ಅಥವಾ
(2) (5) (1) (2) (4) (0) (0) (0) (5) (0) (1) (0) (0) (0) ಅಂ (0) ಅಃ (0) (25) (0) (4) (0) (0) (1) (0) (2) (0) (0) (0) (0) (1) (0) (0) (4) (0) (0) (0) (7) (2) (0) (9) (2) (5) (1) (1) (0) (4) (4) (0) (0) (4) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕದ್ದಡೆ ಕಳವ ಕೊಟ್ಟಿದ್ದವರಿದ್ದಂತೆ ಆಚೆಯಲ್ಲಿ ಇದ್ದವರಿಗೇನು? ಹುಸಿ ಕೊಲೆ ಕಳವು ಹಾದರ ಇಂತಿವನೆಸಗಿ ಮಾಡುವ ಪಾಪಿಯ ಎದುರಿಗೆ ಹೇಳಿ ಹೇಸದೆ ಬಿಡಲೇತಕ್ಕೆ? ಇಂತೀ ರಸಿಕವನರಿದವಂಗೆ ಎಸಕವಿಲ್ಲದ ಮಾತು, ಶಶಿಧರನ ಶರಣಂಗೆ ಹಸುಳೆಯ ತೆರನಂತೆ, ನಸುಮಾಸದ ಪಿಕದಂತೆ, ಶಬರನ ಸಂದಣಿಯಂತೆ, ಉಲುಹಡಗಾ ಕಲಹಪ್ರಿಯ ಕಂಜಳಧರ ರಾಮನಾಥಾ.
--------------
ಗುಪ್ತ ಮಂಚಣ್ಣ
ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು. ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು. ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ. ಊಧ್ರ್ವನಾಮ ಯೋಗ ಸಂಬಂಧವಾದ ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು. ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ, ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು ವಿಶ್ವಾಸವುಳ್ಳ ಶರಣಂಗೆ ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ! ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!
--------------
ಗುಪ್ತ ಮಂಚಣ್ಣ
ಕಾಗೆಯ ತಿಂದವ ಕಮ್ಮಾರ, ಎಮ್ಮೆಯ ತಿಂದವ ಸಮಗಾರ, ಹಸುವ ತಿಂದವ ಪಶುಪತಿಯ ಶರಣ; ಇವರ ಮೂವರ ತಿಂದ ಅಂದವ ನೋಡಾ! ಇದರ ಸಂಗವಾರಿಗೂ ಅರಿದು, ನಿಸ್ಸಂಗ ನಿರ್ಲೇಪ ನಾರಾಯಣಪ್ರಿಯ ರಾಮನಾಥ.
--------------
ಗುಪ್ತ ಮಂಚಣ್ಣ
ಕುರುಡ ಕೈಯ ಕೋಲ ಹಿಂಗಿದಾಗ ಅವ ಅಡಿಯಿಡಬಲ್ಲನೆ? ಮೃಡಭಕ್ತಿಯ ಮಾಡುವಂಗೆ ದೃಢಚಿತ್ತವಿಲ್ಲದಿರ್ದಡೆ ಕಡೆಗಾಣಿಸಬಲ್ಲನೆ? ಇಂತೀ ವಿಶ್ವಾಸದಡಿ ಬೆಚ್ಚಂತಿರಬೇಕು, ನಾರಾಯಣಪ್ರಿಯ ರಾಮನಾಥನಲ್ಲಿ.
--------------
ಗುಪ್ತ ಮಂಚಣ್ಣ
ಕಾಯ ಕಾಯವ ನಂಗಿ, ಮನ ಮನವ ನುಂಗಿ, ಘನ ಘನವ ನುಂಗಿ, ತನ್ಮಯ ತದ್ರೂಪಾಗಿ ನಿಂದಲ್ಲಿ, ವಿರಳವ ಅವಿರಳ ನುಂಗಿ, ಸೆರಗುದೋರದ ಕುರುಹು ಅವತಾರ ಸಾಧನ ಸಾಧ್ಯ ಗುಪ್ತನ ಭಕ್ತಿ, ಮತ್ರ್ಯದ ಮಣಿಹ ಸಂದಿತ್ತು. ವೃಷಭೇಶ್ವರ ಮಂದಿರಕ್ಕೆ ಬಂದು ಎನ್ನ ಸಂದೇಹ ಸಂಕಲ್ಪವಂ ಬಿಡಿಸಿ ಪ್ರಕಟವೆ ಕಡೆಯೆಂದು ಅಂದು ಎಂದು ಬಂದುದು ಸಂದಿತ್ತು ಅಂಗಪೂಜೆ ಲಿಂಗವೆ ಎಂಬುದಕ್ಕೆ ಮುನ್ನವೆ ಐಕ್ಯ, ಅವಸಾನ ರಾಮೇಶ್ವರಲಿಂಗದಲ್ಲಿ.
--------------
ಗುಪ್ತ ಮಂಚಣ್ಣ
ಕೋಳಿ ಕುದುರೆಯ ತಿಂದಿತ್ತು. ವೇಣು ನಾದವ ನುಂಗಿತ್ತು. ಕೀಳು ಮೇಲ ನುಂಗುವಾಗ ಆಳದಲ್ಲಿದ್ದವ ಕಂಡು ಗೋಳುಗುಟ್ಟಲಾಗಿ ಗೋಳಿನ ದನಿಯ ಕೇಳಿ ಬೇಳುವೆ ಹಾಯಿತ್ತು. ಎಲ್ಲಕ್ಕೂ ಇದು ಎನಗೆ ಆಳವಾಗಿ ಕಾಡುತ್ತಿದೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕೋಡಗದ ತಲೆಯ ಚಂಡಿನ ಮೇಲೆ ಮೂರುಕವಲಿನ ಸೂಜೆ. ಮೂರರ ಮನೆಯಲ್ಲಿ ಐದು ಬೆಟ್ಟವಡಿಗಿದವು. ಬೆಟ್ಟದ ತುತ್ತತುದಿಯಲ್ಲಿ ಮಟ್ಟಿಲ್ಲದ ಬಾವಿ. ಬಾವಿಯೊಳಗೊಂದು ಹಾವು ಹುಟ್ಟಿತ್ತು. ಆ ಹಾವಿನ ಮೈಯೆಲ್ಲವೊ ಬಾಯಿ. ಬಾಲದಲ್ಲಿ ಹೆಡೆ ಹುಟ್ಟಿ, ಬಾಯಲ್ಲಿ ಬಾಲ ಹುಟ್ಟಿ, ಹರಿವುದಕ್ಕೆ ಹಾದಿಯಿಲ್ಲದೆ, ಕೊಂಬುದಕ್ಕೆ ಆಹಾರವಿಲ್ಲದೆ ಹೊಂದಿತ್ತು. ಆ ಹಾವು ಬಾವಿಯ ಬಸುರಿನಲ್ಲಿ ಬಾವಿಯ ಬಸುರೊಡೆದು ಹಾವಿನ ಇಲು ನುಂಗಿ ಬೆಟ್ಟ ಚಿಪ್ಪು ಬೇರಾಗಿ ಸೂಜಿಯ ಮೊನೆ ಮುರಿದು ಕೋಡಗದ ಚಂಡು ಮಂಡೆಯ ಬಿಟ್ಟು ಹಂಗು ಹರಿಯಿತ್ತು. ಆತ್ಮನೆಂಬ ಲಿಂಗ ನಾಮ ರೂಪಿಲ್ಲ ನಾರಾಯಣಪ್ರಿಯ ರಾಮನಾಥನಲ್ಲಿ ಶಬ್ದಮುಗ್ಧನಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಕೈದಿಲ್ಲದವಂಗೆ ಕಾಳಗವುಂಟೆ? ಆತ್ಮನಿಲ್ಲದ ಘಟಕ್ಕೆ ಚೇತನವುಂಟೆ? ಅಜಾತನ ನೀತಿಯನರಿಯದವಂಗೆ ನಿರ್ಧರದ ಜ್ಯೋತಿರ್ಮಯವ ಬಲ್ಲನೆ? ಇಷ್ಟವನರಿಯದವನ ಮಾತಿನ ನೀತಿ ಮಡಕೆಯ ತೂತಿನ ಬೈರೆಯ ನೀರು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಾಳರಾತ್ರಿಯಲ್ಲಿ ಅಂಧಕಾರದ ಕೊಟ್ಟಿಗೆಯಲ್ಲಿ ಕಾಳೆಮ್ಮೆಯ ಕರು ಹಾಳವಾಗಿ ಹಾಳಿದ್ದ ದನಿಗಂಜೆ ಕೊಟ್ಟಿಗೆ ಹಾಳಾದುದಿಲ್ಲ. ಎತ್ತ ಕಟ್ಟುವುದಿಲ್ಲ ಎಮ್ಮೆಯಕರು ಸತ್ತಲ್ಲದೆ. ಕೊಟ್ಟಿಗೆ ಹಾಳಾಗದಯ್ಯಾ. ಕರುವಿನ ಕೊರಳೂ ಅಡಗದು. ಇನ್ನೇವೆನಿನ್ನೇವೆನಯ್ಯಾ, ನಾರಾಯಣಪ್ರಿಯ ರಾಮನಾಥಾ, ನೀನೇ ಗುರು ರೂಪಾಗಿ ಬಂದೆನ್ನ ಕರಸ್ಥಲವನಿಂಬು ಗೊಳ್ಳಯ್ಯಾ.
--------------
ಗುಪ್ತ ಮಂಚಣ್ಣ
ಕೋಟೆ ಕೋಳಹೋಗದ ಮುನ್ನವೆ ಸೂರೆಮಾಡಿದ ಪರಿ ಇನ್ನೆಂತೊ? ಮಾಡುವ ಮಾಟ ಪುರೋಭಿವೃದ್ಧಿಗೆ ಸಲ್ಲದ ಮುನ್ನವೆ ಭಕ್ತಿಯಲ್ಲಿ ತಲ್ಲೀಯವಾದ ಪರಿ ಇನ್ನೆಂತೊ. ಎವೆ ಹಳಚುವುದಕ್ಕೆ ಮುನ್ನವೆ ಅರಿಯಾ ನಾರಾಯಣಪ್ರಿಯ ರಾಮನಾಥನ.
--------------
ಗುಪ್ತ ಮಂಚಣ್ಣ
ಕಾಯ ಸ್ಥಿರವೆಂಬುವ ಭಕ್ತನಲ್ಲ. ಅದೆಂತೆಂದಡೆ: ಎಲು ನರ ಚರ್ಮದ ಹೊದಿಕೆ, ಮಲ ಮೂತ್ರ ಕೀವಿನ ಹುತ್ತ, ಹುಳುವಿನಾಗರ. ಮಲಭಾಂಡದ ಶರೀರವ ನಚ್ಚಿ ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ ಇಂತೀ ತ್ರಿವಿಧವ ಕೊಟ್ಟು ಇಪ್ಪ ಕೃತಾರ್ಥಂಗೆ ನಮೋ ನಮೋ ಎಂದು ಬದುಕಿದೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕೋಣ ಎಮ್ಮೆಯನೀಯಿತ್ತು, ಎಮ್ಮೆ ಹೋರಿಯನೀಯಿತ್ತು, ಹೋರಿ ಹಸುವನೀಯಿತ್ತು, ಹಸು ಕೋಳಿಯನೀಯಿತ್ತು, ಕೋಳಿ ಕೊಕೋ ಎಂದು ಕೂಗುವಾಗ ಕೋಣ ಎಮ್ಮೆಯ ನುಂಗಿತ್ತು; ಎಮ್ಮೆಯ ಕೋಣನ ಹೋರಿ ನುಂಗಿತ್ತು; ಹೋರಿಯ ಕೋಳಿಯ ಕೂಗು ನುಂಗಿತ್ತು ಇದನಾರೈವುತಿದ್ದೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕನ್ನವನಿಕ್ಕಿದ ಕಳ್ಳನಿದ್ದಂತೆ ಮಣ್ಣ ಬಂಧಿಸಬಹುದೆ? ಎನ್ನ ಅಂಗ ಪ್ರಾಣಕ್ಕೆ ಲಿಂಗವಲ್ಲದೆ ಕರಣಂಗಳಿಗೆ ಬೇರೊಂದಂಗವುಂಟೆ? ಇದಕ್ಕೆ ಅಂಜುವಡೆ, ``ಗುರೋಃ ಪಾಪಂ ಶಿಷ್ಯಸ್ಯಾಪಿ ಶಿಷ್ಯಪಾಪಂ ಗುರೋರಪಿ' ಎಂಬುದ ಹುಸಿಯಾದಡೆ ಹೇಳಿಸಿಕೊಂಬುವ ಗುರು ಹೇಳುವಾತ ಶಿಷ್ಯನೆ? ಆತ ಹೇಳೂದಕ್ಕೆ ಮುನ್ನ ತಾನರಿಯಬೇಕು. ಈ ಉಭಯಕ್ಕೆ ಭಿನ್ನ ಭಾವವಿಲ್ಲ. ಜೂಳಿಯ ಕುಂಭದಂತೆ ಏತರಲ್ಲಿ ಒದಗಿದಡೂ ಸರಿ. ಸಗುಣನೀತಿಗೆ ಮುಕ್ತಿ ಉಭಯಸ್ಥಲ ಯುಕ್ತಿ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕನ್ನಡಿಗೆ ಕಪ್ಪಾದಡೆ ಬೆಳಗಿದಡೆ ದೋಷವ ಕಟ್ಟಬಹುದೆ? ಅರಿ ಕೊಲಬಂದಿದ್ದಲ್ಲಿ ಅರುಪಿದಡೆ ವಿರೋಧವುಂಟೆ? ಸಂಸಾರ ಸಂಪತ್ತಿನಲ್ಲಿ ರಾಜಸದಲ್ಲಿ ಗುರುವಿಂಗೆ ತಾಮಸ ಬಂದಡೆ ಭೃತ್ಯ ಬಿನ್ನಹವ ಮಾಡುವಲ್ಲಿ ಸತ್ಯರೆಂದು ಪ್ರಮಾಣಿಸುವುದು ಗುರುಸ್ಥಲ. ಇಂತೀ ಉಭಯ ಏಕವಾಗಿಯಲ್ಲದೆ ಗುರು-ಶಿಷ್ಯ ಜ್ಞಾನಸ್ಥಲವಿಲ್ಲ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಳನನೇರಿ ಕೈಮರೆದ ಸುಭಟಂಗೆ ಅರಿದು ಮರೆವ ಬರುಕಾಯಂಗೆ ಕುರುಹಿಡಲೇತಕ್ಕೆ ನೆರೆ ವಿಶ್ವಾಸಹೀನಂಗೆ. ಅರಿದಡೆ ಗೊಲ್ಲಳನಂತಿರಬೇಕು; ಮರೆದಡೆ ಚಂದಯ್ಯನಂತಿರಬೇಕು. ಇಂತೀ ಗುಣಂಗಳಲ್ಲಿ ಸ್ವತಂತ್ರ ಸಂಬಂಧಿಗಳು ನಾರಾಯಣಪ್ರಿಯ ರಾಮನಾಥಾ, ನಿಮ್ಮ ಶರಣರು.
--------------
ಗುಪ್ತ ಮಂಚಣ್ಣ
ಕೆನೆಯ ತೆಗೆದು ಹಾಲನೆರೆವವಳ ವಿನಯ ತಲೆಯನೊಡೆದು ಲಾಲನೆಯ ಮಾಡುವಳಂತೆ, ವಂದಿಸಿ ನಿಂದಿಸುವನ ಭಕ್ತಿ ಕೈನೆರವಿಂಗೆ ಹೋಗಿ ತಮ್ಮವರಳಿದ ಅಂದವ ನೆನೆದು ಅಳುವರಂತೆ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಾಷ*ವ ಕಾರ್ಮುಗಿಲು ನುಂಗಿತ್ತು. ಹರಿವ ನೀರ ಉರಿ ಕುಡಿಯಿತ್ತು. ಬಡವ ಬಲ್ಲಿದನ ಕೊಂದು ಸತ್ತ ಠಾವಿನಲ್ಲಿ ಬಂಧುಗಳೆಲ್ಲರು ಕೂಡಿ ಎತ್ತುವರಿಲ್ಲದೆ ಅರೆವೆಣನಾಯಿತ್ತು. ಮುಕ್ತಿ ನಾಮ ನಷ್ಟ, ನಾರಾಯಣಪ್ರಿಯ ರಾಮನಾಥಾ, ಇನ್ನೇವೆನಿನ್ನೇವೆ!
--------------
ಗುಪ್ತ ಮಂಚಣ್ಣ
ಕೆರೆ ತೊರೆ ಬಟ್ಟೆ ಬಾಗಿಲಲ್ಲಿ ಪೂಜಿಸಿಕೊಂಬುವ ದೈವವೆಂದು ಪ್ರಮಾಣಿಸುವಲ್ಲಿ ತಮ್ಮ ಮನಕ್ಕೆ ಸಂದೇಹವಂ ಬಿಡಿಸಿದೆವೆಂದು ತಮ ತಮಗೆ ಹಿಂಗದ ದೈವವೆಂದು ನಿಂದು ಹೋರಲಾಗಿ ಕೊಂದನೆ ಶಿವನು? ಅವರಂಗದ ಪ್ರಮಾಣು ಇದಕ್ಕೆ ಕೊಂದಾಡಲೇತಕ್ಕೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಳವು ಹಾದರಕ್ಕೆ ಗುಪ್ತ. ಶಿವಭಕ್ತಿ ಶಿವಪೂಜೆ ಶಿವಜ್ಞಾನ ಇಂತಿವಕ್ಕೆ ಬಾಹ್ಯಾಡಂಬರವೆ? ಅರಿವುದೊಂದು ಅರುಹಿಸಿಕೊಂಬುದೊಂದು. ಇಂತೀ ಉಭಯ ಸುಖ ಸಂಭಾಷಣವಲ್ಲದೆ ರಟ್ಟೆಯ ಪೂಜೆ ಕರ್ಕಶದನುಭವ. ಡೊಂಬರ ಡೊಳ್ಳ ಕೇಳಿ, ಬಂದವರೆಲ್ಲರು ನಿಂದು ನೋಡಿ ತಮ್ಮ ತಮ್ಮ ಮಂದಿರಕ್ಕೆ ಹೋಹಂತಾಯಿತ್ತು. ಈ ಪಥದ ಸಂದನಾರು ಅರಿಯರು. ನಾರಾಯಣಪ್ರಿಯ ರಾಮನಾಥನಲ್ಲಿ ತನ್ನ ತಾನೆ ತಿಳಿದ ಶರಣ ಬಲ್ಲ.
--------------
ಗುಪ್ತ ಮಂಚಣ್ಣ
ಕೀರ್ತಿಗೆ ಜಗವ ಕೊಂಡು ಮಾಡುವಾತ ಭಕ್ತನೆ? ನಿಂದಿಸಿಹರೆಂದು ಅಂಜಿಕೊಂಡಿಪ್ಪವ ತಪಸಿಯಲ್ಲ; ಜಗವ ಮೆಚ್ಚಬೇಕೆಂದು ಮಾಡುವಾತ ಭಕ್ತನಲ್ಲ; ಇಚ್ಛೆಗೆ ನುಡಿವವ ವಿರಕ್ತನಲ್ಲ. ಇದರಚ್ಚುಗ ನಿಮಗೇಕೆ? ನಾರಾಯಣಪ್ರಿಯ ರಾಮನಾಥ ಒಚ್ಚತ ನಿಮ್ಮನೊಲ್ಲ.
--------------
ಗುಪ್ತ ಮಂಚಣ್ಣ
ಕೋಳಿಯ ಗಂಟಲ ಕಾಳ ನಾಯಿ ಕಡಿವುತ್ತಿದೆ. ನಾಯ ಹಲ್ಲ ಮುರಿದ ಪರನಾರಿಯ ಸಹೋದರ. ಕೋಳಿಯ ಕೊರಳು ಉಳಿಯಿತ್ತು ಕೋಳಿ ಸತ್ತಿತ್ತು, ನಾಯಿ ನಾತಿತ್ತು. ಇಂತಿವ ಹೇಳಬಂದವನ ವಿಷಾಳಿ ನುಂಗಿತ್ತು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಾಲವನರಿವುದಕ್ಕೆ ಕೋಳಿಯಾಯಿತ್ತು ಋತುಕಾಲವನರಿವುದಕ್ಕೆ ಕೋಗಿಲೆಯಾಯಿತ್ತು. ಶಾಖೆಯ ಲಂಘನವನರಿವುದಕ್ಕೆ ಗೋಲಾಂಗುಲವಾಯಿತ್ತು. ಕರಣದ ಮರಣವನರಿವುದಕ್ಕೆ ಮಲತ್ರಯ ದೂರನಾದ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕಲ್ಲಿಯ ಗಂಟು, ಲಲನೆಯರ ಮೋಹ, ಪುಳಿಂದರ ವೇಷ, ಮಾರುತನ ಗ್ರಾಸ, ಇಂತಿವರ ಇರುವು ಗುರುಮಾರ್ಗದ ಬೋಧೆ. ಜಲಚರ ಆಹಾರಕ್ಕೆ ಸಿಕ್ಕಿದ ಕೊರಳಿನ ವಿಧಿಯಂತೆ, ನೆರೆಗೆ ಇಲ್ಲದ ಗುರುವಿನ ಕೈದೊಡಕಿನ ಶಿಷ್ಯ ಅರಿವಿಂಗೆ ಬಡಿಹೋರಿಯಾದ. ಇಂತಿವ ಕಂಡು ನೊಂದ ಸಂದೇಹಿಗೆ ನೀ ಅಜಡನಾಗಿ ಎನ್ನ ಜಡವ ಉದ್ಧರವ ಮಾಡು ಸದ್ಗುರುಮೂರ್ತಿ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕುದುರೆಗೆ ಹುಲ್ಲ ಹಾಕಲಾಗಿ ಹುಲ್ಲು ಕುದುರೆಯ ತಿಂದಿತ್ತು. ಬಂದ ಗೋವ ಕುದುರೆಯ ನೋಡಿ ಅದರಂಗದ ಕಾಲು ಇರಲಾಗಿ, ತಿಂದವರಾರೊ ಎಂಬುದಕ್ಕೆ ಮೊದಲೆ ತಿಂದಿತ್ತು. ಆ ಕಾಲು ನಿಂದ ಗೋವನ ಈ ಮೂವರ ಅಂದವ ತಿಳಿಯೊ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ