ಅಥವಾ
(3) (2) (1) (0) (2) (0) (0) (0) (0) (1) (0) (0) (0) (0) ಅಂ (1) ಅಃ (1) (9) (0) (1) (0) (0) (0) (0) (2) (0) (0) (0) (0) (0) (0) (0) (10) (0) (2) (0) (3) (2) (0) (2) (1) (1) (0) (0) (0) (0) (1) (5) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕರೆವ ಹಸುವ ಉಳುವ ಬೆನ್ನತ್ತ ಮೊಲೆವುಂಬ ಕರುವ ಕುರುಹನರಿಯದೆ ಕಾಣಬಹುದೆ, ಈ ತ್ರಿವಿಧವಿಲ್ಲದೆ ಗುರುವಿನ ಇರವ ಲಿಂಗದ ಮೂರ್ತಿಧ್ಯಾನವ ಅರಿವಿನ ಮರೆದೊರಗುವ ಕಲೆಯ ಚಲನೆ ನಿಂದಲ್ಲಿ ಆತ್ಮಲಿಂಗ ಭೇದ, ಪ್ರಾಣ ಸಂಬಂಧವಪ್ಪುದು. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೇ ಪ್ರಮಾಣು.
--------------
ತುರುಗಾಹಿ ರಾಮಣ್ಣ
ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ ಏಕಚಿತ್ತನಾಗಿ ಸರ್ವವಿಕಾರಂಗಳ ಕಟ್ಟುವಡೆದು, ಇಂದ್ರಿಯಂಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ ವಸ್ತುವಿನ ಅಂಗದಲ್ಲಿಯೆ ತನ್ನಂಗೆ ತಲ್ಲೀಯವಾಗಿಪ್ಪುದೆ ಮಹಾ ನಿಜದ ನೆಲೆ. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೆ ಬಟ್ಟೆ.
--------------
ತುರುಗಾಹಿ ರಾಮಣ್ಣ
ಕಾಲವೇಳಯನರಿದು ತೃಣ ವಾರಿ ನೆಳಲನರಿದು ರಕ್ಷಿಸಿ ಕಾವನಿರವು. ಪಿಂಡ ಪ್ರಾಣ ಆರೋಗ್ಯಂಗಳಲ್ಲಿ ನಿಂದು ಆತ್ಮನ ನಿಜಸ್ವಸ್ಥವನರಿದು ಕ್ರೀಯಲ್ಲಿ ಶುದ್ಧ ಪೂಜೆಯಲ್ಲಿ ನಿಷೆ* ನೆಲೆಯನರಿದಲ್ಲಿ ತ್ರಿವಿಧದ ಬಿಡುಗಡೆ. ಆತ್ಮನ ಬಿಡುವ ಅವಸಾನವನರಿಯಬೇಕು ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ.
--------------
ತುರುಗಾಹಿ ರಾಮಣ್ಣ
ಕಾವುದು ಹುಟ್ಟುವುದು ಮೀರಿದಡೆ ಹೊಡೆವುದು. ಗಣ್ಣಿನ ಕೋಲಹಿಡಿದು ಗೋವ ಕಾವುತ್ತಿರಲಾಗಿ, ಕಾವಗಣ್ಣಿನಲ್ಲಿ ಕರ್ಮವಡಗಿ, ಕಟ್ಟುವ ಕಗ್ಗಣ್ಣಿನಲ್ಲಿ ಧರ್ಮವಡಗಿ, ಮೀರುವಗಣ್ಣಿನಲ್ಲಿ ವರ್ಮವಡಗಿ, ತ್ರಿವಿಧವನೊಳಕೊಂಡ ಕೋಲುಗೋವಿನ ಬೆನ್ನಿನಲ್ಲಿ ಲಯವಾಯಿತ್ತು, ಗೋಪತಿನಾಥ ವಿಶ್ವೇಶ್ವರಲಿಂಗವನರಿಯಲಾಗಿ.
--------------
ತುರುಗಾಹಿ ರಾಮಣ್ಣ
ಕ್ರೀಯನೆ ಭಾವಿಸಿಹೆನೆಂದಡೆ ಮೃತ್ತಿಕೆಯ ಸಾಕಾರವ ತೊಳೆದು ನಿರ್ಮಳವನರಸುವಂತೆ. ಶೂನ್ಯದಲ್ಲಿ ವಿಶ್ರಮಿಸಿ ಕಂಡೆಹೆನೆಂದಡೆ ಕೆಂಗಳಿಗೆಟ್ಟದು ಕೈಮುಟ್ಟದು, ಆತ್ಮಂಗೆ ಆಗೋಚರ ಇಂತೀ ಉಭಯವನೊಡಗೂಡಿ ಕಂಡೆಹೆನೆಂದಡೆ ಕ್ರೀಗೆ ಅಂಗನಿಲ್ಲದು; ಆತ್ಮಂಗೆ ಸಲ್ಲದು. ಉಭಯದಾಟ ಕೂಡಿ ನಿನ್ನರಿವನ್ನಕ್ಕ ಕಲ್ಪಿತಾಂತರ ಕೂಟವಾಗುತ್ತಿದೆ. ಇದರಚ್ಚುಗವ ಬಿಡಿಸು ಗೋಪತಿನಾಥ ವಿಶ್ವೇಶ್ವರಲಿಂಗ.
--------------
ತುರುಗಾಹಿ ರಾಮಣ್ಣ
ಕಂಗಳ ದೃಷ್ಟದಿಂದ ನಿಷೆ*ಯನರಿತು, ನಿಷೆ* ನಿಜದಲ್ಲಿ ನಿಂದು ಅರಿವು ಕರಿಗೊಂಡಲ್ಲಿ ಗೋಪತಿನಾಥ ವಿಶ್ವೇಶ್ವರಲಿಂಗವು ದೃಷ್ಟವಾಯಿತ್ತು.
--------------
ತುರುಗಾಹಿ ರಾಮಣ್ಣ
ಕೋ ಬಾ ಎಂದಲ್ಲಿ ಆತ್ಮನ ಭೇದ, ಅಂಬಾ ಎಂದಲ್ಲಿ ಅರಿವಿನ ಭೇದ, ಧಾ ಎಂದು ನಕ್ಕಿರಿದಲ್ಲಿ ಚಿದಾತ್ಮನ ಭೇದ. ಇಂತೀ ಗುಣದ ಪಶು ಅಸುವಿನ ಬಲೆಯ ಕಾಯ್ದೊಪ್ಪಿಸಬೇಕು, ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
--------------
ತುರುಗಾಹಿ ರಾಮಣ್ಣ
ಕ್ರೀ ಶುದ್ಧತೆಯಾದಲ್ಲಿ ಭಾವ ಶುದ್ಧವಾಗಿಪ್ಪುದು. ಭಾವಶುದ್ಧವಾಗಿಪ್ಪಲ್ಲಿ ಸರ್ವೇದ್ರಿಯಂಗಳು ಏಕೇಂದ್ರಿಯವಾಗಿ ಚಿತ್ತಶುದ್ಧ ಸಿದ್ದಿಯಾದಲ್ಲಿ ಸರ್ವಜ್ಞಾನ ಸಂಪನ್ನನಪ್ಪನು. ಆ ಗುಣ ನಿಜನೆಲೆಯಾದಲ್ಲಿ ಗೋಪತಿನಾಥ ವಿಶ್ವೇಶ್ವರಲಿಂಗ ವಚಿಚ್ಚಂತಿಪ್ಪನು.
--------------
ತುರುಗಾಹಿ ರಾಮಣ್ಣ
ಕಾಯನೂ ಬಿಲ್ಲನೂ ಕೂಡೆ ಹಿಡಿದು ಎಸೆಯಬಹುದೆ? ಕ್ರೀಯನೂ ನಿಃಕ್ರೀಯನೂ ಕೂಡಿ ವೇದಿಸಿ ನಡೆಯಬಹುದೆ? ಕಾಯಿ ಹಣ್ಣಾಹನ್ನಕ್ಕ ಶಾಖೆಯ ಸಂಗ ಬೇಕು. ಹಣ್ಣು ನೆರೆ ಬಲಿದು ರಸ ತುಂಬಿದ ಮತ್ತೆ ತೊಟ್ಟಿಗೆ ಬಿಡುಗಡೆ. ಜ್ಞಾನ ರಸ ಕ್ರೀ ಮಲ ತನ್ನೊಳಗಿದ್ದು ತನ್ನ ಸ್ವಾದು ಬೇರಾದಂತೆ ಕ್ರೀ ಸಂಬಂಧ ಜ್ಞಾನಸಂಬಂಧ ಉಭಯವ ವಿಚಾರಿಸಲಿಕ್ಕಾಗಿ ನಿರವಯದಿಂದೊದಗಿದ ಸಾವಯವನರಿತು ನಿಃಕ್ರೀಯಿಂದಕೀವೊಡಲುಗೊಂಡುದ ಕಂಡು ಆದಿ ವಸ್ತುವಿಗೆ ಅನಾದಿ ವಸ್ತು ಬೀಜವಾದುದನರಿದು ನೀರಿಗೆ ಸಾರಬಂದು ರಸವಾದ ತೆರನಂತೆ ತಿಲ ಮರಳಿ ಹೊರಳಿ ಬೆಳೆವಲ್ಲಿ ಆ ರಸ ಬೇರಿಲೊ ಕೊನರಿಲೊ ಕುಸುಮದಲೊ ಕಾಯಲೊ? ಈ ಸರ್ವಾಂಗದೊಳಡಗಿ ಇದ್ದ ಠಾವ ಬಲ್ಲಡೆ ಕ್ರೀಜ್ಞಾನಸಂಬಂಧಿ. ಅದು ವಾರಿಯ ಸಾರದಿಂದ ಸಾಕಾರ ಬಲಿದು ನಿರಾಕಾರದ ಈ ಗುಣದಲ್ಲಿ ಒಂದರಿಂದ ಒಂದನರಿದೆಹೆನೆಂದಡೆ ಸಂದೇಹ ಮೊದಲಾದ ಸಂಶಯವರ್ತಕ ವಸ್ತುವಿನಲ್ಲಿ ವರ್ತಿಸಿ ವಸ್ತು ಆ ವಸ್ತುವ ಗರ್ಭೀಕರಿಸಿ ನಿಶ್ಚಯವಾದ ನಿಜ ಕ್ರೀ ನಿಃಕ್ರೀ ನಿರ್ವಾಹ ಗೋಪತಿನಾಥ ವಿಶ್ವೇಶ್ವರಲಿಂಗವನರಿತಲ್ಲಿ.
--------------
ತುರುಗಾಹಿ ರಾಮಣ್ಣ