ಅಥವಾ
(2) (4) (0) (0) (0) (0) (0) (0) (0) (0) (1) (0) (0) (0) ಅಂ (0) ಅಃ (0) (3) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (0) (4) (4) (1) (1) (0) (2) (0) (2) (0) (0) (2) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕುಲಗೋತ್ರಜಾತಿಸೂತಕದಿಂದ ಕೆಟ್ಟವರೊಂದು ಕೋಟ್ಯಾನುಕೋಟಿ. ಜನನಸೂತಕದಿಂದ ಕೆಟ್ಟವರು ಅನಂತಕೋಟಿ. ಮಾತಿನಸೂತಕದಿಂದ ಮೋಸವಾದವರು ಮನು ಮುನಿಸ್ತೋಮ ಅಗಣಿತಕೋಟಿ. ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು ಹರಿಹರ ಬ್ರಹ್ಮಾದಿಗಳೆಲ್ಲರು. 'ಯದ್ದೃಷ್ಟಂ ತನ್ನಷ್ಟಂ' ಎಂಬುದನರಿಯದೆ ಹದಿನಾಲ್ಕುಲೋಕವೂ ಸಂಚಿತಾಗಾಮಿಯಾಗಿ ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ. ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ ಪರಬ್ರಹ್ಮ ದೊರಕುವದೆ ಅಯ್ಯಾ ? ಇದು ಕಾರಣ, ನಾಮರೂಪುಕ್ರೀಗಳಿಗೆ ಸಿಲ್ಕುವನಲ್ಲವಯ್ಯ. ಅಗಮ್ಯ ಅಪ್ರಮಾಣ ಅಗೋಚರವಯ್ಯ. ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು.
--------------
ಬಾಚಿಕಾಯಕದ ಬಸವಣ್ಣ
ಕನಕನವರತ ಶೋಭಿತವೆಂಬ ದಿನಕರನುದಯದ ಪಟ್ಟಣದೊಳಗೆ ಏಕಬೆಳಗಿನ ಏಕಾಂತವಾಸದೊಳಿಪ್ಪ ನಿಶ್ಶಬ್ದಂ ಬ್ರಹ್ಮಮುಚ್ಯತೇ ಎಂಬ ಮೂಲಾಂಕುರವು. ಉನ್ಮನಿಯ ಪ್ರಾಕಾರದ ಸ್ಫಟಿಕದ ಮನೆಯಲ್ಲಿ ಇಷ್ಟಲಿಂಗವನರಿದಾತಂಗೆ ಮೂರರ ಹಂಗೇಕೆ? ಆರು ಮೂರೆಂಬಿವ ದೂರದಲೆ ಕಳೆದು ಮೀರಿದ ಸ್ಥಲದಲ್ಲಿ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದೆ ಇಲ್ಲವೆಂಬೆ.
--------------
ಬಾಚಿಕಾಯಕದ ಬಸವಣ್ಣ
ಕುಂಭಿನಿಯ ಚಕ್ರದ ಮೇಲೆ ಪಿಂಡಬ್ರಹ್ಮಾಂಡವೆಂಬುದೊಂದು ಅಂಗ. ಆ ಅಂಗಾಲಯದೊಳಗೆ ಏಕಸಹಸ್ರವೆಂಬುದೊಂದು ದೇವಾಲಯ. ಆ ದೇವಾಲಯಕ್ಕೆ ವೆಜ್ಜವಿಲ್ಲದ ಬಾಗಿಲು. ಆ ಬಾಗಿಲ ಮೇಲುಪ್ಪರಿಗೆಯೊಳಗೊಂದು ಮೂಲಾಧಾರ ಮುಕ್ತಿಯೆಂಬುದೊಂದು ಕೋಣೆ. ಅದಾರಿಗೂ ಮುಟ್ಟಬಾರದು, ನೆನೆಯಬಾರದು. ನೋಡಬಾರದ ಕೋಣೆಯೊಳಗೆ ಮಾಣಿಕ್ಯದ ಮಹಾಪ್ರಕಾಶಕ್ಕೆ ಮಿಗಿಲೆನಿಪ ನುಡಿಗೆಡೆಯಿಲ್ಲದ ಲಿಂಗ. ಮುಕ್ತಿಯೆಂಬ ಕೋಣೆಯ ಮೂಲಾಗ್ರದಲ್ಲಿ ಇಪ್ಪುದೊಂದು [ಪರಂಜ್ಯೋತಿ]. ಆ ಮೂಲಾಗ್ರದ ಮೇಲಣ ಪರಂಜ್ಯೋತಿ ಪ್ರಕಾಶಪರಿಪೂರ್ಣಲಿಂಗವ ತಿಳಿಯಬಲ್ಲಡೆ ಮುಟ್ಟಲಾಗದು ಮೂರ, ಕಟ್ಟಲಾಗದು ಆರ. ಈ ಕಷ್ಟವ ಕಳೆಯದನ್ನಕ್ಕ ಕಂಡೆಹೆನೆಂಬವರನೇನೆಂಬೆ. ರುದ್ರ ತಪಸ್ಸಿನೊಳಗಾದ, ಬ್ರಹ್ಮ ನಿತ್ಯಕ್ಕೊಳಗಾದ. ವಿಷ್ಣು ಕಾಮದ ಬಲೆಯಲ್ಲಿ ಸಿಲ್ಕಿದ. ಇನ್ನು ದೇವದಾನವ ಮಾನವರೆಲ್ಲರೂ ಅನಂತಾನುಕೋಟಿ ಭವಭವಪಾಶವೆಂಬ ರಾಟಾಳದ ಬಲೆಯಲ್ಲಿ ಉರುಳಾಡುತ್ತಿಪ್ಪರಯ್ಯ. ಇಂತು ಮೂಲದ ಕೀಲ ಸಂಹರಿಸಿ ನಿಂದ ನಿಸ್ಸೀಮ ಶರಣರೇ ಬಲ್ಲರಲ್ಲದೆ ಮತ್ತಾರೂ ಅರಿಯರಯ್ಯ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವ.
--------------
ಬಾಚಿಕಾಯಕದ ಬಸವಣ್ಣ