ಅಥವಾ
(8) (4) (2) (1) (2) (0) (0) (0) (1) (1) (0) (0) (0) (0) ಅಂ (1) ಅಃ (1) (12) (0) (5) (0) (0) (0) (0) (2) (0) (0) (0) (0) (0) (0) (0) (9) (0) (3) (1) (3) (7) (0) (3) (5) (10) (1) (0) (0) (4) (4) (2) (1) (8) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಹಾ ಆಶ್ಚರಿಯವೆಂಬುದಕ್ಕೆ ಮುನ್ನವೆ, ಹೋ ಹೋ ಹೋಯಿತ್ತೆಂಬುದಕ್ಕೆ ಮುನ್ನವೆ, ನಿಜವಸ್ತುವಿನ ಠಾವನರಿದು ವ್ಯವಧಾನದಿಂದ ಸಾವಧಾನ ಸಂಬಂಧಿ ತಾನೆ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಆರುಸ್ಥಲ ವರ್ಣಿಸುವಲ್ಲಿ ಭಕ್ತಂಗೆ ಮಾಹೇಶ್ವರಂಗೆ ಪ್ರಸಾದಿಗೆ ಪ್ರಾಣಲಿಂಗಿಗೆ ಶರಣಐಕ್ಯಂಗೆ. ಸ್ಥಲವಾರು ಲಿಂಗವೊಂದೆ; ವರ್ಣವಾರು ಪಟವೊಂದೆ; ಅಕ್ಷರವಾರು ಬೀಜವೊಂದೆ; ದಳವಾರು ಆತ್ಮವೊಂದೆ. ಇಂತೀ ಭೇದಂಗಳು ಭಿನ್ನವಾಗಿ; ನಿಚ್ಚಣಿಗೆಯ ಮೆಟ್ಟಿನಂತೆ, ಮೊದಲು ತುದಿಯಾದಿಯಾಗಿ ತುದಿಕಡೆಯಾದಿಯಾಗಿ ಎಡೆತಾಕುವ ತೆರದಂತೆ, ಸ್ಥಲವೆರಡು ಆಚರಣೆ ನಾಲ್ಕು. ಇಂತೀ ಭೇದವಾರರಲ್ಲಿ ಷಡುಸ್ಥಲ ಸಂದು, ಸಂಗನ ಬಸವಣ್ಣ ಚನ್ನಬಸವಣ್ಣನಿಂದ ಪ್ರವಾಹವಾಗಿ ಭಕ್ತಿ ರೂಪಾಯಿತ್ತು. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಆತ್ಮನು ಘಟದಲ್ಲಿದ್ದ ಸೂತ್ರವ ಯೋಗಿಗಳು ಭೇದಿಸಿ ಕಂಡು ಧ್ಯಾನ ಧಾರಣ ಸಮಾಧಿಯಿಂದ ಆತ್ಮನ ಕಟ್ಟುವಡೆದನೆಂದು ನುಡಿದ ದಿಟ್ಟರ ನೋಡಾ. ಆತ್ಮ ಕಟ್ಟುವಡೆದ ಮತ್ತೆ ನಿಧಾನಿಸುವುದೇನು ಧಾರಣದಲ್ಲಿ? ಎಡೆ ತಾಕುವದೇನು ಸಮಾಧಿಯಲ್ಲಿ? ಸಮಾಧಾನದಿಂದ ಸಮಾಧಿಯಲ್ಲಿಪ್ಪುದೇನು ಎಂಬುದ ತಾನರಿತಲ್ಲಿ ಯೋನಿಯ ಯೋಗವೆನಲೇತಕ್ಕೆ? ಈಡಾ ಪಿಂಗಳವೆಂಬ ಎರಡು ದಾರಿಯಲ್ಲಿ ಸುಷುಮ್ನಾನಾಳಕ್ಕೆ ಏರಿದ ಮತ್ತೆ ಆತ್ಮನು ಮತ್ತೆ ಮತ್ತೆ ನಾಡಿನಾಡಿಗಳಲ್ಲಿ ದ್ವಾರದ್ವಾರಂಗಳಲ್ಲಿ ಭೇದಿಸಿ ವೇದಿಸಲೇತಕ್ಕೆ? ಬೀಜದ ತಿರುಳು ಸತ್ತ ಮತ್ತೆ ಎಯ್ದೆ ನೀರಹೊಯ್ದಡೆ ಸಾಗಿಸಿ ಬೆಳೆದುದುಂಟೆ? ಆತ್ಮಯೋಗಿಯಾದಲ್ಲಿ ನೇತ್ರ ಶ್ರೋತ್ರ ಘ್ರಾಣ ತ್ವಕ್ಕು ಜಿಹ್ವೆ ಎಂದಿನ ನಿಹಿತದಂತೆ ಆಡಬಹುದೆ? ಅದು ಯೋಗವಲ್ಲ, ಇವ ಕಲಿತೆಹೆನೆಂಬ ಬಲು ರೋಗವಲ್ಲದೆ, ಇದು ಮೀಸಲುಗವಿತೆ, ಇದು ಘಾತಕರುಗಳಿಗೆ ಅಸಾಧ್ಯ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಆತ್ಮಂಗೆ ಜೀವ ಪರಮನೆಂದು ವಿಭೇದವ ತಿಳಿವಲ್ಲಿ ಆ ಅರಿವಿಂಗೆ ಆವ ಠಾವಿನ ಕುರುಹು? ಸಂಪುಟದ ಘಳಿಗೆಯಂತೆ ಮಡಿಕೆಯ ಭೇದ. ಜೀವ ಪರಮನ ಉಭಯದ ಯೋಗ. ಮುಕುರದ ಒಳ ಹೊರಗಿನಂತೆ ಘಟವೊಂದು. ದ್ರವ್ಯವೇಕವ ಮಾಡುವ ಕುಟಿಲದಿಂದ ಉಭಯ ಭಿನ್ನವಾಯಿತ್ತು. ಈ ಗುಣ ಜೀವ ಪರಮನ ನೆಲೆ. ಇದಾವ ಠಾವಿನ ಅಳಿವು ಉಳಿವು? ಈ ಗುಣವ ಭಾವಿಸಿ ತಿಳಿದಲ್ಲಿ ಸ್ವಾನುಭಾವ ಸಂಗ ಸಾವಧಾನದ ಕೂಟ, ಜ್ಞಾನನೇತ್ರ ಸೂತ್ರ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ