ಅಥವಾ
(4) (1) (1) (0) (0) (1) (0) (0) (1) (0) (0) (0) (0) (0) ಅಂ (1) ಅಃ (1) (4) (0) (4) (0) (0) (0) (0) (3) (0) (0) (0) (0) (0) (0) (0) (0) (0) (0) (0) (1) (3) (0) (0) (0) (2) (0) (0) (0) (0) (0) (1) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ, ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ, ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ, ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ, ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ, ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ, ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ, ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ, ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ ಬಹಿರಂಗದ ಸೂತಕ ಹೋಯಿತ್ತಯ್ಯಾ, ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ, ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ, ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ, ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಅಮುಗಿದೇವಯ್ಯ
ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನಗುರುವಿನುಪದೇಶ. ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ. ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಚಂದ್ರಕಾಂತದ ಶಿಲೆಯ ಬಂದು ಚಂದ್ರಮ ಸೋಂಕಿದಂತಾಯಿತ್ತೆನ್ನ ಗುರುವಿನುಪದೇಶ. ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಇದು ಕಾರಣ, ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ ಗುರುವಿನುಪದೇಶ.
--------------
ಅಮುಗಿದೇವಯ್ಯ
ಕಾಯ ಲಿಂಗಕ್ಕರ್ಪಿತವಾದಡೆ ಕರ್ಮವಿಲ್ಲ, ಜೀವ ಲಿಂಗಕ್ಕರ್ಪಿತವಾದಡೆ ಜನಿತವಿಲ್ಲ, ಭಾವಲಿಂಗಕ್ಕರ್ಪಿತವಾದಡೆ ಭ್ರಮೆಯಿಲ್ಲ, ಅರಿವು ಲಿಂಗಕ್ಕರ್ಪಿತವಾದ ಬಳಿಕ ಪ್ರಸಾದವ ಗ್ರಹಿಸಿದನಾಗಿ, ಕುರುಹಿಲ್ಲ, ಮಾಯಾಪ್ರಪಂಚನತಿಗಳೆದು ನಿಮಗರ್ಪಿಸಬಲ್ಲನಾಗಿ, ಆತನು ಶರಣನು- ಬೆಚ್ಚಂತೆ, ಬೆರಸಿ ಅಚ್ಚೊತ್ತಿದಂತೆ, ಅಪ್ಪು ಒಳಕೊಂಡ ವಾರಿಕಲ್ಲಂತೆ, ಜ್ಯೋತಿಯುಂಡ ತೈಲದಂತೆ, ಜಲವುಂಡ ಮುತ್ತಿನಂತೆ, ಬಯಲುಂಡ ಬೆಳಗಿನಂತೆ ಇರ್ದನಾಗಿ ಮಹಾಘನ ಸದ್ಗುರು ಸಿದ್ಧಸೋಮನಾಥಾ ನಿಮ್ಮ ಶರಣರ ಹೆಸರಡಗಿದ ಲಿಂಗೈಕ್ಯರೆಂದೆ.
--------------
ಅಮುಗಿದೇವಯ್ಯ
ಕ್ಷುತ್ತು ಪಿಪಾಸೆಯರತಡೇನು, ಭಕ್ತನಪ್ಪನೆ? ಸ್ವೇಚ್ಛಾಗಮನಿಯಾದಡೇನು, ಭಕ್ತನಪ್ಪನೆ? ತನು ಬಯಲಾದಡೇನು, ಭಕ್ತನಪ್ಪನೆ? ಅಷ್ಟಮಹಾಸಿದ್ಧಿಯುಳ್ಳರೇನು, ಭಕ್ತನಪ್ಪನೆ? ಚತುರ್ವಿಧಪದವ ಪಡೆದು ಕೈಲಾಸದಲ್ಲಿದ್ದಡೇನು, ಭಕ್ತನಪ್ಪನೆ? ಮಹತ್ವವ ಹಲವು ತೋರಿ ಮೆರೆದಡೇನು, ಭಕ್ತನಪ್ಪನೆ? ಅಲ್ಲಲ್ಲ, ಭಕ್ತಿಯ ಪರಿ ಎಂತೆಂದಡೆ: ಅಂಗತ್ರಯದಲ್ಲಿ ಲಿಂಗತ್ರಯಸಂಬಂಧವಾಗಿ, ಗುರುಲಿಂಗಜಂಗಮವನಾರಾಧಿಸಿ ಲಿಂಗತ್ರಯದಲ್ಲಿ ಸಮವೇಧಿಸಿ, ಆ ತ್ರಿವಿಧಲಿಂಗ ಜಂಗಮವನಾರಾಧಿಸಿ, ಪ್ರಸಾದಗ್ರಾಹಿಯಾದಲ್ಲದೆ ಭಕ್ತನಲ್ಲವೆಂದು ಸಿದ್ಧಸೋಮನಾಥನ ಶರಣರು ನುಡಿವರಯ್ಯಾ ಪ್ರಭುವೆ.
--------------
ಅಮುಗಿದೇವಯ್ಯ