ್ನ ಮನ ಜಿಹ್ವೆ ನೇತ್ರಂಗಳಿಗೆ ಬಂಧನಗಳೆಂಬಿವು ಮುಂಗೆಡುವುವಯ್ಯ. ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು ತಳಿರಾಗಿ ಹೂ ಮಿಡಿಗೊಂಬುದಯ್ಯ. ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ. ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ. ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ. ಶತ್ರುಗಳೆನಗೆ ಮಿತ್ರರಪ್ಪರಯ್ಯ. ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು. ಕಾಮನ ಕೈದು ಖಂಡಿಸುವುದು. ಕರ್ಮದ ಕಾಂತಿ ಕರಗುವುದು. ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ. ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ. ನಿನಗೆ ಮೆಚ್ಚಿದೆನಯ್ಯ. ನಿನ್ನ ಮೆಚ್ಚಿಸಿಕೊಳ್ಳಲರಿಯದ ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು. ಎನ್ನವಸ್ಥೆಯಂ ಲಾಲಿಸು, ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು. ಎನ್ನ ಬಿನ್ನಪಮಂ ಲಾಲಿಸು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಆಕಾಶದಿಂದಲಾಯಿತ್ತು ನಿರಾಕಾರ. ಆ ನಿರಾಕಾರ ಚಿದಕಾಶದ ಮೇಲೆ ನಿಂದಿತ್ತು. ಆ ನಿರಾಕಾರದಿಂದಲಾಯಿತ್ತು ಭಾವ. ಆ ಭಾವ ಕರಣದ ಮೇಲೆ ನಿಂದಿತ್ತು. ಆ ಭಾವದಿಂದಲಾಯಿತ್ತು ಮನ. ಆ ಮನವು ಸೂಕ್ಷ ್ಮದ ಮೇಲೆ ನಿಂದಿತ್ತು. ಆ ಮನದಿಂದಲಾಯಿತ್ತು ತನು. ಆ ತನು ಸ್ಥೂಲದ ಮೇಲೆ ನಿಂದಿತ್ತು. ಆ ತನುವು ಮನವ ಕೂಡಿದಲ್ಲಿಯೇ ತನು ನಷ್ಟವಾಯಿತ್ತು. ಮನುವು ಭಾವವ ಕೂಡಿದಲ್ಲಿಯೇ ಮನ ನಷ್ಟವಾಯಿತ್ತು. ಭಾವವು ನಿರಾಕಾರವ ಕೂಡಿದಲ್ಲಿಯೇ ಭಾವ ನಷ್ಟವಾಯಿತ್ತು. ಇಂತೀ ತ್ರಿವಿಧ ನಷ್ಟವಾದಲ್ಲಿಯೇ ಶರಣನ ಹುಟ್ಟು ನಷ್ಟವಾಯಿತ್ತು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಆರುಬಣ್ಣದ ಹದಿನೈದು ದೇಹದ ಕೋಡಗ, ಒಂದು ರತ್ನವ ಮೆಟ್ಟಿಕೊಂಡು, ಒಂದು ರತ್ನವ ಹಿಡಿದುಕೊಂಡು, ಮತ್ತೊಂದು ರತ್ನವ ಮರೆಮಾಡಿಕೊಂಡು, ಮೇರುಪರ್ವತವ ಶಿಖರವನೇರಿತು ನೋಡ. ಅದು ತಾನಿರ್ದ ಪಂಚವರ್ಣದ ಪಟ್ಟಣವ ಹಾಳುಮಾಡಿ, ಆ ಪಟ್ಟಣದ ಪ್ರಜೆಪರಿವಾರಂಗಳ ಕೈಕಾಲುಗಳಂ ಕೊಯ್ದು, ಮಂತ್ರಿ ನಾಲ್ವರ ಕಡಿಖಂಡವಂ ಮಾಡಿ, ಪ್ರಾಣಸ್ನೇಹಿತರಪ್ಪ ಸಂಗಾತಿಗಳೈವರ ಕಣ್ಣ ಕಳೆದು, ಒಡಹುಟ್ಟಿದಿಬ್ಬರ ತಲೆಯೊಡೆಯನಿಕ್ಕಿ, ತನ್ನಿಂದ ತಾನೇ ಸತ್ತೀತು. ಭಕ್ತಿಯೆಂಬ ಬಿಲ್ಲ ಹಿಡಿದು, ನಿರಹಂಕಾರವೆಂಬ ತಿರುವನೇರಿಸಿ, ಉರಿಯ ಬಣ್ಣದಲೆಚ್ಚು ಮರ್ಕಟನ ಕೊಂದು, ಆ ರತ್ನಂಗಳಂ ಕೊಂಡು, ಸೂರೆಯ ಬಿಟ್ಟಾತನೀಗ ಲಿಂಗಕ್ಕೆ ಸಲೆ ಸಂದ ಶರಣನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ