ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಳ್ಳಿಯ ಹೊಲೆಯನ ಕೈಯಲ್ಲಿ ಡಿಳ್ಳಿಯದ್ಥಿಪತಿ ಸತ್ತ. ಆಳುವ ಗಂಡ ಹೆಂಡತಿಗೆ ಕೀಳಾಳಾದ. ಒಡೆದು ಬಂಟನಿಗೆ ಬಡಿಹೋರಿಯಾದ. ಹೊಡೆಯ ಹುಲ್ಲು ಕರವಾಳ ಹಿಡಿಯ ಕೊಯ್ಯಿತ್ತು. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹಿಂದೆ ಬಂದವರೆಲ್ಲರೂ ಯೋನಿಯ ಹಂಗು. ಸಕಲ ಶಾಸ್ತ್ರಜ್ಞರೆಲ್ಲಾ, ವೇದ ವೇದಾಂತರೆಲ್ಲಾ, ಹಿಂದೆ ಬಂದ ಯೋನಿಯ ಮರೆದು, ಮುಂದಕ್ಕೆ ಯೋನಿಗಾಗಿ ಲಂದಳಗಿತ್ತಿಯಂತೆ ಬಂದ ನಿಂದ ಭಕ್ತರಲ್ಲಿ ಹೊಸತನದಂದವ ಹೇಳಿ, ಎಡಗಾಲಸಂದಿಯ ಮಚ್ಚಿ, ಅನಂಗನ ಬಲೆಯೊಳಗಾದವರಿಗೆ ಘನಲಿಂಗನ ಸುದ್ಧಿಯೇಕೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹರಿಗೋಲು ಹರಿದ ಮತ್ತೆ ಹೊಳೆಯೇನು ಮಾಡುವುದು? ಇರಿದವನಿದ್ದಂತೆ ಕೈದೇನ ಮಾಡುವುದು? ಎಚ್ಚವನಿದ್ದಂತೆ ಅಂಬಿಗೆ ಮುನಿವರೆ? ಎನ್ನ ಚಿತ್ತದಲ್ಲಿ ಕಲೆದೋರಿ, ನೀನಾಡಿಸಿದಂತೆ ಆಡಿದೆ. ನೀ ಕೊಟ್ಟ ಕಾಯಕವ ಹೊತ್ತೆ, ನೀ ಹೇಳಿದ ಬಿಟ್ಟಿಯ ಮಾಡಿದೆ ಕುಳದವನಾದ ಮತ್ತೆ ಮಾನ್ಯರ ಒಲವರ ಎನಗೊಂದುಗುಣವಿಲ್ಲ. ನೀನಾಡಿಸಿದಂತೆ ಆಡಿದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹೊಳೆಯಲ್ಲಿ ನಿಂದಿರ್ದು ಹಾದಿಯ ಕೇಳಿದಡೆ, ತಡಿಮಡುವ ಹೇಳಿದಡೆ ಅದು ಕೆಡುಗುಡಿತನವೆ? ಎನ್ನ ಬಿಡುವರು ಬಿಡಲಿ, ಇದ ನಡಸಿಯಲ್ಲದೆ ಬಿಡೆ, ಬಡಮತವಲ್ಲ. ಎನ್ನ ಒಡಗೂಡಿಕೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹುಗುಲು ಹೂಟದೊಳಗಾಡುವರೆಲ್ಲರು ಬಗೆಗೆ ಅಳವಡದನ ಬಲ್ಲರೆ? ಗುಹ್ಯ ಜಿಹ್ವೆಯಲ್ಲಿ ಬಲ್ಲವನಾಗಬೇಕು, ಅದು ಬಿಡುಮುಡಿಯ ಸಂಗ. ಒಡಗೂಡುವ ತೊಡಗೆಯ ಭೇದವನರಿಯಬೇಕು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹೇಳಿಸಿಕೊಂಡು ಕೇಳಿ ಅರಿದೆಹೆನೆಂದೆಡೆ ಗಣಿತದ ಲೆಕ್ಕವಲ್ಲ. ಎನ್ನನರಿತು ನಿನ್ನನರಿವಡೆ ನಾ ಪರಂಜ್ಯೋತಿಯಲ್ಲ, ರುಜೆಯಡಸಿದವನ ದೇಹ, ಅಂಧಕನ ನೋಟ, ಪಂಗುಳನ ಪಯಣ, ಮತಿಹೀನನ ಗತಿಗೆಟ್ಟವನ ಮೋಕ್ಷ ಇಂತಿವು ಹುಸಿಯಾದ ತೆರ ನನಗೊ ನಿನಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹೆಣ್ಣಿನ ಮೇಲಿನ ಮೋಹ ಯೋನಿ ಕಂಡಾಗ ದಣಿಯಿತ್ತು. ಹೊನ್ನಿನ ಮೇಲಿನ ಮೋಹ ಕೂಡಿ ಭಿನ್ನವಾಗಲಾಗಿಯೆ ದಣಿಯಿತ್ತು. ಮಣ್ಣಿನ ಮೇಲಿನ ಮೋಹ ಅರಿಗಳ ಮುರಿದು ಹರಿವರಿಯಾದಾಗಲೇ ದಣಿಯಿತ್ತು. ಇವನೊಂದುವ ಕಾಣದ ಮೋಹ ಎಂದಿಗೂ ಬಿಡದು. ಇದರ ಸಂದನಳಿದು ಹೇಳಾ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹಿಂದೆ ನಾ ಬಂದ ಭವಕ್ಕೆ ಅಟ್ಟಣೆಯಿಲ್ಲ. ಉದಯದಲ್ಲಿ ಕಮ್ಮಾರನ ಮನೆಗೆ ಬಂದು ಬೇಸತ್ತೆ. ಮಧ್ಯಾಹ್ನದಲ್ಲಿ ಅಗಸನ ಮನೆಗೆ ಎಡತಾಕಿ ಬೇಸತ್ತೆ. ಅಸ್ತಮಯದಲ್ಲಿ ನಾವಿದನ ಮನೆಗೆ ಹೋಗಿ ನಿಂದಿರ್ದು ಬೇಸತ್ತೆ. ಕಮ್ಮಾರನ ಕೈಯ ಮುರಿದವರಿಲ್ಲ, ಅಗಸನ ಕಾಲ ಕಡಿದವರಿಲ್ಲ. ನಾವಿದನ ತಲೆಯ ಕೊಯ್ದವರಿಲ್ಲ. ಇಷ್ಟನಾರೈದುಕೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಹಾಕಿದಡೆ ಸಮಯಕ್ಕೆ ಭಂಗ, ಹಿಡಿದಡೆ ಜ್ಞಾನಕ್ಕೆ ಭಂಗ ಇದರೊಡಗೂಡುವ ಒಡಲಾವುದು? ಹಾಗಕ್ಕೆ ಕೊಂಡು ಹಣವಡ್ಡವ ಕಟ್ಟುವ ಲಾಗಿನ ಗುರು ಬೇಡ. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ