ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಂಗೆ ಮೂರು ಗುಣ, ಮಾಹೇಶ್ವರಂಗೆ ಆರು ಗುಣ, ಪ್ರಸಾದಿಗೆ ಎಂಟು ಗುಣ, ಪ್ರಾಣಲಿಂಗಿಗೆ ಹತ್ತು ಗುಣ, ಶರಣಂಗೆ ಹದಿನಾರು ಗುಣ, ಐಕ್ಯಂಗೆ ಐವತ್ತೆರಡು (ಗುಣ). ಸರನಾದು ಭೇದ ನಿಂದಲ್ಲಿ ಒಂದೆ ಗುಣ ಸಂದಿತ್ತು. ಇದು ಕ್ರಿಯಾಸ್ಥಲ ನಿರ್ವಾಹ. ಸಂಗನ ಬಸವಣ್ಣನ ಆದಿ, ಚನ್ನಬಸವಣ್ಣನ ಅನಾದಿ ಶರಣ ಸಂತತಿಯ ಸಂಬಂಧ ಮಾರ್ಗ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 64 ||
--------------
ದಾಸೋಹದ ಸಂಗಣ್ಣ
ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು, ಪ್ರಸಾದಿಸ್ಥಲ ಐದು, ಪ್ರಾಣಲಿಂಗಿಸ್ಥಲ ಆರು, ಶರಣಸ್ಥಲವೆರಡು, ಐಕ್ಯಸ್ಥಲ ಒಂದು, ಭಕ್ತಂಗೆ ಮೂರು ಗೊತ್ತು, ಮಾಹೇಶ್ವರಂಗೆ ನಾಲ್ಕು ಗೊತ್ತು, ಪ್ರಸಾದಿಗೆ ಐದು ಗೊತ್ತು, ಪ್ರಾಣಲಿಂಗಿಗೆ ಆರು ಗೊತ್ತು, ಶರಣಂಗೆ ಎರಡು ಗೊತ್ತು, ಐಕ್ಯಂಗೆ ಒಂದು ಗೊತ್ತಾಗಿ ಸಂಬಂಧಿಸಿ ಷಡುಸ್ಥಲ ರೂಪಾದಲ್ಲಿ ಒಂದು ಸ್ಥಲಕ್ಕೆ ಆರು ಸ್ಥಲ ಹೊರೆ ಹೊರೆಯಾಗಿ ಮಿಶ್ರವಾಗಿ ಸ್ಥಲಂಗಳು ಚರಿಸುವಲ್ಲಿ ನೂರೊಂದು ಸ್ಥಲಂಗಳಲ್ಲಿ ಆರೋಪಿಸಿ ನಿಂದುದು ಮೂರೆ ಭಕ್ತಿಸ್ಥಲ, ಸಂದುದು ನಾಲ್ಕೆ ಮಾಹೇಶ್ವರಸ್ಥಲ, ಕೊಂಡುದು ಐದೆ ಪ್ರಸಾದಿಸ್ಥಲ, ಗಮನವಿಲ್ಲದೆ ನಿಜದಲ್ಲಿ ನಿಂದುದಾರೆ ಪ್ರಾಲಿಂಗಿಸ್ಥಲ, ಸ್ತುತಿ-ನಿಂದೆಗೆಡೆಯಿಲ್ಲದೆ ನಿಂದುದೆರಡೆ ಶರಣಸ್ಥಲ, ನಿರ್ನಾಮವಾಗಿ ಭಾವಕ್ಕೆ ಬ್ರಮೆಯಿಲ್ಲದುದೊಂದೆ ಐಕ್ಯಸ್ಥಲ. ಇಂತೀ ಭಿನ್ನ ವರ್ಣಂಗಳಲ್ಲಿ ವರ್ಣಸ್ವರೂಪನಾದೆಯಲ್ಲಾ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 67 ||
--------------
ದಾಸೋಹದ ಸಂಗಣ್ಣ
ಭಕ್ತನ ಕ್ರೀ, ಮಾಹೇಶ್ವರನ ನಿಶ್ಚಯ, ಪ್ರಸಾದಿಯ ನಿಷೆ*, ಪ್ರಾಣಲಿಂಗಿಯ ಯೋಗ, ಶರಣನ ನಿಬ್ಬೆರಗು, ಐಕ್ಯದ ನಿರ್ಲೇಪ. ಇಂತೀ ಆರುಸ್ಥಲವನವಗವಿಸಿ ಕಲೆದೋರದೆ ನಿಂದುದು ವಿರಕ್ತನ ಏಕಸ್ಥಲದಾಟ, ನಿಜತತ್ವದ ಕೂಟ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 65 ||
--------------
ದಾಸೋಹದ ಸಂಗಣ್ಣ
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ; ತಲೆವಿಡಿಯಿಲ್ಲ ಪ್ರಾಣಲಿಂಗಿ ಶರಣ ಐಕ್ಯ ಇಂತೀ ತ್ರಿವಿಧ ಒಂದೇ ಬೀಜ; ತಲೆವಿಡಿಯಿಲ್ಲ್ಲ್ಲ. ವಸ್ತು-ವಸ್ತುಕದಂತೆ, ಶಿಲೆ-ಕಾಂತಿಯಂತೆ, ಕುಸುಮ-ಗಂಧದಂತೆ, ಪತಿ-ಸತಿಯಂತೆ ಭಕ್ತಿ ಘಟ; ಅರಿವೆ ವಸ್ತುಸ್ವರೂಪವಾಗಿ ಷಡಸ್ಥಲವನವಗವಿಸಿ ನಿಂದ ಸ್ವರೂಪ; ಬಸವಣ್ಣ ಚನ್ನಬಸವಣ್ಣ ಶರಣತತಿ ಮುಂತಾದ ಸಿದ್ಧಾಂತ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 66 ||
--------------
ದಾಸೋಹದ ಸಂಗಣ್ಣ
ಭಕ್ತಸ್ಥಲವ ತಾಳ್ದ ಮತ್ತೆ ತ್ರಿವಿಧದಲ್ಲಿ ಆವ ಸೋಂಕು ಬಂದಡೂ ಗುರುಚರಪರದಲ್ಲಿ ಶ್ರುತದಿಂದ ಕೇಳಿ ದೃಷ್ಟದಿಂದ ಕಂಡು, ಅನುಮಾನದಿಂದ ವಿಚಾರಿಸಿಕೊಂಡರಿದಡೂ ವೃಶ್ಚಿಕದಿಂದ ನೊಂದ ಚೋರನಂತೆ ಬಾಯಿ ಮುಚ್ಚಿದಂತಿರಬೇಕು. ಮಾಹೇಶ್ವರಸ್ಥಲವ ತಾಳ್ದಲ್ಲಿ ಆವ ವ್ರತಹಿಡಿದಡೂ ತಪ್ಪಿದವರ ಕಂಡಲ್ಲಿ, ಗುರುಲಿಂಗಜಂಗಮದ ನಿಂದೆಯ ಕೇಳಿ ಕಂಡಲ್ಲಿ, ತನ್ನ ಅನುವಿಂಗೆ ಬಾರದೆ ಆಚಾರಕ್ಕೆ ಓಸರಿಸಿದವರ ಕಂಡಲ್ಲಿ, ತನ್ನ ಸ್ಥಲಕ್ಕೆ ಊಣಯವೆಂದು ಕೇಳಿದಲ್ಲಿ ಕೇಳಿದ ತೆರನ ತನ್ನ ತಾನರಿದಲ್ಲಿ, ಇದಿರಿಗೆ ಆಜ್ಞೆ ತನಗೆ ಸಾವಧಾನ ಕಡೆಯೆಂಬುದನರಿತುದು ವಿಶ್ವಲಿಂಗ ಮಾಹೇಶ್ವರಸ್ಥಲ. ಪ್ರಸಾದಿಸ್ಥಲವ ತಾಳ್ದಲ್ಲಿ, ಶುದ್ಧವೆನ್ನದೆ ಸಿದ್ಧವೆನ್ನದೆ ಪ್ರಸಿದ್ಧವೆನ್ನದೆ ಉಚಿತದಲ್ಲಿ ಚಿಕಿತ್ಸೆ ಜುಗುಪ್ಸೆಯೆನ್ನದೆ ಕಾಲರುದ್ರನಂತೆ ದಾವಾನಳನಂತೆ ಪೂರ್ಣಚಂದ್ರ ಮಹಾರ್ಣಸಿಂಧುವಿನ ತೆರದಂತೆ ನೂತನ ಇನನ ಹೋದ ಕಳೆಯಂತೆ ಬಂದುದ ನಿಂದುದ ಬಹುದ ಸಂದಿತ್ತು. ಸಾಕುಬೇಕೆನ್ನದೆ ಕರುಣದಿಂದ ಬಂದಡೆ ಕರುಣದಿಂದ ಸಾಕೆಂದು ನಿಂದಡೆ, ಪ್ರಸಾದವ ಕೊಂಡಲ್ಲಿ ಉಕ್ಕಳ ಉಬ್ಬಸ ತಬ್ಬಿಬ್ಬು ಹೋಗಿ, ವೃದ್ಧಿಗೆ ಎಡೆಯಿಲ್ಲದೆ, ಭಾಗೀರಥಿಯಂತೆ ತುಂಬಿತ್ತೆಂದು ಸೂಸದೆ ಎಲ್ಲಾ ಎಂದು ಹಿಂಗದೆ ಎಂದಿನಂತೆ ತುಂಬಿದಂತೆ ಇಪ್ಪ ನಿಜಪ್ರಸಾದಿಯ ನಿಜದಂಗಸ್ಥಲ. ಪ್ರಾಣಲಿಂಗಿಸ್ಥಲವ ತಾಳ್ದಲ್ಲಿ, ಬಿತ್ತುಳಿದ ಕಾರ್ಪಾಸದ ಹಿಕ್ಕಿದ ಮಧ್ಯದಲ್ಲಿ ಕಿಚ್ಚು ಮುಟ್ಟದಂತೆ ಪೃಥ್ವಿಯ ಪಿಪೀಲಿಕ ಮೃತ್ತಿಕೆಯ ಮುಟ್ಟಲಿಕ್ಕಾಗಿ, ಅಪ್ಪು ಒಡಗೂಡಿಯೆ ತಿಟ್ಟ ನಿಂದಂತೆ, ಕರ್ಪೂರದ ವೃಕ್ಷಕ್ಕೆ ಬುಡದಿಂದ ಕಿಚ್ಚು ಹತ್ತಿದಂತೆ, ಮಧುಮಕ್ಷಿಕದ ಚಿತ್ತವಿದ್ದಂತೆ, ಆಯುಃಕಾಂತ ಲೋಹಕ್ಕೆ ಆತ್ಮಭಾವವಿದ್ದಂತೆ, ಕೂರ್ಮನ ಶಿಶುವಿನ ಸ್ನೇಹವಿದ್ದಂತೆ, ಈ ಗುಣ ಸದ್ಭಾವದಲ್ಲಿ ಪ್ರಾಣಲಿಂಗಿಸ್ಥಲ. ಶರಣಸ್ಥಲದ ತಾಳ್ದಲ್ಲಿ, ಮದಗಜದಂತೆ ಬಿದಿರಿನ ಪಟುಭಟನಂತೆ ಮಸಗಿದ ಮಾರುತನಂತೆ ಘನಸಿಂಧು ಎಸಗಿದ ಉದ್ಭವದಂತೆ ಕಾಲಸಂಹಾರ ಲೀಲೆಯಾದಂತೆ ತಾನಿರೆಂಬ ಭಾವವ ಮರೆದು ನಿಶ್ಚಲ ನಿಜವಾದುದು ಶರಣಸ್ಥಲ. ಐಕ್ಯಸ್ಥಲವ ತಾಳ್ದಲ್ಲಿ, ಶಕ್ತಿಯಲ್ಲಿ ನಿಂದ ಅಪ್ಪುವಿನಂತೆ, ಬಿಂದುವನೊಳಕೊಂಡ ರಜ್ಜುವಿನಂತೆ ರಜ್ಜುವನೊಳಕೊಂಡ ಋತುಕಾಲದ ಸುರಂಗದ ನಿರಂಗದಂತೆ. ಸುಗಂಧವ ಕೊಂಡೊಯ್ದ ಸಂಚಾರ ಹೋಗ ಹೋಗಲಿಕ್ಕಾಗಿ ಸುಗಂಧದಂಗವಡಗಿದಂತೆ ವಿದ್ಯುಲ್ಲತೆಯ ಕುಡಿವೆಳಗಿನಂತೆ ನಿರವಯದ ಗರ್ಜನೆಯಂತೆ, ವಿಷರುಹದ ಭದ್ರದ ಸುವರ್ಣದ ನಿರ್ಧರದ ನಿರವಯದಂತೆ, ಅಂಬುಧಿಯೊಳಗಡಗಿದ ಸೂಕ್ಷ ್ಮ ಸಮಸಂಗದ ಘಟದಂತೆ, ಮಂಜಿನಪದ ಬಿಸಿಲಂಗದ ನಾಮದಲ್ಲಿ ಇಂಗಿ ಹೋದಂತೆ, ಈ ನಿರಂಗ ನಿಶ್ಚಯವಾದಲ್ಲಿ ಐಕ್ಯಸ್ಥಲ. ಇಂತೀ ಆರುಸ್ಥಲವನರಿದು ಮೂರುಸ್ಥಲದಲ್ಲಿ ನಿಂದು, ಉಭಯಸ್ಥಲ ಕೂಡಿ ಎರಡಳಿದ ಉಳುಮೆ ಪರಿಪೂರ್ಣವಸ್ತು ಬಂಧಮೋಕ್ಷ ಕರ್ಮಂಗಳಿಂದತ್ತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 68 ||
--------------
ದಾಸೋಹದ ಸಂಗಣ್ಣ