ಅಥವಾ
(153) (60) (11) (2) (21) (3) (0) (0) (26) (3) (2) (13) (5) (0) ಅಂ (54) ಅಃ (54) (91) (2) (73) (4) (0) (4) (0) (33) (0) (0) (0) (0) (0) (0) (0) (55) (0) (17) (4) (48) (61) (1) (30) (49) (62) (6) (20) (0) (58) (24) (65) (2) (69) (42) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯೋಗಿ ಎನಲಿಲ್ಲ, ಭೋಗಿ ಎನಲಿಲ್ಲ, ಕಾಮಿ ಎನಲಿಲ್ಲ, ನಿಃಕಾಮಿಯೆನಲಿಲ್ಲಾಗಿ, ತನ್ನ ಪರಿ ಬೇರೆ ಕಾಣಿರಯ್ಯ. ದೇವ ಎನಲಿಲ್ಲ, ಭಕ್ತ ಎನಲಿಲ್ಲ, ಭಾವವೆನಲಿಲ್ಲ, ನಿರ್ಭಾವವೆನಲಿಲ್ಲಾಗಿ, ತನ್ನ ಪರಿ ಬೇರೆ ಕಾಣಿರಣ್ಣಾ. ಭವಭಯಂಗಳೆಲ್ಲವ ಪರಿಹರಿಸಿ ಕಳೆದನು. ನಿಭ್ರಾಂತಿ ನಿರುತನು, ನಿಮ್ಮ ಶರಣ, ಅಪ್ರತಿಗೆ ಪ್ರತಿವುಂಟೆ? ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಯತ್ರ ಜೀವಸ್ತ್ರ ಶಿವನೆಂಬ ಬಾಲಭಾಷೆಯ ಕೇಳಲಾಗದು ಶಿವಶಿವಾ ಯತ್ರಜೀವಸ್ತತ್ರ ಶಿವನಾದರೆ ಜೀವಂಗೆ ಮರಣವೇಕೋ? ಯತ್ರ ಜೀವಸ್ತತ್ರ ಶಿವನಾದರೆ ಜನನ ಸ್ಥಿತಿ ಮರಣ ರುಜೆ ಸಂಸಾರ ಬಂಧನವೇಕೋ? ಯತ್ರ ಜೀವಸ್ತತ್ರ ಶಿವನಾದರೆ ಪುಣ್ಯಪಾಪ ಪ್ರಳಯಕಾಲ ಕಲ್ಪಿತವೇಕೊ? ಇದು ಕಾರಣ ಯತ್ರ ಜೀವಸ್ತತ್ರ ಶಿವನಲ್ಲ, ಉತ್ಪತ್ತಿ ಸ್ಥಿತಿ ಪ್ರಳಯರಹಿತನು ಸದ್ಭಕ್ತರಲ್ಲಿಪ್ಪನಲ್ಲದೆ ಮತ್ತೆಲ್ಲಿಯೂ ಇಲ್ಲ, ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಯಾಂತ್ರಿಕನ ಯಂತ್ರಮಂತ್ರ ಸಂಬಂಧದಿಂದ ಪಿಶಾಚಗ್ರಸ್ತನ ಪಿಶಾಚಿಯು ಫಲಾಯನವಪ್ಪ ತೆರನಂತೆ, ಶ್ರೀಗುರುವಿನ ಶಿವಮಂತ್ರ ಶಿವಲಿಂಗ ಸಂಬಂಧದಿಂದ ಮನುಜನ ಮಾಯಾಗ್ರಹವು ತೊಲಗುವುದಯ್ಯಾ. ಗಿಡಮರಬಳ್ಳಿಗಳ ನಾರುಬೇರುಗಳ ಶರೀರದೊಂಡೆಯಲ್ಲಿ ಧರಿಸಿದಡೆ ರೋಗಿಯ ಹಲವು ರೋಗಗಳು ನಷ್ಟವಪ್ಪ ಪರಿಯಂತೆ ಇಷ್ಟಲಿಂಗವನಂಗದಲ್ಲಿ ಸಂಗಗೊಳಿಸುವುದರಿಂದ, ಭವಿಯ ಭವ ಕೆಟ್ಟು, ಕೂಡಲಚೆನ್ನಸಂಗಯ್ಯನ ಕಾರುಣ್ಯಕ್ಕೆ ಪಕ್ಕಾಗುವನಯ್ಯಾ
--------------
ಚನ್ನಬಸವಣ್ಣ
ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಗುರುವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಶಿಷ್ಯನಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಲಿಂಗವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಭಕ್ತನಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದವಾಯಿತ್ತು, ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಪ್ರಸಾದಿಯಾದ. ಯದ್ಭಾವಂ ತದ್ಭವತಿಯೆಂಬ ಭಾವವುಂಟಾಗಿ ಕೂಡಲಚೆನ್ನಸಂಗ ತಾನಾದ.
--------------
ಚನ್ನಬಸವಣ್ಣ
ಯದಾ ಶಿವಕಲಾಯುಕ್ತಂ ಲಿಂಗಂ ದದ್ಯಾನ್ಮಹಾಗುರುಃ ತದಾರಾಭ್ಯಂ ಶಿವಸ್ತತ್ರ ತಿಷ*ತ್ಯಾಹ್ವಾನಮತ್ರ ಕಿಂ ಸುಸಂಸ್ಕೃತೇಷು ಲಿಂಗೇಷು ಸದಾ ಸನ್ನಿಹಿತಃ ಶಿವಃ ತಥಾsಹ್ವಾನಂ ನ ಕರ್ತವ್ಯಂ ಪ್ರತಿಪತ್ತಿವಿರೋಧತಃ ನಾಹ್ವಾನಂ ನಾ ವಿಸರ್ಗಂ ಚೆ ಸ್ವೇಷ್ಟಲಿಂಗೇ ಕಾರಯೇತ್ ಲಿಂಗನಿಷಾ*ಪರೋ ನಿತ್ಯಮಿತಿ ಶಾಸ್ತ್ರವಿನಿಶ್ಚಯಃ ಆಹ್ವಾನಕ್ಕೋಸ್ಕರವಾಗಿ ಎಲ್ಲಿರ್ದನು ? ಈರೇಳು ಭುವನ ಹದಿನಾಲ್ಕು ಲೋಕವನೊಡಲುಗೊಂಡಿಪ್ಪ ದಿವ್ಯವಸ್ತು ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿರ್ದನು ? ಮುಳ್ಳೂರೆ ತೆರಹಿಲ್ಲದಂತಿಪ್ಪ ಅಖಂಡವಸ್ತು ! ಆಕಾಶಂ ಲಿಂಗಮಿತ್ಯಾಹುಃ ಪೃಥಿವೀ ತಸ್ಯ ಪೀಠಿಕಾ ಆಲಯಂ ಸರ್ವಭೂತಾನಾಂ ಅಯನಂ ಲಿಂಗಮುಚ್ಯತೇ ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ವೇದಾದಿನಾಮ ನಿರ್ನಾಮ ಮಹತ್ವಂ ಮಮ ರೂಪಯೋಃ ಗುರೂಕ್ತಮಂತ್ರಮಾರ್ಗೇಣ ಇಷ್ಟಲಿಂಗಂ ತು ಶಾಂಕರಿ ಇಂತೆಂದುದಾಗಿ, ಬರಿಯ ಮಾತಿನ ಬಳಕೆಯ ತೂತುಜ್ಞಾನವ ಬಿಟ್ಟು ನೆಟ್ಟನೆ ತನ್ನ ಕರಸ್ಥಲದೊಳ್ ಒಪ್ಪುತಿರ್ಪ ಇಷ್ಟಲಿಂಗವ ದೃಷ್ಟಿಸಿ ನೋಡಲು ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯ ನಿಶ್ಚಯ ಒದಗಿ, ಆ ದಿವ್ಯ ನಿಶ್ಚಯದಿಂದ ವ್ಯಾಕುಳವಡಗಿ ಅದ್ವೈತವಪ್ಪುದು. ಅದು ಕಾರಣ_ನಮ್ಮ ಕೂಡಲಚೆನ್ನಸಂಗಯ್ಯನ ಶರಣರು ಆಹ್ವಾನ_ವಿಸರ್ಜನವೆಂಬ ಉಭಯ ಜಡತೆಯ ಬಿಟ್ಟು ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದರಾಗಿ ಸ್ವಯಲಿಂಗವಾದರು ಕಾಣಿರೋ !
--------------
ಚನ್ನಬಸವಣ್ಣ
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧಿಯೆಂಬ ಅಷ್ಟಾಂಗಯೋಗವನರಿದು ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳದ ಜೀವ ಪರಮರ ಭೇದವೆಂತಿರ್ದುದೆಂದಡೆ: ಗ್ರಂಥ: ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋs ಕ್ಷಯ ಏವ ಚ ಎಂದುದಾಗಿ_ಇಂತಾದ ತನುಕ್ಷೇತ್ರಜ್ಞನನು ಗಂಧದ್ವಾರದ ರಂಧ್ರದ ನಡುವಣ ಸಣ್ಣ ಬಿಲಬಟ್ಟೆಯೆಂಬ ಬ್ರಹ್ಮರಂಧ್ರದ ನಾಳದೊಳು ಪ್ರಯೋಗಿಸಿ, ಕವಾಟದ್ವಾರಮಂ ತೆಗೆದು ತೆರಹಿಲ್ಲದೆ ಬಯಲಾದ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ
--------------
ಚನ್ನಬಸವಣ್ಣ