ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಕ್ಷೆ ಭಕ್ತನ ಸೋಂಕು. ಮುಖಸಜ್ಜೆ ಮಾಹೇಶ್ವರನ ಸೋಂಕು. ಕರಸ್ಥಲ ಪ್ರಾಣಲಿಂಗಿಯ ಸೋಂಕು. ಉತ್ತಮಾಂಗ ಶರಣನ ಸೋಂಕು. ಅಮಳೋಕ್ಯ ಐಕ್ಯನ ಸೋಂಕು. ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ, ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ ಸನ್ನದ್ಧಲಿಂಗ, ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ ಪರಿಪೂರ್ಣಲಿಂಗ ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ ಭೇದ. ಇಂತೀ ಸ್ಥಲವಿವರ ಕೂಟಸಂಬಂಧ. ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ, ಹಲವು ಹೊಲಬಿನ ಪಥದಲ್ಲಿ ಬಂದಡೂ ಪಥ ಹಲವಲ್ಲದೆ ನಗರಕ್ಕೆ ಒಂದೆ ಒಲಬು. ಇಂತೀ ಸ್ಥಲವಸ್ತುನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಾಲು ಮೂರು, ಬಸುರು ನಾಲ್ಕು, ಕೈ ಐದು, ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು ಮೂವತ್ತೆರಡು. ಇಂತೀ ಪಿಂಡಕ್ಕೆ ಐವತ್ತೊಂದು ಕಳೆ. ಆ ಜೀವಕ್ಕೆ ಪರಮನೊಂದೆ ಕಳೆ. ಈ ಗುಣ ಜಾÕನಪಿಂಡದ ಭೇದ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಂಡ ಮತ್ತೆ ಕಂಡುದ ಕಾಣುವುದಕ್ಕೆ ಮುನ್ನವೇ ಕಾಣದುದ ಉಭಯ ದೃಷ್ಟವ ಕಡೆಗಾಣಿಸಿ ಕಂಡುದ ಕಾಣದಲ್ಲಿ ಎಯ್ದಿಸಿ ಕಾಣದುದ ಕಂಡಲ್ಲಿ ನಿಕ್ಷೇಪಿಸಿ ಅದು ಉರಿ ಕರ್ಪುರದ ಇರವಿನಂತೆ ಆದುದು ಇಷ್ಟಲಿಂಗ ಆತ್ಮದೃಷ್ಟಕೂಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಣ್ಣಿನಿಂದ ನಡೆದು, ಕಾಲಲ್ಲಿ ಮುಟ್ಟಿ ಕಂಡು ನಾಸಿಕದ ಓಹರಿಯಲ್ಲಿ ದೇಶಿಕನಾಗಿ, ಕರ್ಣದ ನಾದದಲ್ಲಿ ಗರ್ಭವುದಿಸಿ, ನಾಲಗೆಯ ತೊಟ್ಟಿಲಲ್ಲಿ ಮರೆದೊರಗಿ ಅರಿವುತ್ತ ಕರದ ಕಮ್ಮಟದಲ್ಲಿ ಬೆಳೆವುತ್ತ ನಲಿವುತ್ತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕುಂಭದಲ್ಲಿ ಬೆಂದ ಅಶನಕ್ಕೆ ಒಂದಗುಳಲ್ಲದೆ ಹಿಂಗಿ ಹಿಂಗಿ ಹಿಸುಕಲುಂಟೆ? ಗುರುತಪ್ಪುಕನ ಲಿಂಗಬಾಹ್ಯನ ಜಂಗಮನಿಂದಕನ ಆಚಾರಭ್ರಷ್ಟನ ಜ್ಞಾನಹೀನನ ಅರಿತು ಕಂಡು ಕೂಡಿದಡೆ, ತನ್ನವನೆಂದು ಅಂಗೀಕರಿಸಿದಡೆ, ಖಂಡವ ಬಿಟ್ಟು ಮತ್ಸ ್ಯಕ್ಕೆ ಹರಿದ ಜಂಬುಕನಂತೆ ಆಗದೆ? ಸದಾಚಾರದಲ್ಲಿ ಸಂದಿರಬೇಕು. ಕಟ್ಟಾಚಾರದಲ್ಲಿ ನಿಂದಿರಬೇಕು. ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕ್ರಿಯಾಶಕ್ತಿಗೆ ಫಟ ಕ್ರೀಪತಿಯಾಗಿ ಇಚ್ಚಾಶಕ್ತಿಗೆ ಆತ್ಮ ಸಂಬಂಧ ಪತಿಯಾಗಿ ಜ್ಞಾನಶಕ್ತಿಗೆ ಚಿದಾದಿತ್ಯ ಚಿತ್ಪ್ರಕಾಶ ಪತಿಯಾಗಿ ಇಂತೀ ತ್ರಿವಿಧ ಶಕ್ತಿಗೆ ಅವರವರ ತದ್ಭಾವಕ್ಕೆ ಭಾವಾಜ್ಞನಾದೆಯಲ್ಲಾ ಭಕ್ತಿ ಕಾರಣವಾಗಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮದುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಂಡುದ ಬಿಟ್ಟು ಕಾಣದುದ ಕಂಡೆಹೆನೆಂದಡೆ ಅಂಡ ಪಿಂಡಕ್ಕೆ ಹೊರಗಾದವಂಗಲ್ಲದೆ ಸಾಧ್ಯವಲ್ಲ ಅದು ಅಣೋರಣಿಯೊಳಗಣ ಮಹಾರೇಣು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ ಮಾತುಳಂಗ ಮದುಕೇಶ್ವರನು.
--------------
ದಾಸೋಹದ ಸಂಗಣ್ಣ
ಕರಣಂಗಳ ನಿವೃತ್ತಿಯ ಮಾಡಿ ಲಿಂಗವ ಕಂಡೆಹೆನೆಂಬಲ್ಲಿ ಮುಂದೆ ಅರಿದು ಕಾಣಿಸಿಕೊಂಬ ಕುರುಹು ಅದೆಂತುಟಯ್ಯಾ? ಆ ಕರಣವೆ ಮೊದಲು ಆ ಕುರುಹು ಹಿಂಗೆ ಆ ಕುರುಹಿಂದೆ ಇಂದ್ರಿಯಂಗಳು ಸಲೆಸಂದು, ನೀರನಟ್ಟಿ ಮುಂದಳ ಸಾರ ಸವಿಯ ಫಲ ಭೋಗಂಗಳಬೆಳವಂತೆ, ಇದು ಲಿಂಗವ್ಯವಧಾನಿಯ ಸಂಬಂಧ, ಇಂದ್ರಿಯ ಲಿಂಗ ಮುಖಂಗಳಿಂದ ಲಿಂಗ ಇಂದ್ರಿಯ ಮುಖದಿಂದ. ಗಂಧ ಕುಸುಮದಂತೆ ಇಂದ್ರಿಯ ಕುರುಹಿನ ಭೇದ. ಈ ದ್ವಂದ್ವ ಉಳ್ಳನ್ನಕ್ಕ ದೃಕ್ಕಿಂಗೆ ದೃಷ್ಟಿಯಿಂದ ಕಾಣಿಸಿಕೊಂಬಂತೆ ಅರಿವು ಕುರುಹಿನ ಭೇದ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಂಡಡೇನು ನುಡಿ ಅಡಗಿದ ಮತ್ತೆ ವಾಚಾರಚನೆಯನರಿಯಬಹುದೆ? ಚಾ ಕರೆದಡೇನು, ಅನ್ಯರ ಮಾತ ಕೇಳದ ಮತ್ತೆ? ಇಂತೀ ಕ್ರೀಯಲ್ಲಿ ವಸ್ತುಭಾವದಲ್ಲಿ ನಿಶ್ಚಯ ಉಭಯಸ್ಥಲ ಪರಿಪೂರ್ಣ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಾಯದ ಗುಣವನರಿಯದೆ ಕರ್ಮಯೋಗವ ಮಾಡಬಹುದೆ? ಕರ್ಮದ ಗುಣವನರಿಯದೆ ಆತ್ಮಯೋಗವ ಮಾಡಬಹುದೆ? ಆತ್ಮನ ಗುಣವನರಿಯದೆ ವರ್ಮಯೋಗವ ಕಾಣಬಹುದೆ? ನೀರಿನಿಂದಲಾದ ಕೆಸರ ನೀರಿಂದಲೆ ತೊಳೆವಂತೆ, ಮುಳ್ಳು ಮುಳ್ಳಿನಿಂದವೆ ಕಳೆವಂತೆ, ಕರ್ಮದಿಂದ ಸತ್ಕರ್ಮ ಮರ್ಮದಿಂದ ನಿಜಮರ್ಮ ಸೂಜಿಯ ಮೊನೆಯ ದಾರದಂತೆ ಇದು ಲಿಂಗ ಒಡಗೂಡಿದ ಕ್ರಿಯಾಪಥಯೋಗ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಾಲಿಗೆ ಕಣ್ಣು ಹುಟ್ಟಿ ಬಾಯಿ ಬಸುರಾಗಿ ಕಿವಿಯಲ್ಲಿ ಹುಟ್ಟಿ ಕೈಯಲ್ಲಿ ಬೆಳವುತ್ತಿದೆ ನೋಡಾ ಆ ಶಿಶು! ಉ ಎಂದಲ್ಲಿ ಉಪಮೆಗೆ ಬಾರದು, ಉಗ್ಗೆಂದಲ್ಲಿ ಹೊಂದದು ಜಗವ. ಅಂಬಳಿಕ್ಕುವುದಕ್ಕೆ ಮೊದಲೆ ಕಂಬಳಿಯ ಮುಸುಕಿಟ್ಟು ಈ ತ್ರಯದ ಬೆಂಬಳಿಯಲ್ಲಿಯೆ ಲೀಯ. ಇದು ಜ್ಞಾನಪಿಂಡೈಕ್ಯ. ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕುಸುಮ ಕ್ರೀ ಗಂಧ ನಿಃಕ್ರೀಯೆಂದಲ್ಲಿ ಕುಸುಮವನಗಲಲಿಕ್ಕಾಗಿ ಒಡಗೂಡಿದ ಗಂಧ ಹಸುಕಾಗದೆ? ಗಂಧ ಸ್ವಯಂಭುವಾದಡೆ ಕುಸುಮವ ಹಿಸುಕಿದಲ್ಲಿಯೇ ಒಡಲುಗೊಂಡುದು ನೊಂದಿತ್ತೆಂದು ತಾ ಸ್ವಯವಾಗಿ ಎಂದಿನಂತಿದ್ದಿತ್ತೆ? ಇದು ಕ್ರೀಜ್ಞಾನ ಭೇಧ, ಸ್ವಾನುಭಾವ ಶುದ್ಧ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ